ಮುಖಪುಟ /ನಮ್ಮದೇವಾಲಯಗಳು   

ಜಂಬಿಟ್ಟಿಗೆಯ ನೀಲಕಂಠೇಶ್ವರ ದೇಗುಲ
ಜೀವನಸತ್ಯ ಸಾರುವ ಶಿಲ್ಪಕಲಾಶ್ರೀಮಂತಿಕೆಯ ದೇವಾಲಯ

shivaparvatiಕಾಫಿಯ ಕಣಜ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿರುವ ಹರಿಹರಪುರ ಸಮೀಪ ಇರುವ ಗ್ರಾಮವೇ ಜಂಬಿಟ್ಟಿಗೆ. ಜಂಬಿಟ್ಟಿಗೆ ಎಂದರೆ ಕೆಂಪುಬಣ್ಣದ ಮಣ್ಣು, ಮುರಕಲ್ಲು ಎಂದರ್ಥ. ಹಿಂದೆ ಮನೆಗಳನ್ನು ಕಟ್ಟಲು ಈ ಮಣ್ಣಿನಿಂದ ಇಟ್ಟಿಗೆಯನ್ನು ಮಾಡುತ್ತಿದ್ದರು. ಹೀಗಾಗೇ ಇದು ಜಂಬಿಟ್ಟಿಗೆ ಎಂದು ಖ್ಯಾತವಾಗಿದೆ. ಕೇರಳ, ಕರಾವಳಿ ಕರ್ನಾಟಕ ಹಾಗೂ ಚಿಕ್ಕಮಗಳೂರಿನ ಹಲವೆಡೆ ಇಂಥ ಮಣ್ಣಿನ ಪ್ರದೇಶವಿದ್ದು, ಇದು ಕೂಡ ಒಂದೆಂದು ಹೇಳುತ್ತಾರೆ.

ತುಂಗಾನದಿ ತಟದಲ್ಲಿರುವ ಈ ಊರಿನಲ್ಲಿರುವ ನೀಲಕಂಠೇಶ್ವರ ದೇವಾಲಯ ಪ್ರಮುಖವಾದ್ದು. ಕಲಾಶ್ರೀಮಂತಿಕೆಯಿಂದ ಹಾಗೂ ಜೀವನ ಸತ್ಯವನ್ನು ತಿಳಿಸುವ ಹಲವು ವಿಶಿಷ್ಟ ಶಿಲ್ಪಗಳನ್ನೊಳಗೊಂಡ ಈ ದೇವಾಲಯ ಸ್ಥಳೀಯರಿಗಷ್ಟೇ ಪರಿಚಿತವಾಗಿದ್ದು, ಹಲವ ಗಮನಕ್ಕೇ ಬಾರದೆ ನಿರ್ಲಕ್ಷ್ಯಕ್ಕೊಳಗಾಗಿದೆ.

೧೬೫೪ರ ಸುಮಾರಿನಲ್ಲಿ ತೀರ್ಥಹಳ್ಳಿ ತಾಲೂಕು ಆರಗದ ಶಂಕರನಾರಾಯಣ ಹಾಗೂ ಮಲ್ಲಿಕಾರ್ಜುನ ಎಂಬುವವರು ಶಿಲ್ಪಾಲಂಕರಣಗಳಿಂದ ಶ್ರೀಮಂತವಾದ ಈ ದೇವಾಲಯವನ್ನು ತುಸು ಕೆಂಪು ಮಿಶ್ರಿತ ಕಲ್ಲುಗಳಿಂದ ಕಟ್ಟಿಸಿದರು ಎಂದು ತಿಳಿದು ಬರುತ್ತದೆ. ದೇಗುಲದ ಮೇಲಿರುವ ಗೋಪುರ ಕಲಾತ್ಮಕವಾಗಿದೆ.

