ಮುಖಪುಟ /ನಮ್ಮದೇವಾಲಯಗಳು  

ಅಮೃತಾಪುರ ಅಮೃತೇಶ್ವರ ದೇವಾಲಯ

Amrutapura temple, chikmagalur, ಚಿಕ್ಕಮಗಳೂರು ಅಮೃತೇಶ್ವರ ದೇವಾಲಯಹಾಸನ -ಚಿಕ್ಕಮಗಳೂರು ಜಿಲ್ಲೆಗಳು ದೇವಾಲಯಗಳ ತವರು, ಶಿಲ್ಪಕಲೆಗಳ ಬೀಡು ಎಂದೇ ಖ್ಯಾತವಾಗಿವೆ. ಹಾಸನ ಜಿಲ್ಲೆಯಲ್ಲಿ ನೂರಾರು ಶಿಲ್ಪಕಲಾ ವೈಭವದ ದೇಗುಲಗಳಿವೆ. ಚಿಕ್ಕಮಗಳೂರು ಜಿಲ್ಲೆಯಲ್ಲೂ ಇಂಥ ವೈಭವದ ಕಲಾ ಶ್ರೀಮಂತಿಕೆಯ ತಾಣಗಳಿದ್ದು, ಅಮೃತಾಪುರದ ದೇವಾಲಯ ಈ ಮಾತಿಗೆ ಸಾಕ್ಷಿಯೂ ಆಗುತ್ತದೆ.

ಅಮೃತಾಪುರ ಬಹು ಪುರಾತನ ನಗರ. ವಿಶಿಷ್ಠ ಶೈಲಿಯ ಸುಂದರ ದೇವಾಲಯದಿಂದ ಕೂಡಿರುವ ಈ ಊರು ಜಗದ್ವಿಖ್ಯಾತಿ ಪಡೆದಿರುವುದು ಇಲ್ಲಿರುವ ಅಮೃತೇಶ್ವರ ದೇವಾಲಯದಿಂದ.

Amrutapura templeಹೊಯ್ಸಳರ ದೊರೆ ಎರಡನೇ ಬಲ್ಲಾಳನ ದಂಡನಾಯಕ ಅಮೃತೇಶ್ವರ ಕ್ರಿ.ಶ.1196ರಲ್ಲಿ ಇಲ್ಲಿ ಅಮೃತೇಶ್ವರ ದೇವಾಲಯ ನಿರ್ಮಿಸಿದನೆಂದು ಇತಿಹಾಸ ಹೇಳುತ್ತದೆ. ಸೂಕ್ಷ್ಮ ಕೆತ್ತನೆಗಳ ಕಲಾಶ್ರೀಮಂತಿಕೆಯಿಂದ ಕೂಡಿದ ಈ ದೇವಾಲಯ ನೋಡುಗರ ಹೃನ್ಮನ ಸೆಳೆಯುತ್ತದೆ. ಪ್ರಧಾನ ಗರ್ಭಗೃಹದಲ್ಲಿ ಅಮೃತೇಶ್ವರ ಲಿಂಗವಿದೆ. ದೇವಾಲಯದಲ್ಲಿ ಗಣಪತಿ, ನಾಗ ಕನ್ನಿಕೆಯರು, ಸಪ್ತ ಮಾತೃಕೆಯರ ಸುಂದರ ವಿಗ್ರಹಗಳೂ ಇವೆ.

ಹೊಯ್ಸಳ ದೊರೆಗಳ ಕಲೋಪಾಸನೆಗೆ ಸಾಕ್ಷಿಯಾಗಿರುವ ಈ ದೇವಾಲಯ ಹಚ್ಚಹಸುರಿನಿಂದ ಕೂಡಿದ ನಾಲ್ಕು ಎಕರೆಯಷ್ಟು ವಿಶಾಲ ಪ್ರದೇಶದಲ್ಲಿದ್ದು ಆಸ್ತಿಕ, ನಾಸ್ತಿಕರಿಬ್ಬರನ್ನೂ ಕೈಬೀಸಿ ಕರೆಯುತ್ತದೆ. ಎಲ್ಲ ಹೊಯ್ಸಳ ದೇವಾಲಯಗಂತೆಯೇ ಇಲ್ಲಿಯೂ ನಕ್ಷತ್ರಾಕಾರದ ಜಗಲಿಯಿದೆ. ಮಣ್ಣಿನಲ್ಲಿ ಮುಚ್ಚಿಹೋಗಿರುವ ಜಗಲಿಯ ಮೇಲೆ ವಿಶಾಲಮುಖಮಂಟಪ, ಸುಖನಾಸಿ, ಭುವನೇಶ್ವರಿಗಳಿಂದ ಕೂಡಿದ ಬೃಹತ್ ಭವ್ಯ ದೇವಾಲಯವಿದೆ.

