ಮುಖಪುಟ
/ನಮ್ಮ
ದೇವಾಲಯಗಳು ಶ್ರೀಚಕ್ರ ಸಮೇತ ವೇದನಾಯಕಿ ಕ್ಷಣಾಂಬಿಕಾ ದೇವಿ ದೇವಾಲಯ ಶ್ರೀರಂಗಪಟ್ಟಣದ ಪುರಾತನ ದೇಗುಲ ಟಿ.ಎಂ. ಸತೀಶ್
ಆದರೆ, ಶ್ರೀರಂಗಪಟ್ಟಣದಲ್ಲೇ ಇರುವ ಮತ್ತೊಂದು ಪುರಾತನ ದೇವಾಲಯ ಕ್ಷಣಾಂಬಿಕಾ ದೇವಾಲಯಕ್ಕೆ ಹೋಗುವುದೇ ಇಲ್ಲ. ಶ್ರೀರಂಗಪಟ್ಟಣ ಪ್ರವೇಶಿಸಿ, ಕೋಟೆಯ ದ್ವಾರದಿಂದ ಬರುತ್ತಿದ್ದಂತೆ ಬಲಭಾಗಕ್ಕೆ ಹೋದರೆ ರಂಗನಾಥನ ದೇವಾಲಯಕ್ಕೆ ಹೋಗುತ್ತೇವೆ. ಆದರೆ, ಮಸೀದಿಯ ಪಕ್ಕದಲ್ಲಿ ನೇರವಾಗಿ ಹೋದರೆ ಆಂಜನೇಯ ದೇವಾಲಯ ಹಾಗೂ ಅದರ ಪಕ್ಕದಲ್ಲೇ ಕ್ಷಣಾಂಬಿಕಾ ದೇವಾಲಯ ಕಾಣುತ್ತದೆ. ಬಹಳ ಪುರಾತನವಾದ ಈ ದೇವಾಲಯ ಸಮುಚ್ಚಯದಲ್ಲಿ ಚ್ಯೋತಿರ್ಮಹೇಶ್ವರ, ಕ್ಷಣಾಂಬಿಕಾ, ನವಗ್ರಹ ದೇವಿಯ ದೇವಾಲಯಗಳಿವೆ. ಶ್ರೀರಂಗಪಟ್ಟಣದ ಮಧ್ಯದಲ್ಲಿರುವ ಈ ಶಿವ ದೇವಾಲಯದಲ್ಲಿ ದೀಪ ಹಚ್ಚಿದರೆ ಊರಿಗೆ ಬೆಳಕು ಕಾಣುತ್ತಿತ್ತು. ಹೀಗಾಗೇ ಊರಿಗೇ ಬೆಳಕು ನೀಡುವ ಈ ದೇವಾಲಯದಲ್ಲಿನ ಈಶ್ವರನಿಗೆ ಜ್ಯೋತಿರ್ಮಹೇಶ್ವರ ಎಂಬ ಹೆಸರು ಬಂದಿದೆ ಎಂದು ಅರ್ಚಕರು ಹೇಳುತ್ತಾರೆ. ಹಿಂದೆ ಇಲ್ಲಿ ದಂಡನಾಯಕನಾಗಿದ್ದ ನಂಜರಾಜಯ್ಯ ಅವರ ವೃದ್ಧ ತಂದೆ ತಾಯಿಗೆ ಕಾಶಿ ಯಾತ್ರೆ ಮಾಡುವ ಆಸೆ ಇರುತ್ತದೆ. ಆದರೆ ಹಿಂದೆ ಕಾಶಿಗೆ ಹೋದವರು ಮತ್ತೆ ಹಿಂತಿರುಗಿ ಬರುವ ಸಾಧ್ಯತೆ ಕಡಿಮೆ ಇದ್ದ ಹಿನ್ನೆಲೆಯಲ್ಲಿ ವೃದ್ಧ ತಂದೆ ತಾಯಿಯನ್ನು ಅಷ್ಟು ದೂರದ ಕಾಶಿಗೆ ಕಳಿಸಲು ಒಪ್ಪದ ನಂಜರಾಜಯ್ಯ ಶ್ರೀರಂಗಪಟ್ಟಣದಲ್ಲೇ ವಾರಾಣಸಿಯಲ್ಲಿರುವ ಎಲ್ಲ ದೇವರನ್ನೂ ಪ್ರತಿಷ್ಠಾಪನೆ ಮಾಡಿ, ತಂದೆ ತಾಯಿಗೆ ದರ್ಶನ ಮಾಡುವ ನಿರ್ಧಾರ ಮಾಡುತ್ತಾರೆ. ಹೀಗಾಗಿಯೇ ಈ ದೇವಾಲಯ ಸಮುಚ್ಛಯದಲ್ಲಿ ಮಹೇಶ್ವರ, ಅನ್ನಪೂರ್ಣೆ, ಸುಬ್ರಹ್ಮಣ್ಯ, ಪಾರ್ವತಿ ದೇವಿಯ ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತಾರೆ. ಕಾಶಿಯಲ್ಲಿ ನಡೆಯುವ ಎಲ್ಲ ಪೂಜೆಗಳನ್ನೂ ಇಲ್ಲಿ ಮಾಡಿಸುತ್ತಾರೆ. ಹೀಗಾಗಿ ಇಂದಿಗೂ ಇಲ್ಲಿ ದೇವರುಗಳ ದರ್ಶನ ಮಾಡಿದರೆ ಕಾಶಿ ಯಾತ್ರೆಯ ಪುಣ್ಯ ಬರುತ್ತದೆ ಎಂಬ ನಂಬಿಕೆ ಇದೆ.
