ಮುಖಪುಟ /ನಮ್ಮದೇವಾಲಯಗಳು   

ಗುರುವಾಯೂರ್ ಅಪ್ಪನ್ ದೇವಾಲಯ

*ಟಿ.ಎಂ.ಸತೀಶ್

ಗುರುವಾಯೂರ್ ಅಪ್ಪನ್, guruvaryurappaಗುರುವಾಯೂರು ಕೇರಳದ ಚೌಫಾಟ್ ತಾಲ್ಲೂಕಿನಲ್ಲಿರುವ ಪರಮ ಪವಿತ್ರವಾದ ಕೃಷ್ಣ ಕ್ಷೇತ್ರ. ವೈಷ್ಣವರ ಪ್ರಸಿದ್ಧ ಯಾತ್ರಾ ಸ್ಥಳವಾದ ಈ ಪುಣ್ಯಭೂಮಿಯಲ್ಲಿ ಕೃಷ್ಣ ದರ್ಶನ ಮಾಡಿದರೆ ಜನ್ಮ ಪಾವನವಾಗತ್ತದೆ ಎಂಬುದು ಭಕ್ತರ ನಂಬಿಕೆ.

ಇಲ್ಲಿ ಗುರುವಾಯೂರಪ್ಪನ ದೇವಸ್ಥಾನವಿದೆ. ಇಲ್ಲಿಯ ಸ್ಪಟಿಕ ಶಿಲೆಯ ನಾರಾಯಣ ಮೂರ್ತಿ ಶಂಖ, ಚಕ್ರ ಗದಾಪದ್ಮಧಾರಿಯಾಗಿದ್ದಾನೆ. ದ್ವಾಪರಯುಗದ ಕೊನೆಯ ಚರಣದಲ್ಲಿ ಅಷ್ಟಮಿ -ರೋಹಿಣಿಯ ಮಧ್ಯ ರಾತ್ರಿಯಲ್ಲಿ ಅಂದರೆ ಈಗ್ಗೆ 5 ಸಾವಿರ ವರ್ಷಗಳ ಹಿಂದೆ ಕೃಷ್ಣಾವತಾರವಾಯಿತು ಎನ್ನುತ್ತದೆ ಭಾಗವತ.

ಶ್ರೀಕೃಷ್ಣ ಪರಮಾತ್ಮ ಸುಮಾರು 125 ವರ್ಷಗಳ ಕಾಲ ತನ್ನ ಲೀಲಾ ವಿನೋದಗಳನ್ನು ಜಗತ್ತಿಗೆ ತೋರಿಸಿ, ಶಿಷ್ಟರಕ್ಷಣೆ ಮಾಡಿ, ದೃಷ್ಟ ಸಂಹಾರ ಮಾಡಿದ. ಇಂಥ ಮಹಿಮಾನ್ವಿತ ಶ್ರೀಕೃಷ್ಣ ಗುರುವಾಯೂರಿನಲ್ಲಿ ನೆಲೆ ನಿಂತು ಬೇಡಿ ಬರುವ ಭಕ್ತರ ಸಂಕಷ್ಟ ಹಾಗೂ ರೋಗರುಜಿನಗಳನ್ನು ದೂರ ಮಾಡುತ್ತಿದ್ದಾನೆ ಎಂಬುದು ಭಕ್ತರ ನಂಬಿಕೆ.

