ಮುಖಪುಟ /ನಮ್ಮದೇವಾಲಯಗಳು  

ಭೂಕೈಲಾಸವೀ ಗೋಕರ್ಣ ಮಹಾಕ್ಷೇತ್ರ

*ಟಿ.ಎಂ.ಸತೀಶ್

Gokarna Godಕಾಶಿ, ರಾಮೇಶ್ವರ ಹಾಗೂ ಗೋಕರ್ಣ ತ್ರಿಸ್ಥಲ ಶೈವಕ್ಷೇತ್ರಗಳೆಂದೇ ಖ್ಯಾತವಾಗಿವೆ.  ತ್ರಿಸ್ಥಳಗಳಲ್ಲಿ ಒಂದು ಕರ್ನಾಟಕದಲ್ಲಿರುವ ನಿಜಕ್ಕೂ ಹೆಮ್ಮೆಯ ಸಂಗತಿ.  ಉತ್ತರ ಕನ್ನಡ ಜಿಲ್ಲೆಯ ಕುಮಟ ತಾಲೂಕಿನಲ್ಲಿರುವ ಗೋಕರ್ಣ ಸಾಕ್ಷಾತ್ ಪರಶಿವನ ಆತ್ಮಲಿಂಗವನ್ನೇ ಹೊಂದಿದೆ ಎನ್ನುತ್ತದೆ ಪುರಾಣ. ಆತ್ಮ ಲಿಂಗ ಇರುವ ಗೋಕರ್ಣ ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿಯೂ ಒಂದಾಗಿದೆ.

ತ್ರೇತಾಯುಗದಲ್ಲಿ ಲಂಕಾಧಿಪತಿಯಾದ ದಶಕಂಠ ರಾವಣ, ತನ್ನ ತಾಯಿಯ ಆಸೆ ಈಡೇರಿಸಲು ಈಶ್ವರನನ್ನು ಕುರಿತು ತಪಸ್ಸು ಮಾಡಿ ಆತ್ಮಲಿಂಗವನ್ನೇ ವರವಾಗಿ ಪಡೆದು  ಲಂಕೆಗೆ ಒಯ್ಯುತ್ತಿರುತ್ತಾನೆ. ಆತ್ಮಲಿಂಗ ಲಂಕೆಗೆ ಹೋದರೆ ರಾಕ್ಷಸನಾದ ರಾವಣ ಅಜೇಯನಾಗಿ ಲೋಕ ವಿನಾಶಕನಾಗುತ್ತಾನೆ, ಇಡೀ ವಿಶ್ವವೇ ಸರ್ವನಾಶವಾಗುತ್ತದೆ ಎಂಬುದನ್ನು ಮನಗಂಡ ನಾರದ ಮಹರ್ಷಿಗಳು ಗಣಪನ ಬಳಿ ಹೋಗಿ, ಪ್ರಥಮ ವಂದಿತನಾದ ನಿನ್ನನ್ನು ಪೂಜಿಸದೆ ರಾವಣ ಆತ್ಮಲಿಂಗ ಕೊಂಡೊಯ್ಯುತ್ತಿದ್ದಾನೆ. ಅವನಿಗೆ ತಕ್ಕ ಶಾಸ್ತಿ ಮಾಡು ಎಂದು ತಿಳಿಸುತ್ತಾರೆ.

