ಮುಖಪುಟ /ನಮ್ಮದೇವಾಲಯಗಳು   

ಲಕ್ಷ್ಮೀನಾರಾಯಣ ಕ್ಷೇತ್ರ ಹೊಸಹೊಳಲು
 

*ಟಿ.ಎಂ. ಸತೀಶ್

Hosaholalu temple,  ಹೊಸಹೊಳಲು ದೇವಾಲಯ, kannadaratna.com, ಕನ್ನಡರತ್ನ.ಕಾಂ, ಚಿತ್ರಕೃಪೆ ಮಂಡ್ಯ ಜಿಲ್ಲೆಯ ಅಧಿಕೃತ ವೆಬ್ ತಾಣಮಂಡ್ಯ ಜಿಲ್ಲೆ ಕೆ.ಆರ್. ಪೇಟೆಯಿಂದ ಒಂದೂವರೆ ಕಿಲೋ ಮೀಟರ್ ದೂರದಲ್ಲಿರುವ ಲಕ್ಷ್ಮೀನಾರಾಯಣ ಕ್ಷೇತ್ರವೇ ಹೊಸಹೊಳಲು. ಇಲ್ಲಿ ಊರ ಮಧ್ಯದಲ್ಲಿ ಹೊಯ್ಸಳರ ಕಾಲದ ಭವ್ಯವಾದ ದೇವಾಲಯವಿದೆ.

ಈ ದೇವಾಲಯ ಬೇಲೂರು, ಹಳೆಬೀಡು, ನುಗ್ಗೇಹಳ್ಳಿ, ಬಸರಾಳು, ಸೋಮನಾಥಪುರ ದೇವಾಲಯ ಮಾದರಿಯಲ್ಲೇ ಇದ್ದು, ಸುಂದರ ಹಾಗೂ ಸೂಕ್ಷ್ಮ ಕೆತ್ತನೆಗಳಿಂದ ಕೂಡಿದೆ.

ಹೊಯ್ಸಳ ಶೈಲಿಯ ಈ ದೇವಾಲಯವೂ ನಕ್ಷತ್ರಾಕಾರದ ಜಗಲಿಯ ಮೇಲಿದೆ. ದೇವಾಲಯದ ಹೊರ ಭಿತ್ತಿಯ ಪಟ್ಟಿಕೆಗಳಲ್ಲಿರುವ ಸಾಹಸಮಯವಾದ ಕೀರ್ತಿಮುಖಗಳು, ಪೌರಾಣಿಕ ಕಥಾ ಶಿಲ್ಪಗಳು, ಚಿತ್ರಪಟ್ಟಿಕೆಗಳಾದ, ಹಂಸ, ಮಕರ, ಬಳ್ಳಿ, ಆನೆ, ಕುದುರೆಗಳು ಮನಮೋಹಕವಾಗಿವೆ.

ಸೋಮನಾಥಪುರದ ದೇವಾಲಯ ಮಾದರಿಯಲ್ಲಿಯೇ ಇರುವ ಈ ದೇಗುಲ ಸಹ ತ್ರಿಕೂಟಾಚಲವೇ. ದೇವಾಲಯದಲ್ಲಿ ಮೂರು ಗರ್ಭಗೃಹಗಳಿವೆ. ಪ್ರಧಾನ ಗರ್ಭಗೃಹದ ಮುಂದೆ ಸುಕನಾಸಿ ಹಾಗೂ  ೫ ಅಂತಸ್ತಿನ ಶಿಖರವಿದೆ.  ಈ ಗರ್ಭಗೃಹದ ಹೊರಗೋಡೆಗಳ ಮೂರೂ ಕಡೆ ಅರೆಮಂಟಪಗಳಿವೆ. ಅವುಗಳ ಮೇಲ್ಭಾಗದಲ್ಲಿ ಅರೆಗೋಪುರಗಳೂ ಇವೆ.

Hosaholalu temple,  ಹೊಸಹೊಳಲು ದೇವಾಲಯ, kannadaratna.com, ಕನ್ನಡರತ್ನ.ಕಾಂ, ಚಿತ್ರಕೃಪೆ ಮಂಡ್ಯ ಜಿಲ್ಲೆಯ ಅಧಿಕೃತ ವೆಬ್ ತಾಣದೇವಾಲಯದ  ಭಿತ್ತಿಗಳಲ್ಲಿ ರಾಮಾಯಣ, ಭಾರತ, ಭಾಗವತ ಹಾಗೂ ನರಸಿಂಹಾವತಾರದ ಶಿಲ್ಪ ಕಥಾನಕಗಳಿವೆ. ಯೋಗ ಮುದ್ರೆಯಲ್ಲಿರುವ ಮಾಧವ, ಆರೋಗ್ಯ ದೇವತೆ ಧನ್ವಂತರಿ, ನೃತ್ಯ ಭಂಗಿಯಲ್ಲಿರುವ ಸರಸ್ವತಿ, ಕೊಳದಲ್ಲಿ ಧುಮುಕಿ ಹಾವಿನ ಗರ್ವಭಂಗ ಮಾಡಿ, ಹಾವಿನ ಹೆಡೆಯ ಮೇಲೇ ನಿಂತು ನರ್ತಿಸಿದ ಕೃಷ್ಣನ ಕಾಳಿಂಗಮರ್ದನ ಮೂರ್ತಿ ಹಾಗೂ ಸುಂದರ ವಸ್ತ್ರ ವಿನ್ಯಾಸವುಳ್ಳ ಶಿಲಾ ಬಾಲಕಿಯರ ಕೆತ್ತನೆಗಳು ನಯನ ಮನೋಹರವಾಗಿವೆ.

ಭುವನೇಶ್ವರಿಗಳಲ್ಲಿ ಹಾಗೂ ಛಾವಣಿಗಳಲ್ಲಿರುವ ಕೆತ್ತನೆಗಳು ಆಕರ್ಷಕವಾಗಿವೆ. ದೇವಾಲಯದ ಮಧ್ಯ ಭಾಗದಲ್ಲಿರುವ ಗರ್ಭಗೃಹದಲ್ಲಿ ಶ್ರೀಲಕ್ಷ್ಮೀನಾರಾಯಣ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.  

ಬಲ ಭಾಗದಲ್ಲಿರುವ ಗರ್ಭಗುಡಿಯಲ್ಲಿ ಲಕ್ಷ್ಮೀನರಸಿಂಹ ಮೂರ್ತಿ ಇದೆ. ಎಡಭಾಗದ ಗರ್ಭಗೃಹದಲ್ಲಿ ವೇಣುಗೋಪಾಲ ಮೂರ್ತಿ ಇತ್ತೆಂದು ಹೇಳಲಾಗುತ್ತದೆ. ಆದರೆ ಈಗ ಅಲ್ಲಿ ಶಿಲಾ ಮೂರ್ತಿ ಇಲ್ಲ. ಬದಲಾಗಿ ಉತ್ಸವ ಮೂರ್ತಿ ಇಡಲಾಗಿದೆ.

ಊರಿನ ಈಶಾನ್ಯ ಮೂಲೆಯಲ್ಲಿ ಹರಿಹರೇಶ್ವರ ದೇವಾಲಯವಿದೆ. ಇಲ್ಲಿನ ಹರಿಹರೇಶ್ವರ ಮೂರ್ತಿ ಸುಂದರವಾಗಿದೆ.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮದೇವಾಲಯಗಳು