ಮುಖಪುಟ /ನಮ್ಮ ದೇವಾಲಯಗಳು  

ಜಯನಗರ 4ನೇ ಬ್ಲಾಕ್ ನ ವಿನಾಯಕ ದೇವಾಲಯ

Jayanagara Ganesha, Bangalore, ಜಯನಗರ ಗಣೇಶಗಣಪತಿ ಆದಿ ವಂದಿಪ. ಗಣಪನಿಲ್ಲದ ಊರೇ ಇಲ್ಲ. ಬೆಂಗಳೂರಿನಲ್ಲಿ ಹಲವು ವಿಘ್ನೇಶ್ವರ ದೇವಾಲಯಗಳಿವೆ. ಈ ಪೈಕಿ ಜಯನಗರ ನಾಲ್ಕನೇ ಬ್ಲಾಕ್ ಪಶ್ಚಿಮದ 7ನೇ ಬಿ ಮೇನ್, ನಲ್ಲಿರುವ ಶ್ರೀವಿನಾಯಕ ಸ್ವಾಮಿ ದೇವಾಲಯ ಅತ್ಯಂತ ಪ್ರಮುಖವಾದದ್ದು.

ಶ್ರೀಮಂತರ ಬಡಾವಣೆ ಜಯನಗರದಲ್ಲಿರುವ ಈ ಗಣಪನನ್ನು ಕೂಡ ಭಕ್ತರು ಶ್ರೀಮಂತ ಗಣಪ ಎಂದೇ ಕರೆಯುತ್ತಾರೆ ಕಾರಣ ಭಕ್ತರು ಈ ದೇವರಿಗೆ ನೀಡಿರುವ ವಜ್ರ, ಸುವರ್ಣ ಕಾಣಿಕೆಗಳು ವಿನಾಯಕನನ್ನು ಶ್ರೀಮಂತಗೊಳಿಸಿವೆ.

ವಜ್ರ ಕಿರೀಟ, ವಜ್ರ ಕವಚ, ಚಿನ್ನದ ಕವಚ, ಚಿನ್ನದ ಕಿರೀಟಗಳ ಅಲಂಕಾರದಲ್ಲಿ ವಿನಾಯಕನ ಸೊಬಗನ್ನು ನೋಡಲು ಎರಡು ಕಣ್ಣುಗಳು ಸಾಲವು.  ವಿಶಾಲವಾದ ಪ್ರಾಕಾರವಿರುವ ದೇವಾಲಯದಲ್ಲಿರುವ ಗರ್ಭಗೃಹವನ್ನು ಬೆಳ್ಳಿಯ ತಗಡುಗಳಿಂದ ಅಲಂಕರಿಸಲಾಗಿದೆ. ಬಾಗಿಲವಾಡದಲ್ಲಿರುವ ಬೆಳ್ಳಿಯ ಅಲಂಕರಣಿಕೆಯಲ್ಲಿ ಗಣಪತಿ, ಶಿವಪಾರ್ವತಿ, ಲಕ್ಷ್ಮೀನಾರಾಯಣನ ಮೂರ್ತಿಗಳೂ ಇವೆ.

ಕಪ್ಪು ಗ್ರಾನೈಟ್ ಶಿಲೆಯಿಂದ ಅಲಂಕರಿಸಲಾಗಿರುವ ಈ ದೇವಾಲಯದಲ್ಲಿ ಸ್ವಚ್ಛತೆಗೆ ಆದ್ಯತೆ. ಎಲ್ಲ ದೇವಾಲಯಗಳಲ್ಲಿ ವರ್ಷಕ್ಕೆ ಒಂದು ದಿನ ಜಾತ್ರೆ ನಡೆದರೆ, ಇಲ್ಲಿ ನಿತ್ಯವೂ ಭಕ್ತರ ಜಾತ್ರೆಯೇ ನಡೆಯುತ್ತದೆ. ಕರ್ನಾಟಕ ವಷ್ಟೇ ಅಲ್ಲದೆ, ದೇಶದ ನಾನಾ ಮೂಲೆಗಳಿಂದ ಕೂಡ ಭಕ್ತರು ಇಲ್ಲಿಗೆ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ಬೆಂಗಳೂರಿಗೆ ಬಂದಾಗ ಈ ದೇವಾಲಯಕ್ಕೆ ಭೇಟಿ ನೀಡದೆ ಹೋಗುವುದೇ ಇಲ್ಲ. ಇದಕ್ಕೆ ಕಾರಣ ಈ ಗಣಪ ಬೇಡಿದ ವರನೀಡುವ ಕರುಣಾಸಾಗರ.

Jayanagara Ganesha, Bangalore, ಜಯನಗರ ಗಣೇಶಭಕ್ತಿಯಿಂದ ಬೇಡಿದರೆ ಬೇಡಿದ್ದನ್ನು ಕರುಣಿಸುತ್ತಾನೆಂದು ಭಕ್ತರು ನಂಬಿದ್ದಾರೆ. ತಮ್ಮ ಹರಕೆ ಈಡೇರಿಸಿದ ಭಗವಂತನಿಗೆ ನಾನಾ ವಿಧದ ವಸ್ತುಗಳನ್ನು ಕಾಣಿಕೆಯಾಗಿ ನೀಡಿ ತಮ್ಮ ಕೃತಜ್ಞತೆ ಸಮರ್ಪಿಸುತ್ತಾರೆ.

