ಮುಖಪುಟ /ನಮ್ಮ ದೇವಾಲಯಗಳು  

ಗದಗಿನ ವೀರನಾರಾಯಣ ದೇವಾಲಯ

ಕುಮಾರವ್ಯಾಸ ಕರ್ಣಾಟ ಭಾರತ ಕಥಾ ಮಂಜರಿ ಬರೆದ ಪವಿತ್ರ ತಾಣ

ಟಿ.ಎಂ.ಸತೀಶ್gadag veeranarayana temple, ಗದಗಿನ ವೀರನಾರಾಯಣ ದೇವಾಲಯ,

ಧಾರವಾಡದಿಂದ ಪೂರ್ವಕ್ಕೆ 70 ಕಿಲೋ ಮೀಟರ್ ದೂರದಲ್ಲಿರುವ ಗದಗ ಜಿಲ್ಲಾ ಕೇಂದ್ರ. ಪ್ರಾಚೀನ ಕಾಲದಲ್ಲಿ ಕ್ರತುಪುರವೆಂದು ನಂತರ, ಬೆಳವಲ ನಾಡು ಎಂದು ಕರೆಸಿಕೊಂಡಿದ್ದ ಈ ಪ್ರಾಂತ್ಯ ಕಾಲಾ ನಂತರದಲ್ಲಿ ಗದುಗಗದಗುಗದಗ ಎಂಬ ಹೆಸರು ಪಡೆಯಿತಂತೆ.

ಈ ಊರಿಗೆ ಕ್ರತುಪುರ ಎಂದು ಹೆಸರು ಬರಲು ಕಾರಣವೇನು ಎಂಬುದಕ್ಕೆ ಒಂದು ಕಥೆಯಿದೆ. ಈ ಭಾಗದಲ್ಲಿ ಬಹಳ ಹಿಂದೆ  ಕಪೋತರೋಮನೆಂಬ ರಾಕ್ಷಸ ವಾಸಿಸುತ್ತಿದ್ದನಂತೆ. ಈ ರಾಕ್ಷಸ ತನ್ನ ಬಲ ಹಾಗೂ ಮಾಯಾ ಶಕ್ತಿಯಿಂದ ಲೋಕಕಂಟಕನಾಗಿದ್ದನಂತೆ. ಈಗಿನ ಗದಗಕ್ಕೆ ಸಮೀಪದಲ್ಲಿರುವ ಕಪ್ಪತ ಎಂಬಲ್ಲಿ ತಪವನ್ನಾಚರಿಸಿದ್ದ ಬ್ರಹ್ಮನ ಮಾನಸ ಪುತ್ರ ಕ್ರತುವಿಗೂ ಈ ರಾಕ್ಷಸ ಉಪಟಳ ನೀಡಿ, ತಪಸ್ಸಿಗೆ ಭಂಗ ತರುತ್ತಿದ್ದನಂತೆ. ಆಗ ಕ್ರತು, ಕಪೋತರೋಮನನ್ನು ಸಂಹಾರ ಮಾಡುವಂತೆ ಮಹಾ ವಿಷ್ಣುವನ್ನು ಬೇಡಿದನಂತೆ, ಆಗ ಶಿಷ್ಠ ರಕ್ಷಕ ಹಾಗೂ ದುಷ್ಟ ಶಿಕ್ಷಕನಾದ, ವಿಷ್ಣು ವೀರ ನಾರಾಯಣನ ರೂಪದಲ್ಲಿ ಕಾಣಿಸಿಕೊಂಡು ರಾಕ್ಷಸನನ್ನು ಸಂಹರಿಸಿದನಂತೆ. ಹೀಗಾಗಿ ಕ್ರತುವಿನ ಕೃಪೆಯಿಂದ ನಾರಾಯಣ ಧರೆಗಿಳಿದ ಈ ಸ್ಥಳ ಕ್ರತಪುರವಾಗಿತ್ತು ಎನ್ನುತ್ತದೆ ಸ್ಥಳ ಪುರಾಣ.

ಒಂದು ಕಾಲದಲ್ಲಿ ವಿದ್ಯಾಕೇಂದ್ರವಾಗಿ ಮೆರೆದ ಈ ಪುಣ್ಯಭೂಮಿ ಜನಮೇಜಯ ಸರ್ಪಯಾಗ ಮಾಡಿದ ಕ್ಷೇತ್ರ ಎಂದೂ ಹೇಳಲಾಗುತ್ತದೆ.  ಇಲ್ಲಿರುವ ಸರ್ಪೇಶ್ವರ ದೇವಾಲಯ ಈ ವಾದಕ್ಕೆ ಸಾಕ್ಷಿಯಾಗಿದೆ. ವಿಜಯನಗರ ಅರಸರ ಕಾಲದಿಂದ ಗದುಗು ಎಂದೇ ಖ್ಯಾತವಾಗಿತ್ತು ಎಂದೂ ತಿಳಿದುಬರುತ್ತದೆ.

