ಮುಖಪುಟ
/ನಮ್ಮ
ದೇವಾಲಯಗಳು ಹಿಮವದ್ ಗೋಪಾಲಸ್ವಾಮಿ ಬೆಟ್ಟ *ಟಿ.ಎಂ. ಸತೀಶ್
ಮೈಸೂರಿನಿಂದ 75 ಕಿಲೋ ಮೀಟರ್ ದೂರದಲ್ಲಿರುವ ಈ ಬೆಟ್ಟದ ಮೇಲೆ ಪ್ರತಿನಿತ್ಯ ಮಂಜು(ಹಿಮ) ಕವಿಯುವ ಕಾರಣ ಹಾಗೂ ಇಲ್ಲಿ ಪುರಾತನವಾದ ಗೋಪಾಲಸ್ವಾಮಿಯ ದೇವಾಲಯವಿರುವ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಎಂಬ ಹೆಸರು ಬಂದಿದೆ. ಸಮುದ್ರಮಟ್ಟದಿಂದ 1,454 ಮೀಟರ್ ಎತ್ತರದಲ್ಲಿರುವ ಈ ಪ್ರದೇಶದಲ್ಲಿ ಚಳಿಗಾಲ ಹಾಗೂ ಮಳೆಗಾಲದಲ್ಲಿ ಮಂಜು ಮುಸುಕಿದ ಪರಿಸರ ನೋಡುವುದೇ ಒಂದು ಸೊಬಗು ಅರಣ್ಯ ಇಲಾಖೆಯ ಆಡಳಿತಕ್ಕೆ ಒಳಪಟ್ಟ ಈ ಪ್ರದೇಶದಲ್ಲಿ ಆನೆಗಳು, ಹುಲಿಗಳೂ ಸೇರಿದಂತೆ ಲಕ್ಷಾಂತರ ಪ್ರಬೇಧದ ಸಸ್ಯ ಹಾಗೂ ಪ್ರಾಣಿ ಸಂಕುಲವಿದೆ. ಹೀಗಾಗಿ ಇಲ್ಲಿರುವ ಪ್ರಾಣಿಗಳಿಗೆ ಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಅರಣ್ಯ ಇಲಾಖೆ ಈ ದೇವಾಲಯಕ್ಕೆ ಪ್ರವೇಶ ಸಮಯ ನಿಗದಿ ಮಾಡಿದೆ. ಬೆಳಗ್ಗೆ 8-30ರಿಂದ ಸಂಜೆ 4ಗಂಟೆಯವರೆಗೆ ಮಾತ್ರವೇ ದೇವಾಲಯಕ್ಕೆ ಪ್ರವೇಶ.
ಐತಿಹ್ಯ : ಈ ಬೆಟ್ಟಕ್ಕೆ ಹಿಂದೆ ಗೋವರ್ಧನಗಿರಿ ಎನ್ನುತ್ತಿದ್ದರು. ಬೆಟ್ಟ ದೂರದಿಂದ ನೋಡಲು ಹಸುವಿನ ಆಕಾರದಲ್ಲಿರುವ ಕಾರಣ ಇದನ್ನು ಗೋವರ್ಧನಗಿರಿ ಎನ್ನುತ್ತಿದ್ದರು ಎಂಬುದು ಸ್ಥಳೀಯರ ಅನಿಸಿಕೆ. ಹಚ್ಚ ಹಸುರಿನಿಂದ ಕೂಡಿದ ಈ ಬೆಟ್ಟದಲ್ಲಿ ದನ, ಕರು ಮೇಯಿಸಲು ಬೆಟ್ಟದ ತಪ್ಪಲಿನ ಗೋಪಾಲಪುರದ ಗೋಪಾಲಕರು ಬರುತ್ತಿದ್ದರು, ಅವರು ಇಲ್ಲಿ ಗೋವರ್ಧನ ಗಿರಿಯನ್ನೇ ಎತ್ತಿ ಗೋಪಾಲಕರನ್ನು ರಕ್ಷಿಸಿದ ಕೃಷ್ಣನ ಮೂರ್ತಿಯನ್ನು ಪೂಜಿಸುತ್ತಿದ್ದರು ಹೀಗಾಗಿ ಈ ಬೆಟ್ಟ ಗೋವರ್ಧನಗಿರಿ ಎಂದು ಹೆಸರಾಯಿತು ಎಂದೂ ಊರ ಹಿರಿಯರು ವಾದಿಸುತ್ತಾರೆ. ಕಮಲಾಚಲ, ಕಾಮಾದ್ರಿ, ಕಂಜಗಿರಿ ಎಂಬ ಹೆಸರುಗಳೂ ಬೆಟ್ಟಕ್ಕೆ ಇದ್ದ ಬಗ್ಗೆ ಉಲ್ಲೇಖವಿದೆ. 1315ರಲ್ಲಿ ಮಾಧವ ಗಾಯಕ್ ವಾಡರು ಇಲ್ಲಿ ಗೋಪಾಲಸ್ವಾಮಿ ದೇವಾಲಯ ಕಟ್ಟಿಸಿದ ಬಗ್ಗೆ ದಾಖಲೆಗಳಿವೆ.
ಈ ಪ್ರದೇಶದಲ್ಲಿ 8 ಪುಣ್ಯ ತೀರ್ಥಗಳಿವೆ. ಈ ಪೈಕಿ ಹಂಸತೀರ್ಥ ಮಹಿಮಾನ್ವಿತವಾದುದು. ಪುರಾಣದಲ್ಲಿನ ಕಥೆಗಳ ಪ್ರಕಾರ ಒಮ್ಮೆ ಕಾಗೆಗಳ ಹಿಂಡು ಈ ತೀರ್ಥದಲ್ಲಿ ಸ್ನಾನ ಮಾಡಿ ಹಂಸಗಳಾಗಿ ಪರಿವರ್ತನೆಯಾದವಂತೆ ಹೀಗಾಗೇ ಇದಕ್ಕೆ ಹಂಸತೀರ್ಥ ಎಂಬ ಹೆಸರು ಬಂತೆಂದು ಪ್ರತೀತಿ. ಸುಂದರ ಗಿರಿಧಾಮವೂ ಆದ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ನಾಸ್ತಿಕರು, ಆಸ್ತಿಕರು ಇಬ್ಬರೂ ಆಗಮಿಸುತ್ತಾರೆ. ಶ್ರಾವಣ ಶನಿವಾರಗಳಂದು ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. | |||