ಮುಖಪುಟ /ನಮ್ಮದೇವಾಲಯಗಳು   

ಘೋಸಾಯಿ ಘಾಟ್ ಕಾಶಿವಿಶ್ವೇಶ್ವರ

ಕಾವೇರಿ ನದಿ ತಟದಲ್ಲಿರುವ ಪ್ರಾಚೀನ ದೇವಾಲಯ

*ಟಿ.ಎಂ. ಸತೀಶ್

Gosai Ghat, Kashi Vishweshwara Temple, Vijayabharathi Swamiji, Srirangapattana, Mysore, Mandya, Temples in and around Bangalore, Karnataka, ದೇವಾಲಯಗಳು, ಟಿ.ಎಂ. ಸತೀಶ್, Turuvekere Satish, T.M.Satish, Journalistಕನ್ನಡ ನಾಡಿನ ಜೀವನದಿ ಕಾವೇರಿಯ ದಂಡೆಯಲ್ಲಿ ಅನೇಕ ಪುಣ್ಯ ಕ್ಷೇತ್ರಗಳಿವೆ. ನೂರಾರು ದೇವಾಲಯಗಳೂ ಇವೆ. ಈ ಪೈಕಿ ಘೋಸಾಯಿ ಘಾಟ್ ನ ಶ್ರೀ. ಕಾಶೀ ವಿಶ್ವೇಶ್ವರ ಸ್ವಾಮಿ ದೇವಾಲಯವೂ ಒಂದು.

ಘೋಸಾಯಿ ಘಾಟ್ ಶ್ರೀರಂಗಪಟ್ಟಣಕ್ಕೆ ಕೇವಲ 2 ಕಿ.ಮೀ. ದೂರದಲ್ಲಿ ಕಾವೇರಿ ನದಿ ದಕ್ಷಿಣ ದಂಡೆಯ ಮೇಲಿರುವ ಪುಣ್ಯ ಕ್ಷೇತ್ರ. ಬಹಳ ಹಿಂದೆ ಸಂಪೂರ್ಣ ಕಾನನ ಪ್ರದೇಶವಾಗಿದ್ದ ಇಲ್ಲಿ, ಸಾಧು, ಸಂತರು, ಭಾವಾಜಿಗಳು (ಉತ್ತರ ಭಾರತದ ಸನ್ಯಾಸಿಗಳು) ಆಗಮಿಸಿ ಪವಿತ್ರ ಕಾವೇರಿಯಲ್ಲಿ ಸ್ನಾನ ಮಾಡಿ, ಜಪ ತಪ ಆಚರಿಸುತ್ತಿದ್ದರು ಮತ್ತು ಹತ್ತಾರು ವರ್ಷಗಳ ಕಾಲ ಇಲ್ಲಿಯೇ ನೆಲೆಸುತ್ತಿದ್ದರು ಎಂದು ತಿಳಿದುಬರುತ್ತದೆ. ಹೀಗಾಗಿಯೇ ಈ ತಾಣಕ್ಕೆ ಘೋಸಾಯಿ (ಸಂತರ) ಘಾಟ್ (ಸ್ನಾನಘಟ್ಟ) ಎಂಬ ಹಿಂದಿಯ ಹೆಸರೇ ಬಂದಿದೆ.

