ಮುಖಪುಟ /ನಮ್ಮದೇವಾಲಯಗಳು 

ಹಟ್ಟಿಯಂಗಡಿ ಸಿದ್ಧಿ ವಿನಾಯಕ

ವಾರಾಹಿ ನದಿಯ ದಂಡೆಯ ಮೇಲಿರುವ ಪವಿತ್ರ ಪುಣ್ಯ ಕ್ಷೇತ್ರ

Hattiyangadi Ganesha, ಹಟ್ಟಿಯಂಗಡಿ ಗಣೇಶ, kannadaratna.com, ourtemples.in, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು*ಟಿ.ಎಂ.ಸತೀಶ್

ಕಣ್ಣು ಹಾಯಿಸಿದಷ್ಟೂ ತೆಂಗಿನ ಮರಗಳ ಸಾಲು ಸಾಲು, ಪಕ್ಕದಲ್ಲೇ ತುಂಬಿ ಹರಿಯುವ ಹೊಳೆ. ಎಲ್ಲಿ ನೋಡಿದರೂ ಹಚ್ಚ ಹಸಿರು. ಮನಸ್ಸಿಗೆ ಮುದ ನೀಡುವ ಪ್ರಶಾಂತ ಪರಿಸರ. ಪ್ರಕೃತಿ ರಮಣೀಯವಾದ  ಈ ಭೂರಮೆ ಇರುವುದು ಕಡಲ ತಡಿಯ ಕುಂದಾಪುರ ಬಳಿ. ಅದುವೇ ಹಟ್ಟಿ ಅಂಗಡಿ.

ಹಟ್ಟಿಯಂಗಡಿ ಪಶ್ಚಿಮದ ಕಡಲು ಸೇರಲು ಧಾವಂತದಲ್ಲಿ ಹರಿಯುವ ವಾರಾಹಿ ನದಿಯ  ದಂಡೆಯ ಮೇಲಿರುವ ಪವಿತ್ರ ಪುಣ್ಯ ಕ್ಷೇತ್ರ. ಉಡುಪಿಯಿಂದ 45 ಕಿ.ಮೀ ಹಾಗೂ ಕುಂದಾಪುರದಿಂದ 8 ಕಿಲೋ ಮೀಟರ್ ದೂರದಲ್ಲಿರುವ ಹಟ್ಟಿಯಂಗಡಿ ಸಿದ್ಧಿವಿನಾಯಕನ ನೆಲೆವೀಡು.

ಆಳುಪರ ಆಳ್ವಿಕೆಗೆ ಒಳಪಟ್ಟು ಆಳುಪ ರಾಜವಂಶದ ಒಂದು ಪಂಗಡದ ರಾಜಧಾನಿಯಾಗಿ ಮೆರೆದ ಈ ಸ್ಥಳ ವಾಣಿಜ್ಯ ಕೇಂದ್ರವಾಗಿಯೂ ಖ್ಯಾತಿ ಪಡೆದಿತ್ತು. ಇಲ್ಲಿ 5-6ನೇ ಶತಮಾನದ ದ್ವಿಬಾಹು ಸಿದ್ಧಿವಿನಾಯಕನ ಮೂರ್ತಿಯಿದೆ.  ಬೇಡಿ ಬರುವ ಭಕ್ತರ ಅಭೀಷ್ಠ ಈಡೇರಿಸುತ್ತಿರುವ ವಿಘ್ನನಿವಾರಕ ಸಿದ್ಧಿಶಕ್ತಿಯಾಗಿ ಸಿದ್ಧಿವಿನಾಯಕನಾಗಿದ್ದಾನೆ.

