ಮುಖಪುಟ /ನಮ್ಮ ದೇವಾಲಯಗಳು  

ಬೆಳವಾಡಿಯ ಉದ್ಭವ ಗಣಪತಿ ದೇವಾಲಯ
300 ವರ್ಷಗಳ ಪುರಾತನ ದೇವಾಲಯ...

*ಟಿ.ಎಂ. ಸತೀಶ್

ಕರ್ನಾಟಕದಲ್ಲಿ ಕಾಫಿಗೆ ಹೆಸರಾದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಬೆಳವಾಡಿ ಪುರಾಣ ಪ್ರಸಿದ್ಧ ಹಾಗೂ ಇತಿಹಾಸ ಪ್ರಸಿದ್ಧ ಕ್ಷೇತ್ರ. ನಮ್ಮ ರಾಜ್ಯದ ಹಲವು ಪುರಾತನ ಗ್ರಾಮಗಳೊಂದಿಗೆ ಪುರಾಣದ ನಂಟೂ ಇದೆ.

ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ 20 ಕಿಮೀ ದೂರದಲ್ಲಿರುವ ಬೆಳವಾಡಿ ಕೂಡ ಇಂಥ ಪುರಾಣದ ಕಥೆಯೊಂದಿಗೆ ಬೆಸೆದುಕೊಂಡಿದೆ. ದ್ವಾಪರಯುಗದಲ್ಲಿ ಈ ಗ್ರಾಮ ಏಕಚಕ್ರನಗರ ಎಂದು ಹೆಸರಾಗಿತ್ತಂತೆ. ಇಲ್ಲಿ ಹೊಟ್ಟೆಬಾಕ ಬಕಾಸುರನೆಂಬ ರಾಕ್ಷಸನಿದ್ದನಂತೆ. ಅವನು ಊರಿಗೆ ನುಗ್ಗಿ, ಸಿಕ್ಕ ಸಿಕ್ಕ ಜನರನ್ನು ತಿನ್ನುತ್ತಿದ್ದನಂತೆ. ಒಮ್ಮೆ ಬಂದರೆ 15-20 ಜನರನ್ನು ತಿನ್ನುತ್ತಿದ್ದ ಬಕಾಸುರನ ಕಾಟ ತಾಳಲಾರದೆ, ಪುರ ಜನರು ರಾಕ್ಷಸನ ಬಳಿ ಹೋಗಿ, ಹೀಗೆ ಸಿಕ್ಕಸಿಕ್ಕವರನ್ನು ಕೊಲ್ಲದಂತೆ ಮನವಿ ಮಾಡಿ, ಅದಕ್ಕೆ ಪ್ರತಿಯಾಗಿ ದಿನವೂ ಒಂದು ಬಂಡಿ (ಗಾಡಿ) ತುಂಬ ಅಡುಗೆ ಮಾಡಿ ಊರಿನ ಒಬ್ಬನೊಂದಿಗೆ ಕಳುಹಿಸುವುದಾಗಿ, ಊಟವನ್ನೂ ಮತ್ತು  ಅದನ್ನು ತರುವವನನ್ನೂ ತಿಂದು ನೆಮ್ಮದಿಯಿಂದ ಇರುವಂತೆ ಒಪ್ಪಂದ ಮಾಡಿಕೊಂಡರಂತೆ. ಇದಕ್ಕೆ ಒಪ್ಪಿ ಬಕಾಸುರ ಊರ ಹೊರಗೆ ಹೋಗಿ ನೆಲೆಸಿದ್ದನಂತೆ.

ಶಕುನಿಯ ಕುತಂತ್ರಕ್ಕೆ ಬಲಿಯಾಗಿ ವನವಾಸಿಗಳಾಗಿದ್ದ ಪಾಂಡವರು ಇಲ್ಲಿ ಕೆಲ ಕಾಲ ಇದ್ದರಂತೆ, ಆಗ ಮಧ್ಯಮ ಪಾಂಡವ ಬಲ ಭೀಮ, ಬಂಡಿಯ ಆಹಾರವನ್ನು ತಾನೇ ತಿಂದು, ಬಕಾಸುರನನ್ನು ಕೊಂದನೆಂದು ಪ್ರತೀತಿ. ಹೀಗಾಗಿ ಇಲ್ಲಿ ಪ್ರತಿವರ್ಷ ಚೈತ್ರಮಾಸದಲ್ಲಿ ಬಂಡಿಬಾನ ಹಬ್ಬವನ್ನೂ ಆಚರಿಸುತ್ತಾರೆ.

