ಮುಖಪುಟ /ನಮ್ಮದೇವಾಲಯಗಳು 

 ಮಹಾರಾಷ್ಟ್ರದಲ್ಲಿ ಕನ್ನಡ ರಾಜರಾಜೇಶ್ವರಿ

*ಟಿ.ಎಂ.ಸತೀಶ್

Bhuvaneswariಕನ್ನಡ ನಾಡದೇವಿ ಭುವನೇಶ್ವರಿ. ಕನ್ನಡಿಗರೆಲ್ಲರೂ ಆರಾಧಿಸುವ ಭುವನೇಶ್ವರಿ ದೇವಾಲಯ ಕರ್ನಾಟಕದಲ್ಲಿ ಪ್ರಮುಖವಾಗಿ ಮೂರು ಐತಿಹಾಸಿಕ ಸ್ಥಳದಲ್ಲಿದೆ. ಒಂದು ಕನ್ನಡ ಸಾಮ್ರಾಜ್ಯ ಹಂಪೆಯ ವಿರೂಪಾಕ್ಷ ಸನ್ನಿಧಿಯಲ್ಲಿ. ಮತ್ತೊಂದು ಕನ್ನಡ ಸಿಂಹಾಸನ ಪ್ರತಿಷ್ಠಾಪನಾಚಾರ್ಯರ ಮಠವಿರುವ ಶೃಂಗೇರಿಯಲ್ಲಿ ಹಾಗೂ ಉತ್ತರ ಕನ್ನಡ ಜಿಲ್ಲೆ ಭುವನಗಿರಿಯಲ್ಲಿ.

ಮತ್ತೊಂದು ಸುಂದರ ಭುವನೇಶ್ವರಿ ದೇವಾಲಯ ಇರುವುದು ಮಹಾರಾಷ್ಟ್ರದಲ್ಲಿ. ಕವಿರಾಜಮಾರ್ಗದಲ್ಲಿ  ಕನ್ನಡ ಸಾಮ್ರಾಜ್ಯ ಕಾವೇರಿಯಿಂದ ಗೋದಾವರಿವರೆಗೆ ಹಬ್ಬಿತ್ತೆಂಬ ಉಲ್ಲೇಖಕ್ಕೆ ಇದು ಸಾಕ್ಷಿಯಾಗಿದೆ. ಸಾಂಗ್ಲಿಯಿಂದ ಸುಮಾರು 30 ಹಾಗೂ ಕೊಲ್ಹಾಪುರದಿಂದ 35 ಕಿಲೋ ಮೀಟರ್ ದೂರದಲ್ಲಿರುವ ಔದುಂಬರದಲ್ಲಿ ತಾಯಿ ಭುವನೇಶ್ವರಿ ದೇವಾಲಯವಿದೆ.

ಔದುಂಬರ ಕ್ಷೇತ್ರವನ್ನು ದತ್ತಕ್ಷೇತ್ರವೆಂದೂ ಕರೆಯುತ್ತಾರೆ. ಇಲ್ಲಿ ತ್ರಿಮೂರ್ತಿರೂಪ ದತ್ತಾತ್ರೆಯರು ನೆಲೆಸಿದ್ದರೆಂದು ಗುರುಚರಿತ್ರೆಯಲ್ಲಿಯೂ ಉಲ್ಲೇಖವಿದೆ. ಕೃಷ್ಣ ನದಿ ತೀರದ ಈ ಪುಣ್ಯಕ್ಷೇತ್ರದಲ್ಲಿ ಔದುಂಬರ ವೃಕ್ಷದ ಕೆಳಗೆ ದತ್ತಾತ್ರೇಯರ ಮಂದಿರವಿದೆ.  ನದಿಯ ಪೂರ್ವ ತೀರದಲ್ಲಿ ಭವನೇಶ್ವರಿ ದೇವಿಯ ಪುರಾತನವಾದ ಸುಂದರ ಭುವನೇಶ್ವರಿ ಮಂದಿರವಿದೆ.

ಔದುಂಬರದಿಂದ ದೇವಾಲಯಕ್ಕೆ ಹೋಗಲು ದೋಣಿಯ ನೆರವು ಇದೆ. ದೋಣಿ ವಿಹಾರ ಮುಗಿಸಿ, ನದಿಯ ಆ ದಂಡೆಯಲ್ಲಿ ಇಳಿದು, ಮೆಟ್ಟಿಲುಗಳನ್ನೇರಿ ಮುಂದೆ ಸಾಗುತ್ತಿದ್ದಂತೆ ಶ್ರೀಕ್ಷೇತ್ರ ಭುವನೇಶ್ವರಿ ದೇವಿ ದೇವಾಲಯದ ಸ್ವಾಗತ ಕಮಾನು ಕಾಣಿಸುತ್ತದೆ.

ಸಸ್ಯರಾಶಿಯಿಂದ ಸಂಪದ್ಭರಿತವಾದ ಪ್ರದೇಶದಲ್ಲಿ ಒಳ ಪ್ರವೇಶಿಸುತ್ತಿದ್ದಂತೆ ಪುರಾತನವಾದ ದೇವಾಲಯ ಗೋಚರಿಸುತ್ತದೆ. ಭವ್ಯವಾದ ಈ ದೇವಾಲಯದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ಚತುರ್ಭುಜೆ ಭುವನೇಶ್ವರಿ ಮೂರ್ತಿ ಬಹು ಸುಂದರವಾಗಿದೆ.

 

ಮುಖಪುಟ /ನಮ್ಮದೇವಾಲಯಗಳು