ಮುಖಪುಟ /ನಮ್ಮದೇವಾಲಯಗಳು   

ವಿಶ್ವಕ್ಕೆ ಸಂಸತ್ತಿನ ಕಲ್ಪನೆ ನೀಡಿದ ತಾಣ ಬಸವ ಕಲ್ಯಾಣ

ಮಹಾನ್ ಮಾನವತಾವಾದಿ ಬಸವೇಶ್ವರರ ಪುಣ್ಯಭೂಮಿ

*ಟಿ.ಎಂ.ಸತೀಶ್

Basavakalyana Basaweswara temple, Anna Basavanna, ourtemples.in, temples of karnataka, Bidar, kudalasangama, t.m.satish, T.M. Satish, journalistಬಸವಕಲ್ಯಾಣ ಬೀದರ್ ಜಿಲ್ಲೆಯ ಪವಿತ್ರ ಯಾತ್ರಾಸ್ಥಳ. ಕಲ್ಯಾಣದ ಚಾಲುಕ್ಯರ ಕಾಲದಲ್ಲಿ ರಾಜಧಾನಿಯಾಗಿ ಮೆರೆದ ಬಸವಕಲ್ಯಾಣ ಕ್ರಾಂತಿಯೋಗಿ, ಜಗಜ್ಯೋತಿ ಬಸವಣ್ಣನವರ ಪಾದಧೂಳಿನಿಂದ ಪವಿತ್ರವಾದ ಪುಣ್ಯಭೂಮಿ. ಅನುಭವ ಮಂಟಪದ ಮೂಲಕ ಇಡೀ ಜಗತ್ತಿಗೇ ಸಂಸತ್ತಿನ ಪ್ರಥಮ ಕಲ್ಪನೆಯನ್ನು ಕಟ್ಟಿಕೊಟ್ಟ ಪ್ರಜಾಪ್ರಭುತ್ವದ ಜನ್ಮಸ್ಥಳ.

ಚಾಳುಕ್ಯರ 1ನೆಯ ಸೋಮೇಶ್ವರ 11ನೆಯ ಶತಮಾನದಲ್ಲಿ ಕಲ್ಯಾಣಪುರವನ್ನು ನಿರ್ಮಿಸಿ ತನ್ನ ರಾಜಧಾನಿಯಾಗಿ ಮಾಡಿಕೊಂಡ. 6ನೆಯ ವಿಕ್ರಮಾದಿತ್ಯನ ಕಾಲದಲ್ಲಿ ಕಲ್ಯಾಣ ವೈಭವದ ಉತ್ತುಂಗಕ್ಕೇರಿತು. 12ನೆಯ ಶತಮಾನದ ರಾಜಕೀಯ ಮತ್ತು ಧಾರ್ಮಿಕ ಕ್ರಾಂತಿಗಳಿಂದಾಗಿ ಕಲ್ಯಾಣಕ್ಕೆ ವಿಶಿಷ್ಟ ಸ್ಥಾನ ದೊರೆಯಿತು.

ಬಸವೇಶ್ವರರ ನೇತೃತ್ವದಲ್ಲಿ ನಡೆದ ವೀರಶೈವ ಧರ್ಮಪ್ರಸಾರ ಕಾರ್ಯಕ್ಕೆ ಕಲ್ಯಾಣವೇ ಕೇಂದ್ರವಾಯಿತು. ಆ ಕಾಲದಲ್ಲೇ ಕಲ್ಯಾಣ ವೀರಶೈವ ಧರ್ಮ ಸಭೆ, ಸಮ್ಮೇಳನ, ವಿಚಾರಗೊಷ್ಠಿ, ಆಧ್ಯಾತ್ಮ ಸಾಧನೆಗಳಿಗೆ  ಕೇಂದ್ರವಾಯಿತು. ಸಹಸ್ರಾರು ಶರಣ, ಶರಣೆಯರು ಇಲ್ಲಿಗೆ ಆಗಮಿಸಿ ಅನುಭವ ಮಂಟಪದಲ್ಲಿ ಕಲೆತು ವಚನಾಮೃತಗಳನ್ನು ಸವಿಯುತ್ತಿದ್ದರು.

Basavakalyana Basaweswara temple, Anna Basavanna, ourtemples.in, temples of karnataka, Bidar, kudalasangama, t.m.satish, T.M. Satish, journalistಅನುಭವ ಮಂಟಪದಲ್ಲಿ ಬಸವೇಶ್ವರ,  ಅಲ್ಲಮಪ್ರಭು,  ಚನ್ನಬಸವಣ್ಣ,  ಸಿದ್ಧರಾಮ,  ಅಕ್ಕ ಮಹಾದೇವಿ,  ಮಡಿವಾಳ ಮಾಚಯ್ಯ  ಮೊದಲಾದವರು ವೀರಶೈವ ಸಂಪ್ರದಾಯ ಕುರಿತ ಮಹತ್ವದ ಚರ್ಚೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು.  ಅಕ್ಕ, ಅಣ್ಣ ಬಸವಣ್ಣರಿಂದಾಗಿ ಕಲ್ಯಾಣ ಅವಿಮುಕ್ತ ಕ್ಷೇತ್ರವಾಯಿತು. ಬಿಜ್ಜಳನ ಹತ್ಯೆಯ ಬಳಿಕ ಕಲ್ಯಾಣ ಕಳಾಹೀನವಾಯ್ತು.

ಚಾಳುಕ್ಯರ ಕಾಲದಲ್ಲಿ ಕಲ್ಯಾಣದಲ್ಲಿ ಅನೇಕ ದೇವಾಲಯಗಳು, ಬಸದಿಗಳು, ಮಠ, ಮಂದಿರಗಳು ನಿರ್ಮಾಣವಾದ ಬಗ್ಗೆ ಶಾಸನಗಳಲ್ಲಿ ಉಲ್ಲೇಖವಿದೆ. ಭಾವನ ಗಂಧವಾರಣನೆಂಬ ಸಾಮಂತ ಕಟ್ಟಿಸಿದ ತುಂಬೇಶ್ವರ ದೇವಸ್ಥಾನ. ಜೈನಗೋಷ್ಠಿಗಾಗಿ ದಾನ ಚಿಂತಾಮಣಿ ಅತ್ತಿಮಬ್ಬೆ ಕಟ್ಟಿಸಿದ್ದ ಚಂದ್ರಪ್ರಭ ಜಿನಾಲಯ, ಅರಮನೆಯ ದಕ್ಷಿಣ ಭಾಗದಲ್ಲಿ ಭೀಮರಸ ಕಟ್ಟಿಸಿದ್ಧ ಭೀಮೇಶ್ವರ ದೇವಾಲಯ, ಕೇಶವ ದೇವಾಲಯ, ತ್ರಿಭುವನಮಲ್ಲ ಮಾಣಿಕನ ದೇವಾಲಯ, ನಾರಾಯಣ ದೇವಾಲಯ, ಸ್ವಯಂಭೂ ಹಾಟಕೇಶ್ವರ, ನೀಲಕಂಠ ದೇಗುಲ,  ಮಧುಕೇಶ್ವರ,  ತ್ರಿಪುರಾಂತಕ ದೇವಾಲಯಗಳಿದ್ದವೆಂಬ ಉಲ್ಲೇಖಗಳಿವೆ.  ನಾರಾಯಣಪುರ ದೇವಾಲಯ ಹೊರತು ಪಡಿಸಿ, ಮಿಕ್ಕೆಲ್ಲ  ದೇವಾಲಯಗಳೂ ಈಗ ನಾಶವಾಗಿವೆ.

Basavakalyana Basaweswara temple, Anna Basavanna, ourtemples.in, temples of karnataka, Bidar, kudalasangama, t.m.satish, T.M. Satish, journalistಬಸವಕಲ್ಯಾಣದಲ್ಲಿ ಗುರು ಬಸವೇಶ್ವರರ ಸುಂದರ ದೇವಾಲಯವಿದೆ. ದೇವಾಲಯಕ್ಕೆ ಭವ್ಯವಾದ ಪ್ರವೇಶದ್ವಾರವಿದೆ. ಗಾರೆಗಚ್ಚಿನ ಗೋಪುರದ ಗೂಡಿನಲ್ಲಿ ಅಣ್ಣ ಬಸವಣ್ಣನವರ ಪ್ರತಿಮೆ ಇದೆ. ಒಳ ಪ್ರವೇಶಿಸಿದರೆ ವಿಶಾಲವಾದ ಪ್ರಾಕಾರವಿದೆ, ಸುತ್ತಲೂ ಇರುವ ಮಂಟಪದಲ್ಲಿ ಬಸವಣ್ಣನವನ ಜೀವನ ದರ್ಶನ ಮಾಡಿಸುವ ಕಲಾಕೃತಿಗಳಿವೆ. ಎದುರು ಸುಂದರ ಗೋಪುರದ ಭವ್ಯ ದೇವಾಲಯ ಕಾಣುತ್ತದೆ. ದೇವಾಲಯದ ಪ್ರವೇಶದ ಮೇಲ್ಭಾಗದಲ್ಲಿ ಬಸವೇಶ್ವರರು, ಗಂಗಾಂಬಿಕೆ ಮತ್ತು ನೀಲಾಂಬಿಕೆಯರ ಗಾರೆಯ ಪ್ರತಿಮೆಗಳಿವೆ. ಕೆಳಗೆ ಶರಣು ಬನ್ನಿ, ಓಂ ಶ್ರೀ ಗುರು ಬಸವಲಿಂಗಾಯ ನಮಃ ಎಂಬ ಬರಹವಿದೆ. ಒಳಗೆ ಬಸವಣ್ಣನವರ ಸುಂದರ ಪ್ರತಿಮೆ ಮತ್ತು ಪಾದುಕೆ ಇದೆ. ಇಲ್ಲಿ ಬಸವೇಶ್ವರರಿಗೆ ನಿತ್ಯ ಪೂಜೆ ನಡೆಯುತ್ತದೆ.

Basavakalyana Basaweswara temple, Anna Basavanna, ourtemples.in, temples of karnataka, Bidar, kudalasangama, t.m.satish, T.M. Satish, journalistನೋಡಬೇಕಾದ ತಾಣಗಳು: 108 ಅಡಿಗಳ ಬಸವೇಶ್ವರರ ಪ್ರತಿಮೆ, ಬಸವೇಶ್ವರರು ಧ್ಯಾನ ಮಾಡುತ್ತಿದ್ದ ಗವಿ (ಮಹಾಮನೆ-ಅರಿವಿನ ಮನೆ), ತ್ರಿಪುರಾಂತಕಕೆರೆ ದಂಡೆಯಲ್ಲಿರುವ ಅನುಭವ ಮಂಟಪ, ಅಕ್ಕನಾಗಮ್ಮನ ಗವಿ, ಮೋಳಿಗೆ ಮಾರಯ್ಯ, ಮಡಿವಾಳ ಮಾಚಯ್ಯ,  ಅಲ್ಲಮಪ್ರಭು, ರುದ್ರಮುನಿ, ಅಂಬಿಗರ ಚೌಡಯ್ಯ, ಉರಿಲಿಂಗಿ ಪೆದ್ದಿ ಮೊದಲಾದ ಶರಣರ ಸ್ಮಾರಕಮಂದಿರ,  ಗುಹಾದಿ ಸ್ಥಳಗಳು, ಪ್ರಭುದೇವರ ಗದ್ದಿಗೆ, ಪರುಷಗಟ್ಟಿ ದೇವಾಲಯ, ಅನುಭವ ಮಂಟಪದ ನೆಲಗಟ್ಟು ಮೊದಲಾದುವು ಅಲ್ಲಿ ನಡೆದ ಧಾರ್ಮಿಕ ಕ್ರಾಂತಿಗೆ ಸಾಕ್ಷಿಯಾಗಿ ನಿಂತಿವೆ.

ಬೀದರ್ ಶೋಲಾಪುರ ರಸ್ತೆಯಲ್ಲಿ ಬೀದರ್ ನಿಂದ 80 ಕಿಲೋ ಮೀಟರ್ ದೂರದಲ್ಲಿದೆ. 

ಮುಖಪುಟ /ನಮ್ಮದೇವಾಲಯಗಳು