ಇಲ್ಲಿ ಶಿವದೇವಾಲಯದ ಪಕ್ಕದಲ್ಲಿ ಕ್ಷಣಾಂಬಿಕಾ ದೇವಾಲಯ ಇದೆ. ಪಾರ್ವತಿ, ಸರಸ್ವತಿ ಹಾಗೂ ಲಕ್ಷ್ಮೀ ಹೀಗೆ ತ್ರಿಮಾತೆಯರ ಅಂಶದದಲ್ಲಿ ಕ್ಷಣಾಂಬಿಕೆಯಾಕೆ ಇಲ್ಲಿ ನೆಲೆಸಿದ್ದು, ಬೇಡಿ ಬರುವ ಭಕ್ತರಿಗೆ ಕ್ಷಣ ಮಾತ್ರದಲ್ಲಿ ವರ ಕರುಣಿಸುತ್ತಾಳೆ ಎಂಬುದು ನಂಬಿಕೆ. ಇಲ್ಲಿ ದೇವಿಯ ಪಾದದ ಬಳಿ ಶ್ರೀಚಕ್ರವನ್ನು ಪ್ರತಿಷ್ಠಾಪಿಸಲಾಗಿದೆ. ಇದನ್ನು ಆದಿ ಶಂಕರಾಚಾರ್ಯರೇ ಸ್ವತಃ ಅಕಾರದಿಂದ ಕ್ಷಕಾರದವರೆಗೆ ಮಂತ್ರಗಳನ್ನು ಒಳಗೊಂಡ ಬೀಜಾಕ್ಷರ ಮಂತ್ರ ಬರೆದು ಪ್ರತಿಷ್ಠಾಪಿಸಿದ್ದಾರೆ ಎಂದೂ ಊರ ಹಿರಿಯರು ಹೇಳುತ್ತಾರೆ.
ಇಲ್ಲಿರುವ ದೇವಿಯ ನಯನಗಳು ಶ್ರೀಚಕ್ರವನ್ನು ನೋಡುತ್ತಿರುವಂತಿದೆ. ಹೀಗಾಗಿ ಈ ದೇವಿಯ ಮುಂದೆ ನಿಂತು
ಮಂತ್ರಾಭಿಜ್ಞಾದಿ
ದೇವಾನಾಮಾಶ್ರಯಂ ದೇವ್ಯದಿಷ್ಟಿತಂ ಎಂಬ ಶ್ಲೋಕ ಹೇಳಿಕೊಂಡರೆ ಕ್ಷಣ ಮಾತ್ರದಲ್ಲಿ ದುಃಖಗಳು ದೂರವಾಗುತ್ತವೆ. ಯಾವುದೇ ರೀತಿಯ ಮನಸ್ಥಾಪ, ವೈಮನಸ್ಯ ಇದ್ದರೂ ನಿವಾರಣೆ ಆಗುತ್ತದೆ. ಸಕಲ ಅನಿಷ್ಠಗಳೂ ದೂರವಾಗುತ್ತವೆ ಎಂಬುದು ಭಕ್ತರ ನಂಬಿಕೆ. ವಿಶಾಲವಾದ ಪ್ರಾಕಾರವಿರುವ ಈ ದೇವಾಲಯದಲ್ಲಿ ಈಗ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ಇಲ್ಲಿಗೆ ಆಗಮಿಸುವ ಭಕ್ತರ ಸಂಖ್ಯೆಯೂ ಹೆಚ್ಚಳವಾಗಿದೆ. ಪ್ರತಿನಿತ್ಯ ಇಲ್ಲಿ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಕಾರ್ತೀಕ ಮಾಸದಲ್ಲಿ ವಿಶೇಷ ಪೂಜೆ ನೆರವೇರುತ್ತದೆ. ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in | |||