ಮುಖಪುಟ /ನಮ್ಮದೇವಾಲಯಗಳು  

ಚಿಕ್ಕತಿರುಪತಿ ಶ್ರೀನಿವಾಸ ದೇವಾಲಯ

Chikka Tirupati god, Photo Courtesy Govt. Offiicial websiteಮಾಲೂರಿನ ಬಳಿ ಇರುವ ಚಿಕ್ಕ ತಿರುಪತಿ 4 ಸಾವಿರ ವರ್ಷಗಳ ಸುದೀರ್ಘ ಇತಿಹಾಸ ಇರುವ ಪವಿತ್ರ ಪುಣ್ಯಕ್ಷೇತ್ರ. ಚಿಕ್ಕತಿರುಪತಿಗೆ ಪೌರಾಣಿಕ ಹಿನ್ನೆಲೆಯಿದೆ. ಇಲ್ಲಿರುವ ದಿವ್ಯ ವಿಗ್ರಹವನ್ನು ಸ್ವತಃ ಪಂಚಭೂತಗಳಲ್ಲಿ ಒಬ್ಬನಾದ ಅಗ್ನಿದೇವ ಪ್ರತಿಷ್ಠಾಪಿಸಿ, ಪೂಜಿಸಿದ ಎನ್ನುತ್ತದೆ ಸ್ಥಳ ಪುರಾಣ.

ಈ ದೇವಾಲಯದ ಇತಿಹಾಸ ಮಹಾಭಾರತ ಕಾಲದ್ದಾಗಿದೆ. ದ್ವಾಪರಯುಗದಲ್ಲಿ ರಾಜ ಮಹಾರಾಜರು, ಋಷಿ ಮುನಿಗಳು ಮಾಡುತ್ತಿದ್ದ ಯಜ್ಞಯಾಗಾದಿಗಳ ಹವಿರ್ಭಾಗವನ್ನು ದೇವತೆಗಳಿಗೆ ಅರ್ಪಿಸುತ್ತಿದ್ದ ಹವ್ಯವಾಹನನಾದ ಅಗ್ನಿದೇವ ಯಥೇಚ್ಛವಾದ ತುಪ್ಪಸೇವನೆಯಿಂದಾಗಿ ಉದರಬೇನೆ (ಹೊಟ್ಟೆನೋವು)ಗೆ ತುತ್ತಾಗುತ್ತಾನೆ. ಸುರವೈದ್ಯರಾದ ಅಶ್ವಿನಿ ಕುಮಾರರು, ಔಷಧ ಸಸ್ಯಗಳಿಂದ ಸಮೃದ್ಧವಾದ ಖಾಂಡವ ವನವನ್ನು ಕಾಳ್ಗಿಚ್ಚಿನಿಂದ ಸುಡುವಂತೆ ತಿಳಿಸುತ್ತಾನೆ. ಈ ಔಷಧೀಯ ಸಸ್ಯಗಳ ಭಕ್ಷಣೆಯಿಂದ ನಿನ್ನ ಉದರ ಬೇನೆ ನಿವಾರಣೆ ಆಗುತ್ತದೆ ಎಂದು ತಿಳಿಸುತ್ತಾನೆ.

ಅಗ್ನಿದೇವ ಖಾಂಡವ ದಹನಕ್ಕಾಗಿ ಮಧ್ಯಮ ಪಾಂಡವ ಅರ್ಜುನನ ಮೊರೆ ಹೋಗುತ್ತಾನೆ. ಖಾಂಡವ ದಹನಕ್ಕೆ ಅಡ್ಡಿ ಆಗದಂತೆ ಆರ್ಜುನ ಹಾಗೂ ಶ್ರೀಕೃಷ್ಣ ಪರಮಾತ್ಮ ಬೆಂಗಾವಲಿಗೆ ನಿಲ್ಲುತ್ತಾರೆ. ಈ ದಹನ ಕಾಲದಲ್ಲಿ ತಕ್ಷಕನೆಂಬ ನಾಗ ಸುಟ್ಟಗಾಯಕ್ಕೆ ತುತ್ತಾಗಿ, ತೇಜೋಹೀನನಾಗುವಂತೆ ಅಗ್ನಿಗೆ ಶಪಿಸುತ್ತಾನೆ.

ಆಗ ವರದ ನಾರಾಯಣನ (ಪ್ರಸನ್ನ ವೆಂಕಟರಮಣ) ಮೊರೆ ಹೋದ ಅಗ್ನಿ ಶಾಪವಿಮುಕ್ತನಾಗಿ ಮತ್ತೆ ತನ್ನ ಹಿಂದಿನ ಕಾಂತಿ ಪಡೆಯುತ್ತಾನೆ. ಶ್ರೀಮನ್ನಾರಾಯಣನಿಗೆ ಕೃತಜ್ಞತೆ ಅರ್ಪಿಸುವ ಸಲುವಾಗಿ ಈ ಸ್ಥಳದಲ್ಲಿ ವರದ ನಾರಾಯಣಸ್ವಾಮಿ ಪ್ರತಿಮೆ ಸ್ಥಾಪಿಸಿ ಪೂಜಿಸಿ, ದೇವಾಲಯ ನಿರ್ಮಿಸಿದನೆಂದು ಹೇಳಲಾಗುತ್ತದೆ.

ಇಲ್ಲಿರುವ ಮೂರೂವರೆ ಅಡಿ ಎತ್ತರದ ಕೃಷ್ಣಶಿಲೆಯ ವಿಗ್ರಹ ಮನಮೋಹಕವಾಗಿದೆ. ಶ್ರೀದೇವಿ, ಭೂದೇವಿ ಸಹಿತನಾಗಿರುವ ಶ್ರೀನಿವಾಸ ಇಲ್ಲಿ ಅಭಯಮುದ್ರೆಯಲ್ಲಿರುವುದು ವಿಶೇಷ. ದಕ್ಷಿಣ ಭಾರತದಲ್ಲಿರುವ ಏಳು ತಿರುಪತಿಗಳ ಪೈಕಿ ಇದೂ ಒಂದೆಂದು ಸ್ಥಳೀಯರು ಹೇಳುತ್ತಾರೆ. ಇಲ್ಲಿಯೂ ಸಹ ತಿರುಪತಿ ತಿಮ್ಮಪ್ಪನಿಗೆ ನಡೆಯುವಂತೆಯೇ ರಥೋತ್ಸವ, ಬ್ರಹ್ಮೋತ್ಸವ, ಕಲ್ಯಾಣೋತ್ಸವ ಇತ್ಯಾದಿ ಎಲ್ಲ ಸೇವೆಗಳೂ ನಡೆಯುತ್ತವೆ. ಭಕ್ತರು ಇಲ್ಲಿಯೂ ವರದಸ್ವಾಮಿಗೆ ಮುಡಿ ಕೊಡುತ್ತಾರೆ.

ದೇವಾಲಯಕ್ಕೆ ಈಗ ಸುಂದರವಾದ ಐದು ಅಂತಸ್ತುಗಳ ರಾಜಗೋಪುರ ನಿರ್ಮಿಸಲಾಗಿದೆ. ಗೋಪುರದಲ್ಲಿ ಶ್ರೀನಿವಾಸಕಲ್ಯಾಣ, ಜಯವಿಜಯರು ಹಾಗೂ ಪರಿವಾರ ದೇವತೆಗಳ ಗಾರೆಯ ಶಿಲ್ಪಗಳಿವೆ. ಈ ದೇವಾಲಯದಲ್ಲಿ ಶ್ರಾವಣ ಮಾಸದ ಎಲ್ಲ ಶನಿವಾರಗಳಂದು, ವೈಕುಂಠ ಏಕಾದಶಿಯ ದಿನ ಹಾಗೂ ದನುರ್ಮಾಸದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.

ಚೋಳರ ದೊರೆ ಜನಮೇಜಯ 11ನೇ ಶತಮಾನದಲ್ಲಿ ಈ ದೇವಾಲಯಕ್ಕೆ ಭೇಟಿಕೊಟ್ಟ ಬಗ್ಗೆ ಇಲ್ಲಿರುವ ಶಾಸನದಲ್ಲಿ ಉಲ್ಲೇಖವಿದೆ. ಚೋಳರ ಕಾಲದಲ್ಲಿ ದೇವಾಲಯದ ಅಭಿವೃದ್ಧಿಕಾರ್ಯಗಳು ನಡೆದಿವೆ ಎಂಬುದು ದೇವಾಲಯದಲ್ಲಿರುವ ಕಲ್ಲಿನ ಕಂಬಗಳಲ್ಲಿ ಕೆತ್ತಲಾಗಿರುವ ಸಿಂಹದ ಕೆತ್ತನೆಗಳಿಂದ ತಿಳಿದುಬರುತ್ತದೆ ಎನ್ನುತ್ತಾರೆ ಇತಿಹಾಸ ತಜ್ಞರು.

ಬೆಂಗಳೂರಿನಿಂದ 45 ಕಿಲೋ ಮೀಟರ್ ದೂರದಲ್ಲಿರುವ ಚಿಕ್ಕತಿರುಪತಿಗೆ ಹೋಗಲು ಕೋಲಾರ, ಮಾಲೂರು ಹಾಗೂ ಬೆಂಗಳೂರಿನಿಂದ ನೇರ ಬಸ್ ಸೌಲಭ್ಯವಿದೆ.

ಹತ್ತಿರದಲ್ಲಿರುವ ಇತರ  ಪುಣ್ಯಕ್ಷೇತ್ರಗಳು : ಮುಳಬಾಗಿಲು, ಕೋಟಿಲಿಂಗೇಶ್ವರ, ಬಂಗಾರ ತಿರುಪತಿ, ಮಾರ್ಕಂಡೇಶ್ವರಸ್ವಾಮಿ ಬೆಟ್ಟ, ಆವನಿ, ಕುರುಡುಮಲೆ ಹಾಗೂ ಅಂತರಗಂಗೆ.

ಮುಖಪುಟ /ನಮ್ಮದೇವಾಲಯಗಳು