ಮುಖಪುಟ /ನಮ್ಮದೇವಾಲಯಗಳು  

ಕದರಿಪುರದ ಕಂಬದ ಲಕ್ಷ್ಮೀನರಸಿಂಹ ಸನ್ನಿಧಿ

ಹಲವಾರು ವರ್ಷ ಮಣ್ಣಿನಲ್ಲಿ ಮುಚ್ಚಿಹೋಗಿದ್ದ ಪುರಾತನ ದೇವಾಲಯ

*ಟಿ.ಎಂ. ಸತೀಶ್

kannadaratna.com, ourtemples.in, kadripura lakshmi narasimha, mulabagalu, kolar, ಕಂಬದ ಲಕ್ಷ್ಮೀನರಸಿಂಹ, ಕದರಿಪುರ, ಕೋಲಾರ, ಮುಳಬಾಗಲು, ಕನ್ನಡರತ್ನ.ಕಾಂ. ನಮ್ಮ ದೇವಾಲಯಗಳು, temples in and around bangalore, T.M.Satishಮುಳಬಾಗಲು ತಾಲೂಕಿನ ಕದರಿಪುರ ಕಂಬದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯ ಕ್ಷೇತ್ರ. ಈ ಕ್ಷೇತ್ರದ ಲಕ್ಷ್ಮೀನರಸಿಂಹನೊಂದಿಗೆ ಕಂಬ ಸೇರಿರುವುದಕ್ಕೆ ಸ್ಥಳ ಪುರಾಣ ಹೀಗೆ ಹೇಳುತ್ತದೆ.

ಸುಮಾರು ಕ್ರಿ.ಶ. 1130ರ ದಶಕದಲ್ಲಿ ಹೊಯ್ಸಳರ ದೊರೆ ವಿಷ್ಣುವರ್ಧನಿಗೆ ಕನಸಲ್ಲಿ ಕಂಡ ನಾರಸಿಂಹ ತಾನು ಅಹೋಬಿಲ ಕ್ಷೇತ್ರದಲ್ಲಿ ದುಷ್ಟನಾದ ಹಿರಣ್ಯ ಕಶಿಪುವನ್ನು ಸಂಹರಿಸಿ ಮೂರು ಘಳಿಗೆ ಕಾಲ ಕದರಿಪುರದಲ್ಲಿ ನೆಲೆಸಿದ್ದಾಗಿ ತಿಳಿಸಿ ಅದೃಶ್ಯನಾದನಂತೆ.

ವಿಷ್ಣುವರ್ಧನ, ಮಾರನೇ ದಿನ ಸ್ಥಳ ಶೋಧನೆ ಮಾಡಿ, ಸಾಲಿಗ್ರಾಮ ಶಿಲೆಯಲ್ಲಿ ನೆಲೆ ನಿಂತ ಶ್ರೀ. ಲಕ್ಷ್ಮೀನರಸಿಂಹನ ದರ್ಶನ ಮಾಡಿ, ದೇವಾಲಯದ ಜಿರ್ಣೋದ್ಧಾರ ಮಾಡಿಸಿ, 24 ಎಕರೆ ಜಮೀನನ್ನು ದೇವಾಲಯಕ್ಕೆ ಕೊಟ್ಟನಂತೆ.