ಪ್ರತಿ ತಿಂಗಳು ಸಂಕಷ್ಟ ಹರ ಚತುರ್ಥಿಯ ದಿನ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ಚನ್ನವೀರ ದೇವರ ನೇತೃತ್ವದಲ್ಲಿ ಇಲ್ಲಿ ಪ್ರತಿ ನಿತ್ಯ ಪ್ರಾತಃಕಾಲದಲ್ಲಿ ಅಭಿಷೇಕ ನಡೆಯುತ್ತದೆ. ನಂತರ ದೇವರಿಗೆ ವಿವಿಧ ಅಲಂಕಾರ ಮಾಡಿದ ಬಳಿಕ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯುತ್ತದೆ.

ಗಣೇಶ ಚತುರ್ಥಿಯ ಸಂದರ್ಭದಲ್ಲಿ ಇಲ್ಲಿ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ.  8 ರಸ್ತೆಗಳು ಸೇರುವ ಅಪರೂಪದ ಸಂಗಮ ಸ್ಥಳದಲ್ಲಿ ಕಳೆದ 33ಗಳ ಹಿಂದೆ ಸ್ಥಾಪನೆಯಾದ ಈ ದೇವಾಲಯದ ರೂವಾರಿಗಳು ಪ್ರೊ.ಮುರುಗೇಂದ್ರಪ್ಪ, ಕರಿಬಸಪ್ಪ, ಬಿ. ಬಸವಯ್ಯ, ಸಣ್ಣಪ್ಪನವರು, ಸಾಂಬಯ್ಯ, ನಾರಾಯಣಶೆಟ್ಟಿ ಹಾಗೂ ಅನಂತಾಚಾರ್ ಸೇರಿದ ಹತ್ತೂ ಸಮಸ್ತರು.

ಈ ಎಲ್ಲರೂ ಸೇರಿ ಆಗಿನ ಬೆಂಗಳೂರು ನಗರ ಕಮಿಷನರ್ ಎನ್.ಲಕ್ಷ್ಮಣ್ ರಾವ್ ಅವರನ್ನು ಭೇಟಿ ಮಾಡಿ, ಈ ಜಾಗದಲ್ಲಿ ದೇವಾಲಯ ನಿರ್ಮಿಸಲು ಅನುಮತಿ ಪಡೆದು ಪುಟ್ಟ ದೇವಾಲಯ ನಿರ್ಮಿಸಿದರು. ಇಂದು ಭಕ್ತರ ಸಹಕಾರದಿಂದ ಭವ್ಯ ದೇವಾಲಯವೇ ನಿರ್ಮಾಣವಾಗುತ್ತಿದೆ. ದ್ರಾವಿಡ ಶೈಲಿಯ ರಾಜ ಗೋಪುರ ನಿರ್ಮಾಣ ಕಾರ್ಯವೂ ಭರದಿಂದ ಸಾಗಿದೆ. ಈ ಮಹತ್ಕಾರ್ಯಕ್ಕೆ ಭಕ್ತರು ಉದಾರ ಕಾಣಿಕೆ ನೀಡಬೇಕು ಎಂದು ಆಡಳಿತ ಮಂಡಳಿ ಕೋರುತ್ತದೆ. ಭಕ್ತರು ಕಾಣಿಕೆ ಸಮರ್ಪಿಸಲು ಜಯನಗರ ನಾಲ್ಕನೇ ಬ್ಲಾಕಿನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಪ್ರತ್ಯೇಕವಾದ ಖಾತೆ ತೆಗೆಯಲಾಗಿದೆ. ಖಾತೆ ಸಂಖ್ಯೆ 79679. ಈ ಖಾತೆಗೆ ಯಾವುದೇ ಭಕ್ತರು ನೇರವಾಗಿ ಹಣ ಪಾವತಿ ಮಾಡಬಹುದಾಗಿದೆ.

ಪ್ರಸ್ತುತ ಎಸ್. ಪ್ರಭಾಕರ್ ಅವರು ಶ್ರೀವಿನಾಯಕ ಸೇವಾ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಬಿ.ಎಲ್. ಚನ್ನೇಗೌಡ ಉಪಾಧ್ಯಕ್ಷರು, ಕೆ.ಎಚ್. ಶಾಂತಮೂರ್ತಿ ಗೌರವ ಕಾರ್ಯದರ್ಶಿ, ಡಾ. ಶಿವರತ್ನ ಸವದಿ ಜಂಟಿ ಕಾರ್ಯದರ್ಶಿ,  ಬಿ. ಉಮೇಶ್ ಖಜಾಂಚಿಗಳಾಗಿದ್ದು, ಆಶಾ ಕರಿಬಸಪ್ಪ, ಪ್ರೊ.ಎ. ಶ್ರೀಪಾದ, ಕೋಟೆಪ್ಪ, ಬಿ.ಕೆ. ಮಲ್ಲಯ್ಯ, ಕಾಳೇಗೌಡ ಅವರು ನಿರ್ದೇಶಕರಾಗಿ ದೇವಾಲಯದ ಪುರೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ

ಮುಖಪುಟ /ನಮ್ಮ ದೇವಾಲಯಗಳು