ಮುಖಪುಟ /ನಮ್ಮದೇವಾಲಯಗಳು 

ಕಲಸದ ಕಲಶೇಶ್ವರ ದೇವಾಲಯ
ಅಗಸ್ತ್ಯ ಮಹರ್ಷಿಗಳು ಗಿರಿಜಾ ಕಲ್ಯಾಣವನ್ನು ಪ್ರತ್ಯಕ್ಷ ನೋಡಿದ ಪ್ರಕೃತಿ ರಮಣೀಯ ತಾಣ

Kalasheswara temple, kalasa, chikkmagalur, horanadu, ಹೊರನಾಡು, ಚಿಕ್ಕಮಗಳೂರು, ಅಗಸ್ತ್ಯ ಮಹರ್ಷಿ, ಗಿರಿಜಾ ಕಲ್ಯಾಣ, Girija Kalyana, Vindya parvata, temples of Karnataka, karntaka temples, T.M.Satish, Kannadaratna.com, ourtemples.in*ಟಿ.ಎಂ ಸತೀಶ್

ದಕ್ಷಿಣ ಕಾಶೀ ಎಂದೂ ಹೆಸರಾದ ಕಲಶ (ಕಳಸ), ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲೂಕಿನಲ್ಲಿರುವ ಪವಿತ್ರಭೂಮಿ. ಈ ಊರಿಗೆ ಕಳಸ ಎಂಬ ಹೆಸರು ಬರಲು ಇಲ್ಲಿರುವ ಕಲಶೇಶ್ವರ (ಕಳಸೇಶ್ವರ) ದೇವಾಲಯವೇ ಕಾರಣ ಎನ್ನಲಾಗುತ್ತದೆ. ಆದರೆ ಮೂರು ಕಡೆ ಭದ್ರಾ ನದಿಯಿಂದ ಸುತ್ತುವರಿದಿರುವ ಕಳಸ, ದುಗ್ಗಪ್ಪನ ಕಟ್ಟೆ ಬೆಟ್ಟದ ಎತ್ತರ ಪ್ರದೇಶದಲ್ಲಿ ನಿಂತು ನೋಡಿದರೆ, ಗೋಪುರದ ಕಳಶದಂತೆ ಕಾಣುತ್ತದೆ ಹೀಗಾಗಿ ಈ ಊರಿಗೆ ಕಳಶ ಎಂಬ ಹೆಸರು ಬಂದಿದೆ ಎನ್ನುತ್ತಾರೆ ಸ್ಥಳೀಯರು.
ಅನ್ನಪೂರ್ಣೆಯ ನೆಲೆವೀಡು ಹೊರನಾಡಿಗೆ ಕೇವಲ 6 ಕಿಲೋ ಮೀಟರ್ ದೂರದಲ್ಲಿರುವ ಕಳಸದಲ್ಲಿ ಪುರಾತನವಾದ ಕಲಶೇಶ್ವರ ದೇವಾಲಯವಿದೆ.
ಅಗಸ್ತ್ಯ ಮಹರ್ಷಿಗಳು ಪ್ರತಿಷ್ಠಾಪಿಸಿ ಪೂಜಿಸಿದರೆಂದೂ, ವಾಸಿಷ್ಠರೇ ಬಂದು ಇಲ್ಲಿ ಈ ಶಿವಲಿಂಗವನ್ನು ಅರ್ಚಿಸಿದರೆಂದೂ ಸ್ಥಳ ಪುರಾಣ ಹೇಳುತ್ತದೆ. ಹೀಗಾಗಿ ಈ ಕಲಶೇಶ್ವರನ ದರ್ಶನ ಮಾಡಿದರೆ, ವಾರಾಣಸಿಯ ವಿಶ್ವೇಶ್ವರನ ದರ್ಶನ ಮಾಡಿದ್ದಕ್ಕಿಂತ ಒಂದು ಗುಲಗಂಜಿ ಹೆಚ್ಚು ಪುಣ್ಯ ಬರುತ್ತದೆ ಎಂಬ ಜನಜನಿತ ಮಾತಿದೆ. 
