ಮುಖಪುಟ /ನಮ್ಮದೇವಾಲಯಗಳು  

ಬೆಂಗಳೂರಿನ ಹಲಸೂರು ಸೋಮೇಶ್ವರ ದೇವಾಲಯ

*ಟಿ.ಎಂ.ಸತೀಶ್

ಸೋಮೇಶ್ವರ ದೇವಾಲಯ, ಬೆಂಗಳೂರು, Bangalore Someshwara Templeಬೆಂಗಳೂರು ಹಲವು ಪುರಾತನ ದೇವಾಲಯಗಳ ಬೀಡು. ರಾಜ್ಯದ ರಾಜಧಾನಿಯಲ್ಲಿರುವ ಹಲವು ಪುರಾತನ ಪ್ರಸಿದ್ಧ ದೇವಾಲಯಗಳ ಪೈಕಿ ಹಲಸೂರು (ಅಲಸೂರು) ಸೋಮೇಶ್ವರ ದೇವಾಲಯವೂ ಒಂದು.

ಅತ್ಯಂತ ಅದ್ಭುತವಾದ ಕೆತ್ತನೆಗಳಿಂದ ಕೂಡಿದ ಈ ದೇವಾಲಯ ಚೋಳರ ಕಾಲದ ವಾಸ್ತು ಶ್ರೀಮಂತಿಕೆಯ ಪ್ರತೀಕವಾಗಿದೆ. ಬೆಂಗಳೂರಿನ ಹಲಸೂರು ಪ್ರದೇಶದಲ್ಲಿ ಮುಖ್ಯರಸ್ತೆಗೆ ಸ್ವಲ್ಪವೇ ದೂರದಲ್ಲಿರುವ ಈ ದೇವಾಲಯಕ್ಕೆ ಹೋದರೆ ಮೊದಲಿಗೆ ಎತ್ತರವಾದ ಶಿಲಾಸ್ತಂಭ,  ಅರ್ಧ ಕಲ್ಲು ಕಟ್ಟಡ ಹಾಗೂ ಉಳಿದರ್ಧ ಇಟ್ಟಿಗೆ, ಗಾರೆಯಿಂದ ನಿರ್ಮಿಸಿದ ಭವ್ಯವಾದ ರಾಜಗೋಪುರ ಸ್ವಾಗತಿಸುತ್ತದೆ. ಕಲ್ಲಿನ ಭಾಗದಲ್ಲಿ ಆನೆ ಹಾಗೂ ನಾಟ್ಯ ಭಂಗಿಯ ಕೆತ್ತನೆಗಳಿದ್ದರೆ, ಮಹಾದ್ವಾರದ ಎರಡೂ  ಬದಿಯ ಕಲ್ಲಿನ ಬೃಹತ್ ದ್ವಾರದಲ್ಲಿ ಸುಂದರವಾದ ಲತಾ ಹಾಗೂ ಕನ್ನಿಕೆಯರ ಕೆತ್ತನೆಗಳಿವೆ. ಇನ್ನು ಗಾರೆಯ ಗೋಪುರದಲ್ಲಿ ಗಿರಿಜಾ ಕಲ್ಯಾಣ, ಶಿವ, ಪಾರ್ವತಿ, ಸುಬ್ರಹ್ಮಣ್ಯ, ಗಣೇಶ, ಋಷಿ, ಮುನಿಗಳ ಹಲವಾರು ಗಾರೆಯ ಶಿಲ್ಪಗಳಿವೆ. ಐದು ಅಂತಸ್ತಿನ ಗೋಪರ ದ್ವಾರದಿಂದ ಒಳ ಪ್ರವೇಶಿಸುತ್ತಿದ್ದಂತೆ ಎತ್ತರವಾದ ಧ್ವಜ ಸ್ತಂಭ ಹಾಗೂ ಕಲಾತ್ಮಕ ಕಂಬಗಳಿಂದ ಕೂಡಿದ ಮುಖಮಂಟಪ ಕಣ್ಮನ ಸೆಳೆಯುತ್ತದೆ. ಗರ್ಭಗೃಹ, ಸುಖನಾಸಿ ಮತ್ತು ನವರಂಗ ಹಾಗೂ ಕೈಸಾಲೆಗಳಿರುವ ಈ ಬೆಂಗಳೂರು ಸೋಮೇಶ್ವರ ದೇವಾಲಯ, Bangalore someshwara Temple, Alasuru, Halasuruದೇವಾಲಯ ಅತ್ಯಂತ ಮನೋಹರವಾಗಿದೆ. ಸೋಮೇಶ್ವರನ ಎದುರು ಇರುವ ಹಿತ್ತಾಳೆ ತಗಡು ಹೊದಿಸಿದ ನಂದಿಯ ವಿಗ್ರಹವೂ ಮನಮೋಹಕವಾಗಿದೆ. ಜೊತೆಗೆ ಇಲ್ಲಿನ ಗಾಜಿನ ಗೂಡಿನಲ್ಲಿರುವ ಶಿವಪಾರ್ವತಿಯರ ಉಯ್ಯಾಲೆಯಂತೂ ಆಕರ್ಷಣೆಯ ಕೇಂದ್ರಬಿಂದುವಾಗಿದೆ.

