ಮುಖಪುಟ /ನಮ್ಮದೇವಾಲಯಗಳು

ಕರುನಾಡ ಜೀವನದಿಯ ಉಗಮಸ್ಥಾನ ತಲಕಾವೇರಿ

*ಟಿ.ಎಂ.ಸತೀಶ್

Talakaveri god ಕನ್ನಡರತ್ನ.ಕಾಂ, kannadaratna.comಕಾವೇರಿ... ಕೊಡಗಿನ ಕಾವೇರಿ..... ಕಾವೇರಿ ನೀ ಹರಿಯುವ ನದಿಯಲ್ಲ.. ಶೃಂಗಾರ ಲಹರಿ... ಎಂಬ ಕವಿಯ ಸಾಲುಗಳು ಅರ್ಥಪೂರ್ಣ. ಕರ್ನಾಟಕದ ಜೀವನದಿ ಕಾವೇರಿ ತಲಕಾವೇರಿಯಲ್ಲಿ ಹುಟ್ಟಿ, ಬಂಗಾಳಕೊಲ್ಲಿಯನ್ನು ಸೇರುವ ತನಕ ಕಾವೇರಿಯ ಚೆಲುವು ಶೃಂಗಾರ ಲಹರಿಯೇ. ಅಬ್ಬಿಯ ಅಂದಕ್ಕೆ, ಬೃಂದಾವನದ ಚೆಲುವಿಗೆ, ಶಿವನಸಮುದ್ರದ ಭರಚುಕ್ಕಿ, ಗಗನಚುಕ್ಕಿಯ ಸಂಭ್ರಮಕ್ಕೆ, ಹೊಗೆನಕಲ್ ಜಲಪಾತಕ್ಕೆ ಕಾರಣವಾಗುವ ಕಾವೇರಿಯ ಈ ಓಟದ ಬಗ್ಗೆ ಉದ್ಗ್ರಂಥವನ್ನೇ ಬರೆಯಬಹುದು.

ಕಾವೇರಿ ಹುಟ್ಟುವುದು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಬ್ರಹ್ಮಗಿರಿ ಬೆಟ್ಟಶ್ರೇಣಿಯಲ್ಲಿ. ಕನ್ನಡನಾಡಿನ ಜೀವನದಿ ಕಾವೇರಿ ಹುಟ್ಟಿದ ಬಗ್ಗೆ ಪುರಾಣದಲ್ಲಿ ಒಂದು ಕಥೆ ಇದೆ. ಮಕ್ಕಳಿಲ್ಲದ ಕವೇರರಾಜ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿದ.  ಬ್ರಹ್ಮ ಕವೇರನ ತಪಸ್ಸಿಗೆ ಮೆಚ್ಚಿ  ತನ್ನ ಸಾಕು ಮಗಳಾದ ಲೋಪಾಮುದ್ರೆಯನ್ನೇ ಮಗಳಾಗಿ ಅನುಗ್ರಹಿಸಿದ. ಕವೇರ ಪುತ್ರಿಯಾದ ಲೋಪಮುದ್ರೆ ಅಂದಿನಿಂದ ಕಾವೇರಿಯೆಂಬ ಹೆಸರು ಪಡೆದಳು.