ಹೊರಭಿತ್ತಿಗಳಲ್ಲಿ ಮಹಾಭಾರತ, ರಾಮಾಯಣ ಹಾಗೂ ಭಾಗವತದ ಹಲವು ದೃಶ್ಯಾವಳಿಗಳಿವೆ. ಜೊತೆಗೆ ವಯಸ್ಸಾದ ತಾಯಿಯ ತಲೆಯ ಮೇಲೆ ಭಾರದ ಗಂಟು ಹೊರಿಸಿ ನಡೆಸಿಕೊಂಡು ಬರುವ ಮಗ, ತನ್ನ ಹೆಂಡತಿಯನ್ನು ಪ್ರೀತಿಯಿಂದ ಕುದುರೆಯ ಮೇಲೆ ಕೂರಿಸಿಕೊಂಡು ಕರೆದೊಯ್ಯುವ ಮೂಲಕ ಹೆತ್ತವ್ವಳನ್ನು ಕಡೆಗಣಿಸುವ ಜೀವನ ಸತ್ಯ ಸಾರುವ ಉಬ್ಬು ಶಿಲ್ಪಗಳನ್ನೂ ಒಳಗೊಂಡ ದೇವಾಲಯವನ್ನು ಕಳಸದ ಕಾಳಣ್ಣ ಎಂಬ ಶಿಲ್ಪಿ ಕಟ್ಟಿದನೆಂಬ ಉಲ್ಲೇಖವಿದೆ.

ಹಲವು ಹಂತಗಳ ಪಟ್ಟಿಕೆಗಳನ್ನು ಒಳಗೊಂಡ ದೇವಾಲಯದ ಒಂದೊಂದು ಪಟ್ಟಿಕೆಗಳಲ್ಲೂ ಸುಂದರ ಕೆತ್ತನೆಗಳಿವೆ. ಆಧಾರ ಸ್ತಂಭಗಳಲ್ಲಿ ಕೂಡ ಸುಂದರ ಶಿಲ್ಪಗಳಿವೆ. ಈ ಪೈಕಿ ರಥದಲ್ಲಿ ನಿಂತು ಯುದ್ಧ ಮಾಡುತ್ತಿರುವ ಅರ್ಜುನ - ಬಭ್ರುವಾಹನಗಂಗಾವತರಣದ ಭಗೀರಥ ಪ್ರಯತ್ನ, ಸೀತಾಮಾತೆಯಿಂದ ಚೂಡಾಮಣಿ ಪಡೆಯುತ್ತಿರುವ ಹನುಮಂತ, ಸೈಕತ ಲಿಂಗ ಪೂಜಿಸುತ್ತಿರುವ ಶ್ರೀರಾಮಚಂದ್ರ, ಭೂಸ್ಪರ್ಶ ಮಾಡಿದ ಶಿವನಾತ್ಮಲಿಂಗ, ಸ್ವರ್ಗದಲ್ಲಿ ಪುಣ್ಯವಂತರಿಗೆ ದೊರಕುವ ಸುಖಭೋಗ, ಭೂಮಿಯಲ್ಲಿ ಅನ್ಯಾಯ ಮಾಡಿದವರಿಗೆ ನರಕದಲ್ಲಿ ನೀಡಲಾಗುವ ಶಿಕ್ಷೆ ಮೊದಲಾದ ನೂರಾರು ಉಬ್ಬಶಿಲ್ಪಗಳು ಅಪರೂಪವಾದವುಗಳಾಗಿವೆ.

ದೇವಾಲಯದಲ್ಲಿ ಗಣಪತಿ, ದುರ್ಗೆ, ಸೂರ್ಯಭಗವಾನ್, ಗೋಪಾಲಕೃಷ್ಣನ ವಿಗ್ರಹಗಳನ್ನೂ ಪ್ರತಿಷ್ಠಾಪಿಸಲಾಗಿದೆ. ಪ್ರಧಾನ ಗರ್ಭಗೃಹದಲ್ಲಿ ನೀಲಕಂಠೇಶ್ವರನ ಲಿಂಗವಿದೆ.  ನಿತ್ಯ ಇಲ್ಲಿ ಪೂಜೆ ನಡೆಯುತ್ತದೆ. ಶೈವಾಗಮ ಪದ್ಧತಿಯಂತೆ ಪೂಜೆಗಳು ನಡೆಯುತ್ತವೆ.   

ಮುಖಪುಟ /ನಮ್ಮದೇವಾಲಯಗಳು