ಮುಖಪುಟ /ನಮ್ಮದೇವಾಲಯಗಳು  

ಬಸರಾಳು ಮಲ್ಲಿಕಾರ್ಜುನ ದೇವಸ್ಥಾನ

*ಟಿ.ಎಂ.ಸತೀಶ್

Basaralu Mallikarjuna temple, ಬಸರಾಳು ಮಲ್ಲಿಕಾರ್ಜುನ ದೇವಾಲಯಕರ್ನಾಟಕದ ಪ್ರಸಿದ್ಧ ದೇವಾಲಯಗಳ ಪೈಕಿ ಮಂಡ್ಯ ಜಿಲ್ಲೆ ಬಸರಾಳು ಗ್ರಾಮದಲ್ಲಿರುವ ಮಲ್ಲಿಕಾರ್ಜುನ ಸ್ವಾಮಿ ದೇವಾಲಯವೂ ಒಂದು. ಹೊಯ್ಸಳರ ಕಲಾವೈಭವದಿಂದ ಶ್ರೀಮಂತವಾಗಿರುವ ಈ ದೇವಾಲಯ ಮನಮೋಹಕವಾಗಿದ್ದು ನಾಸ್ತಿಕರನ್ನು ಹಾಗೂ ಆಸ್ತಿಕರನ್ನೂ ಕೈಬೀಸಿ ಕರೆಯುವಂತಿದೆ.
ಹೊಯ್ಸಳರು ತಮ್ಮ ಆಳ್ವಿಕೆಯ ಪ್ರದೇಶದಲ್ಲಿದ್ದ ಎಲ್ಲ ಪಂಥದವರ ಧಾರ್ಮಿಕ ನಂಬಿಕೆಗಳನ್ನೂ ಗೌರವಿಸುತ್ತಿದ್ದರು ಎಂಬುದು ಅವರು ಕಟ್ಟಿರುವ ಜೀನ ಮಂದಿರಗಳು, ಶಿವ ದೇವಾಲಯಗಳು ಹಾಗೂ ಚನ್ನಕೇಶವನ ದೇವಾಲಯಗಳಿಂದ ಸಾಬೀತಾಗುತ್ತದೆ.
ಹೀಗೆ ಹೊಯ್ಸಳ ದೊರೆಗಳು ಕಟ್ಟಿದ ಅತ್ಯಂತ ಅಪರೂಪದ ಮತ್ತು ಶಿಲ್ಪಕಲಾ ಸೌಂದರ್ಯದಿಂದ ಶ್ರೀಮಂತವಾದ ದೇಗುಲಗಳ ಪೈಕಿ ಬಸರಾಳುವಿನ ಮಲ್ಲಿಕಾರ್ಜುನ ಸ್ವಾಮಿ ದೇವಾಲಯವೂ ಒಂದಾಗಿದೆ.
ಮೂರು ಗರ್ಭಗುಡಿಗಳನ್ನು ಹೊಂದಿರುವ ದೇವಾಲಯ ತ್ರಿಕೂಟಾಚಲ ಎಂದೇ ಖ್ಯಾತವಾಗಿದೆ. ಪ್ರಧಾನ ಗರ್ಭಗುಡಿಗಳಲ್ಲಿ ಮಲ್ಲಿಕಾರ್ಜುನ ಸ್ವಾಮಿಯ ಶಿವಲಿಂಗವಿದೆ. ಇದನ್ನು ಶ್ರೀಶೈಲದಿಂದ ತಂದು ಸ್ಥಾಪಿಸಲಾಗಿದೆ ಎಂದು ಶಾಸನವೊಂದರಿಂದ ತಿಳಿದುಬರುತ್ತದೆ. ಲಿಂಗದ ಎದುರು ಸುಂದರವಾದ ಕಲಾತ್ಮಕತೆಯಿಂದ ಕೂಡಿದ ಬಸವನ ಮೂರ್ತಿಯಿದೆ. ಉಳಿದ ಎರಡು ಗರ್ಭಗೃಹದಲ್ಲಿ ಸೂರ್ಯನಾರಾಯಣ ಹಾಗೂ ನಾಗ ನಾಗಿಣಿಯರ ವಿಗ್ರಹವಿದೆ. ಇದು ಮೂಲವಿಗ್ರಹವಲ್ಲ ಎಂದೂ ಇತಿಹಾಸಜ್ಞರು ಅಭಿಪ್ರಾಯಪಡುತ್ತಾರೆ.
Basaralu Mallikarjuna temple, ಬಸರಾಳು ಮಲ್ಲಿಕಾರ್ಜುನ ದೇವಾಲಯಈ ದೇವಾಲಯ ಕೂಡ ಎಲ್ಲ ಹೊಯ್ಸಳ ದೇವಾಲಯಗಳಂತೆ ಈ ದೇವಾಲಯವೂ ನಾಲ್ಕಡಿ ಎತ್ತರದ ನಕ್ಷತ್ರಾಕಾರದ ಜಗತಿಯ ಮೇಲಿದೆ. ದೇವಾಲಯದ ಒಳ ಪ್ರವೇಶಿಸಲು 8-10 ಮೆಟ್ಟಿಲುಗಳಿವೆ. ಮೆಟ್ಟಿಲುಗಳ ಎರಡೂ ಕಡೆಗಳಲ್ಲಿ ಗೋಪುರಾಕಾರದ ಪುಟ್ಟ ಗುಡಿಗಳಿವೆ. ಐದು ಮೆಟ್ಟಿಲುಗಳೇರುತ್ತಿದ್ದಂತೆ ಪ್ರವೇಶದ್ವಾರದ ಎರಡೂ ಬದಿಯಲ್ಲಿರುವ ಆನೆಗಳ ಸುಂದರ ಮೂರ್ತಿ ಮನಸೆಳೆಯುತ್ತವೆ. ದೇವಾಲಯದ ಗೋಪುರ ಅತ್ಯಂತ ಸುಂದರವಾಗಿದ್ದು, ಇದಕ್ಕೆ ಕಲ್ಲಿನ ಸುಂದರ ಕಳಶವನ್ನು ಜೋಡಿಸಲಾಗಿದೆ. ಕಳಶದ ಮುಂಭಾಗದಲ್ಲಿ ಹುಲಿಯನ್ನು ಕೊಲ್ಲುತ್ತಿರುವ ಸಳನ ಹೊಯ್ಸಳರ ಲಾಂಛನವಿದೆ. ದೇಗುಲದ ನವರಂಗದಲ್ಲಿರುವ ಕಂಬಗಳು ಅತ್ಯಂತ ಮನೋಹರವಾಗಿವೆ. 16 ಮೂಲೆಯ ಕಂಬವಂತೂ ಅತ್ಯಂತ ಮನಮೋಹಕವಾಗಿದೆ. ಭುವನೇಶ್ವರಿಯ ಕಲಾತ್ಮಕತೆಯೂ ಸುಂದರವಾಗಿದೆ.
Basaralu Mallikarjuna temple, ಬಸರಾಳು ಮಲ್ಲಿಕಾರ್ಜುನ ದೇವಾಲಯದೇವಾಲಯದ ಹೊರ ಭಿತ್ತಿಗಳಲ್ಲಿ ಸುಂದರ ಹಾಗೂ ಸೂಕ್ಷ್ಮ ಕಲಾಕೆತ್ತನೆಗಳಿವೆ. ಕೆಳಭಾಗದಲ್ಲಿರುವ ಆರು ಸಾಲುಗಳ ಪಟ್ಟಿಕೆಗಳಲ್ಲಿ ಪುರಾಣದ ಕಥೆಗಳು, ಮಕರ, ಹಂಸ, ಅಶ್ವಾರೂಢ ಸೈನಿಕರು, ಲತೆಯೇ ಮೊದಲಾದ ಶಿಲ್ಪಾಲಂಕಾರಣಗಳಿವೆ. ಪಟ್ಟಿಕೆಗಳ ಮಧ್ಯೆ ಅಲ್ಲಲ್ಲಿ ಮಿಥುನ ಶಿಲ್ಪಗಳೂ ಇವೆ. ದೇವಾಲಯಕ್ಕೆ ಗಾಳಿ ಬೆಳಕು ಬರಲೆಂದು ಹೊರಭಿತ್ತಿಗಳಲ್ಲಿ ಕಲಾತ್ಮಕ ಚಾಲಂದ್ರಗಳನ್ನು ಅಳವಡಿಸಲಾಗಿದೆ.
ಈ ದೇವಾಲಯವನ್ನು ಹೊಯ್ಸಳ ದೊರೆ ಎರಡನೇ ನರಸಿಂಹನ ಕಾಲದಲ್ಲಿ ಅಂದರೆ 1234ರಲ್ಲಿ ಹರಿಹರ ದಂಡನಾಯಕ ನಿರ್ಮಿಸಿದನೆಂದು ತಿಳಿದುಬರುತ್ತದೆ. ದೇವಾಲಯದಲ್ಲಿರುವ ದೇವಕೋಷ್ಟಕದ ಪಟ್ಟಿಕೆಯಲ್ಲಿ 16 ಕೈಗಳ ನೃತ್ಯಭಂಗಿಯ ನಟರಾಜ ಮೂರ್ತಿ, 22 ಭುಜಗಳ ದುರ್ಗಾ ಮಾತೆ, ಮತ್ತು ಸರಸ್ವತಿಯ ಮೂರ್ತಿಗಳು ಮನಮೋಹಕವಾಗಿವೆ.