ನಾರದ ಪುರಾಣದಲ್ಲಿ ಗುರುವಾಯೂರ್ ಅಪ್ಪನ್ ಮಹಿಮೆ ತಿಳಿಯುತ್ತದೆ. ಪರೀಕ್ಷಿತ ಮಹಾರಾಜನ ಪುತ್ರ ಜನಮೇಜಯ ತನ್ನ ತಂದೆಯ ಸಾವಿಗೆ ಕಾರಣವಾದ ಸರ್ಪಕುಲದ ಮೇಲೆ ಸೇಡು ತೀರಿಸಿಕೊಳ್ಳಲು ಸರ್ಪಯಾಗವನ್ನೇ ಮಾಡಿ ಎಲ್ಲ ಸರ್ಪಗಳನ್ನೂ ಆಹುತಿ ಪಡೆಯುತ್ತಾನೆ. ಇದರಿಂದ ಜನಮೇಜಯನಿಗೆ ಭಯಂಕರ ಕುಷ್ಠರೋಗ ತಗುಲುತ್ತದೆ. ಆಗ ಆತ್ರೇಯ ಮಹಾಮುನಿಗಳು ಜನಮೇಜಯನಿಗೆ ಶ್ರೀಕೃಷ್ಣ ಪ್ರಸನ್ನನಾಗುವಂತೆ ಮಾಡಿ, ಆತನ ಕಷ್ಟ ದೂರಮಾಡಿ, ಗುರುವಾಯೂರು ಮಹಿಮೆ ತಿಳಿಸುತ್ತಾರೆ.

ವಸುದೇವ ದೇವಕಿಯರ 8ನೇ ಮಗನಾಗಿ ಹುಟ್ಟಿ, ಕಂಸ, ಚಾಣೂರಾದಿ ರಾಕ್ಷಸರನ್ನು ಕೊಂದ ಶ್ರೀಕೃಷ್ಣ ದ್ವಾರಕೆಯಲ್ಲಿ ತನ್ನದೇ ಪ್ರತಿಮೂರ್ತಿಯನ್ನು ಪದ್ಮನಾಭ ರೂಪದಲ್ಲಿ ಸ್ಥಾಪಿಸುತ್ತಾನೆ. ಯದುವಂಶ ನಾಶವಾಗಿ, ದ್ವಾರಕೆಯು ಪ್ರಳಯ ಕಾಲದಲ್ಲಿ ಸಮುದ್ರದಲ್ಲಿ ಮುಳುಗುತ್ತಿದ್ದಾಗ, ಈ ವಿಗ್ರಹವನ್ನು ರಕ್ಷಿಸುವಂತೆ ಬೃಹಸ್ಪತಿಗೆ ಉದ್ದವನಿಂದ ಹೇಳಿ ಕಳುಹಿಸುತ್ತಾನೆ.

ಭಗವಂತನ ಆದೇಶದಂತೆ ದ್ವಾರಕೆಗೆ ಹೊರಟ ಬೃಹಸ್ಪತಿಗಳು ತಮ್ಮ ಶಿಷ್ಯ ವಾಯುದೇವನನ್ನೂ ಕರೆದುಕೊಂಡು ಹೋಗುತ್ತಾರೆ. ಪ್ರಳಯ ಕಾಲದಲ್ಲಿ ನೀರಿನಲ್ಲಿ ತೇಲುತ್ತಿದ್ದ ವಿಗ್ರಹ ಕಂಡ ವಾಯುದೇವ ಅದನ್ನು ತನ್ನ ತಲೆಯ ಮೇಲಿಟ್ಟುಕೊಂಡು ಪ್ರತಿಷ್ಠಾಪನೆಗೆ ಸೂಕ್ತ ಸ್ಥಳ ಹುಡುಕಿ, ತನ್ನ ಗುರುಗಳ ಆದೇಶದಂತೆ ಒಂದು ಪವಿತ್ರ ತಾಣದಲ್ಲಿ ವಿಗ್ರಹ ಪ್ರತಿಷ್ಠಾಪಿಸುತ್ತಾರೆ. ಗುರು ಹಾಗೂ ವಾಯು ಇಬ್ಬರೂ ಸೇರಿ ಪ್ರತಿಷ್ಠಾಪಿಸಿದ ಈ ತಾಣ ಗುರುವಾಯೂರಾಗಿದೆ ಎಂದು ಸ್ಥಳ ಪುರಾಣ ಹೇಳುತ್ತದೆ. 

ಮುಖಪುಟ; /ನಮ್ಮದೇವಾಲಯಗಳು