ಈ ಊರಿಗೆ ಆ ಕಾಲದಲ್ಲಿ ಸೊಸೆಯಾಗಿ ಬಂದ ಲಕ್ಷ್ಮೀ ದೇವಿ ಎಂಬ ಸಾಧ್ವಿ, ಕುಡಿತದ ದಾಸನಾಗಿದ್ದ ತನ್ನ ಪತಿಯನ್ನು ಪರಿವರ್ತಿಸಲು ಸಾಧ್ಯವಾಗದೆ, ಅವರ ಕಿರುಕುಳ ತಾಳಲಾರದೆ, ಮನೆ ಬಿಟ್ಟು ನಾರಸಿಂಹ ದೇವಾಲಯದಲ್ಲಿಯೇ ಉಳಿದು, ದೇವರ ಸೇವೆ ಮಾಡುತ್ತಿದ್ದಳಂತೆ. ಆದರೆ ಆಕೆಯ ಪತಿ, ದೇವಾಲಯದ ಅರ್ಚಕರಿಗೂ ತನ್ನ ಪತ್ನಿಗೂ ಸಂಬಂಧ ಕಟ್ಟಿ ಕಳಂಕ ಹೊರಿಸಿದನಂತೆ. ಆಕೆ. ಅರ್ಚಕರು ತನ್ನ ತಂದೆಯ ಸಮಾನ ಎಂದು ಹೇಳಿದರೂ ಊರಿನ ಯಾರೂ ಒಪ್ಪಲಿಲ್ಲವಂತೆ. ಕೀಳಾಗಿ ಮಾತನಾಡಿದರಂತೆ. ಇದರಿಂದ ಬೇಸತ್ತ ಆಕೆ ಅಗ್ನಿದಿವ್ಯ ಮಾಡಿ, ತಾನು ಪತಿವ್ರತೆ ಎಂದು ಪುರಜನರಿಗೆ ತಿಳಿಸಿ, ಫಾಲ್ಗುಣ ಮಾಸದ ಹುಣ್ಣಿಮೆಯ ಮಂಗಳವಾರ ದೇವಾಲಯದ ಬಳಿ ತನ್ನ ಸತ್ಯಸಂದತೆ ನಿರೂಪಿಸುವುದಾಗಿ ತಿಳಿಸಿದಳಂತೆ.

ಆ ದಿನ ಪುರಜನರೆಲ್ಲಾ ಸೇರಿದಾಗ, ಲಕ್ಷ್ಮೀದೇವಿ, ತನ್ನ ಆರಾಧ್ಯ ದೈವ ನಾರಸಿಂಹನ ಪೂಜೆ ಮಾಡಿ, ದೇವರ ತೀರ್ಥದೊಂದಿಗೆ ಬಂದು ಊರ ಜನ ಭಾರೀ ತೂಕವಿದ್ದ ಕಾರಣ ನಿಲ್ಲಿಸಲಾರದೆ  ಗದ್ದೆಯಲ್ಲಿ ಬಿಟ್ಟಿದ್ದ 108 ಅಡಿ ಎತ್ತರದ  ಏಕಶಿಲೆಯ ಬೃಹತ್ ಗಾತ್ರದ ಗರುಡಗಂಬದ ಮೇಲೆ ತೀರ್ಥ ಪ್ರೋಕ್ಷಣೆ ಮಾಡಿ,

