ಮುಖಪುಟ /ನಮ್ಮ ದೇವಾಲಯಗಳು  

ಬಳ್ಳಿಗಾವೆಯ ತ್ರಿಪುರಾಂತಕ ದೇವಾಲಯ
 

* ಟಿ.ಎಂ.ಸತೀಶ್

Belligavi temple, photo govt.websiteಶಿವಮೊಗ್ಗ ಜಿಲ್ಲ  ಶಿರಾಳಕೊಪ್ಪದಿಂದ ಎರಡು ಕಿಮೀ ದೂರದಲ್ಲಿರುವ ಪುರಾತನ ಪುರ ಬಳ್ಳಿಗಾವೆ. ಹಿಂದೆ ಬೆಳಗಾಮಿ, ಬಳ್ಳಿಗಾಮೆ, ವಲ್ಲಿಗ್ರಾಮೆ ಎಂದು ಹೆಸರಾಗಿದ್ದ ಈ ಊರು ವಚನಕಾರ ಅಲ್ಲಮಪ್ರಭುವಿನ ಜನ್ಮಸ್ಥಳ.

ಈ ಊರಿನಲ್ಲಿ ಅಳಿದುಳಿದಿರುವ ದೇವಾಲಯಗಳು, ಪ್ರಾಚೀನ ಕಟ್ಟಡಗಳ ಅವಶೇಷ ಹಾಗೂ ಶಾಸನಗಳು ಹಿಂದೆ ಈ ಊರು ಅಷ್ಟವೈಭವದಿಂದ ಮೆರೆದಿತ್ತು ಎಂಬುದಕ್ಕೆ ಸಾಕ್ಷಿಯಾಗಿ ನಿಂತಿವೆ.

ಬಲಿಚಕ್ರವರ್ತಿಯ ರಾಜಧಾನಿಯಾಗಿತ್ತೆಂದೂ ಹೇಳಲಾಗುವ ಇಲ್ಲಿ ಪಾಂಡವರು ಪಂಚಲಿಂಗ ಪ್ರತಿಷ್ಠೆ ಮಾಡಿದರೆಂದು ಕೆಲವು ಶಾಸನಗಳಲ್ಲಿ ಉಲ್ಲೇಖವಿದೆ.

ಒಂದು ಕಾಲದಲ್ಲಿ ನಂದಿಕೇಶ್ವರ, ಕುಸುಮೇಶ್ವರ, ಗವರೇಶ್ವರ, ಜಗಕೇಕ ಮಲ್ಲೇಶ್ವರ, ತ್ರಿಲೋಕೇಶ್ವರ, ಜೋಗೇಶ್ವರ, ವೀರಕೇಶವ, ನರಸಿಂಹ ದೇವಾಲಯಗಳು ಇಲ್ಲಿದ್ದವೆಂದು ಶಾಸನಗಳಿಂದ ತಿಳಿದುಬರುತ್ತದೆ. ಈಗ ಇಲ್ಲಿ ಉಳಿದಿರುವ ದೇವಾಲಯಗಳ ಪೈಕಿ 1070ರಲ್ಲಿ ನಿರ್ಮಾಣವಾದ ತ್ರಿಪುರಾಂತಕ ದೇವಾಲಯ ಪ್ರಮುಖವಾದದ್ದು.

ಅತ್ಯಂತ ಕಲಾತ್ಮಕವಾದ ಈ ದೇವಾಲಯವನ್ನು ಈಗ ಜೀರ್ಣೋದ್ಧಾರ ಮಾಡಲಾಗಿದೆ. ಚಾಳುಕ್ಯರ ಶೈಲಿಯ ಈ ದೇವಾಲಯದ ಭಿತ್ತಿಗಳಲ್ಲಿ ಪಂಚತಂತ್ರದ ಕಥೆಗಳಲ್ಲಿರುವ ಹಲವು ಪ್ರಸಂಗಗಳು ಒಡಮೂಡಿವೆ. ಆಮೆ ಮತ್ತು ಹಂಸಗಳು, ಟಗರು ಕಾಳಗ ಮತ್ತು ನರಿ, ಮೊಸಳೆ ಕೋತಿಯ ಪ್ರಸಂಗಗಳನ್ನು ಇಲ್ಲಿ ಶಿಲೆಯಲ್ಲಿ ಕಲೆಯಾಗಿ ಮೂಡಿಸಲಾಗಿದೆ.

ದೇವಾಲಯದ ಒಂದು ಗರ್ಭಗೃಹದಲ್ಲಿ  ಶಿವಲಿಂಗ, ಮತ್ತೊಂದರಲ್ಲಿ ಕೇಶವನ ಮೂರ್ತಿಯಿದೆ. ಗರ್ಭಗುಡಿಗಳ ಮುಂದಿರುವ ಬಾಗಿಲುವಾಡಗಳ ಪಕ್ಕದಲ್ಲಿರುವ ನಾಗಬಂಧ ಒಳಗೊಂಡ ಜಾಲಂಧ್ರಗಳು ಮನಮೋಹಕವಾಗಿವೆ. ಇದರ ಮೇಲೆ ಗಜಾಸುರನನ್ನು ಕೊಂದು ನರ್ತಿಸುತ್ತಿರುವ ಶಿವನ ಶಿಲ್ಪ ಚಿತ್ತಾಕರ್ಷಕವಾಗಿದೆ. ದೇಗುಲದ ಒಳಭಿತ್ತಿ, ಭುವನೇಶ್ವರಿಗಳಲ್ಲಿ ಸೂಕ್ಷ್ಮಕೆತ್ತನೆಗಳಿವೆ. ಗಣೇಶ, ಗರುಡ, ಅಷ್ಟಧಿಕ್ಪಾಲಕರು ಕೆತ್ತನೆ ಮನೋಜ್ಞವಾಗಿದೆ.

ಇಲ್ಲಿರುವ ಮತ್ತೊಂದು ಪ್ರಮುಖ ದೇವಾಲಯ ಕೇದಾರೇಶ್ವರನದು. ಹನ್ನೊಂದನೆಯ ಶತಮಾನದೆನ್ನಲಾದ ಇದು ಮೂರು ಗರ್ಭಗೃಹ, ಮೂರು ಗೋಪುರ ಒಳಗೊಂಡು ತ್ರಿಕೂಟಾಚಲವಾಗಿದೆ. ದೇವಾಲಯದ ಮುಂದೆ ಭವ್ಯವಾದ ಮುಖ ಮಂಟಪವಿದೆ. ಭಿತ್ತಿಗಳೂ ಮನಮೋಹಕವಾಗಿವೆ.

ಇಲ್ಲಿರುವ ಉಳಿದ ದೇವಾಲಯಗಳ ಪೈಕಿ ಪಂಚಲಿಂಗ ದೇವಾಲಯವನ್ನು ಸಹ  ಪುನರ್ನಿರ್ಮಾಣ ಮಾಡಲಾಗಿದೆ. ಇಲ್ಲಿ ಸೋಮೇಶ್ವರ ದೇವಾಲಯ, ಕಲ್ಲೇಶ್ವರ ದೇವಾಲಯ, ಅನಂತಶಯನ  ದೇವಾಲಯಗಳೂ ಇವೆ.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮ ದೇವಾಲಯಗಳು