ಬಹಳ ಹಿಂದೆ ಹೀಗೆ ಉತ್ತರ ಭಾರತದ ಕಡೆಯಿಂದ ತಮ್ಮ ಶಿಷ್ಯರೊಡಗೂಡಿ ಬಂದ ಶ್ರೀ ಉದಯ ಭಾರತಿ ಸ್ವಾಮೀಜಿ ಎಂಬ ಭಾವಾಜಿ ಇಲ್ಲಿ ನೆಲೆಸಿ ಜಪ-ತಪ ಆಚರಿಸುತ್ತಿದ್ದರು. ಅವರಲ್ಲಿದ್ದ ದೈವೀಕ ಶಕ್ತಿಯಿಂದ ಸ್ಥಳೀಯರಿಗೆ ಸಹಾಯವನ್ನೂ ಮಾಡುತ್ತಿದ್ದ ಕಾರಣ ಅವರ ಖ್ಯಾತಿ ಕೀರ್ತಿ ಸುತ್ತ ಮುತ್ತ ಹಬ್ಬಿ ಬಹು ಜನಪ್ರಿಯರಾಗಿದ್ದರು.  ಭಕ್ತರು ನೀಡುತ್ತಿದ್ದ ಕಾಣಿಕೆಯನ್ನು ಕೂಡಿಟ್ಟಿದ್ದ ಉದಯ ಭಾರತಿ ಸ್ವಾಮೀಜಿ ಅವರ ಬಳಿ ಸಾಕಷ್ಟು ದ್ರವ್ಯವೂ ಸಂಗ್ರಹವಾಗಿತ್ತು. ಈ ದ್ರವ್ಯ ತಮ್ಮದಲ್ಲ. ಶಿವ ಕರುಣಿಸಿದ್ದು, ಹೀಗಾಗಿ ಶಿವನ ಕಾರ್ಯಕ್ಕೇ ಇದು ಸದ್ವಿನಿಯೋಗ ಆಗಬೇಕು ಎಂದು ನಿರ್ಧರಿಸಿದ ಸ್ವಾಮೀಜಿ, ತಾವು ಜಪ-ತಪ Gosai Ghat, Kashi Vishweshwara Temple, Vijayabharathi Swamiji, Srirangapattana, Mysore, Mandya, Temples in and around Bangalore, Karnataka, ದೇವಾಲಯಗಳು, ಟಿ.ಎಂ. ಸತೀಶ್, Turuvekere Satish, T.M.Satish, Journalistಆಚರಿಸುತ್ತಿದ್ದ ಕಾವೇರಿ ದಕ್ಷಿಣ ದಂಡೆಯ ಇದೇ ಸ್ನಾನಘಟ್ಟದ ಬಳಿ ಶಿವಾಲಯ ಕಟ್ಟಿಸಿ, ವಾರಾಣಸಿಯಿಂದ ತರಿಸಿದ ಪವಿತ್ರವಾದ ಕಾಶಿ ವಿಶ್ವೇಶ್ವರನ ಶಿವಲಿಂಗವನ್ನು ಪ್ರತಿಷ್ಠಾಪಿಸಿ, ಇಲ್ಲಿಗೆ ಬರುವ ಭಕ್ತರ ಅನುಕೂಲಕ್ಕಾಗಿ ಸ್ನಾನಘಟ್ಟ ಹಾಗೂ ಮಂಟಪವನ್ನೂ ನಿರ್ಮಿಸಿದರು. ಅವರ ಬಳಿ ಇದ್ದ ದ್ರವ್ಯವನ್ನೆಲ್ಲಾ ಈ ಕಾರ್ಯಕ್ಕೆ ಸಂಪೂರ್ಣ ವಿನಿಯೋಗಿಸಿದರು. ಬಳಿಕ ಅವರಿಗೆ ತಾವು ನಿರ್ಮಿಸಿದ ಈ ದೇವಾಲಯದಲ್ಲಿ ತಮ್ಮ ನಂತರವೂ ನಿತ್ಯವೂ ತಪ್ಪದೆ ಪೂಜೆ ನಡೆಯಬೇಕು. ಎಂದಿಗೂ ಪೂಜಾಧಿಕಾರ್ಯಗಳು ನಿಲ್ಲಬಾರದು. ಅದಕ್ಕಾಗಿ ದೇವಾಲಯಕ್ಕೆ ಒಂದಿಷ್ಟು ಆದಾಯ ಬರುವಂತೆ ಆಸ್ತಿ ಮಾಡಬೇಕು ಎಂಬ ಆಲೋಚನೆ ಮೂಡಿತಂತೆ. ಆಗ ಆ ಕಾರ್ಯ ನೆರವೇರುವ ತನಕ ತಾವು ಬಲಗೈ ಬದಲು ಎಡಗೈನಿಂದಲೇ ಊಟ ಮಾಡುವುದಾಗಿ ಸಂಕಲ್ಪ ಮಾಡಿದರಂತೆ.