Shivana Atmalinga, ಶಿವನ ಆತ್ಮಲಿಂಗವಿರುವ ಕ್ಷೇತ್ರ ಗೋಕರ್ಣ, gokarna, Om beachರಾವಣ ಆತ್ಮಲಿಂಗದೊಂದಿಗೆ ಗೋಕರ್ಣದ ಬಳಿ ಬಂದಾಗ ಸಂಧ್ಯಾಕಾಲವಾಗುತ್ತದೆ. ಜನ್ಮತಃ ಬ್ರಾಹ್ಮಣನಾದ ರಾವಣ ಅರ್ಘ್ಯಪ್ರದಾನ ಮಾಡಲು ಚಡಪಡಿಸುತ್ತಾನೆ. ಕಾರಣ ಲಿಂಗ ಧರೆ ಸ್ಮರ್ಶಿಸಿದರೆ ಅದನ್ನು ಲಂಕೆಗೆ ಒಯ್ಯಲು ಸಾಧ್ಯವಿಲ್ಲ ಎಂದು ಶಿವ ಆತ್ಮಲಿಂಗ ಕೊಡುವಾಗ ಎಚ್ಚರಿಸಿರುತ್ತಾನೆ.  ಅರ್ಘ್ಯ ನೀಡಲು ಲಿಂಗವನ್ನು ಯಾರಿಗಾದರೂ ಕೊಟ್ಟು ಹೋಗಲು ತೀರ್ಮಾನಿಸುತ್ತಾನೆ. ಅತ್ತಿತ್ತ ನೋಡುವಾಗ ಅಲ್ಲಿ ಪ್ರತ್ಯಕ್ಷನಾದ ಬ್ರಹ್ಮಚಾರಿ (ವಟು) ರೂಪದ ಗಣಪತಿಯ ಕೈಯಲ್ಲಿ ಆತ್ಮಲಿಂಗ ಕೊಟ್ಟು ಸಂಧ್ಯಾಂದನೆಗೆ ಸಮುದ್ರಕ್ಕೆ ಇಳಿಯಲು ಅಣಿಯಾಗುತ್ತಾನೆ.ತಾನು ಮೂರು ಬಾರಿ ಕೂಗಿದರೂ ಬಾರದಿದ್ದರೆ ಆತ್ಮಲಿಂಗವನ್ನು ಕೆಳಗಿಡುವುದಾಗಿ ವಟುರೂಪಿ ಗಣಪ ಹೇಳುತ್ತಾನೆ. ಇದಕ್ಕೆ ರಾವಣ ಒಪ್ಪಿ, ಸಮುದ್ರದ ಕಡೆ ಹೋಗುತ್ತಾನೆ. ಅರ್ಘ್ಯ ಕೊಡುತ್ತಿರುವ ಸಮಯ ನೋಡಿ ಗಣಪತಿ ರಾವಣ, ರಾವಣ, ರಾವಣ ಎಂದು ಮೂರು ಬಾರಿ ಕೂಗುತ್ತಾನೆ. ರಾವಣ ಬರುವುದರೊಳಗೆ ಆತ್ಮಲಿಂಗವನ್ನು ಭೂಸ್ಪರ್ಶ ಮಾಡಿಸುತ್ತಾನೆ.

ಗೋಕರ್ಣದಲ್ಲಿರುವ ಶಿವನ ಆತ್ಮಲಿಂಗತಾಯಿಯ ಆಸೆಯನ್ನು ಪೂರೈಸಲು ತನ್ನ ಶಿರವನ್ನೇ ಕತ್ತರಿಸಿಕೊಂಡು ಶಿವನ ಮೆಚ್ಚಿಸಿ ತಂದ ಆತ್ಮಲಿಂಗ ಲಂಕೆ ಸೇರುವ ಮೊದಲೇ ಭಾರತದಲ್ಲಿ ಭೂಸ್ಪರ್ಶವಾಗಿದ್ದನ್ನು ನೋಡಿ ರಾವಣ ಕೋಪಗೊಳ್ಳುತ್ತಾನೆ. ಸಿಟ್ಟಿನಿಂದ ಗಣಪನ ತಲೆಗೆ ಕಟ್ಟುತ್ತಾನೆ. ಹೀಗಾಗಿಯೇ ಇಂದಿಗೂ ಗೋಕರ್ಣದಲ್ಲಿರುವ ಗಣಪನ ನೆತ್ತಿಯ ಮೇಲೆ ಒಂದು ಹಳ್ಳ ಇರುವುದು ಕಾಣುತ್ತದೆ, ಒದೆ ತಿಂದ ಗಣಪ ಅಲ್ಲಿಂದ ಹೊರಟು ಹೋಗುತ್ತಾನೆ. ಆದರೆ, ರಾವಣ ಭೂಸ್ಪರ್ಶವಾದ ಆತ್ಮಲಿಂಗವನ್ನು ಕೀಳಲು ಶತಪ್ರಯತ್ನ ಮಾಡುತ್ತಾನೆ. ಭೂಸ್ಪರ್ಶವಾಗಿ ಪ್ರಕೃತಿಯ ಒಡಲು ಸೇರಿದ ಲಿಂಗವನ್ನು ಭೂಗರ್ಭದಿಂದ ಹೊರತೆಗೆಯಲು ಆತ್ಮಲಿಂಗವನ್ನು ತಿರುಗಿಸಿ ಎಳಯುತ್ತಾನೆ. ಹೀಗೆ ಎಳೆದಾಗ ಆತ್ಮಲಿಂಗ ಗೋವಿನ ಕಿವಿಯ ಆಕಾರಕ್ಕೆ ತಿರಗುತ್ತದೆ.  ಹೀಗಾಗೇ ಈ ಕ್ಷೇತ್ರಕ್ಕೆ ಗೋಕರ್ಣ ಎಂದು ಹೆಸರಾಯಿತು ಎನ್ನುತ್ತದೆ ಪುರಾಣ. ಈಗಲೂ ಗೋಕರ್ಣದಲ್ಲಿ ಸಮುದ್ರಕ್ಕೆ ಅತಿ ಸಮೀಪದಲ್ಲೇ ಇರುವ ದೇವಾಲಯದಲ್ಲಿ ಶಿವಲಿಂಗ ಭೂಮಿಯ ಒಳಗೆ ಸೇರಿದೆ. ಭಕ್ತರು ಈ ಆತ್ಮಲಿಂಗವನ್ನು ಸ್ಪರ್ಶಿಸಿ ಧನ್ಯರಾಗುತ್ತಾರೆ. ನವಧಾನ್ಯ, ಕ್ಷೀರದಿಂದ ಹಾಗೂ ಜಲದಿಂದ ಅಭಿಷೇಕವನ್ನೂ ಮಾಡುತ್ತಾರೆ.