kannadaratna.com, ourtemples.in, kadripura lakshmi narasimha, mulabagalu, kolar, ಕಂಬದ ಲಕ್ಷ್ಮೀನರಸಿಂಹ, ಕದರಿಪುರ, ಕೋಲಾರ, ಮುಳಬಾಗಲು, ಕನ್ನಡರತ್ನ.ಕಾಂ. ನಮ್ಮ ದೇವಾಲಯಗಳು, temples in and around bangalore, T.M.Satishಉಗ್ರವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಂ|
ನೃಸಿಂಹ ಭೀಷಣಂ ಭದ್ರಂ ಮೃರ್ತ್ಯೋಮೃತ್ಯುಂ ನಮಾಮೃಹಂ
|| ಎಂಬ ಶ್ಲೋಕ ಪಠಿಸುತ್ತಾ  ತಾನೊಬ್ಬಳೇ ಕಂಬ ಎತ್ತಿ ನಿಲ್ಲಿಸಿದಳಂತೆ. ಈ ಪವಾಡ ಕಂಡ ಪುರ ಜನರಿಗೆ ತಮ್ಮ ತಪ್ಪಿನ ಅರಿವಾಯಿತಂತೆ. ಆದರೆ ತಪ್ಪಿಗೆ ಶಿಕ್ಷೆ ಆಗಬೇಕಲ್ಲ, ಎಲ್ಲರ ಮೈಯಲ್ಲೂ ಉರಿ ಕಾಣಿಸಿಕೊಂಡಿತಂತೆ. ಕಣ್ಣು ಮಂಜಾಯಿತಂತೆ. ಆಗ ಅವರೆಲ್ಲಾ ಲಕ್ಷ್ಮೀದೇವಿ ಕಾಲಿಗೆ ಬಿದ್ದು, ಪರಮ ಸಾಧ್ವಿಯಾದ ನಿನ್ನ ಬಗ್ಗೆ ಇಲ್ಲ ಸಲ್ಲದ ಮಾತನಾಡಿದೆವು, ನಿನ್ನ ಶೀಲ ಶಂಕಿಸಿದೆವು ನಮ್ಮ ತಪ್ಪು ಮನ್ನಿಸಿ ಕಾಪಾಡು ಎಂದು ಶರಣಾದರಂತೆ, ಆಗ ಆಕೆ ನಾರಸಿಂಹ ತೀರ್ಥಕ್ಕೆ ಮೃತ್ತಿಕೆ ಬೆರೆಸಿ ಎಲ್ಲರ ಮೇಲೂ ಪ್ರೋಕ್ಷಿಸಿದಾಗ ಉರಿ ಮಾಯವಾಯಿತಂತೆ. ದೃಷ್ಟಿ ಮರಳಿ ಬಂತಂತೆ. ಬಳಿಕ ಲಕ್ಷ್ಮೀದೇವಿ, ತನ್ನ ಬಗ್ಗೆ ಕ್ಷುಲ್ಲಕ ಮಾತನಾಡಿ, ಅವಮಾನ ಮಾಡಿದ ಅಲ್ಪ ಜನರ ನಡುವೆ ತಾನು ಇರುವುದಿಲ್ಲ ಎಂದು ಹೇಳಿ ಆ ಸಾಧ್ವಿ ಕಂಬದಲ್ಲಿ ಲೀನಳಾದಳಂತೆ. ಹೀಗಾಗಿ ಈ ಕ್ಷೇತ್ರಕ್ಕೆ ಕಂಬದ ನರಸಿಂಹ ಕ್ಷೇತ್ರ ಎಂಬ ಹೆಸರು ಬಂದಿದೆ.

ಇಲ್ಲಿಗೆ ಬರುವ ಭಕ್ತರು ಮೊದಲಿಗೆ ದೇವಾಲಯಕ್ಕೆ ಹೋಗದೆ ದೇವಾಲಯದಿಂದ ತುಸು ದೂರದಲ್ಲಿರುವ ಕಂಬದ  ಬಳಿ ಹೋಗಿ ಅದಕ್ಕೆ ಪೂಜೆ ಸಲ್ಲಿಸಿ, ಪ್ರದಕ್ಷಿಣೆ ನಮಸ್ಕಾರ ಮಾಡಿ, ತಮ್ಮ ನೋವನ್ನು ಕಂಬಕ್ಕೆ ಹೇಳಿಕೊಂಡು ನಂತರ ನರಸಿಂಹನ ದರ್ಶನ ಮಾಡುತ್ತಾರೆ. ಹೀಗೆ ಮಾಡುವುದರಿಂದ ಎಲ್ಲ ಕಷ್ಟ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ.

