ಅಮರಶಿಲ್ಪಿ ಜಕಣನ ತವರು ಕೈದಾಳ *ಟಿ.ಎಂ.ಸತೀಶ್
ಬೇಲೂರು, ಹಳೆಬೀಡು ದೇವಾಲಯಗಳ ರೂವಾರಿ ಜಕಣಾಚಾರಿ ಹುಟ್ಟಿದ್ದೇ ಈ ಊರಿನಲ್ಲಿ ಎನ್ನುತ್ತದೆ ಐತಿಹ್ಯ. ಜಗಣಾಚಾರಿ ಪತ್ನಿಯನ್ನೂ ಪುತ್ರನನ್ನೂ ತೊರೆದು ದೇಶಾಂತರ ಹೋದ ಹಲವು ವರ್ಷಗಳ ಬಳಿಕ ಬೇಲೂರಿನಲ್ಲಿ ಚೆನ್ನಿಗರಾಯ ಮೂರ್ತಿಯನ್ನು ಕಡೆಯುತ್ತಿದ್ದಾಗ, ಅಲ್ಲಿಗೆ ಬಂದ ಆತನ ಮಗ ಡಕಣಾಚಾರಿ ಚೆನ್ನಿಗರಾಯಮೂರ್ತಿ ಕಡೆಯುತ್ತಿರುವ ಶಿಲೆಯಲ್ಲಿ ದೋಷವಿದೆ ಎಂದು ಸವಾಲು ಹಾಕುತ್ತಾನೆ. ಚೆನ್ನಿಗರಾಯ ಶಿಲ್ಪದ ಹೊಟ್ಟೆಯ ಭಾಗದಲ್ಲಿ ಉಳಿಯಿಂದ ಹೊಡೆದಾಗ, ಆ ಭಾಗ ಒಡೆದು ಅದರಿಂದ ಕಪ್ಪೆಯೊಂದು ಹೊರಬಂತಂತೆ. ಹೀಗಾಗೇ ಈ ದೇವಾಲಯದಲ್ಲಿರುವ ದೇವರನ್ನು ಕಪ್ಪೆ ಚೆನ್ನಿಗರಾಯ ಎಂದೇ ಕರೆಯುತ್ತಾರೆ. ಮಗನಿಂದಲೇ ಈ ರೀತಿ ಅವಮಾನಿತನಾದ ಖ್ಯಾತ ಶಿಲ್ಪಿ ತನ್ನ ಬಲಗೈಯನ್ನೇ ಕತ್ತರಿಸಿಕೊಳ್ಳುತ್ತಾನೆ. ಭಗವಂತ ಆತನ ಕನಸಿನಲ್ಲಿ ಬಂದು ಕೈದಾಳದಲ್ಲಿ ಚೆನ್ನಿಗರಾಯನ ದೇವಾಲಯ ನಿರ್ಮಿಸಲು ಅವನಿಗೆ ಆದೇಶಿಸುತ್ತಾರೆ. ಕೈದಾಳದಲ್ಲಿ ದೇವತಾ ಪ್ರತಿಷ್ಠಾಪನೆಯಾದಾಗ ಜಕಣನಿಗೆ ಮತ್ತೆ ಕೈದಳಯಿತು ಅರ್ಥಾತ್ ಕೈ ಬಂತು. ಹೀಗಾಗೇ ಕ್ರೀಡಾಪುರಿ ಎಂದು ಕರೆಸಿಕೊಂಡಿದ್ದ ಈ ಊರು ಕೈದಳವೆಂದು ಖ್ಯಾತವಾಯ್ತು. ಇಲ್ಲಿ ದ್ರಾವಿಡ ವಾಸ್ತುಶೈಲಿಯಲ್ಲಿರುವ ಸುಂದರ ಚೆನ್ನಕೇಶವ ದೇವಾಲಯವಿದೆ. ಇಲ್ಲಿ ದೊರೆತಿರುವ ಶಾಸನದ ರೀತ್ಯ 1150-51ರಲ್ಲಿ ಹೊಯ್ಸಳರ 1ನೆಯ ನರಸಿಂಹನ ಸಾಮಂತನಾಗಿದ್ದ ಗುಳೇ-ಬಾಚಿ ಎಂಬಾತ ಈ ದೇವಸ್ಥಾನ ಕಟ್ಟಿದನಂತೆ. ಇಲ್ಲಿ ವಿಜಯನಗರ ಶೈಲಿಯಲ್ಲಿ 7 ಹಂತದ ಗೋಪುರವಿದ್ದ ಕುರುಹು ದೊರಕುತ್ತದೆ.