ಕಾವೇರಿ ತನ್ನ ಸಾಕು ತಂದೆ ಕವೇರನಿಗೆ ಮೋಕ್ಷದೊರಕಿಸಲು ಇಚ್ಛಿಸಿ, ತಾನು ನದಿಯಾಗಿ ಹರಿಯುವಂತೆ ಮತ್ತು ನದಿಯಲ್ಲಿ ಸ್ನಾನ ಮಾಡಿದವರು ತಮ್ಮ ಎಲ್ಲ ಪಾಪಗಳಿಂದ ಮುಕ್ತರಾಗುಂತೆ ವರವನ್ನು ಕೊಡಬೇಕೆಂದು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿದಳು. ಬ್ರಹ್ಮ ತಥಾಸ್ತು ಎಂದ. ದೈವೇಚ್ಛೆಯಂತೆ ಕಾವೇರಿ ಅಗಸ್ತ್ಯ ಮಹಾಮುನಿಗಳನ್ನು ವರಿಸಿದಳು. ನದಿಯಾಗಿ ಹರಿಯಬೇಕೆಂಬ ತನ್ನ ಇಚ್ಛೆಯನ್ನು ಅಗಸ್ತ್ಯರಲ್ಲಿ ಹೇಳಿಕೊಂಡಳು. ಅಗಸ್ತ್ಯರು ಕಾವೇರಿಯನ್ನು ನೀರಾಗಿ ಪರಿವರ್ತಿಸಿ ತಮ್ಮ ಕಮಂಡಲದಲ್ಲಿ ಶೇಖರಿಸಿದರು. ಒಂದು  ದಿನ ಅಗಸ್ತ್ಯರು ಬ್ರಹ್ಮಗಿರಿಯಲ್ಲಿ ತಪಸ್ಸನ್ನಾಚರಿಸುತ್ತಿದ್ದಾಗ ಕಮಂಡಲ ಗಾಳಿಗೆ ಉರುಳಿ ಅದರಲ್ಲಿದ್ದ ಕಾವೇರಿ  ತೀರ್ಥಕುಂಡಿಗೆಗೆ ಜಿಗಿದು ಅಲ್ಲಿಂದ ನದಿಯಾಗಿ ಪ್ರವಹಿಸಿದಳು.

ಈ ಪವಿತ್ರ ಪುಣ್ಯಕ್ಷೇತ್ರಕ್ಕೆ ತಲಕಾವೇರಿ ಎಂಬ ನಾಮಧೇಯ. ಇಲ್ಲಿ ಅಗಸ್ತ್ಯೇಶ್ವರ ದೇವಾಲಯ, ಗಣಪತಿ ದೇವಾಲಯ ಇದೆ. ಅಗಸ್ತ್ಯ ಮಹಾಮುನಿಗಳು ಈ ಲಿಂಗವನ್ನು ಸ್ಥಾಪಿಸಿದರು ಎಂಬುದು ಪ್ರತೀತಿ. ತಲಕಾವೇರಿಯ ಈ ದೇಗುಲಗಳ ತಗ್ಗಿನಲ್ಲಿ ಕಾವೇರಿ ಉಗಮವಾಗುವ ಚಚ್ಚೌಕದ ಚಿಕ್ಕ ಕೊಳವಿದೆ. ಅದರ ಮುಂದೆ ಸ್ನಾನಘಟ್ಟ. ಇಲ್ಲಿಯೇ ಕಾವೇರಿ ಹುಟ್ಟುವುದು. ಈ ಸ್ಥಳಕ್ಕೆ ಕುಂಡಿಗೆ ಎನ್ನುತ್ತಾರೆ. ತುಲಾಸಂಕ್ರಮಣದ ನಿಶ್ಚಿತವಾದ ದಿನ ಇಲ್ಲಿ ಕಾವೇರಿ ತೀರ್ಥೋದ್ಭವವಾಗುತ್ತದೆ. ಪ್ರತಿ ವರ್ಷ ತುಲಾ ಮಾಸದ ಸಂಕ್ರಮಣದಿಂದ ವೃಶ್ಚಿಕ ಮಾಸದ ಸಂಕ್ರಮದವರೆಗೆ ಇಲ್ಲಿ ಕಾವೇರಿ ಜಾತ್ರೆ ನಡೆಯುತ್ತದೆ. ತಮಿಳುನಾಡು, ಕೇರಳ, ಪಾಂಡಿಚೇರಿ, ಕರ್ನಾಟಕದ ಹಾಸನ, ಕೊಡಗು, ಮಂಡ್ಯ ಜಿಲ್ಲೆಗಳಿಂದ ಇಲ್ಲಿಗೆ ಭಕ್ತರು ಆಗಮಿಸುತ್ತಾರೆ. ಕೊಳದಲ್ಲಿ ಮಿಂದು ಕುಂಡಿಗೆಯ ತೀರ್ಥ ಕುಡಿದು, ಪ್ಲಾಸ್ಟಿಕ್ ಕ್ಯಾನ್‌ಗಳಲ್ಲಿ ತುಂಬಿಕೊಂಡು ಮನೆಗೆ ಹೋಗುತ್ತಾರೆ.

Talakaveri ಕನ್ನಡರತ್ನ.ಕಾಂ, kannadaratna.comಇದು ಪೌರಾಣಿಕ ಸ್ಥಳ, ಜೀವ ನದಿ ಹುಟ್ಟುವ ಜನ್ಮಸ್ಥಳ ಹೀಗಾಗಿ ಇದು ಭಕ್ತರಿಗೆ ಪುಣ್ಯ ಕ್ಷೇತ್ರ. ಪ್ರವಾಸಿಗರಿಗೆ ರಮ್ಯಕ್ಷೇತ್ರ. ಶೀತ ಮಾರುತಗಳಿಂದ, ಶೀತಹವೆಯಿಂದ ಕೂಡಿರುವ ಈ ಸ್ಥಳ ರಮಣೀಯ. ಬ್ರಹ್ಮಗಿರಿಯ ಶಿಖರವೇರಿದಾಗ ಕಾಣುವ ಆಕಾಶಶುಭ್ರವಾಗಿರುವ ಬೆಟ್ಟದಪುರದ ನೋಟ ಮನೋಹರ. ಇಲ್ಲಿ ನಿಂತು ನೋಡಿದರೆ, ಹಾವಿನಂತೆ ಹರಿಯುವ ನದಿಗಳನ್ನೂ, ದೂರದಲ್ಲಿ ಅರಬ್ಬಿ ಸಮುದ್ರದ ರುದ್ರರಮಣೀಯ ಪ್ರಕೃತಿ ಸಿರಿಯನ್ನೂ ಕಣ್ತುಂಬಿಕೊಳ್ಳಬಹುದು. ಹತ್ತಿರದಲ್ಲೇ ಇರುವ ಅಬ್ಬಿ ಜಲಪಾತಕ್ಕೆ ಹೋಗಿ ಆನಂದಿಸಬಹುದು.

ಅಬ್ಬೆ ಜಲಪಾತ : ಕಾವೇರಿ ಜಲಾನಯನ ಪ್ರದೇಶಗಳಲ್ಲಿ, ಭಾಗಮಂಡಲದ ಸುತ್ತ ಮುತ್ತ ಮಳೆ ಸುರಿಯುತ್ತಿದ್ದಾಗ ಕನ್ನಡ ನಾಡಿನ ಜೀವನದಿ ಕಾವೇರಿ ಉಕ್ಕಿ ಹರಿಯುತ್ತದೆ. ಕೊಡಗಿನ ರಮಣೀಯ ಹಸಿರು ರಾಶಿಯ ಮೇಲೆ ಮಳೆಯ ಹನಿಗಳು ಬೀಳುತ್ತಿದ್ದಂತೆಯೇ ಇಲ್ಲಿನ ವಿಖ್ಯಾತ ಜಲಪಾತ ಅಬ್ಬೆ ಮೈದುಂಬಿ ಧುಮ್ಮುಕ್ಕುತ್ತದೆ. ಹಾಲು ನೊರೆಯಂತೆ ಆಕರ್ಷಕವಾಗಿ ಧುಮ್ಮಿಕ್ಕುವ ಅಬ್ಬಿ, ತನ್ನ ಪೂರ್ಣ ಸೊಬಗನ್ನು ಪಡೆವುದೇ ಮಳೆಗಾಲದಲ್ಲಿ. ಹೀಗಾಗೆ ಅಬ್ಬಿಗೆ ಮಳೆಗಾಲದ ಮದುಮಗಳು ಎಂಬ ಹೆಸರೂ ಇದೆ.

Abbe falls, Madikeri, Kannada, Kannadaratna.comರಭಸದಿಂದ ಭೋರ್ಗರೆವ ಅಬ್ಬಿಯ ಆರ್ಭಟ ಮಳೆಗಾಲದಲ್ಲಿ ಅರ್ಧ ಕಿಲೋ ಮೀಟರ್ ದೂರ ಕೇಳುತ್ತದೆ. ಬಂಡೆಗಳ ಮೇಲಿಂದ ಧುಮ್ಮಿಕ್ಕುವ ಅಬ್ಬಿಯ ಜಲಪಾತ ಹಾಲು ನೊರೆಯಂತಹ ರಮಣೀಯ ದೃಶ್ಯದೊಂದಿಗೆ ಮತ್ತಷ್ಟು ಕಳೆಗಟ್ಟುತ್ತದೆ. ನೋಡುಗರಿಗೆ ಅಮಿತಾನಂದವನ್ನು ನೀಡುತ್ತದೆ.

