ಮುಖಪುಟ /ನಮ್ಮದೇವಾಲಯಗಳು  

ಜಾವಗಲ್ ನ ಸುಂದರ ಶ್ರೀಲಕ್ಷ್ಮೀನರಸಿಂಹ ದೇವಾಲಯ

Javagal Lakshminarasimha templeಶಿಲ್ಪಕಲೆಗಳ ತವರು ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನಲ್ಲಿರುವ ಊರು ಜಾವಗಲ್. ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಜಾವಗಲ್ ಶ್ರೀನಾಥ್ ರಿಂದಾಗಿ ಈ ಊರು ಜಗತ್ತಿನಾದ್ಯಂತ ಇರುವ ಇಂದಿನ ಪೀಳಿಗೆಗೂ ಪರಿಚಿತವಾಗಿದೆ.

ಜಾವಗಲ್ ಇಂದು ನಿನ್ನೆಯ ಊರಲ್ಲ. ಇದಕ್ಕೆ ಹಲವು ಶತಮಾನಗಳ ಇತಿಹಾಸವೇ ಇದೆ. ಹೊಯ್ಸಳರ ಕಾಲದಲ್ಲಿ ಪ್ರಮುಖ ತಾಣವಾಗಿ ಈ ಊರು ಮೆರೆದದ್ದನ್ನು ಇತಿಹಾಸ ಸಾರುತ್ತದೆ. ದೇವಾಲಯಗಳ ತವರೂ ಆದ ಈ ಊರಿನಲ್ಲಿ ಹೊಯ್ಸಳರ ಕಾಲದ ಶಿಲ್ಪಕಲಾ ಪ್ರಭುತ್ವವಿರುವ ಸುಂದರ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯವಿದೆ. ಬೇಲೂರಿನ ಚನ್ನಕೇಶವ ದೇವಾಲಯ ನಿರ್ಮಾಣಕ್ಕೂ ಮೊದಲೇ ಇಲ್ಲಿ ದೇವಾಲಯ ಕಟ್ಟಲಾಗಿತ್ತು ಎಂಬುದಕ್ಕೆ ಬೇಲೂರಿನ ದೇವಾಲಯದಲ್ಲಿರುವ ಶಿಲಾಬರಹ ಸಾಕ್ಷಿಯಾಗಿದೆ ಎಂದು ತಜ್ಞರು ಹೇಳುತ್ತಾರೆ.

Javagal Temple, ಜಾವಗಲ್ ಲಕ್ಷ್ಮೀ ನರಸಿಂಹ ದೇವಾಲಯಈ ದೇವಾಲಯ ತ್ರಿಕೂಟಾಚಲ ಎಂದೇ ಖ್ಯಾತವಾಗಿದೆ, ಮೂರು ಗರ್ಭಗೃಹ, ಮೂರು ಗೋಪುರಗಳಿರುವ ಈ ದೇವಾಲಯದ ವಿನ್ಯಾಸ ಮನಮೋಹಕವಾಗಿದೆ. ಹೊರ ಗೋಡೆಗಳಲ್ಲಿ ಬೇಲೂರು, ಹಳೇಬೀಡಿನಂತೆಯೇ ಭವ್ಯವಾದ ಶಿಲ್ಪಕಲಾ ಶ್ರೀಮಂತಿಕೆಯೇ ಅಡಗಿದೆ. ಪಟ್ಟಿಕೆಗಳಲ್ಲಿ ಆನೆ, ಕುದುರೆ, ಮಕರ, ಹಂಸ, ಲತಾ ಸುರುಳಿಗಳು ಶಿಲೆಯಲ್ಲಿ ಕಲೆಯಾಗಿ ಅರಳಿ ನಿಂತಿವೆ. ಎಲ್ಲಕ್ಕಿಂತ ಮಿಗಿಲಾಗಿ ಲಕ್ಷ್ಮೀನರಸಿಂಹನ ಈ ದೇವಾಲಯ ಬಲಭಾಗದ ಪಟ್ಟಿಕೆಯಲ್ಲಿ ನರಸಿಂಹಾವತಾರದ ಸುಂದರ ಕೆತ್ತನೆಗಳಿವೆ. ನರಸಿಂಹನ ಅವತಾರದ ಪೂರ್ಣ ಕತೆಯನ್ನೇ ಈ ಸುಂದರ ಶಿಲ್ಪಗಳು ಸಾರುತ್ತವೆ. (ಮೇಲಿನ ಚಿತ್ರದ ಮೇಲೆ ಕ್ಲಿಕ್ ಮಾಡಿ)