ಇದು ಪುರಾಣದ ಕಥೆಯಾದರೆ, ಐತಿಹಾಸಿಕವಾಗಿಯೂ ಮಹತ್ವ ಪಡೆದಿರುವ ಬೆಳವಾಡಿ, ಹೊಯ್ಸಳರ ಕಾಲದಲ್ಲಿ ಜೈನ ಕೇಂದ್ರವಾಗಿತ್ತೆಂದೂ ಈ ಗ್ರಾಮವನ್ನು 1760ರಲ್ಲಿ ಮೈಸೂರು ಅರಸು, ಇಮ್ಮಡಿ ಕೃಷ್ಣರಾಜ ಒಡೆಯರು ಈ ಊರನ್ನು ಶೃಂಗೇರಿ ಮಠಕ್ಕೆ ಜಹಗೀರಿ ನೀಡಿದ್ದರು ಎಂದೂ ತಿಳಿದುಬರುತ್ತದೆ. ಇಲ್ಲಿ ಅದ್ಭುತ ಕಲಾ ಶ್ರೀಮಂತಿಕೆಯಿಂದ ಕೂಡಿದ ಭವ್ಯ ವೀರನಾರಾಯಣನ ದೇವಾಲಯವೂ ಇದೆ.

ಈ ಊರಿನಲ್ಲಿ 3 ಶತಮಾನಗಳ ಇತಿಹಾಸ ಇರುವ ಉದ್ಭವ ಗಣಪತಿ ದೇವಾಲಯವಿದೆ. ಈ ದೇವಾಲಯದೊಂದಿಗೆ ಒಂದು ಪವಾಡದ ಕಥೆ ಜನಜನಿತವಾಗಿದೆ. ಸುಮಾರು ಮುನ್ನೂರು ವರ್ಷಗಳ ಹಿಂದೆ ಕಾಣಿಸಿಕೊಂಡ ಈ ಗಣಪನನ್ನು ಹುತ್ತದ ಗಣಪತಿ ಅಥವಾ ಉದ್ಭವ ಗಣಪತಿ ಎನ್ನುತ್ತಾರೆ.

ಐತಿಹ್ಯದ ರೀತ್ಯ, ಈ ಗ್ರಾಮದ ನಿವಾಸಿಯಾಗಿದ್ದ ಸೂರಪ್ಪನವರ ಮನೆಯ ಒಂದು ಹಸು ಪ್ರತಿನಿತ್ಯ ಈಗ ದೇವಾಲಯ ಇರುವ ಜಾಗಕ್ಕೆ ಬಂದು ಇಲ್ಲಿದ್ದ ಹುತ್ತಕ್ಕೆ ಸ್ವಯಂ ಹಾಲು ಕರೆಯುತ್ತಿತ್ತಂತೆ. ಈ ಪವಾಡ ಕಂಡ ಪುರಜನರು ಹುತ್ತ ಅಗೆದು ನೋಡಿದಾಗ ಅಲ್ಲಿ ಗಣಪತಿಯಂಥ ಮೂರ್ತಿ ಇತ್ತಂತೆ. ಗಣಪನನ್ನು ಕಂಡು ಧನ್ಯರಾದ ಸೂರಪ್ಪನವರು ಗುಡಿಯನ್ನು ಕಟ್ಟಿಸಿ ಪೂಜಿಸಿದರಂತೆ. ಹೀಗಾಗಿ ಈ ಗಣಪ ಹುತ್ತದ ಗಣಪ ಅಥವಾ ಉದ್ಭವ ಗಣಪ ಎಂದು ಖ್ಯಾತನಾಗಿದ್ದಾನೆ.

ಸ್ವಯಂಭೂ ಆದ ಈ ಗಣಪನ ವಿಗ್ರಹ ಈಗಲೂ ಬೆಳೆಯುತ್ತಿದೆ, ಗಣಪನ ಸ್ಪಷ್ಟರೂಪ ಪಡೆಯುತ್ತಿದೆ ಎಂಬ ನಂಬಿಕೆ ಇದೆ. ಇದಕ್ಕೆ ಪೂರಕವಾಗಿ ಹಿಂದೆ ಈ ಗಣಪತಿಗೆ ಮಾಡಿಸಲಾಗಿದ್ದ ಎಲ್ಲ ಒಡವೆಗಳೂ ಚಿಕ್ಕದಾಗಿವೆ ಎಂದು ಪುರೋಹಿತರು ತೋರಿಸುತ್ತಾರೆ. ಗಣಪನ ಬೆಳವಣಿಗೆ ನಿಂತಾಗ ಪ್ರಳಯವಾಗುತ್ತದೆ ಎಂಬ ಮಾತೂ ಇಲ್ಲಿ ಜನಜನಿತವಾಗಿದೆ.

ಹಿಂದೆ ಇಲ್ಲಿ ಕಟ್ಟಲಾಗಿದ್ದ ಪುರಾತನ ದೇವಾಲಯ ಶಿಥಿಲವಾಗಿದ್ದ ಕಾರಣ, ಕೆಲವು ವರ್ಷಗಳ ಹಿಂದೆ ಇಲ್ಲಿ ಇಟ್ಟಿಗೆ, ಸಿಮೆಂಟ್, ಹೆಂಚು ಹಾಗೂ ಆರ್.ಸಿ.ಸಿ.ಯಿಂದ ಹೊಸ ದೇಗುಲ ನಿರ್ಮಾಣ ಮಾಡಲಾಗಿದೆ. ದೇವಾಲಯಕ್ಕೆ ಭವ್ಯ ಪ್ರವೇಶ ಹಾಗೂ ಗೋಪುರವೂ ಇದೆ. .

ಮುಖಪುಟ /ನಮ್ಮದೇವಾಲಯ