ದೇವಾಲಯದ ಹೊರಭಿತ್ತಿಗಳಲ್ಲಿ ಭವ್ಯವಾದ ಶಿಲ್ಪಾಲಂಕರಣಗಳಿವೆ. ಸುತ್ತಲೂ ಇರುವ ಅರೆ ಮಂಟಪ, ಲತಾ ಸುರಳಿಗಳು ಹಾಗೂ ಅರೆಗೋಪುರ ಶಿಲ್ಪದ ಮೇಲಿನ ಪಟ್ಟಿಕೆಯಲ್ಲಿರುವ ಶಿಲ್ಪಗಳಂತೂ ಅತ್ಯಂತ ಮನಮೋಹಕವಾಗಿವೆ. ದೇವಾಲಯಕ್ಕೆ ಒಂದೇ ಒಂದು ವಿಮಾನ ಗೋಪುರ ಇದ್ದು, ಇದು ಏಕ ಕೂಟ ದೇವಾಲಯವಾಗಿದೆ. ಶಿಥಿಲವಾಗಿದ್ದ ಈ ದೇವಾಲಯಕ್ಕೆ ಹೊರಗಿನಿಂದ ಸಾಧಾರಣ ಕಲ್ಲು ಕಂಬಗಳನ್ನು ಆಧಾರವಾಗಿಟ್ಟು ರಕ್ಷಿಸಲಾಗಿದೆ.

Amrutapura templeದ್ರಾವಿಡ ಶೈಲಿಯ ಪರಿಪೂರ್ಣವಾದ ದೇವಾಲಯ ದರ್ಶಿಸಲು ಅಮೃತಾಪುರಕ್ಕೆ ಬರಬೇಕು ಎಂಬುದು ದೇವಾಲಯ ವಾಸ್ತು ಶಿಲ್ಪ ಅಧ್ಯಯನಿಗಳ ನಿಲುವಾಗಿದೆ. ಕಾರಣ ಇಲ್ಲಿರುವ ದೇವಾಲಯದ ಹೊರ ಬಿತ್ತಿಗಳಲ್ಲಿರುವ ರಾಮಾಯಣ, ಮಹಾಭಾರತ, ಭಾಗವತದ ಕಥಾನಕ ದೃಶ್ಯಗಳು ಪುರಾಣೇತಿಹಾಸವನ್ನು ದೃಶ್ಯ ಕಾವ್ಯದೋಪಾದಿಯಲ್ಲಿ ಬಿಂಬಿಸುತ್ತವೆ.

ವಿಶಾಲವಾದ ಪ್ರಾಕಾರವಿರುವ ಈ ದೇವಾಲಯದ ಮಂಟಪಗಳಲ್ಲಿ ಛಾವಣಿಗೆ ಆಧಾರವಾಗಿ ನಿಂತಿರುವ ನುಣುಪಾದ 44 ಕಲ್ಲಿನ ಕಂಬಗಳ ಸಾಲುಗಳ ನಡುವೆ ಇರುವ ಬೃಹದಾಕಾರದ ನಂದಿ ವಿಗ್ರಹದ ನೋಟ ರಮಣೀಯ. ನುಣುಪಾದ ಕಂಬಗಳಲ್ಲಿ ಸೂಕ್ಷ್ಮ ಕಲಾತ್ಮಕ ಕೆತ್ತನೆಗಳು ಇಲ್ಲದಿದ್ದರೂ ಭುವನೇಶ್ವರಿಗಳು ಶಿಲ್ಪ ಸೌಂದರ್ಯದ ಗಣಿಯಾಗಿವೆ. ಸುಖನಾಸಿಯ ಮೇಲಿರುವ ಗಜ ಸಂಹಾರದ ಶಿಲ್ಪವಂತೂ ನಯನ ಮನೋಹರವಾಗಿದೆ.