ದೇವಾಲಯದ ರಕ್ಷಣಾ ಗೋಡೆಯ ಕಿಂಡಿಯಿಂದ ಹಾದು ಬರುವ ಸೂರ್ಯ ಕಿರಣಗಳು, ಗರುಡನ ಕಿವಿಯ ಮೂಲಕ ಹಾಯ್ದು ದೇವಾಲಯದ ಕಿಂಡಿ ಪ್ರವೇಶಿಸಿ ಕೇಶವನ ಪಾದದ ಮೇಲೆ ಬೀಳುವ ಅದ್ಬುತವನ್ನೂ ಇಲ್ಲಿ ನೋಡಬಹುದಾಗಿದೆ. ಯೂರೋಪಿನ ಥಾಮಸ್ ಯಂಗ್ ಕ್ರಿ.ಶ. 1802ರಲ್ಲಿ ಪ್ರತಿಪಾದಿಸಿದ ಬೆಳಕಿನ ವಕ್ರೀಕರಣದ ಸಿದ್ಧಾಂತವನ್ನು ಕ್ರಿ.ಶ. 1150ರಲ್ಲೇ ಭಾರತೀಯ ದೇವಾಲಯಗಳಲ್ಲಿ ಸಾಧಿಸಿ ತೋರಿಸಿರುವುದು ಈ ದೇವಾಲಯದ ವಾಸ್ತುಶೈಲಿಯಿಂದ ವೇದ್ಯವಾಗುತ್ತದೆ. ಮಹಾದ್ವಾರದ ಬಲಬದಿಯ ಕಂಬವೊಂದರ ಮೇಲೆ ಪತ್ನೀಸಹಿತನಾದ ಚೆನ್ನಕೇಶವನನ್ನೂ ಎಡಗಡೆಯ ಕಂಬದ ಮೇಲೆ ಕೈಮುಗಿದು ನಿಂತ ಭಕ್ತವಿಗ್ರಹವಿದೆ. ಉತ್ತರೀಯ ಹೊದ್ದಿರುವ ಈ ವ್ಯಕ್ತಿ ಜಕಣಾಚಾರಿಯದಿರಬಹುದೆಂದು ಹೇಳಲಾಗುತ್ತದೆ. ವಿಗ್ರಹ ಖಡ್ಗ ಹಾಗೂ ಉತ್ತರೀಯ ಹೊಂದಿರುವುದರಿಂದ ಇದು ದೇವಾಲಯ ಕಟ್ಟಿಸಿದ ಬಾಚಿ ಸಾಮಂತನದಾಗಿರಬಹುದೆಂಬ ವಾದವೂ ಇದೆ. ದೇವಾಲಯದ ಎದುರು ಇರುವ ಗರುಡಗಂಬದ ಎಡಭಾಗದಲ್ಲಿ ದೇವಾಲಯದ ಮೆಟ್ಟಿಲುಗಳ ಬಳಿ ನಾಲ್ಕು ಕಲ್ಲಿನ ಚಕ್ರಗಳಿದ್ದು, ಇಲ್ಲಿ ಹಿಂದೆ ಕಲ್ಲಿನ ಚಕ್ರದ ರಥೋತ್ಸವ ನಡೆಯುತ್ತಿತ್ತು ಎಂಬುದನ್ನು ಸಾರುತ್ತಿವೆ.
ಚೆನ್ನಕೇಶವ ಮಂದಿರದ ಅನತಿ ದೂರದಲ್ಲಿ ಗಂಗಾಧರೇಶ್ವರ ದೇವಾಲಯವಿದೆ. ಇದೂ ಕೂಡ
ದ್ರಾವಿಡ ಶೈಲಿಯಲ್ಲಿದೆ.
ಹಳೆಯ ದೇವಾಲಯದ ಗೋಪುಗಳ ಜೀರ್ಣೋದ್ಧಾರ ಮಾಡಲಾಗಿದೆ. ಗೋಪುರದಲ್ಲಿ ಶಿವಪಾರ್ವತಿಯರ
ಮೂರ್ತಿಯಿದೆ. ಮೂಲೆಗಳಲ್ಲಿ ಬಸವನ ಮೂರ್ತಿ ಇದೆ. ಆವರಣ ಗೋಡೆಯ ಭಿತ್ತಿಯ ಅಗಲವಾದ
ಪಟ್ಟಿಕೆಗಳಲ್ಲಿ ಆನೆ ಮತ್ತು ಹೂವಿನ ಚಿತ್ರವಿದೆ. ಅದರ ಮೇಲ್ಭಾಗದಲ್ಲಿ ಈಗ ಕಬ್ಬಿಣದ
ಕಂಬಿಗಳಿಂದ ಆನೆ ಮತ್ತು ಹೂವಿನ ಅಲಂಕಾರದ
ಕಂಬಗಳ ತಳಭಾಗದ ನಾಲ್ಕು ಮಗ್ಗುಲುಗಳಲ್ಲೂ ಶಿವ, ಬ್ರಹ್ಮ, ವಿಷ್ಣು, ಭೈರವ, ಶ್ರೀಕೃಷ್ಣ, ಗಣಪತಿ, ವೀರಭದ್ರ ಮೊದಲಾದ ದೇವತೆಗಳ ಉಬ್ಬುಶಿಲ್ಪಗಳಿವೆ. ಭಿತ್ತಿಗಳ ಹೊರವಲಯದಲ್ಲಿ ಆನೆ, ಹೂವುಗಳ ಸಾಲಿನ ಪಟ್ಟಿಕೆಗಳಿವೆ. ತುಮಕೂರು ಜಿಲ್ಲೆ ಹರಿಹರ ಕ್ಷೇತ್ರ ಎಂಬುದನ್ನು ಈ ಎರಡು ದೇವಾಲಯಗಳು ಮತ್ತೆ ಸಾರುತ್ತವೆ. ಪ್ರತಿವರ್ಷ ಈ ಊರಿನಲ್ಲಿ ಗಣಪತಿ ಉತ್ಸವ ಜರುಗುತ್ತದೆ. ಭಾದ್ರಪದ ಚೌತಿಯಂದು ಪ್ರತಿಷ್ಠಾಪಿಸಲಾಗುವ ಮಣ್ಣಿನ ಗಣಪನನ್ನು ಮೂರು ತಿಂಗಳುಗಳ ಕಾಲ ಪೂಜಿಸಲಾಗುತ್ತದೆ. ಸಂಗೀತೋತ್ಸವ, ಹರಿಕಥೆ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರುಗುತ್ತವೆ. ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in | |||