ಮುಖಪುಟ /ನಮ್ಮ ದೇವಾಲಯಗಳು  

ಹೊಳಲು ಯೋಗಾ ನರಸಿಂಹಸ್ವಾಮಿ

*ಟಿ.ವಿ.ನಟರಾಜ ಪಂಡಿತ್

Hassan Holalu yoga narasimha templeಶಿಲ್ಪಕಲೆಗಳ ನಾಡು ಹಾಸನ ಜಿಲ್ಲೆಯಲ್ಲಿ ಹಲವು ಮನೋಹರ ಹಾಗೂ ವಾಸ್ತು ವೈಭವದಿಂದ ಕೂಡಿದ ದೇವಾಲಯಗಳಿವೆ. ಈ ಪೈಕಿ ಹಲವು ದೇವಾಲಯಗಳು ಅವಸಾನದ ಅಂಚಿನಲ್ಲಿವೆ ಎಂಬುದು ನಿಜಕ್ಕೂ ದುರ್ದೈವದ ಸಂಗತಿ.

ಇಂಥ ಒಂದು ಮನೋಹರ ದೇವಾಲಯ ಶಾಂತಿ ಗ್ರಾಮದ ಬಳಿ ಇರುವ  ದುದ್ದ ಹೋಬಳಿಯ ಹೊಳಲು ಗ್ರಾಮದ ಶ್ರೀ ಯೋಗಾನರಸಿಂಹ ದೇವಸ್ಥಾನ.ಕಳೆದ 45 ವರ್ಷಗಳಿಂದಲೂ ಪೂಜೆಯೂ ಇಲ್ಲದೆ, ಸ್ಥಳೀಯರ ಹಾಗೂ ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಈ ದೇವಾಲಯದ ಜೀರ್ಣೋದ್ಧಾರಕ್ಕೆ ಈಗ ಚಾಲನೆ ದೊರೆತಿದೆ.

ರಾಷ್ಟ್ರಗೌರವ ಸಂರಕ್ಷಣಾ ಪರಿಷತ್ ಹಾಸನ ಘಟಕ ಸುಂದರವಾದ ಯೋಗಾನರಸಿಂಹನ ವಿಗ್ರಹವಿರುವ ಈ ಪುರಾತನ ದೇವಾಲಯದ ಸಂರಕ್ಷಣೆಗೆ ಸ್ಥಳೀಯರಲ್ಲಿ ಜನಜಾಗೃತಿ ಉಂಟು ಮಾಡಿ, 45 ವರ್ಷಗಳ ಬಳಿಕ ಸ್ಥಳೀಯರಿಂದಲೇ ದೇವಾಲಯ ಶುಚಿಗೊಳಿಸಿ, ನಿತ್ಯ ಪೂಜೆ ನಡೆಯುವಂತೆ ಮಾಡಿದೆ.

ಸ್ಥಳೀಯರು ತಮ್ಮೂರಿನ ದೇವಾಲಯ ಸಂರಕ್ಷಣೆಗೆ ಮುಂದಾಗಿ ಸುತ್ತಲೂ ಬೆಳೆದಿದ್ದ ಕಾಡು ಗಿಡಗಂಟಿಗಳನ್ನು ಕಿತ್ತು ಪ್ರಾಕಾರ ಶುದ್ಧಗೊಳಿಸಿದ್ದಾರೆ.  

ಎತ್ತರವಾದ ದಿಬ್ಬದ ಮೇಲಿರುವ ಈ ದೇವಾಲಯದ ಭಿತ್ತಿಗಳಲ್ಲಿ ಅಂಥ ವಿಶೇಷವಾದ ಕೆತ್ತನೆಗಳೇನೂ ಇಲ್ಲ. ಆದರೆ, Hassan Holalu yoga narasimha templeಗರ್ಭಗೃಹದ ಹಿಂಭಾಗದ ಕೆತ್ತನೆಗಳಲ್ಲಿ ಸುಂದರ ಕೆತ್ತನೆಗಳಿವೆ. ಗರ್ಭಗೃಹದಲ್ಲಿರುವ ಮೂಲ ವಿಗ್ರಹ ಒಟ್ಟು 8 ಅಡಿ ಎತ್ತರವಿದ್ದು, 6 ಅಡಿಯ ವಿಗ್ರಹವನ್ನು ಎರಡಡಿ ಪಾಣಿ ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ.

ಪ್ರಭಾವಳಿಯಲ್ಲಿ ದಶಾವತಾರದ ಕೆತ್ತನೆಗಳಿವೆ. ನರಸಿಂಹದೇವರ ಕೈಗಳಲ್ಲಿರುವ ಉಗುರುಗಳನ್ನು ಸಹ ಶಿಲ್ಪಿ ಅತ್ಯಂತ ಸೂಕ್ಷ್ಮವಾಗಿ ಕಡೆದಿದ್ದಾನೆ. ಕಿರೀಟದಲ್ಲಿರುವ ಸೂಕ್ಷ್ಮ ಕೆತ್ತನೆಯಂತೂ ಎಲ್ಲರನ್ನೂ ನಿಬ್ಬೆರಗುಗೊಳಿಸುತ್ತದೆ.

ಹೊಯ್ಸಳರ ಕಾಲದ ಇಂಥ ಪುರಾತನ ದೇವಾಲಯಗಳ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದೆ.

ಮುಖಪುಟ /ನಮ್ಮ ದೇವಾಲಯಗಳು