ಇಲ್ಲಿರುವ ತೂಗುಯ್ಯಾಲೆಯ ಮೇಲೆ ಮಳೆಯಲ್ಲಿ ತೋಯುತ್ತಾ, ಅತ್ತಿಂದಿತ್ತ, ಇತ್ತಿಂದತ್ತ ಓಲಾಡುತ್ತಾ ಸಾಗಿದರೆ, ಧುಮ್ಮಿಕ್ಕುವ ಭೋರ್ಗರೆಯುತ್ತಾ ಧುಮ್ಮಿಕ್ಕುವ ಅಬ್ಬಿಯ ಜಲಹನಿಗಳೂ ನಿಮಗೆ ಪನ್ನೀರ ಎರಚುತ್ತಾ ಸ್ವಾಗತ ಕೋರುತ್ತವೆ. ಬೇಸಿಗೆಯಲ್ಲಿ ಒಣಗಿ ತನ್ನ ಸೊಬಗನ್ನು ಕಳೆದುಕೊಳ್ಳುವ ಮನೋಹರವಾದ ಅಬ್ಬಿ ಜಲಪಾತದ ಸೊಬಗನ್ನು ಸವಿಯಲು ಮಳೆಗಾಲವೇ ಸೂಕ್ತ.

ಪ್ರವಾಸ ಮಾರ್ಗದರ್ಶಿ : ಬೆಂಗಳೂರಿನಿಂದ ೨೫೨ ಕಿಲೋಮೀಟರ್ ದೂರದಲ್ಲಿರುವ ಮಡಿಕೇರಿಗೆ ರಾಜ್ಯದ ಎಲ್ಲ ಪ್ರಮುಖ ಪಟ್ಟಣಗಳಿಂದ ನೇರ ಬಸ್ ಸೌಲಭ್ಯ ಇದೆ. ಮಡಿಕೇರಿಯಿಂದ ಅಬ್ಬಿ ಜಲಪಾತಕ್ಕೆ ಕೇವಲ 10 ಕಿಲೋ ಮೀಟರ್. ಮಡಿಕೇರಿಯಲ್ಲಿ ಮೊದಲು ಮಡಿಕೇರಿ ಕೋಟೆ ನೋಡಿ, ಅಲ್ಲಿಂದ ಅಬ್ಬಿಗೆ ಬರಬಹುದು. ಮಡಿಕೇರಿಯಿಂದ ಭಾಗಮಂಡಲಕ್ಕೆ ೩೯ ಕಿ.ಮೀಟರ್. ಕಾವೇರಿ, ಕನ್ನಿಕ ಹಾಗೂ ಸುಜ್ಯೋತಿ ನದಿಗಳು ಸೇರುವ ಈ ಸ್ಥಳದಲ್ಲಿ ಸುಂದರ ದೇವಾಲಯವಿದೆ. ಹತ್ತಿರದಲ್ಲೇ ಕನ್ನಡ ನಾಡಿನ ಜೀವನದಿ ಕಾವೇರಿಯ ಉಗಮಸ್ಥಾನ ತಲಕಾವೇರಿಯೂ ಇದೆ. (ಮಡಿಕೇರಿಯಿಂದ ತಲಕಾವೇರಿಗೆ ೪೪ ಕಿ.ಮೀಟರ್). ಮಡಿಕೇರಿಯಿಂದ ನಿಸರ್ಗಧಾಮಕ್ಕೆ ೨೫ ಕಿ.ಮೀ ಹಾಗೂ ಹಾರಂಗಿ ಜಲಾಶಯಕ್ಕೆ ೩೬ ಕಿ.ಮೀ. ಮಾತ್ರ.

ಪ್ರವಾಸ ಮಾಹಿತಿ:  ಹೆಚ್ಚಿನ ಮಾಹಿತಿಗೆ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-2352901 /2352909 /2352903 Email : kstdc@vsnl.in ಸಂಪರ್ಕಿಸಬಹುದು.

ಮುಖಪುಟ /ನಮ್ಮದೇವಾಲಯಗಳು