ಭಿತ್ತಿಗಳಲ್ಲಿ 137 ದೊಡ್ಡ ಹಾಗೂ ಸುಂದರ ಶಿಲ್ಪಗಳಿದ್ದು ಇವುಗಳ ಪೈಕಿ 77 ಸ್ತ್ರೀ ಪ್ರತಿಮೆಗಳಾಗಿವೆ. ಭಿತ್ತಿಗಳಲ್ಲಿ ಶಿಲ್ಪಿ ಭಾಗವತ, ರಾಮಾಯಣದ ಹಲವು ಪ್ರಸಂಗಗಳನ್ನು ಅನಾವರಣ ಮಾಡುತ್ತದೆ ಜೊತೆಗೆ ಮಹಿಷಾಸುರ ಮರ್ಧಿನಿ, ಆದಿಮೂರ್ತಿ, ಇಂದ್ರ, Javagal Ganeshaಗಣಪತಿಯ ಮೂರ್ತಿಗಳೂ ಮನೋಹರವಾಗಿವೆ. ಪ್ರಭಾವಳಿಯ ನಡುವೆ, ವಾದ್ಯಗಾರರ ಜೊತೆ ನಾಟ್ಯಭಂಗಿಯಲ್ಲಿರುವ ಗಣಪನ ಉಬ್ಬು ಶಿಲ್ಪವನ್ನು ನೋಡಲು ಎರಡು ಕಣ್ಣು ಸಾಲದು. ಈ ಸುಂದರ ದೇವಾಲಯವನ್ನು 13ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಇತಿಹಾಸ ಹೇಳುತ್ತದೆ.

ಪ್ರಧಾನ ಗರ್ಭಗೃಹದಲ್ಲಿ ವಿಷ್ಣುವಿನ ಭವ್ಯ ಮೂರ್ತಿ ಇದೆ. ವಿಷ್ಣು ಚತುರ್ವಿಂಶತಿ ಲಕ್ಷಣದ ರೀತ್ಯ ಇಲ್ಲಿರುವ ವಿಷ್ಣು ಶ್ರೀಧರ ಸ್ವರೂಪಿ. ವ್ಯಾಘ್ರ ಹಸ್ತವನ್ನು ಹೊಂದಿರುವ ಈ ವಿಷ್ಣುಮೂರ್ತಿಯ ಕೈಯಲ್ಲಿ ಆಯುಧವೂ ಇರುವುದರಿಂದ ವೀರ ನಾರಾಯಣ ಎಂಬ ಹೆಸರು ಇದೆ.

ತ್ರಿಕೂಟಾಚಲಗಳ ಪೈಕಿ ಉತ್ತರ ಭಾಗದ ಗರ್ಭಗೃಹದಲ್ಲಿ ಲಕ್ಷ್ಮೀನರಸಿಂಹ ಮೂರ್ತಿಯೂ, ದಕ್ಷಿಣ ಭಾಗದ ಗರ್ಭಗೃಹದಲ್ಲಿ ವೇಣುಗೋಪಾಲ ಸ್ವಾಮಿಯ ಮೂರ್ತಿಯೂ ಇದೆ. ಕಲ್ಪವೃಕ್ಷದ ಕೆಳಗೆ ಕೊಳಲನು ಊದುತ್ತಿರುವ ಶ್ರೀಕೃಷ್ಣನ ಮೂರ್ತಿ ಅತ್ಯಂತ ಸುಂದರ ಹಾಗೂ ಮನಮೋಹಕವಾಗಿದೆ. ಈ ಮೂರೂ ವಿಗ್ರಹಗಳು ಐದು ಅಡಿ ಎತ್ತರವಿದ್ದು ಭವ್ಯವಾಗಿವೆ.

ಪ್ರಧಾನ ಗರ್ಭಗೃಹದ ಮುಂದೆ ಸುಕನಾಸಿ ಇದೆ. ಮೂರೂ ಗರ್ಭಗೃಹಗಳಿಗೆ ಸೇರಿದಂತೆ ದುಂಡು ತಿರುಗಣಿ ಕಂಬಗಳಿರುವ ನವರಂಗವಿದೆ. ದೇವಾಲಯದಲ್ಲಿ ಸೂಕ್ಷ್ಮ ಕೆತ್ತನೆಗಳಿರುವ ದ್ವಾರಬಂಧಗಳು, ಸುಂದರ ಶಿಲ್ಪಕಲೆಗಳಿಂದ ಕೂಡಿದ Javagal Lakshmi Narasimhaಭುವನೇಶ್ವರಿ, ಲಲಾಟ ಬಿಂಬಗಳು ಗಮನ ಸೆಳೆಯುತ್ತವೆ.