ಕಪೋತರೋಮನೆಂಬ ರಕ್ಕಸನ ಸಂಹಾರಕ್ಕಾಗಿ ಮಹಾವಿಷ್ಣು ವೀರ ನಾರಾಯಣನ ರೂಪ ತಳೆದ ಈ ಊರಿನಲ್ಲಿ ಹೊಯ್ಸಳರ ದೊರೆ ವಿಷ್ಣುವರ್ಧನ ವೀರ ನಾರಾಯಣನಿಗಾಗಿ ದೇವಾಲಯವನ್ನೇ ಕಟ್ಟಿಸಿದ್ದಾನೆ.

ರಾಮಾನುಜಾಚಾರ್ಯರಿಂದ ವೈಷ್ಣವನಾದ ಬಿಟ್ಟಿದೇವ ತನ್ನ ಗುರುಗಳ ಆಣತಿಯಂತೆ ಕರ್ನಾಟಕದಲ್ಲಿ ಕಟ್ಟಿಸಿದ ಐದು ನಾರಾಯಣ ದೇವಾಲಯಗಳಲ್ಲಿ ಇದೂ ಒಂದಾಗಿದೆ. ಉಳಿದ ನಾಲ್ಕು ನಾರಾಯಣ ದೇವಾಲಯಗಳು, ಗುಂಡ್ಲುಪೇಟೆಯಲ್ಲಿ (ವಿಜಯನಾರಾಯಣ), ತಲಕಾಡು (ಕೀರ್ತಿ ನಾರಾಯಣ), ಕೆರೆ ತೊಣ್ಣೂರು (ನಂಬಿ ನಾರಾಯಣ) ಹಾಗೂ ಮೇಲುಕೋಟೆ (ಚೆಲುವ ನಾರಾಯಣ)ಯಲ್ಲಿವೆ. 

ವೀರ ನಾರಾಯಣ ದೇವಾಲಯ ಹೊಯ್ಸಳ, ಚಾಲುಕ್ಯ ಮತ್ತು ವಿಜಯನಗರದರಸರ ಕಾಲದಲ್ಲಿ ಜೀರ್ಣೋದ್ಧಾರಗೊಂಡಿದ್ದು, ಈ ಮೂರೂ ವಾಸ್ತುಶೈಲಿಯನ್ನು ಒಳಗೊಂಡಿದೆ. ಪ್ರವೇಶದ್ವಾರ ವಿಜಯನಗರ ಶೈಲಿಯಲ್ಲಿದ್ದರೆ, ಗರ್ಭಗೃಹ ಹಾಗೂ ಮೇಲ್ಗೋಪುರ ಚಾಲುಕ್ಯರ ಶೈಲಿಯಲ್ಲಿದೆ. ದೇವಾಲಯದ ಮುಂದಿರುವ ಗರುಡಗಂಬ ಹಾಗೂ ರಂಗಮಂಟಪಗಳು ಹೊಯ್ಸಳ ಶೈಲಿಯಲ್ಲಿವೆ.

ಪೂರ್ವಾಭಿಮುಖವಾಗಿರುವ ದೇವಾಲಯ ಪ್ರವೇಶಿಸಿದರೆ ಒಳಗಿರುವ ಸುಂದರ ದೇವಾಲಯಗಳ ಆಧಾರ ಸ್ತಂಭಗಳ ಸೂಕ್ಷ್ಮ ಕೆತ್ತನೆ ಮನಸೆಳೆಯುತ್ತದೆ. ಗದುಗಿನ ನಾರಣಪ್ಪ (ಕುಮಾರವ್ಯಾಸ) ಸ್ನಾನ ಮಾಡಿ ಒದ್ದೆ ಬಟ್ಟೆಯಲ್ಲಿ ಬಂದು ಈ ದೇವಾಲಯದ ಕಂಬಕ್ಕೆ ಒರಗಿ ಕುಳಿತು, ತಾನುಟ್ಟ ಒದ್ದೆ ಬಟ್ಟೆ ಒಣಗುವ ತನಕ ಬರೆಯುತ್ತಿದ್ದನಂತೆ. ಹೀಗೆ ಬರೆದದ್ದೇ ಕರ್ಣಾಟ ಭಾರತ ಕಥಾ ಮಂಜರಿ ಅಥವಾ ಗದುಗಿನ ಭಾರತ ಎಂದೂ ಹೇಳುತ್ತಾರೆ. ದೇವಾಲಯದ ಕೆಲವು ಕಲ್ಲುಗಳಲ್ಲಿ ಓಲೆಗರಿಯ ಮೇಲೆ ಬರೆಯಲು ಬಳಸುತ್ತಿದ್ದ ಲೋಹದ ಲೇಖನಿಯನ್ನು ಹರಿತ ಮಾಡಲು ಮಸೆದ ಕುರುಹುಗಳೂ ಇವೆ.