ಒಮ್ಮೆ ಶ್ರೀರಂಗಪಟ್ಟಣ ಬಳಿ ಇರುವ ಪರಕಾಲ ಮಠದಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಮೈಸೂರಿನ ಅರಸು ಶ್ರೀ ಮುಮ್ಮುಡಿ ಕೃಷ್ಣರಾಜ ಒಡೆಯರು ಆಗಮಿಸಿದ್ದರು. ಆ ಕಾರ್ಯಕ್ರಮಕ್ಕೆ ಶ್ರೀ. ಉದಯ ಭಾರತಿ ಸ್ವಾಮೀಜಿಗಳನ್ನೂ ಆಹ್ವಾನಿಸಲಾಗಿತ್ತಂತೆ. ಭೋಜನ ಕಾಲದಲ್ಲಿ ಮಹಾರಾಜರ ಪಂಕ್ತಿಯಲ್ಲಿ ಊಟಕ್ಕೆ ಕೂತಿದ್ದ ಉದಯ ಭಾರತಿ ಸ್ವಾಮೀಜಿ ಎಡಗೈಯಲ್ಲಿ ಊಟ ಮಾಡುತ್ತಿರುವುದನ್ನು ಕಂಡು ಕೃಷ್ಣರಾಜ ಒಡೆಯರಿಗೆ ಅಚ್ಚರಿಯಾಯಿತು. ಕಾರಣ ಕೇಳಿದಾಗ, ಭಾವಾಜಿ ತಾವು ಕಟ್ಟಿಸಿದ ದೇವಾಲಯದಲ್ಲಿ ನಿಲ್ಲದೆ ಪೂಜೆ ನಡೆಯಲು ಶಾಶ್ವತ ಆಸ್ತಿ ಮಾಡುವ ತನ ತಾವು ಹೀಗೆ ಎಡಗೈನಲ್ಲಿ Gosai Ghat, Kashi Vishweshwara Temple, Vijayabharathi Swamiji, Srirangapattana, Mysore, Mandya, Temples in and around Bangalore, Karnataka, ದೇವಾಲಯಗಳು, ಟಿ.ಎಂ. ಸತೀಶ್, Turuvekere Satish, T.M.Satish, Journalist, Kaveri river, cauvery riverಊಟ ಮಾಡುವ ಸಂಕಲ್ಪ ಮಾಡಿರುವುದಾಗಿ ತಿಳಿಸಿದರಂತೆ. ಆಗ ಒಡೆಯರ್ ಅವರು ಇಂದಿನಿಂದ ನೀವು ಬಲಗೈಯಲ್ಲಿಯೇ ಊಟ ಮಾಡಿ, ನೀವು ಕಟ್ಟಿರುವ ದೇವಾಲಯಕ್ಕೆ ನಾನು ಭೂಮಿ ಕೊಡುತ್ತೇನೆ ಎಂದು ಹೇಳಿದರಂತೆ. ಬಳಿಕ ಮಹಾರಾಜರು ದೇವಾಲಯಕ್ಕೆ 24 ಎಕರೆ ಜಮೀನನ್ನು ಉದಯ ಭಾರತಿ ಸ್ವಾಮೀಜಿ ಕಟ್ಟಿಸಿದ್ದ  ಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯಕ್ಕೆದಾನವಾಗಿ ನೀಡಿದರಂತೆ. 

ಹೀಗೆ ಅಂದಿನಿಂದ ಕಾಶಿ ವಿಶ್ವೇಶ್ವರ ದೇವಾಲಯದಲ್ಲಿ ಪೂಜಾದಿಗಳು ನಡೆಯುತ್ತಾ ಬಂದಿವೆ. ನದಿಯ ತಟದಲ್ಲಿ ದೇವಾಲಯ ಇರುವ ಕಾರಣ ಮಳೆಗಾಲದಲ್ಲಿ ದೇವಾಲಯಕ್ಕೆ ಬರುವ ಭಕ್ತರಿಗೆ ತೊಂದರೆ ಆಗ ಬಾರದು ಎಂದು ದೇವಾಲಯವನ್ನು ತುಸು ಎತ್ತರವಾಗಿ ನಿರ್ಮಿಸಲಾಗಿದ್ದು, ಮೆಟ್ಟಿಲುಗಳಿವೆ. ದೇವಾಲಯ ಪುಟ್ಟದಾದರೂ ನೋಡಲು ಸುಂದರವಾಗಿದೆ. ದೇವಾಲಯದ ಮೇಲ್ಭಾಗದಲ್ಲಿ ಕಳಶಗಳಿಂದ ಕೂಡಿದ ರಾಜಗೋಪುರವಿದೆ.   