ನವರಂಗದ ಪ್ರವೇಶದ್ವಾರದಲ್ಲಿ ದ್ವಾರಪಾಲಕರ ವಿಗ್ರಹಗಳಿದ್ದು, ಇದನ್ನು ನಂತರದ ದಿನಗಳಲ್ಲಿ ಅಳವಡಿಸಲಾಗಿದೆ ಎಂದು ಇತಿಹಾಸಜ್ಞರು ಅಭಿಪ್ರಾಯಪಡುತ್ತಾರೆ. ಮುಖ ಮಂಟಪಕ್ಕೆ ಹೊಂದಿಕೊಂಡತೆ ನೀಳವಾದ ಗ್ರಾನೈಟ್ ಕಂಬಗಳಿಂದ ಕೂಡಿದ ಪಾತಾಳಾಂಕಣವಿದೆ. ಪಕ್ಕದಲ್ಲೇ 35 ಅಡಿ ಎತ್ತರದ ದೀಪಸ್ತಂಭವಿದೆ. ದೇವಾಲಯದ ಮೇಲ್ಛಾವಣಿಯಲ್ಲಿ ಪ್ರಧಾನ ಗರ್ಭಗೃಹಕ್ಕೆ ನಾಲ್ಕು ಹಂತಗಳ ಭವ್ಯ ಶಿಖರವಿದೆ. ಈ ಗೋಪುರಗಳ ಹಂತ ಹಂತದಲ್ಲೂ ಸೂಕ್ಷ್ಮ ಕೆತ್ತನೆಗಳು ರಾರಾಜಿಸುತ್ತಿವೆ.

ದೇವಾಲಯದ ಆವರಣದಲ್ಲಿ ಲಕ್ಷ್ಮೀದೇವಿಯ ಗುಡಿಯೂ ಇದೆ. ಬೃಹತ್ ಆದ ಈ ಧನದೇವತೆಯ ವಿಗ್ರಹದ ಕೆತ್ತನೆಯಂತೂ ನಯನ ಮನೋಹರವಾಗಿದೆ.  ವಿಜಯನಗರ ಶೈಲಿಯಲ್ಲಿ ಈ ಮಹಾಲಕ್ಷ್ಮೀ ಮೂರ್ತಿಯಿದೆ  ಎಂದು ಇತಿಹಾಸಜ್ಞರು ಹೇಳುತ್ತಾರೆ. ಪ್ರಭಾವಳಿಯಲ್ಲಿ ಹಾಗೂ ಕಿರೀಟದಲ್ಲಿನ ಸೂಕ್ಷ್ಮ ಕೆತ್ತನೆಗಳಂತೂ ಶಿಲ್ಪಿಯ ಕೌಶಲ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಇಷ್ಟು ಮನೋಹರವಾದ ಸುಂದರವಾದ ಲಕ್ಷ್ಮೀ ಮೂರ್ತಿಯನ್ನು ನಾನೆಲ್ಲೂ ಕಂಡಿಲ್ಲ ಎಂದು ಉದ್ಗರಿಸುವ ಯಾತ್ರಿಕರ ಸಂಖ್ಯೆಗೂ ಕಡಿಮೆ ಏನಿಲ್ಲ. ಲಕ್ಷ್ಮೀ ದೇವಾಲಯದ ಮುಂದಿರುವ ಕೋಣೆಯಲ್ಲಿ ದ್ವಾದಶ ಆಳ್ವಾರರುಗಳ ಶಿಲ್ಪಗಳಿವೆ. ಎಲ್ಲ ಹೊಯ್ಸಳ ದೇವಾಲಯಗಳಂತೆಯೇ ಈ ದೇವಾಲಯ ಕೂಡ ನಕ್ಷತ್ರಾಕಾರದ ಜಗಲಿಯ ಮೇಲಿದ್ದು ಅತ್ಯಂತ ಆಕರ್ಷಕವಾಗಿದೆ.