ದೇವಾಲಯದ ಆವರಣದ ಗೋಡೆಗಳ ಮೇಲೆ  ಪ್ರಾಚ್ಯವಸ್ತು ಸಂಗ್ರಹಾಲಯದವರು  ಭಗ್ನಗೊಂಡ ಅನೇಕ ಶಿಲ್ಪಗಳನ್ನು ಜೋಡಿಸಿಟ್ಟಿದ್ದು, ಅವು ಕೂಡ ತಮ್ಮ ಗತ ವೈಭವ ಸಾರುತ್ತಾ, ಇಂದಿನ ತಮ್ಮ ಸ್ಥಿತಿ ಪ್ರದರ್ಶಿಸಿ ಕಲೋಪಾಸಕರ ಕಣ್ಣಲ್ಲಿ ನೀರು ತರಿಸುತ್ತವೆ. ಆದಾಗ್ಯೂ ಇಲ್ಲಿರುವ ಸುಂದರ ಶಿಲ್ಪಕಲಾ ವೈಭವ ನೋಡುಗರಿಗೆ ಭಾರತೀಯ ಅದರಲ್ಲೂ ಕರ್ನಾಟಕದ ಶಿಲ್ಪಕಲಾ ವೈಭವದ ಅಮೃತಪಾನ ಮಾಡಿಸುವುದರಲ್ಲಿ ಸಂದೇಹವೇ ಇಲ್ಲ.

ದೇವಾಲಯದ ಪ್ರಾಕಾರದ ಎಡ ಭಾಗದಲ್ಲಿ ಅಮ್ಮನವರ ಗುಡಿ ಇದ್ದು, ಇದಲ್ಲಿ ವಿದ್ಯಾಧಿದೇವತೆ ಶಾರದೆಯ ಮನಮೋಹಕ ವಿಗ್ರಹವಿದೆ. ಶಿವ ದೇವಾಲಯದಲ್ಲಿ ಶಾರದೆಯ ಗುಡಿ ಹೇಗೆ ಬಂತು ಎಂಬ ಜಿಜ್ಞಾಸೆ ಹಲವರನ್ನು ಕಾಡುತ್ತದೆ. ಆದರೆ ಹಿಂದೆ ವೇದಾಗಮ ಪಂಡಿತರ ತಾಣವಾಗಿ ವೇದಾಧ್ಯಯನಕ್ಕೆ ಹೆಸರಾಗಿದ್ದ ಅಮೃತಾಪುರದಲ್ಲಿ ತಾಯಿ ಶಾರದೆಯನ್ನು ಪ್ರತಿಷ್ಠಾಪಿಸಲಾಗಿದೆ, ಇಲ್ಲಿ ಪೂಜೆ ಸಲ್ಲಿಸಿ ಮಕ್ಕಳಿಗೆ ವೇದಾಭ್ಯಾಸ ಮಾಡಿಸುತ್ತಿದ್ದರು ಎಂದೂ ಹಿರಿಯರು ಹೇಳುತ್ತಾರೆ.

ಬೆಂಗಳೂರು ಮಹಾನಗರದಿಂದ 245 ಕಿಲೋ ಮೀಟರ್ ದೂರದಲ್ಲಿರುವ ಅಮೃತಾಪುರ, ಚಿಕ್ಕಮಗಳೂರಿನಿಂದ 67 ಹಾಗೂ ತರೀಕೆರೆಯಿಂದ 4 ಕಿಲೋ ಮೀಟರ್ ದೂರದಲ್ಲಿದೆ. ಬೆಂಗಳೂರಿನಿಂದ ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಬೀರೂರು, ತರೀಕೆರೆ ಮೂಲಕ ಅಮೃತಾಪುರಕ್ಕೆ ಹೋಗಬಹುದು. ಅರಸೀಕೆರೆವರೆಗೆ ರೈಲು ಸೌಲಭ್ಯವೂ ಇದೆ. ಸಂಜೆ 6 ಗಂಟೆಯ ನಂತರ ದೇವಾಲಯಕ್ಕೆ ಪ್ರವೇಶ ಇರುವುದಿಲ್ಲ.

 

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮದೇವಾಲಯಗಳು