ಮುಖಪುಟ /ನಮ್ಮದೇವಾಲಯಗಳು   

ಬೇಗೂರು ನಾಗನಾಥೇಶ್ವರ ದೇವಾಲಯ

*ಟಿ.ಎಂ.ಸತೀಶ್

Naganatheswara temple, Beguru, ನಾಗನಾಥೇಶ್ವರಬೇಗೂರು, ಬೆಂಗಳೂರು ಹೊರವಲಯದಲ್ಲಿದ್ದ ಒಂದು ಇತಿಹಾಸ ಪ್ರಸಿದ್ಧ ಗ್ರಾಮ.  ಈಗ ಬೃಹತ್ ಬೆಂಗಳೂರಿನ ಭಾಗವಾಗಿರುವ ಇಲ್ಲಿ ಚೋಳರ ಕಾಲದಲ್ಲಿ ಅಂದರೆ 1300 ವರ್ಷಗಳ ಹಿಂದೆ ನಿರ್ಮಿಸಲಾದ ನಾಗನಾಥೇಶ್ವರ ದೇವಾಲಯವಿದೆ. ಪಂಚಲಿಂಗಗಳ ಕ್ಷೇತ್ರ ಎಂದೇ ಖ್ಯಾತವಾದ ಇಲ್ಲಿ ಚೋಳೇಶ್ವರ, ನಾಗೇಶ್ವರ, ನಗರೇಶ್ವರ, ಕರ್ಣೇಶ್ವರ ಹಾಗೂ ಕಾಳಿಕಾ ಕಮಟೇಶ್ವರ ಲಿಂಗಗಳಿವೆ.

ಬೆಂಗಳೂರಿನ ದಕ್ಷಿಣಕ್ಕೆ 13 ಕಿಲೋ ಮೀಟರ್ ದೂರದಲ್ಲಿರುವ ದ್ರಾವಿಡ ಶೈಲಿಯ ನಾಗನಾಥೇಶ್ವರ ದೇವಾಲಯದ ಎದುರು ಇರುವ ಮಂಟಪದ ಮೇಲ್ಛಾವಣಿಯಲ್ಲಿ ಅಷ್ಟದಿಕ್ಪಾಲಕರ ಉಬ್ಬು ಶಿಲ್ಪಗಳಿವೆ. ಇಲ್ಲಿರುವ ಕಂಬದಲ್ಲಿ ಬೇಡರ ಕಣ್ಣಪ್ಪ ಶಿವನಿಗೆ ಕಣ್ಣು ಕಿತ್ತು ಕೊಡುತ್ತಿರುವ ಉಬ್ಬು ಶಿಲ್ಪವಿದೆ. ದೇವಾಲಯದ ಪ್ರಾಕಾರದಲ್ಲಿ ವೈದ್ಯಕೇಶ್ವರ ಹಾಗೂ ಸೂರ್ಯನಾರಾಯಣ ಸ್ವಾಮಿ ಗುಡಿಗಳೂ ಇವೆ. ಪ್ರತಿವರ್ಷ ಏಪ್ರಿಲ್ ತಿಂಗಳಿನಲ್ಲಿ ಇಲ್ಲಿ ದೇವರಿಗೆ ಬ್ರಹ್ಮರಥೋತ್ಸವ ಜರುಗುತ್ತದೆ. ಭಕ್ತರು ಇಲ್ಲಿ ಗಿರಿಜಾ ಕಲ್ಯಾಣವನ್ನೂ ನಡೆಸುತ್ತಾರೆ. ದೇವಾಲಯದಲ್ಲಿ ನಡೆಯುವ ಪ್ರಾಕಾರೋತ್ಸವ ನೋಡಲು ಸುಂದರ.

Naganatheswara temple, Beguruಬೆಂಗಳೂರಿಗೂ ಬೇಗೂರಿಗೂ ಅವಿನಾಭವ ಸಂಬಂಧವಿದೆ. ಮುದುಕಿಯೊಬ್ಬಳು 12ನೇ ಶತಮಾನದಲ್ಲಿ ಹೊಯ್ಸಳ ದೊರೆ ವೀರಬಲ್ಲಾಳನಿಗೆ ಬೆಂದ ಕಾಳನ್ನು ನೀಡಿದ್ದರಿಂದಲೇ ಬೆಂಗಳೂರು ಹೆಸರಾಯ್ತು ಎಂಬ ಕಥೆ ಕೇವಲ ದಂತಕಥೆಯೆಂದೂ, ಬೆಂಗಳೂರು 9ನೇ ಶತಮಾನದಲ್ಲೇ ಇತ್ತೆಂಬುದನ್ನು ಇಲ್ಲಿ ದೊರೆತಿರುವ ಶಾಸನವೊಂದು ಸಾರಿ ಸಾರಿ ಹೇಳುತ್ತದೆ.

