ಮುಖಪುಟ /ನಮ್ಮದೇವಾಲಯಗಳು

ಹನುಮಂತನಗರ ಪಂಚಮುಖಿ ಗಣಪತಿ ದೇವಾಲಯ

*ಟಿ.ಎಂ.ಸತೀಶ್

Panchamukhi Ganapathi, ಪಂಚಮುಖಿ ಗಣಪತಿ, kannadaratna.com, ಕನ್ನಡರತ್ನ.ಕಾಂ.ದೊಡ್ಡ ಬಸವನಗುಡಿಗೆ ಒಂದು ಕಿಲೋ ಮೀಟರ್ ದೂರದಲ್ಲಿರುವ ನರಹರಿರಾಯನ ಗುಡ್ಡ ಗಣಪತಿ ಹಾಗೂ ಸುಬ್ರಹ್ಮಣ್ಯರು ನೆಲೆಸಿಹ ಪುಣ್ಯಕ್ಷೇತ್ರ. ಹಿಂದೆ ಕಾಡು, ಮೇಡು ಗುಡ್ಡವಾಗಿದ್ದ ಈ ಪ್ರದೇಶದಲ್ಲಿ ಮಾಗಡಿ ಕೆಂಪೇಗೌಡರ ಕಾಲದಲ್ಲಿ ಪುಟ್ಟದೊಂದು ದೇವಾಲಯ ನಿರ್ಮಾಣವಾಗಿತ್ತು.

ನರಹರಿರಾಯರು ಈ ದೇವಾಲಯ ಅಭಿವೃದ್ಧಿ ಪಡಿಸಿದ ಕಾರಣ ಈ ಬೆಟ್ಟ ನರಹರಿರಾಯನ ಗುಡ್ಡ ಎಂದು ಖ್ಯಾತವಾಯಿತು. ಇಲ್ಲಿಗೆ ಒಮ್ಮೆ ಆಗಮಿಸಿದ ಮೈಸೂರು ಅರಮನೆಯ ಆಸ್ಥಾನ ವಿದ್ವಾಂಸರಾದ ಸಿದ್ಧಾಂತಿ ಶಿವಶಂಕರ ಶಾಸ್ತ್ರೀಗಳು, ಇಲ್ಲಿನ ಪ್ರಶಾಂತತೆಗೆ ಮಾರುಹೋಗಿ ಇಲ್ಲಿ ಧ್ಯಾನವನ್ನಾಚರಿಸುತ್ತಿದ್ದರು. ಇವರೇ 1924ರಲ್ಲಿ ಬೆಟ್ಟದ ತಪ್ಪಲಿನಲ್ಲಿ ಪುಟ್ಟ ಗುಡ್ಡದ ಮೇಲೆ ಪಂಚಮುಖಿ ಗಣಪನನ್ನು ಪ್ರತಿಷ್ಠಾಪಿಸಿದರು.ಈ ಬೆಟ್ಟ ಪ್ರದೇಶಕ್ಕೆ ಕುಮಾರಶೈಲವೆಂದು ಮರು ನಾಮಕರಣ ಮಾಡಿದರು.

ಪಂಚಮುಖಿ ವಿನಾಯಕನ ದೇವಾಲಯ ಕೆಲವೇ ವರ್ಷಗಳ ಹಿಂದೆ ಪುಟ್ಟ ಪ್ರಾಕಾರದಲ್ಲಿತ್ತು. ಆದರೆ ಇಂದು ಭವ್ಯವಾದ ದೇವಾಲಯವೇ ನಿರ್ಮಾಣವಾಗಿದೆ. ಸುಂದರವಾದ ರಾಜಗೋಪುರ, ಗರ್ಭಗೃಹದ ಮೇಲೆ ಕಳಶವುಳ್ಳ ಗೋಪುರಗಳಿವೆ. ದೇವಾಲಯದ ಪ್ರಾಕಾರವನ್ನು ವಿಸ್ತರಣೆ ಮಾಡಲಾಗಿದೆ.

Panchamukhi Ganapathi, ಪಂಚಮುಖಿ ಗಣಪತಿ, kannadaratna.com, ಕನ್ನಡರತ್ನ.ಕಾಂ.ಮುಖ್ಯ ಪ್ರವೇಶ ದ್ವಾರದ ಎದುರು ಇರುವ ಗರ್ಭಗೃಹದಲ್ಲಿ  ಸುಂದರವಾದ ಎರಡೂ ಕಾಲು ಅಡಿಯ ಪಂಚಮುಖದ ಗಣಪತಿಯ ವಿಗ್ರಹವಿದೆ. ಈ ಗಣಪತಿಗೆ ನಾನಾ ರೀತಿಯ ಅಲಂಕಾರ ಮಾಡುತ್ತಾರೆ. ಬೆಣ್ಣೆ ಅಲಂಕಾರದಲ್ಲಿ, ಹರಿಶಿನ ಅಲಂಕಾರದಲ್ಲಿ, ಧಾನ್ಯಗಳ ಅಲಂಕಾರದಲ್ಲಿ ಗಣಪತಿಯನ್ನು ನೋಡಲು ನೂರು ಕಣ್ಣು ಸಾಲದಾಗುತ್ತದೆ.

ಈ ದೇವಾಲಯದಲ್ಲಿ ಸಂಕಷ್ಟ ಚತುರ್ಥಿಯ ದಿನ ವಿಶೇಷ ಪೂಜೆ ನಡೆಯುತ್ತದೆ. ದಕ್ಷಿಣ ಬೆಂಗಳೂರಿನಲ್ಲಿ ಸಂಕಷ್ಟ ಚತುರ್ಥಿ ಖ್ಯಾತಿ ಪಡೆದಿದ್ದೇ ಪಂಚಮುಖಿ ವಿನಾಯಕನ ಗುಡಿಯಿಂದ. ಹಿಂದೆ ಇಲ್ಲಿಗೆ ಮಲ್ಲೇಶ್ವರ, ರಾಜಾಜಿನಗರಗಳಿಂದಲೂ ಭಕ್ತರು ಬಂದು ಸಂಕಷ್ಟ ಹರ ಗಣಪತಿ ಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದರು.

ಈ ದೇವಾಲಯದ ಪಕ್ಕದ ಗುಡ್ಡದ ಮೇಲೆ ಕುಮಾರಸ್ವಾಮಿ ಹಾಗೂ ಆದಿಶೇಷನ ದೇವಾಲಯವಿದೆ. ರಾತ್ರಿಯ ವೇಳೆ ಬೆಟ್ಟದ ಮೇಲೆ ನಿಂತು ನೋಡಿದರೆ ದೀಪಾಲಂಕಾರದಲ್ಲಿ ಝಗಮಗಿಸುವ ಬೆಂಗಳೂರು ದರ್ಶನವಾಗುತ್ತದೆ. 

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮ ದೇವಾಲಯಗಳು