Gokarna Templeಮಹಾ ಬಲಶಾಲಿಯಾದ ರಾವಣನೇ ಬಲ ಬಿಟ್ಟು ಎಳೆದರೂ ಬಾರದೆ ಗಟ್ಟಿಯಾಗಿ ಭೂಮಿಯನ್ನು ಹಿಡಿದ ಶಿವ ಈ ಪವಿತ್ರ ಪುಣ್ಯಕ್ಷೇತ್ರದಲ್ಲಿ  ಮಹಾಬಲೇಶ್ವರ ಎಂಬ ಹೆಸರಿನಿಂದ ಲಿಂಗರೂಪಿಯಾಗಿ ನೆಲೆಸಿದ್ದಾನೆ. ಇದಲ್ಲದೆ ಇಲ್ಲಿ ಇತರ ೩೦ ಲಿಂಗಗಳೂ ೩೦ ತೀರ್ಥಗಳೂ ಇವೆ. ಮಹಾಬಲೇಶ್ವರ ದೇವರ ಗರ್ಭಗುಡಿಯ ವಿಶಾಲವಾಗಿದ್ದು,  ಸಭಾಮಂಟಪ, ಚಂದ್ರಶಾಲೆ, ಗರ್ಭಗುಡಿಯನ್ನು ಒಳಗೊಂಡಿದೆ.  ಸಭಾಮಂಟಪದಲ್ಲಿ ಪಾರ್ವತಿ, ಗಣಪತಿ  ಮಧ್ಯದಲ್ಲಿ ನಂದಿ ವಿಗ್ರಹವೂ ಇದೆ. ಪ್ರಸ್ತುತ ಈ ದೇವಾಲಯ ಶ್ರೀರಾಮಚಂದ್ರಾಪುರ ಮಠದ ಆಡಳಿತಕ್ಕೆ ಒಳಪಟ್ಟಿದೆ. ಪ್ರತಿವರ್ಷ ಫಾಲ್ಗುಣ ಶುದ್ಧ ಪಾಡ್ಯದಂದು ಇಲ್ಲಿ ರಥೋತ್ಸವ ಜರುಗುತ್ತದೆ.  ಶಿವರಾತ್ರಿ ಕಾಲದಲ್ಲಿ ನಡೆಯುವ ಜಾತ್ರೆ ಜಗತ್ಪ್ರಸಿದ್ಧ