ರಾವಣ ಕೈಲಾಸಗಿರಿಯನ್ನು ಎತ್ತುತ್ತಿರುವ ದೃಶ್ಯ, ಮತ್ಸ್ಯಯಂತ್ರ ಭೇದಿಸುತ್ತಿರುವ ಅರ್ಜುನ, ಮಾಲೆ ಹಿಡಿದ ದ್ರೌಪದಿ, ನಂದಿಯ ಮೇಲೆ ಕುಳಿತ ಶಿವ, ಕರುಳು ಬಗೆಯುತ್ತಿರುವ ನರಸಿಂಹ ಮೊದಲಾದ ಶಿಲ್ಪ ಕಥಾನಕಗಳು ಮನಸೂರೆಗೊಳ್ಳುತ್ತವೆ. ಇಷ್ಟೆಲ್ಲಾ ಇದ್ದಾಗ್ಯೂ ಈ ಕಲಾ ಸಂಪತ್ತು ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇತ್ತೀಚೆಗೆ ಪುರಾತತ್ವ ಇಲಾಖೆಯಿಂದ ಸಂರಕ್ಷಿಸಲ್ಪಟ್ಟಿದ್ದರೂ, ಇಲ್ಲಿರುವ ಹಲವು ವಿಗ್ರಹಗಳು ದಾಳಿಗೆ ಒಳಗಾಗಿ ವಿರೂಪವಾಗಿವೆ. ಜೊತೆಗೆ ಹೆಚ್ಚಿನ ಪ್ರಚಾರವೂ ಇಲ್ಲದೆ ಪ್ರವಾಸಿಗರಿಂದ ದೂರವಾಗಿ ನಿರ್ಲಕ್ಷಿತವಾಗಿದೆ.
ಊರ ಇತಿಹಾಸ: ಇಂದು ಪುಟ್ಟ ವಾಣಿಜ್ಯ ಕೇಂದ್ರವಾಗಿರುವ ಬಸರಾಳು ಹಿಂದೆ ಪಾಳೆಯಪಟ್ಟಾಗಿತ್ತು. ಇದರ ಪಕ್ಕದಲ್ಲೇ ಇದ್ದ ದುದ್ದ ಸಹ ಪಾಳೆಯ ಪಟ್ಟಾಗಿತ್ತು. ದುದ್ದದ ಪಾಳೆಯಗಾರ ಜಕ್ಕಪ್ಪ, ಬಸರಾಳಿನ ಪಾಳೆಯಗಾರನ ಮಡದಿಯ ಸೌಂದರ್ಯಕ್ಕೆ ಮಾರುಹೋಗಿ, ಪಾಳೆಯಗಾರನನ್ನು ಕೊಂದು ಆಕೆಯನ್ನು ಪಡೆಯಲು ಬಯಸುತ್ತಾನೆ. ಯುದ್ದ ಮಾಡಿ ಕೊಂದೂ ಹಾಕುತ್ತಾನೆ. ಆದರೆ, ಆ ಸಂದರ್ಭದಲ್ಲಿ ಬಸುರಿಯಾಗಿದ್ದ ಆಕೆ, ತನ್ನ ಗಂಡನ ಕೊಂದ ಜಕ್ಕಪ್ಪನ ವಿರುದ್ಧ ವೀರಾವೇಶದಿಂದ ಹೋರಾಡಿ ವೀರಮರಣ ಅಪ್ಪುತ್ತಾಳೆ. ಆದರೂ ಬಿಡದ ಜಕ್ಕಪ್ಪ ಆ ಮೃತ ಬಸುರಿಯ ಶವವನ್ನು ದುದ್ದಕ್ಕೆ ತಂದು ಹೆಬ್ಬಾಗಿಲ ಬಳಿ ಹೂಳಿಸುತ್ತಾನೆ. ಬಸುರಿಯಾಗಿದ್ದರೂ, ತನ್ನ ಪಾಳೆಯಪಟ್ಟಿಗೆ ಹೋರಾಡಿದ ವೀರ ವನಿತೆಯ ಊರು ಬಸರಿಯಾಳಿದ ಊರು ಬಸರಾಳಾಯಿತು ಎಂದು ಹೇಳಲಾಗುತ್ತದೆ.
ಮಂಡ್ಯದಿಂದ 35 ಕಿಲೋ ಮೀಟರ್ ದೂರದಲ್ಲಿರುವ ಬಸರಾಳುವಿಗೆ ನೇರ ಬಸ್ ಸೌಕರ್ಯವಿದೆ.

ಮುಖಪುಟ /ನಮ್ಮದೇವಾಲಯಗಳು