ಈ ದೇವಾಲಯದ ಯಾವುದೇ ಭಾಗದಲ್ಲೂ 5-6ನೇ ಶತಮಾನದ ಪ್ರಾಚೀನತೆಯ ಕುರುಹು ಕಾಣುವುದಿಲ್ಲ. ಆದರೆ ಮೂಲ ಆರಾಧನಾ ಮೂರ್ತಿ ಪ್ರಾಚೀನವಾದ್ದು.  ಒಂದು ಕಾಲದಲ್ಲಿ ಖಾಸಗಿ ಮನೆತನಕ್ಕೆ ಈ ದೇವಾಲಯ ಸೇರಿತ್ತು. ಈಗ ದೇವಾಲಯ ಮನೆತನದ ಚೌಕಟ್ಟಿನಿಂದ ಹೊರಬಂದಿರುವ ದೇವಾಲಯ ಈಗ ಅಭಿವೃದ್ಧಿ ಹೊಂದಿದೆ. ದೇವಾಲಯ ಮಂಟಪದಾಕಾರದಲ್ಲಿದೆ. ದೇವಾಲಯದ ಮಹಾದ್ವಾರ ಕಲಾತ್ಮಕವಾಗಿದೆ. ಎಡಬಲಗಳಲ್ಲಿ ಹೊಯ್ಸಳರ ಶೈಲಿಯ ದ್ವಾರಪಾಲಕರ ಕೃಷ್ಣಶಿಲೆಯ ಬೃಹತ್ ವಿಗ್ರಹಗಳಿವೆ. ಒಳಗೆ ಚತುರಸ್ರ ಆಕಾರದ ಗರ್ಭಗುಡಿಯಿದೆ. ವಿಶಾಲವಾದ ಪ್ರದಕ್ಷಿಣ ಪಥವಿದೆ. ಚಿಕ್ಕ ಮುಖಮಂಟಪವೂ ಇದೆ. ಭಿತ್ತಿಯ ಹೊರಭಾಗದಲ್ಲಿ ಮುದ್ಗಲ ಪುರಾಣದ ಸ್ತೋತ್ರದಲ್ಲಿ ಬರುವಂತೆ ದ್ವಿಮುಖ ಗಣಪತಿ, ತ್ರಿಮುಖ ಗಣಪತಿ, ದುರ್ಗಾ ಗಣಪತಿ, ಸಿಂಹ ಗಣಪತಿ, ಸಂಕಷ್ಟಹರ ಗಣಪತಿ ಮೊದಲಾದ  32 ರೀತಿಯ ಗಣಪನ ವಿಗ್ರಹಗಳಿದ್ದು, ಒಂದಕ್ಕಿಂತ ಒಂದು ಮನೋಹರವಾಗಿದೆ.

Hattiyangadi Ganesha, ಹಟ್ಟಿಯಂಗಡಿ ಗಣೇಶಗರ್ಭಗೃಹದ ಮೇಲೆ ದ್ರಾವಿಡ ಶೈಲಿಯ ಶಿಖರವಿದೆ. ಗರ್ಭ ಗುಡಿಯ ಬಾಗಿಲುವಾಡಕ್ಕೆ ಬೆಳ್ಳಿಯ ಕವಚ ಹಾಕಲಾಗಿದೆ. ಇನ್ನು ಇಲ್ಲಿರುವ ಪ್ರಾಚೀನ ಗಣಪನ ಮೂರ್ತಿಯ ಸೊಬಗಂತೂ ವರ್ಣಿಸಲಸದಳ. ಸಾಮಾನ್ಯವಾಗಿ ಎಲ್ಲ ಕಡೆ ಗಣಪತಿಯ ಮೂರ್ತಿಗೆ ನಾಲ್ಕು ಕೈ ಇದ್ದರೆ, ಇಲ್ಲಿ  ಅಪರೂಪದ ದ್ವಿಬಾಹು ಗಣಪನ ಮೂರ್ತಿ ಇದೆ. ಇದನ್ನು ಬಾಲ ಗಣಪನೆಂದು ಹಲವರು ಹೇಳುತ್ತಾರೆ. ಪಾಣಿಪೀಠದಲ್ಲಿ ಅರ್ಧ ಭಾಗ ಮುಚ್ಚಿ ಹೋಗಿದೆ. ಹೀಗಾಗಿ ಮೂರ್ತಿ ಯಾವ ಭಂಗಿಯಲ್ಲಿದೆ ಎಂದು ಹೇಳುವುದು ಕಷ್ಟ. ಪಾಣಿ ಪೀಠದಲ್ಲಿ ಸುವರ್ಣ ರೇಖೆಯೂ ಇದೆ. ಈ ಗಣಪನ ಮುಂದೆ ಕೈಜೋಡಿಸಿ ನಿಂತು ಬೇಡಿದರೆ, ಕೆಲಸ ಆಗುವಂತಿದ್ದರೆ ಮಾತ್ರ ದೇವರು ಸಿರಿಮುಡಿ ಹೂ ಪ್ರಸಾದ ಕರುಣಿಸುತ್ತಾನೆ.  ಈ ವಿಸ್ಮಯ ಕಂಡು ಭಕ್ತರು ನಿಬ್ಬೆರಗಾಗಿದ್ದಾರೆ. ಕೆಲಸ ಆಗುವುದಿಲ್ಲ ಎಂದಾದರೆ ಎಷ್ಟು ಹೊತ್ತು ನಿಂತು ಪ್ರಾರ್ಥಿಸಿದರೂ ಗಣಪ ಪ್ರಸಾದ ಕರುಣಿಸುವುದಿಲ್ಲವಂತೆ.