ಗರ್ಭಗೃಹದಲ್ಲಿ ಕಾಶಿ ವಿಶ್ವೇಶ್ವರ ಸ್ವಾಮಿಯ ಲಿಂಗವಿದೆ. ಈ ಲಿಂಗಕ್ಕೆ ಹಿತ್ತಾಳೆಯ ಕವಚವನ್ನು ತೊಡಿಸಿ ಹೂವುಗಳಿಂದ ಅಲಂಕರಿಸಲಾಗುತ್ತದೆ. ಲಿಂಗದ ಎದುರು ನಂದಿಯ ವಿಗ್ರಹವಿದೆ. ಪಕ್ಕದಲ್ಲಿ ಏಳು ಹೆಡೆಗಳ ಸರ್ಪದ ಸುಂದರ ಶಿಲಾ ಮೂರ್ತಿಯಿದೆ. ಈ ಮೂರ್ತಿಯ ಎಡ ಬಲದಲ್ಲಿ ನಾಗಕನ್ನಿಕೆಯರನ್ನು ಕೆತ್ತಲಾಗಿದೆ. ಘೋಸಾಯಿ ಘಾಟ್ ನಲ್ಲಿ ತಾಯಿ ಪಾರ್ವತಿಯ ಗುಡಿಯೂ ಇದೆ.  ಪಕ್ಕದಲ್ಲಿಯೇ ಇರುವ ಮಂಟಪದಲ್ಲಿ ಗಣಪತಿ ಮತ್ತು ಆಂಜನೇಯ ಸ್ವಾಮಿ ವಿಗ್ರಹಗಳಿವೆ.

ಇಲ್ಲಿಗೆ ಬರುವ ಭಕ್ತರು ದೇವಾಲಯದ ಎದುರೇ ಹರಿಯುವ ಕಾವೇರಿ ನದಿಯಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆಯುತ್ತಾರೆ. ಕೆಲವರು ನೀರಿನಲ್ಲಿ ಆಟವಾಡಲೆಂದೇ ಘೋಸಾಯಿ ಘಾಟ್ ಗೆ ಬರುತ್ತಾರೆ. ಸುಂದರ ಪ್ರಕೃತಿ ರಮಣೀಯವಾದ ತಾಣದಲ್ಲಿ ಪ್ರಶಾಂತವಾಗಿ ಹರಿಯುವ ನಿರ್ಮಲ ಕಾವೇರಿಯಲ್ಲಿ ಆಬಾಲವೃದ್ಧರಾದಿಯಾಗಿ ಎಲ್ಲರೂ ಆಡಿ ನಲಿಯುತ್ತಾರೆ. ಮಳೆಗಾಲದಲ್ಲಿ ಇಲ್ಲಿ ರಭಸದಿಂದ ನೀರು ಹರಿಯುವ ಕಾರಣ ಎಚ್ಚರಿಕೆಯೂ ಅಗತ್ಯ.

ಬೆಂಗಳೂರಿನಿಂದ ಮೈಸೂರಿಗೆ ಹೋಗುವ ಮಾರ್ಗದಲ್ಲಿ ಶ್ರೀರಂಗಪಟ್ಟಣ ಬಳಿ ಎಡಕ್ಕೆ ತಿರುಗಿದರೆ ಘೋಸಾಯಿ ಘಾಟ್ ಗೆ ಹೋಗಬಹುದು.

ಮುಖಪುಟ /ನಮ್ಮದೇವಾಲಯಗಳು