ಮುಖಪುಟ /ನಮ್ಮ ದೇವಾಲಯಗಳು

ಹೆಬ್ಬೂರು ಕಾಮಾಕ್ಷಿ ದೇವಾಲಯ
(ಮಹಾಮೇರು ಶ್ರೀಚಕ್ರ ದೇವಾಲಯ)

*ಟಿ.ಎಂ.ಸತೀಶ್

Hebbur kamakshi temple, tumkur, kunigalತುಮಕೂರು ಜಿಲ್ಲೆ ಕುಣಿಗಲ್ - ಕೊರಟಗೆರೆ ಮಾರ್ಗದಲ್ಲಿ ತುಮಕೂರಿನಿಂದ 24 ಕಿಲೋ ಮೀಟರ್ ದೂರದಲ್ಲಿರುವ ಪವಿತ್ರ ಪುಣ್ಯಕ್ಷೇತ್ರ ಹೆಬ್ಬೂರು. ಈ ಊರಿಗೆ ಹಲವು ಶತಮಾನಗಳ ಇತಿಹಾಸವಿದೆ. ಇಲ್ಲಿ 1719ರಲ್ಲಿ ದೊಡ್ಡ ಕೆರೆ ನಿರ್ಮಾಣವಾದ ಬಗ್ಗೆ ಐತಿಹಾಸಿಕ ದಾಖಲೆಗಳಿವೆ.

ಈ ಊರಿನಲ್ಲಿ 16 -17ನೇ ಶತಮಾನದಲ್ಲಿ ನಿರ್ಮಿಸಲಾದ ಹಲವು ಪುರಾತನ ದೇವಾಲಯವಿದೆ. ಶೃಂಗೇರಿ ದಕ್ಷಿಣಾಮ್ನೇಯ ಶಂಕರ ಮಠಕ್ಕೆ ಸೇರಿದ ಕೋದಂಡಾಶ್ರಮವಿದೆ. ಈ ಕ್ಷೇತ್ರದಲ್ಲಿ ಮಹಾಮೇರು ಶ್ರೀಚಕ್ರದೇವಾಲಯ ಅಥವಾ ಕಾಮಾಕ್ಷಿ ದೇಗುಲವಿದೆ.

ಆಮೆಯಾಕಾರದ ಅಂದರೆ ಕೂರ್ಮಪೀಠದ ಮೇಲೆ ಶ್ರೀಚಕ್ರದ ಆಕಾರದಲ್ಲೇ ದೇವಾಲಯ ನಿರ್ಮಿಸಲಾಗಿದೆ. ಪ್ರವೇಶದ್ವಾರದ ಬಳಿ ಇರುವ ಮೆಟ್ಟಿಲುಗಳ ಮೇಲೆ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ ಎಂದು ಬರೆಯಲಾಗಿದ್ದು, ದೇವಾಲಯಕ್ಕೆ ಬರುವ ಭಕ್ತರು ಅರಿಷಡ್ವರ್ಗಗಳನ್ನು ಮೆಟ್ಟಿ ನಿಲ್ಲಬೇಕು ಎಂಬ ಸಂದೇಶವನ್ನು ಸಾರುತ್ತದೆ.

Hebbur kamakshi temple, tumkur, kunigalಪ್ರಧಾನ ಗರ್ಭಗೃಹದಲ್ಲಿ ಕಾಮಾಕ್ಷಿ ಅಮ್ಮನವರ ಸುಂದರ ಕೃಷ್ಣಶಿಲೆಯ ಮೂರ್ತಿಯಿದೆ. ಕೂರ್ಮಪೀಠದ ದೇವಾಲಯದ ಪಟ್ಟಿಕೆಗಳ ಮೇಲೆ ಆನೆ, ಹಸು, ಕುದುರೆ ಇತ್ಯಾದಿ ಉಬ್ಬುಶಿಲ್ಪಗಳಿವೆ. ಭಿತ್ತಿಗಳಲ್ಲಿ ದಕ್ಷಿಣಾಮೂರ್ತಿಯೇ ಮೊದಲಾದ ಕೃಷ್ಣಶಿಲೆಯ ವಿಗ್ರಹಗಳನ್ನು ಅಳವಡಿಸಲಾಗಿದೆ.

ದೇವಾಲಯ ಸಂಪೂರ್ಣವಾಗಿ ಶ್ರೀಚಕ್ರದ ರೂಪದಲ್ಲಿದೆ. ವಿಶಾಲವಾದ ಪ್ರಾಕಾರದಲ್ಲಿ ಆದಿ ವಂದಿಪ ಗಣಪತಿ, ಶ್ರೀಶಂಕರಾಚಾರ್ಯ, ಶ್ರೀ ಸತ್ಯನಾರಾಯಣ, ಲಕ್ಷ್ಮೀನಾರಾಯಣನ ಗುಡಿಗಳಿವೆ. ಸಮೀಪದಲ್ಲಿ ವರದರಾಜ ದೇವಾಲಯವಿದೆ.

    

ಮುಖಪುಟ /ನಮ್ಮ ದೇವಾಲಯಗಳು