ಮುಖಪುಟ /ನಮ್ಮದೇವಾಲಯಗಳು  

ಪವಿತ್ರ ಶೈವಕ್ಷೇತ್ರ ಕಾಳಹಸ್ತಿ

* ಟಿ.ಎಂ.ಸತೀಶ್

Kalahasti, Kalahastiswara, Andrapradesh, Kannadaratna.com, our temples.in ತಿಮ್ಮಪ್ಪ ನೆಲೆಸಿಹ ತಿರುಪತಿಗೆ ಅತಿ ಸನಿಹದಲ್ಲೇ ಇರುವ ಪವಿತ್ರ ಪುಣ್ಯಕ್ಷೇತ್ರ ಕಾಳಹಸ್ತಿ. ಕಾಳಹಸ್ತಿ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ಶೈವಕ್ಷೇತ್ರ. ತಿರುಪತಿ ಭೂ ವೈಕುಂಠ ಎಂದು ಖ್ಯಾತಿ ಪಡೆದಿದ್ದರೆ, ಸುವರ್ಣಮುಖಿ ನದೀ ತೀರದಲ್ಲಿರುವ ಕಾಳಹಸ್ತಿ ದಕ್ಷಿಣ ಕೈಲಾಸವೆಂದೇ ಹೆಸರಾಗಿದೆ.

ಇಲ್ಲಿ ಅತಿ ಪ್ರಾಚೀನವಾದ ಕಾಳಹಸ್ತೀಶ್ವರ ಹಾಗೂ ಜ್ಞಾನ ಪ್ರಸನ್ನಾಂಬಿಕೆ ದೇವಾಲಯಗಳಿವೆ. ಪಲ್ಲವ, ಚೋಳ ಮತ್ತು ವಿಜಯನಗರದರಸರ ಕಾಲದಲ್ಲಿ ದೇವಾಲಯ ವಿವಿಧ ಹಂತದಲ್ಲಿ ಅಭಿವೃದ್ಧಿ ಹೊಂದಿರುವುದು ದಾಖಲೆಗಳಿಂದ ತಿಳಿದುಬರುತ್ತದೆ.

ಸ್ಥಳ ಪುರಾಣದ ರೀತ್ಯ ಇಲ್ಲಿನ ಗರ್ಭಗೃಹದಲ್ಲಿರುವ ಕಾಳಹಸ್ತೀಶ್ವರ ಲಿಂಗವನ್ನು ಸಾಕ್ಷಾತ್ ಬ್ರಹ್ಮದೇವನೇ ಸ್ವಯಂ ಪ್ರತಿಷ್ಠಾಪಿಸಿದನಂತೆ.

ಈ ಲಿಂಗವನ್ನು ಶ್ರೀ ಎಂಬ ಜೇಡರ ಹುಳುವೊಂದು ಲಿಂಗದ ಸುತ್ತಲೂ ಬಲೆ ಹೆಣೆದು ಪೂಜಿಸಿತಂತೆ.  ಕಾಳಸರ್ಪ ಲಿಂಗದ ಮೇಲೆ ರತ್ನಗಳನಿಟ್ಟು ಪೂಜಿಸಿತಂತೆ. ಹಸ್ತಿ ಅರ್ಥಾತ್ ಆನೆ ಸೊಂಡಲಲ್ಲಿ ನೀರು ತಂದು ಅಭಿಷೇಕ ಮಾಡಿತಂತೆ. ಹೀಗಾಗೇ ಬ್ರಹ್ಮ ಪ್ರತಿಷ್ಠಾಪಿತ ಈ ಲಿಂಗ ಶ್ರೀಕಾಳಹಸ್ತೀಶ್ವರ ಎಂದು ಖ್ಯಾತವಾಯಿತು ಎನ್ನುತ್ತದೆ ಒಂದು ಕಥೆ.

ಮತ್ತೊಂದು ಕಥೆಯ ರೀತ್ಯ ಬೇಡರ ಕಣ್ಣಪ್ಪ ಕಾಳಹಸ್ತೀಶ್ವರನ ಪರಮಭಕ್ತ. ಆತ ತಾನು ಕೊಂದ ಪ್ರಾಣಿಗಳ ಹಸಿ ಮಾಂಸವನ್ನು ದೇವರಿಗೆ ನೈವೇದ್ಯ ಮಾಡುತ್ತಿದ್ದನಂತೆ.  ಬಾಯಲ್ಲಿ ನೀರನ್ನು ತುಂಬಿ ತಂದು ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿದ್ದನಂತೆ.

ಶಿವ ಕಣ್ಣಪ್ಪನನ್ನು ಪರೀಕ್ಷಿಸಲು ತನ್ನ ಕಣ್ಣುಗಳಿಂದ ರಕ್ತ ಬರುವಂತೆ ಮಾಡಿದ. ಇದನ್ನು ಕಂಡ ಕಣ್ಣಪ್ಪ ತನ್ನ ಕಣ್ಣನ್ನೇ ಕಿತ್ತು ಶಿವನಿಗೆ ಅರ್ಪಿಸಿದನಂತೆ. ದೇವಾಲಯದಲ್ಲಿ ಇಂದಿಗೂ ಕಣ್ಣಪ್ಪನ ವಿಗ್ರಹವೊಂದಿದೆ.

ಕಾಳಹಸ್ತಿಯ ಸ್ಥಳ ಮಹಾತ್ಮೆ  ಅರಿತು ಆದಿ ಶಂಕರಾಚಾರ್ಯರು ಇಲ್ಲಿಗೆ ಆಗಮಿಸಿ ಶಿವಪೂಜೆ ಮಾಡಿದರೆಂದೂ ಹೇಳಲಾಗುತ್ತದೆ.

ಚೋಳರ ಕಾಲದಲ್ಲಿ ಕಾಳಹಸ್ತಿ ಪ್ರಸಿದ್ಧವಾದ ಯಾತ್ರಾಸ್ಥಳವಾಗಿತ್ತೆಂದು ಶಾಸನಗಳಿಂದ ತಿಳಿದು ಬರುತ್ತದೆ. ಒಂದನೆಯ ಕುಲೋತ್ತುಂಗ ಚೋಳ ಶಿವಾಲಯವನ್ನು ವಿಸ್ತಾರಗೊಳಿಸಿದನೆಂದು ತಿಳಿದುಬರುತ್ತದೆ. ಭವ್ಯವಾದ ಗೋಪುರವಿರುವ ಈ ದೇವಾಲಯದ ಪ್ರವೇಶದಲ್ಲೇ ಓಂ ನಮಃ ಶಿವಾಯ ಎಂಬ  ಫಲಕ ಗಮನ ಸೆಳೆಯುತ್ತದೆ. ಬೃಹತ್ ಪ್ರಾಕಾರವಿರುವ ದೇವಾಲಯದಲ್ಲಿ ದಕ್ಷಿಣಾಮೂರ್ತಿ,  ಜ್ಞಾನ ಪ್ರಸನ್ನಾಂಬಿಕೆ, ಸುಬ್ರಹ್ಮಣ್ಯ, ಗಣಪತಿಯೇ ಮೊದಲಾದ ದೇವರುಗಳ ಗುಡಿಗಳಿವೆ. ಸರ್ಪದೋಷ ಪರಿಹಾರಾರ್ಥ ಇಲ್ಲಿ ಭಕ್ತರು ಪೂಜೆ ಸಲ್ಲಿಸುತ್ತಾರೆ.

ಮುಖಪುಟ /ನಮ್ಮದೇವಾಲಯಗಳು