gadag veeranarayana temple, ಗದಗಿನ ವೀರನಾರಾಯಣ ದೇವಾಲಯ, ಚಿತ್ರಕೃಪೆ ಗದಗ ಜಿಲ್ಲೆಯ ಅಧಿಕೃತ ವೆಬ್ ಸೈಟ್ ಪ್ರಧಾನ ಗರ್ಭಗೃಹದಲ್ಲಿ ತುಸು ನೀಲಿ ಮಿಶ್ರಿತ ಕಪ್ಪುಶಿಲೆಯಲ್ಲಿ ಸುಂದರವಾಗಿ ಕಡೆಯಲಾಗಿರುವ ವೀರನಾರಾಯಣನ ನಿಂತಿರುವ ಭಂಗಿಯ ಮೂರ್ತಿಯಿದೆ.  ಈ ವಿಗ್ರಹದಲ್ಲಿ ಸೂಕ್ಷ್ಮ ಶಿಲ್ಪಕಲೆಯಿಂದ ಕೂಡಿದ ಪೀಠ ಪ್ರಭಾವಳಿಯಿದ್ದು ಇದರಲ್ಲಿ ವಿಷ್ಣುವಿನ 10 ಅವತಾರಗಳ ಜೊತೆಗೆ ವೀರ ಅವತಾರವನ್ನು ಕೆತ್ತಲಾಗಿದೆ. ಮೇಲ್ಭಾಗದಲ್ಲಿ ಸಿಂಹಮುಖವಿದೆ, ಎರಡಡಿ ಪೀಠದ ಮೇಲೆ ನಿಂತಿರುವ ಶಂಖ, ಚಕ್ರ, ಗದಾ, ಪದ್ಮಧಾರಿಯಾಗಿ ಅಭಯ ಮುದ್ರೆಯಲ್ಲಿರುವ ನಾರಾಯಣನ ದರ್ಶನ ಮಾಡಿದರೆ ಬದರಿ ಯಾತ್ರೆಯ ಫಲ ಬರುತ್ತದೆ ಎಂದೂ ಹೇಳುತ್ತಾರೆ. ವಕ್ಷಸ್ಥಳದಲ್ಲಿ ಲಕ್ಷ್ಮೀ ಇರುವ ಕಾರಣ ಇದನ್ನು  ಎರಡನೇ ತಿರುಪತಿ ಎಂದೂ ಹೇಳಲಾಗುತ್ತದೆ. ವಿಗ್ರಹದ ಕೆಳ ಎಡ ಭಾಗದಲ್ಲಿ ಲಕ್ಷ್ಮೀ ಹಾಗೂ ಬಲ ಭಾಗದಲ್ಲಿ ಗರುಡವಾಹನನ ಕೆತ್ತನೆ ಇದೆ.

ದೇವಾಲಯ ಪ್ರಾಕಾರದಲ್ಲಿ  ಲಕ್ಷ್ಮೀನರಸಿಂಹ, ಸರ್ಪೇಶ್ವರ ಇತ್ಯಾದಿ ದೇವಾಲಯಗಳಿವೆ. ಅಲ್ಲದೆ ಗದಗ ಪಟ್ಟಣದಲ್ಲಿ ಅನೇಕ ದೇವಸ್ಥಾನಗಳಿದ್ದು, ಮೂರು ಲಿಂಗಗಳಿರುವ ತ್ರಿಕೂಟೇಶ್ವರ ದೇವಸ್ಥಾನವೂ ಪ್ರಮುಖವಾದುದಾಗಿದೆ. ಇದರ ಮಹಾದ್ವಾರ ಭವ್ಯವಾಗಿದೆ. ಗರ್ಭಗುಡಿಯ ಸುತ್ತ ಸುಂದರ ಶಿಲ್ಪಗಳಿವೆ. ಊರ ಮಧ್ಯದಲ್ಲಿರುವ ಸೋಮೇಶ್ವರ ದೇವಸ್ಥಾನ ಮನಮೋಹಕವಾಗಿದೆ.

ಮುಖಪುಟ /ನಮ್ಮ ದೇವಾಲಯಗಳು