Javagal Lord Lakshmiಪ್ರತಿವರ್ಷ ವೈಶಾಖ ಮಾಸದಲ್ಲಿ ವೈಖಾನಸ ಆಗಮ ರೀತ್ಯ ರಥೋತ್ಸವ ನಡೆಯುತ್ತದೆ. ಏಳು ದಿನಗಳ ಕಾಲ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗುತ್ತವೆ. ವಾರ್ಷಿಕ ಜಾತ್ರಾ ಮಹೋತ್ಸವದ ಮೊದಲ ದಿನ ಹಗಲು ಪಂಚಾಮೃತ ಅಭಿಷೇಕ, ಸಂತರ್ಪಣೆ, ನಿತ್ಯೋತ್ಸವ, ರಾತ್ರಿ ಅಂಕುರಾರ್ಪಣ ನಡೆಯುತ್ತದೆ.

ಎರಡನೇ ದಿನ ಹಗಲು ನಿತ್ಯೋತ್ಸವ, ರಾತ್ರಿ ಧ್ವಜಾರೋಹಣ ನೆರವೇರುತ್ತದೆ. ಮೂರನೇ ದಿನ ನಿತ್ಯೋತ್ಸವ ಹಾಗೂ ರಾತ್ರಿ ಶೇಷವಾಹನೋತ್ಸವ ಇದ್ದರೆ, ನಾಲ್ಕನೇ ದಿನ ಹಗಲು ನಿತ್ಯೋತ್ಸವ ರಾತ್ರಿ ಚಂದ್ರಮಂಡಲೋತ್ಸವ ನಡೆಯುತ್ತದೆ.

ಐದನೇ ದಿನ ನರಸಿಂಹ ಜಯಂತ್ಯುತ್ಸವ, ರಾತ್ರಿ ಪ್ರಹ್ಲಾದ ಪರಿಪಾಲನೋತ್ಸವ, ಗರುಡೋತ್ಸವ, ಕಲ್ಯಾಣೋತ್ಸವ, ಗಜವಾಹನೋತ್ಸವ ನಡೆಯುತ್ತದೆ. ಆರನೇ ದಿನ ಸೂರ್ಯಮಂಡಲೋತ್ಸವ, ವಸಂತಸೇವೆ, ಕೃಷ್ಣ ಗಂಧೋತ್ಸವ, ಸಂತರ್ಪಣೆ, ರಾತ್ರಿ ಶಾಂತೋತ್ಸವ ಜರುಗುತ್ತದೆ ಜೊತೆಗೆ ಆಳ್ವಾರ್ ಅರ್ಚನೆ ಸೇವೆ, ಅಡ್ಡಪಲ್ಲಕ್ಕಿ ಉತ್ಸವಗಳೂ ವೈಭವದಿಂದ ಜರುಗುತ್ತವೆ.

ಆರು ಮತ್ತು ಏಳನೇ ದಿನ ಉಯ್ಯಲೋತ್ಸವ, ಅವಭೃತ ಸ್ನಾನ (ಒಕಳಿ) ಪಲ್ಲಕ್ಕಿ ಉತ್ಸವ, ಪ್ರಾಕಾರೋತ್ಸವ, ವಿಜಯೋತ್ಸವಗಳು ಜರುಗುತ್ತವೆ. ಲಕ್ಷ್ಮೀ ನರಸಿಂಹ ದೇವರ ಈ ವೈಭವದ ಜಾತ್ರಾ ಮಹೋತ್ಸವ ನೋಡಲು ರಾಜ್ಯದ ಮೂಲೆ ಮೂಲೆಗಳಿಂದಷ್ಟೇ ಅಲ್ಲದೆ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ.

ಕರ್ನಾಟಕ ಸರ್ಕಾರ ಅತ್ಯಂತ ಪುರಾತನವಾದ ಈ ದೇವಾಲಯವನ್ನು ಈಗ ಪುನರ್ ನಿರ್ಮಾಣ ಮಾಡಿದ್ದು, ದೇಗುಲ ತನ್ನ ಹಿಂದಿನ ಕಲಾ ವೈಭವಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಜೀರ್ಣೋದ್ಧಾರವಾಗಿದೆ.  

ಜಾವಗಲ್ ನಲ್ಲಿ ಗಂಗಾಧರೇಶ್ವರ ಹಾಗೂ ವೀರಭದ್ರ, ಬನಶಂಕರಿ ದೇವಾಲಯ ಹಾಗೂ  ಚಂದ್ರನಾಥ ಬಸದಿಯೂ ಇದೆ. 

ಮುಖಪುಟ /ನಮ್ಮದೇವಾಲಯಗಳು 

M.V.Shankaranarayan