ಈ ದೇವಾಲಯವನ್ನು ಚೋಳ ದೊರೆಗಳು ಕಟ್ಟಿದರೆಂದು ಇತಿಹಾಸ ತಿಳಿಸುತ್ತದೆ. ನಂತರದ ವರ್ಷಗಳಲ್ಲಿ ನಾಡಪ್ರಭು ಕೆಂಪೇಗೌಡರು ಈ ದೇವಾಲಯಕ್ಕೆ ರಾಜಗೋಪುರ ಹಾಗೂ ಹೊರ ಆವರಣ ಗೋಡೆ ನಿರ್ಮಿಸಿದರೆಂದು ದಾಖಲೆಗಳು ತಿಳಿಸುತ್ತವೆ.

ದೇವಾಲಯದಲ್ಲಿರುವ ಪ್ರಧಾನ ಗರ್ಭಗೃಹದಲ್ಲಿ ಪರಶಿವ ಸೋಮೇಶ್ವರನ ರೂಪದಲ್ಲಿ ಲಿಂಗರೂಪಿಯಾಗಿ ನೆಲೆಸಿದ್ದಾನೆ. ಉಳಿದಂತೆ ಶ್ರೀ ಕಾಮಾಕ್ಷಿ, ಅರುಣಾಚಲೇಶ್ವರ, ಭೀಮೇಶ್ವರ, ನಂಜುಂಡೇಶ್ವರ ಮತ್ತು ಪಂಚಲಿಂಗೇಶ್ವರರ ಸುಂದರ ಮೂರ್ತಿಗಳಿವೆ. ಆಂಜನೇಯನ, ಕಾಮಾಕ್ಷಿ, ಗಣಪನಿಗೆ ಇಲ್ಲಿ ಪ್ರತ್ಯೇಕ ಗುಡಿಗಳೂ ಇಲ್ಲಿವೆ. ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮಹೇಶ್ವರರಿಗೆ ಇಲ್ಲಿ ಪೂಜೆ ನಡೆಯುವುದು ವಿಶೇಷ.

Bangalore someshwara Temple,   ಬೆಂಗಳೂರು ಸೋಮೇಶ್ವರ ದೇವಾಲಯಪ್ರತಿ ವರ್ಷ ಸಾಮಾನ್ಯವಾಗಿ ಫೆಬ್ರವರಿ ತಿಂಗಳಿನಲ್ಲಿ ಇಲ್ಲಿ ಶಿವರಾತ್ರಿ ಉತ್ಸವ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಕಾಮಾಕ್ಷಿಯಮ್ಮ ಪಲ್ಲಕ್ಕಿ ಉತ್ಸವ ವೈಭವದಿಂದ ಜರುಗುತ್ತವೆ. ಹುಣ್ಣಿಮೆಯ ದಿನ ಇಲ್ಲಿ ಬ್ರಹ್ಮೋತ್ಸವವೂ ನಡೆಯುತ್ತದೆ. ಪ್ರತಿ ತಿಂಗಳೂ ಇಲ್ಲಿ ಎರಡು ಪ್ರದೋಷ, ನಿತ್ಯ ರುದ್ರಾಭಿಷೇಕ ನಡೆಯುತ್ತದೆ. ಶಿವರಾತ್ರಿಯಂದು ಬೆಳಗ್ಗೆಯಿಂದ ಬೆಳಗಿನ ಝಾವದವರೆಗೂ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. 4 ಯಾಮದ ಪೂಜೆಯ ನೋಡಲು ಜನಜಾತ್ರೆಯೇ ಸೇರುತ್ತದೆ.

ಪ್ರತಿ ವರ್ಷ ಕಾರ್ತೀಕ ಮಾಸದಲ್ಲಿ ಹಾಗೂ ಪ್ರತಿ ಸೋಮವಾರ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಚಾಂದ್ರಮಾನ ಯುಗಾದಿಯ ದಿನ ಇಲ್ಲಿ ವಿಶೇಷ ಅಲಂಕಾರ ಹಾಗೂ ಪಂಚಾಂಗ ಶ್ರವಣ ನಡೆಯುತ್ತದೆ. ದೇವಾಲಯದಲ್ಲಿ ನಿತ್ಯ ಪೂಜೆ ಸಾಂಗವಾಗಿ ನಡೆಯುತ್ತದೆ.

ಮುಖಪುಟ /ನಮ್ಮದೇವಾಲಯಗಳು