Gokarna Gowriಕೋಟಿತೀರ್ಥ : ಗೋಕರ್ಣದಲ್ಲಿ 30 ತೀರ್ಥಗಳಿದ್ದು, ಕೋಟಿ ತೀರ್ಥ ಪ್ರಧಾನವಾದ್ದು. ಶಿವರಾತ್ರಿಯಲ್ಲಿ ಸಹಸ್ರಾರು ಭಕ್ತರು ಆಗಮಿಸಿ ಕೋಟಿತೀರ್ಥ ಸ್ನಾನ ಮಾಡಿ ಪುನೀತರಾಗುತ್ತದೆ. ಇದರ ಪಶ್ಚಿಮಕ್ಕೆ ನರಸಿಂಹ ದೇವಾಲಯವಿದೆದಕ್ಷಿಣಕ್ಕೆ ಅಗಸ್ತ್ಯ, ಸುಮಿತ್ರಾ, ಗಂಗಾತೀರ್ಥಗಳೆಂಬ  ಗುಹೆಗಳಿವೆ.  ಶತಶೃಂಗದ ಮೇಲೆ ಗೋಗರ್ಭ ತೀರ್ಥ, ಬ್ರಹ್ಮಕಮಂಡಲ ತೀರ್ಥ ಮತ್ತು ಮಹೇಶ್ವರರಾರಣ್ಯಗಳಿವೆ. ಆ ಗುಡ್ಡದ ಕೆಳಗೆ ಮಾಲಿನಿ, ಸುಮಾಲಿನಿ, ಸೂರ್ಯ, ಚಂದ್ರ ಮತ್ತು ಅನಂತ ಎಂಬ ತೀರ್ಥಗಳಿವೆ. ದೇವಾಲಯದ ಪ್ರಾಕಾರದಲ್ಲಿ ಗೌರಿ ದೇವಿಯ ದೇವಾಲಯವೂ ಇದೆ. ಇಲ್ಲಿರುವ ಗೌರಿ ಅತ್ಯಂತ ಮನೋಹರವಾಗಿದೆ.

ಗಣಪತಿ : ಗೋಕರ್ಣದಲ್ಲಿ ಮಹಾಬಲೇಶ್ವರನ ಸ್ಥಾಪನೆಗೆ ಕಾರಣನಾದ ಗಣಪತಿಯ ದೇವಾಲಯವಿದೆ. ಇಲ್ಲಿರುವ ನಿಂತಿರುವ ಗಣಪನ ವಿಗ್ರಹ ಕರ್ನಾಟಕದ ಅತಿ ಪ್ರಾಚೀನ ಗಣೇಶ ವಿಗ್ರಹಗಳಲ್ಲಿ ಒಂದಾಗಿದೆ. ಇದು ಸುಮಾರು 6 ಅಥವಾ 7ನೇ ಶತಮಾನದ್ದೆನ್ನುತ್ತಾರೆ ಇತಿಹಾಸತಜ್ಞರು.

ಸಮುದ್ರ ತಡಿಯಲ್ಲೇ ಈ ಪವಿತ್ರ ಪುಣ್ಯಕ್ಷೇತ್ರವಿದ್ದು, ಭೂಮಾರ್ಗ, ಜಲಮಾರ್ಗಗಳೆರಡರಿಂದಲೂ ಗೋಕರ್ಣಕ್ಕೆ ಬರಲು ಅವಕಾಶವಿದೆ. ಇಲ್ಲಿಗೆ 3 ಕಿಲೋ ಮೀಟರ್ ದೂರದಲ್ಲಿರುವ  ತದಡಿ ಬಂದರಿಗೆ ಉಗಿ ಹಡಗಿನಲ್ಲಿ ಪ್ರಯಾಣ ಮಾಡಲೂ ಅವಕಾಶವಿದೆ. ಗೋಕರ್ಣದ ಓಂ ಬೀಚ್ ಪ್ರಸಿದ್ಧವಾಗಿದ್ದು, ವಿದೇಶೀ ಯಾತ್ರಿಕರನ್ನೂ ತನ್ನತ್ತ ಸೆಳೆಯುತ್ತಿದೆ.  

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮದೇವಾಲಯಗಳು

M.V.Shankaranarayan

Our ministers.com