ನಾಗೇಶ್ವರ ದೇವಸ್ಥಾನದ ಬಳಿ ದೊರೆತಿರುವ ಕ್ರಿ.ಶ.920ರ ಶಾಸನವೊಂದರಲ್ಲಿ ಆ ಪ್ರದೇಶದ ಮಾಂಡಲೀಕ ನಾಗತ್ತರನ ಮಗ ಪೆರುಮಾಳ ಸೆಟ್ಟಿ ಎಂಬುವನು ಬೆಂಗುಳುರು ಕಾಳಗದಲ್ಲಿ ಮೃತನಾದ ಎಂದು ತಿಳಿಸುತ್ತದೆ. ಅಂದರೆ ಆ ಬೆಂಗುಳುರು ಇಂದು ಬೆಂಗಳೂರಾಗಿದೆ ಎನ್ನುತ್ತಾರೆ ಇತಿಹಾಸಜ್ಞರು.  ಈಗ ಈ ಶಾಸನ ಬೆಂಗಳೂರಿನ ವಸ್ತುಸಂಗ್ರಹಾಲಯದಲ್ಲಿದೆ.

Naganatheswara temple, Beguruಮಾಂಡಲಿಕ ನಾಗತ್ತರನೇ ಕಟ್ಟಿಸಿದನೆಂದು ಹೇಳಲಾಗುವ ನಾಗನಾಥೇಶ್ವರ ದೇವಾಲಯದ ಗೋಪುರದ ಮೇಲೆ ಬೆಂಗಳೂರಿನ ನಿರ್ಮಾತೃ ಮಾಗಡಿ ಕೆಂಪೇಗೌಡರು ನಾಲ್ಕು ದಿಕ್ಕುಗಳಲ್ಲಿ ಕಟ್ಟಿಸಿರುವ ಗೋಪುರದ ಚಿಹ್ನೆಯಿದೆ. ಬೆಂಗಳೂರು ನಿರ್ಮಾಣಕ್ಕೆ ಮೊದಲೇ ಈ ಚಿಹ್ನೆ ಇತ್ತೆಂದು ಹೇಳಲಾಗುವ ಕಾರಣ ಬೆಂಗಳೂರಿನ ನಿರ್ಮಾಣಕ್ಕೆ ಕೆಂಪೇಗೌಡರಿಗೆ ಇದು ಸ್ಫೂರ್ತಿಯಾಗಿರಬಹುದೆಂದೂ ಹೇಳಲಾಗುತ್ತದೆ.

ಇದಕ್ಕೆ ಪುಷ್ಟಿ ಎನ್ನುವಂತೆ ಮಾಗಡಿ ಕೆಂಪೇಗೌಡರು ಈ ದೇವಾಲಯದ ಅನತಿ ದೂರದಲ್ಲಿ ಮಣ್ಣಿನ ಕೋಟೆಯನ್ನೂ ಕಟ್ಟಿಸಿದರೆಂದು ಇತಿಹಾಸ ಸಾರುತ್ತದೆ. ಅದರ ಕುರುಹುಗಳು ಇಂದಿಗೂ ಇಲ್ಲಿವೆ. ಕೋಟೆಯೊಳಗೆ ಕಾಶಿ ವಿಶ್ವೇಶ್ವರ ದೇವಾಲಯವಿದೆ. ಹಿಂದೆ ಇದೊಂದು ಜೈನ Naganatheswara temple, Beguruಕ್ಷೇತ್ರವಾಗಿತ್ತೆಂದು ತಿಳಿದುಬರುತ್ತದೆ.  ಇಲ್ಲಿ ಅಕ್ಕಸಾಲೆ ಎಂಬ ಹೆಸರಿನ ಮಠವಿದೆ. ವೀರಭದ್ರದೇವರ ಗುಡಿಯೂ ಇದೆ.

ಮಾರ್ಗ : ಬೆಂಗಳೂರು - ಹೊಸೂರು ಮಾರ್ಗದಲ್ಲಿ ಹೋಗುವಾಗ ಬೊಮ್ಮನಹಳ್ಳಿಯ ಬಳಿ ಬಲಕ್ಕೆ ತಿರುಗಿ 2 ಕಿಲೋ ಮೀಟರ್ ಹೋದರೆ ಈ ಪುರಾತನವಾದ ಭವ್ಯ ದೇವಾಲಯ ಗೋಚರಿಸುತ್ತದೆ. ಹೆಚ್ಚಿನ ವಿವರಗಳಿಗೆ ದೂರವಾಣಿ 080-25732242 ಸಂಪರ್ಕಿಸಬಹುದು.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮದೇವಾಲಯಗಳು