ಮುಖಪುಟ /ನಮ್ಮದೇವಾಲಯಗಳು  

ಚಿಕ್ಕತಿರುಪತಿ (ಕಲ್ಲಹಳ್ಳಿ) ವೆಂಕಟರಮಣ ದೇವಾಲಯ

ವಸಿಷ್ಠ ಮಹರ್ಷಿಗಳೇ ಪ್ರತಿಷ್ಠಾಪಿಸಿದ ಪುರಾತನ ವಿಗ್ರಹವಿರುವ ಮಂದಿರ

Chikka tirupati, Kallahalli, Kanakapura, Temples of Karnataka, Vasista Kshetra, Venkateshwara, Kannadaratna.com, T.M.Satish, Journalist, ಕಲ್ಲಹಳ್ಳಿ ಚಿಕ್ಕತಿರುಪತಿ, ಕನಕಪುರ, ವೆಂಕಟರಮಣ ದೇವಾಲಯ.*ಟಿ.ಎಂ. ಸತೀಶ್

ಕನಕಪುರದಿಂದ ಕೇವಲ 3 ಕಿ.ಮೀ. ದೂರದಲ್ಲಿರುವ ಕಲ್ಲಹಳ್ಳಿಗೆ ವಸಿಷ್ಠ ಮಹರ್ಷಿ ಕ್ಷೇತ್ರ ಎಂಬ ಹೆಸರೂ ಇದೆ. ಪರಮ ಪವಿತ್ರವಾದ ಈ ಪುಣ್ಯಭೂಮಿಯಲ್ಲಿ ಮಹಾ ಋಷಿಗಳಲ್ಲೇ ಶ್ರೇಷ್ಠರಾದ ವಸಿಷ್ಠರು 24 ವರ್ಷಗಳ ಕಾಲ ಶ್ರೀಅಷ್ಠಾಕ್ಷರ ಮಹಾಯಾಗ ಮಾಡಿ, ತಪವನ್ನಾಚರಿಸಿ ಅಷ್ಠಾಕ್ಷರ ಮಹಾಮಂತ್ರದ ಸಿದ್ದಿ ಪಡೆದರಂತೆ. ತಮಗೆ ಸಿದ್ಧಿ ದೊರೆತ ಸ್ಥಳದಲ್ಲಿ ಶ್ರೀ. ವೆಂಕಟರಮಣಸ್ವಾಮಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಿದ್ದರು ಎಂದು ಸ್ಥಳ ಪುರಾಣ ಹೇಳುತ್ತದೆ.

ಕನಕಪುರಕ್ಕೆ ಹೊಂದಿಕೊಂಡಂತೆಯೇ ಇರುವ ಕಲ್ಲಹಳ್ಳಿ ಹಿಂದೆ ಚನ್ನಪಟ್ಟಣದ ನಾಯಕರ ಆಳ್ವಿಕೆಗೆ ಒಳಪಟ್ಟಿತ್ತು ಎಂದು ಇತಿಹಾಸ ಸಾರುತ್ತದೆ. ಒಮ್ಮೆ ಇಲ್ಲಿನ ಅಳರಸರ ಸ್ವಪ್ನದಲ್ಲಿ ಬಂದ ಶ್ರೀಮನ್ನಾರಾಯಣಸ್ವಾಮಿ, ಸುರಗುರು ವಸಿಷ್ಠ ಮಹರ್ಷಿಗಳಿಂದ ಪ್ರತಿಷ್ಠಾಪಿಸಲ್ಪಟ್ಟು, ಪೂಜಿತನಾದ ತಾನು ವಿಗ್ರಹ ರೂಪದಲ್ಲಿ ಪ್ರಸ್ತುತ ಕನಕಪುರ ಬಳಿಯ ಬನ್ನಿಮಕ್ಕೂಡಲು ಎಂಬ ಗ್ರಾಮದ ಸರೋವರದಲ್ಲಿ ಜಲಾಧಿವಾಸದಲ್ಲಿರುವುದಾಗಿಯೂ, ತನ್ನನ್ನು ಹೊರತೆಗೆದು ಶುದ್ಧಗೊಳಿಸಿ ಎತ್ತಿನ ಗಾಡಿಯಲ್ಲಿಟ್ಟು ಸಾಗಿಸುವಂತೆ ಹಾಗೂ ಎಲ್ಲಿ ಗಾಡಿಯ ಚಕ್ರದ ಅಚ್ಚು  ಮುರಿಯುತ್ತದೋ ಆ ಪವಿತ್ರ ಜಾಗದಲ್ಲಿ ತನ್ನ ವಿಗ್ರಹವನ್ನು ಪುನರ್ ಪ್ರತಿಷ್ಠಾಪಿಸಿ, ದೇವಾಲಯವೊಂದನ್ನು ಕಟ್ಟಿಸಿ, ನಿತ್ಯ ಪೂಜೆಗೆ ವ್ಯವಸ್ಥೆ ಮಾಡುವಂತೆ ಆಣತಿ ಇತ್ತನಂತೆ.

ನಿದ್ದೆಯಿಂದ ಎಚ್ಚೆತ್ತ ರಾಜ ತನ್ನ ಸ್ವಪ್ನ ವೃತ್ತಾಂತವನ್ನು ರಾಜಗುರುಗಳಿಗೆ ನಿವೇದಿಸಿ, ಅವರೊಂದಿಗೆ ಮಾರನೇ ದಿನವೇ ಬನ್ನಿಮಕ್ಕೂಡಲು ಗ್ರಾಮದ ಸಮೀಪಕ್ಕೆ ಆಗಮಿಸಿ,  ಸ್ವಪ್ನದಲ್ಲಿ ಸೂಚಿಸಿದ ರೀತಿ   ತುಳಸಿ ಗಿಡಗಳನ್ನು ಅನುಸರಿಸಿ ಹೊರಟಾಗ ನಿರ್ಮಲವಾದ ತಿಳಿ ನೀರಿನಿಂದ ಕೂಡಿದ ಸುಂದರ ಸರೋವರ ಕಾಣಿಸಿತಂತೆ. ಭಗವಂತ ಜಲಾಧಿವಾಸದಲ್ಲಿರುವ ಆ ಸರೋವರಕ್ಕೆ ಪೂಜೆ ಸಲ್ಲಿಸಿ ಹುಡುಕಿಸಿದಾಗ ಭವ್ಯವಾದ ವೆಂಕಟರಮಣಸ್ವಾಮಿ ವಿಗ್ರಹವು ಗೋಚರಿಸಿತಂತೆ. ರಾಜನೂ, ರಾಜ ಪರಿವಾರದವರೂ, ಪುರಜನರೂ ಈ ಸುಂದರ ಮೂರ್ತಿಯನ್ನು ನೋಡಿ ಭಾವಪರವಶರಾಗಿ ಹರಿನಾಮ ಸ್ಮರಣೆ ಮಾಡುತ್ತಾ,  ಹರಿ ಕೀರ್ತನೆ ಹಾಡುತ್ತಾ,  ಭಜನೆ ಮಾಡುತ್ತಾ  ಆ ವಿಗ್ರಹವನ್ನು ಎತ್ತಿನ ಗಾಡಿಯಲ್ಲಿಟ್ಟು  ಸಾಗಿಸಿದರಂತೆ. ಸ್ವಪ್ನದಲ್ಲಿ ಹೇಳಿದ ರೀತಿಯಲ್ಲೇ ಎತ್ತಿನ ಗಾಡಿ ಕಲ್ಲಹಳ್ಳಿಗೆ ಬಂದಾಗ ಅದರ ಅಚ್ಚು ಮುರಿದು ನಿಂತಿತಂತೆ. ಅಲ್ಲಿಯೇ ಅರಸ ವೆಂಕಟರಮಣಸ್ವಾಮಿಯನ್ನು ಇಳಿಸಿ ಸಕಲ ಶಾಸ್ತ್ರಗಳ ರೀತ್ಯ ಪ್ರತಿಷ್ಠಾಪನೆ ಮಾಡಿ ಗುಡಿ ಕಟ್ಟಿಸಿದನಂತೆ.

Chikka tirupati, Kallahalli, Kanakapura, Temples of Karnataka, Vasista Kshetra, Venkateshwara, Kannadaratna.com, T.M.Satish, Journalist, ಕಲ್ಲಹಳ್ಳಿ ಚಿಕ್ಕತಿರುಪತಿ, ಕನಕಪುರ, ವೆಂಕಟರಮಣ ದೇವಾಲಯ.ಇಲ್ಲಿದ್ದ ಪುರಾತನ  ವೆಂಕಟೇಶ್ವರನ ದೇವಾಲಯ ಶಿಥಿಲವಾಗಿದ್ದ ಕಾರಣ, ಈಗ ಜೀರ್ಣೋದ್ಧಾರ ಮಾಡಲಾಗಿದೆ. ದೇವಾಲಯದ ಎದುರು ಎತ್ತರವಾದ ಗರುಡಗಂಬವಿದೆ. ದೇವಾಲಯಕ್ಕೆ ಐದು ಅಂತಸ್ತುಗಳ ರಾಜಗೋಪುರ ಮತ್ತು ದ್ವಾರಬಂಧ ನಿರ್ಮಿಸಲಾಗಿದೆ. ದ್ವಾರಬಂಧದ ಎರಡೂ ಕಡೆಗಳಲ್ಲಿ ಜಯ ವಿಜಯರ ಮೂರ್ತಿಗಳಿವೆ. ಗೋಪುರದ ಮೇಲೆ ಪಂಚಕಳಶವಿದೆ. ಗೋಪುರದಲ್ಲಿ ವಿಷ್ಣುವಿನ ಅವತಾರ ಹಾಗೂ ವಿವಿಧ ದೇವತೆಗಳ ಗಾರೆಯ ಶಿಲ್ಪಗಳಿವೆ. ಒಳ ಪ್ರವೇಶಿಸಿದರೆ ವಿಶಾಲವಾದ ಪ್ರದಕ್ಷಿಣ ಪಥ ಹಾಗೂ ದೇವಾಲಯದ ಮುಖಮಂಟಪ ಕಾಣುತ್ತದೆ. ಇಲ್ಲಿಯೂ ಛಾವಣಿಯ ಮೇಲೆ ಶಂಖ, ಚಕ್ರ, ತ್ರಿಪುಂಡರದ ಗಾರೆಯ ಶಿಲ್ಪಗಳಿವೆ.

ಪುರಾತನ ದೇವಾಲಯದ ಪ್ರಧಾನ ಗರ್ಭಗುಡಿಯಲ್ಲಿ ವಸಿಷ್ಠ ಮಹರ್ಷಿಗಳು ಪೂಜಿಸಿದ ಮೂಲ ವಿಗ್ರಹವೆ ಇದೆ ಎಂದು ಅರ್ಚಕರು ಹೇಳುತ್ತಾರೆ. ಇಲ್ಲಿರುವ ವೆಂಕಟೇಶ್ವರನ ದರ್ಶನ ಮಾಡಿ ಪೂಜೆ ಸಲ್ಲಿಸಿದರೆ, ಏಳುಮಲೆಯೊಡೆಯ ತಿರುಪತಿ ತಿಮ್ಮಪ್ಪನ ಮತ್ತು ಬಿಳಿಗಿರಿ ರಂಗನಾಥನ ದರ್ಶನ ಮಾಡಿದ ಪುಣ್ಯ ಬರುತ್ತದೆ ಎಂಬ ನಂಬಿಕೆ ಇದೆ.ಹೀಗಾಗಿಯೇ ವೆಂಕಟರಮಣ ನೆಲೆಸಿಹ ಕಲ್ಲಹಳ್ಳಿಗೆ ಚಿಕ್ಕತಿರುಪತಿ ಎಂಬ ಹೆಸರೂ ಇದೆ.

ಪ್ರಕೃತಿ ರಮಣೀಯ ತಾಣದಲ್ಲಿರುವ ಈ ದೇವಾಲಯದ ಸುತ್ತಲ ಗಿರಿಶ್ರೇಣಿಯ ನೋಟ ಅತ್ಯಂತ Chikka tirupati, Kallahalli, Kanakapura, Temples of Karnataka, Vasista Kshetra, Venkateshwara, Kannadaratna.com, T.M.Satish, Journalist, ಕಲ್ಲಹಳ್ಳಿ ಚಿಕ್ಕತಿರುಪತಿ, ಕನಕಪುರ, ವೆಂಕಟರಮಣ ದೇವಾಲಯ.ಮನೋಹರವಾಗಿದೆ. ದೂರದ ಬೆಟ್ಟ ನುಣ್ಣಗೆ ಎಂಬ ಗಾದೆಯಂತೆ ದೇವಾಲಯದ  ಪೂರ್ವ ದಿಕ್ಕಿನಲ್ಲಿ ಬಿಳೆಕಲ್ ಬೆಟ್ಟ, ಪಶ್ವಿಮ ದಿಕ್ಕಿನಲ್ಲಿ ಬಾಣಂತಿ ಮಾರಿಬೆಟ್ಟ ಹಾಗೂ ಉತ್ತರ ದಿಕ್ಕಿನಲ್ಲಿರುವ ರಾಮನಗರದ ರಾಮದೇವರ ಬೆಟ್ಟ ಹಾಗೂ ದಕ್ಷಿಣ ದಿಕ್ಕಿನಲ್ಲಿರುವ ಕಬ್ಬಾಲು ಬೆಟ್ಟಗಳು ನೀಲಾಗಸವನ್ನೆ ಹೊದ್ದಂತೆ ಗೋಚರಿಸುತ್ತಾ ಮನಸೆಳೆಯುತ್ತವೆ.

ಪ್ರತಿವರ್ಷ ಮಾಘಮಾಸದ ಶುದ್ದ ಪೌರ್ಣಿಮೆಯಂದು ದೇವರಿಗೆ ಬ್ರಹ್ಮ ರಥೋತ್ಸವ ಜರುಗುತ್ತದೆ. ದೇವಾಲಯದಲ್ಲಿ ಹನುಮನ ಗುಡಿಯೂ ಇದೆ.

ಕಲ್ಲಹಳ್ಳಿಯಲ್ಲಿರುವ ಈ ಪುರಾತನ ವೆಂಕಟರಮಣಸ್ವಾಮಿ ದೇವಾಲಯ ಬೆಂಗಳೂರು ಮಹಾನಗರದಿಂದ ಕೇವಲ 50 ಕಿಮೀ ದೂರದಲ್ಲಿದೆ.

ಮುಖಪುಟ /ನಮ್ಮದೇವಾಲಯಗಳು