kannadaratna.com, ourtemples.in, kadripura lakshmi narasimha, mulabagalu, kolar, ಕಂಬದ ಲಕ್ಷ್ಮೀನರಸಿಂಹ, ಕದರಿಪುರ, ಕೋಲಾರ, ಮುಳಬಾಗಲು, ಕನ್ನಡರತ್ನ.ಕಾಂ. ನಮ್ಮ ದೇವಾಲಯಗಳು, temples in and around bangalore, T.M.Satishಈ ಘಟನೆ ನಡೆದ ಕೆಲವು ವರ್ಷಗಳ ತರುವಾಯ ಪುರ ಜನರು ಶತ್ರು ದಾಳಿಯಿಂದ ದೇವಾಲಯ ಕಾಪಾಡಲು ಭಗವಂತನ ಸಹಿತ ಗರ್ಭಗೃಹವನ್ನು ಮಣ್ಣಿನಿಂದ ಮುಚ್ಚಿದ್ದರು ಎಂದು ಹೇಳಲಾಗುತ್ತದೆ. ನೂರಾರು ವರ್ಷಗಳ ಕಾಲ ಈ ದೇವಾಲಯ ಪೂಜೆ ಇಲ್ಲದೆ ಮಣ್ಣಲ್ಲಿ ಸೇರಿ ಹೋಗಿತ್ತು. ಈ ಮಣ್ಣಿನ ಗುಡ್ಡೆಯ ಮೇಲೆ ಗಿಡಗಂಟಿ, ಮರ, ಗಿಡ ಬೆಳೆದು ಕಾಡಿನಂತಾಗಿತ್ತು. 1949ರಲ್ಲಿ ಶ್ರೀ. ಎಂ.ಆರ್. ಗೋಪಾಲಕೃಷ್ಣ ರಾವ್ ಅವರು ಈ ಸ್ಥಳದಲ್ಲಿ ಪ್ರತಿ ಹುಣ್ಣೆಮೆಯಂದು ನಾಗ ದರ್ಶನವಾಗುವುದನ್ನು ಕೇಳಿ ಹಾಗೂ ಈ ಗುಡ್ಡದ ಮೇಲೆ ನಿಂತರೆ ವಿಶೇಷ ಅನುಭವ ಆಗುತ್ತದೆ ಎಂಬ ಪುರಜನರ ಹೇಳಿಕೆ ಆಧರಿಸಿ ಸ್ಥಳ ಶೋಧಿಸಿದಾಗ ಅಲ್ಲಿ ಪುರಾತನ ದೇವಾಲಯ ಕಾಣಿಸಿತಂತೆ. ಅವರು ಕದರಿಪುರದ ಹನುಮಂತರೆಡ್ಡಿ ಅವರೊಂದಿಗೆ ಸೇರಿ ದೇವಾಲಯದ ಮೇಲಿದ್ದ ಮಣ್ಣು ತೆಗೆದು ದೇವರ ಪುನರ್ ಪ್ರತಿಷ್ಠಾಪನೆ ಮಾಡಿ ಪೂಜಿಸಲು ಆರಂಭಿಸಿದರಂತೆ. ಇಂದು ಅವರ ಪುತ್ರ ಶ್ರೀ ಎಂ.ಜಿ. ಬಿಂದುಮಾಧವರಾಮ್ ದೇವಾಲಯದ ಅರ್ಚಕರಾಗಿ ದೇವರಿಗೆ ನಿತ್ಯ ಪೂಜೆ ನಡೆಸುತ್ತಿದ್ದಾರೆ. ಈಗ ದೇವಾಲಯದ ಜೀರ್ಣೋದ್ಧಾರ ಕಾರ್ಯವೂ ನಡೆಯುತ್ತಿದೆ.

ಪ್ರತಿ ವರ್ಷ ಇಲ್ಲಿ ಶ್ರೀದೇವಿ, ಭೂದೇವಿ ಸಮೇತ ಶ್ರೀನಿವಾಸದೇವರ ಬ್ರಹ್ಮ ರಥೋತ್ಸವ ನಡೆಯುತ್ತದೆ.

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ:9739178515, 9535682040 ಸಂಪರ್ಕಿಸಬಹುದು.

ಮುಖಪುಟ /ನಮ್ಮದೇವಾಲಯಗಳು 

M.V.Shankaranarayan