ಇಲ್ಲಿನ ಸಿದ್ಧಿ ಗಣಪನಿಗೆ ನಿತ್ಯ ಇಲ್ಲಿ ತ್ರಿಕಾಲ ಪೂಜೆ ನಡೆಯುತ್ತದೆ. ಪ್ರತಿನಿತ್ಯ ಅಷ್ಟದ್ರವ್ಯಾತ್ಮಕ ಗಣಹೋಮ ನಡೆಯುವುದು ಇಲ್ಲಿನ ವೈಶಿಷ್ಟ್ಯ. ಹಿಂದೆ ಇಲ್ಲಿದ್ದ ಪುರಾತನ ದೇವಾಲಯ ಹೇಗಿತ್ತೆಂಬ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಆದರೆ, ಈಗಿರುವ ದೇವಾಲಯವನ್ನು ಮೊದಲಿಗೆ 1924ರಲ್ಲಿ ಗಣಪಯ್ಯ ಭಟ್ಟರು ಜೀರ್ಣೋದ್ಧಾರ ಮಾಡಿದ ದಾಖಲೆಗಳಿವೆ. ಕಳೆದ 50 ವರ್ಷಗಳಲ್ಲಿ ದೇವಾಲಯ ಪ್ರಸಿದ್ಧಿಗೆ ಬಂದು, ಇಲ್ಲಿ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿ ಕಾರ್ಯಗಳು ಸಾಕಷ್ಟು ನಡೆದಿವೆ. Hattiyangadi Ganesha, ಹಟ್ಟಿಯಂಗಡಿ ಗಣೇಶದೇವಾಲಯ ಪುನರ್ ನಿರ್ಮಾಣಕ್ಕಾಗಿ 1972ರಲ್ಲಿ ರಚಿಸಿದ ಸಮಿತಿ ತನ್ನ ಜವಾಬ್ದಾರಿಯನ್ನು ನಿರ್ವಹಿಸಿತು.

ಈಗ ಇಲ್ಲಿ ವಿನಾಯಕ ಅತಿಥಿಗೃಹ, ಯಾಗ ಮಂಟಪ, ಸುಸಜ್ಜಿತ ಅಡುಗೆ ಕೋಣೆ ಮತ್ತು ಭೋಜನ ಶಾಲೆಯಿದೆ.ಭೋಜನಶಾಲೆಯಲ್ಲಿ ತಾಯಿ ಅನ್ನಪೂರ್ಣೇಶ್ವರಿ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ಇಲ್ಲಿ ದೇವಾಲಯಕ್ಕೆ ಬರುವ ಭಕ್ತರಿಗೆ ಊಟತ ವ್ಯವಸ್ಥೆಯೂ ಇದೆ. ಗೋಶಾಲೆ, ಸಭಾಭವನ, ನವಗ್ರಹ ಗುಡಿಗಳನ್ನೂ ನಿರ್ಮಿಸಲಾಗಿದೆ.  

ವಿಳಾಸ: ಧರ್ಮದರ್ಶಿಗಳು, ಹಟ್ಟಿಯಂಗಡಿ ಸಿದ್ಧಿವಿನಾಯಕ ದೇವಸ್ಥಾನ, ಕುಂದಾಪುರ ತಾಲೂಕು, 576283 ಸಂಪರ್ಕಿಸಬಹುದು.

ಕುಂದಾಪುರದಿಂದ ಇಲ್ಲಿಗೆ ಬಸ್ ಸೌಲಭ್ಯವಿದೆ. ಸ್ವಂತ ವಾಹನದಲ್ಲಿ ಹೋಗುವವರು, ಕುಂದಾಪುರ - ತಲ್ಲೂರು - ಕೊಲ್ಲೂರು ಮಾರ್ಗವಾಗಿ ಹೋದರೆ, ಈ ರಸ್ತೆಯಿಂದ ಎರಡು ಕಿ.ಮೀ. ದೂರದಲ್ಲಿ ಹಟ್ಟಿ ಅಂಗಡಿ ಇದೆ.

ಮುಖಪುಟ /ನಮ್ಮದೇವಾಲಯಗಳು