Kalasheswara temple, kalasa, chikkmagalur, horanadu, ಹೊರನಾಡು, ಚಿಕ್ಕಮಗಳೂರು, ಅಗಸ್ತ್ಯ ಮಹರ್ಷಿ, ಗಿರಿಜಾ ಕಲ್ಯಾಣ, Girija Kalyana, Vindya parvata, temples of Karnataka, karntaka temples, T.M.Satish, Kannadaratna.com, ourtemples.inಸ್ಥಳ ಪುರಾಣದ ರೀತ್ಯ, ಕೈಲಾಸದಲ್ಲಿ ಪರಮೇಶ್ವರನೊಂದಿಗೆ ಪರ್ವತರಾಜನ ಪುತ್ರಿ ಪಾರ್ವತಿಯ ಕಲ್ಯಾಣ ನಡೆಯುತ್ತಿದ್ದಾಗ, ಆ ಶುಭ ಸಮಾರಂಭದಲ್ಲಿ ಪಾಲ್ಗೊಳ್ಳಲು ಎಲ್ಲ ದೇವಾನು ದೇವತೆಗಳು, ಪರ್ವತರಾಜರೂ ಕೈಲಾಸ ಪರ್ವತಕ್ಕೆ ಬಂದರಂತೆ. ಇದರಿಂದಾಗಿ ಉತ್ತರದಲ್ಲಿ ಭೂಮಿಯ ಭಾರ ಹೆಚ್ಚಾಗಿ ಅಸಮತೋಲನ ಉಂಟಾಯಿತಂತೆ. ಆಗ ವಿಂಧ್ಯಪರ್ವತದ ಬೆಳವಣಿಗೆ ನಿಲ್ಲಿಸಿ ಲೋಕ ಕಲ್ಯಾಣ ಮಾಡಿದ್ದ ಅಗಸ್ತ್ಯ ಮಹರ್ಷಿಗಳನ್ನು ಕರೆದ ಪರಮೇಶ್ವರ, ನೀವು ದಕ್ಷಿಣ ಭಾರತಕ್ಕೆ ಹೋಗಿ ಭೂಭಾರ ಸರಿದೂಗಿಸಿ ಎಂದು ಸೂಚಿಸಿದನಂತೆ. ಆಗ ಅಗಸ್ತ್ಯ ಮಹರ್ಷಿಗಳು ಇಡೀ ತ್ರಿಲೋಕದಲ್ಲಿರುವವರೂ ಗಿರಿಜಾ ಕಲ್ಯಾಣ ನೋಡಲು ಉತ್ಸುಕರಾಗಿರುವಾಗ, ನನಗೆ ನಿನ್ನೆ ಮದುವೆ ನೋಡುವ ಯೋಗ ಇಲ್ಲದಂತೆ ಮಾಡುತ್ತಿದ್ದೀಯಲ್ಲ ಪರಮೇಶ್ವರ ಇದು ನ್ಯಾಯವೇ ಎಂದು ಕೇಳಿದರಂತೆ.
ಅಗಸ್ತ್ಯರ ಇಚ್ಛೆಯನ್ನು ಈಡೇರಿಸಲು ಪರಶಿವ, ಅವರಿಗೆ ನೀವು ಎಲ್ಲೇ ಇದ್ದರೂ ಅಲ್ಲಿಂದಲೇ ನನ್ನ ವಿವಾಹ ಮಹೋತ್ಸವ ನೋಡುವ ದಿವ್ಯ ದೃಷ್ಟಿಯನ್ನು ದಯಪಾಲಿಸುತ್ತೇನೆ ಎಂದನಂತೆ.
ದಿವ್ಯ ದೃಷ್ಟಿ ಪಡೆದ ಅಗಸ್ತ್ಯರು ಭೂಭಾರ ಸರಿದೂಗಿಸಲು ದಕ್ಷಿಣ ಭಾರತಕ್ಕೆ ಬಂದರಂತೆ, ಮೂರು ದಿಕ್ಕಿನಲ್ಲಿ ಭದ್ರಾ ನದಿಯಿಂದ ಸುತ್ತುವರಿದ ಮಲೆನಾಡಿನ ಮಡಿಲ ಕಳಸಕ್ಕೆ ಅವರು ಬರುವ ಹೊತ್ತಿಗೆ ಅತ್ತ ಕೈಲಾಸದಲ್ಲಿ, ಪರಮೇಶ್ವರ-ಪಾರ್ವತಿಯರ ವಿವಾಹದ ಶುಭ ಮುಹೂರ್ತ ಬಂತಂತೆ. ಕಳಸದ ಪುಟ್ಟಬೆಟ್ಟವೊಂದರ ಮೇಲೆ ನಿಂತು ಅಗಸ್ತ್ಯರು ಗಿರಿಜಾ ಕಲ್ಯಾಣ ನೋಡಿ ಧನ್ಯರಾದರಂತೆ.
ಬಳಿಕ ಆ ಪವಿತ್ರ ಬೆಟ್ಟದಲ್ಲಿ ಅಗಸ್ತ್ಯರಿಗೆ ಶಿವಲಿಂಗ ಘೋಚರಿಸಿತಂತೆ. ಅಲ್ಲಿಯೇ ಅವರು ಆ ಲಿಂಗಕ್ಕೆ ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪನೆ ಕಾರ್ಯ ನೆರವೇರಿಸಿ ಪೂಜಿಸಿದರಂತೆ. ಹೀಗಾಗಿಯೇ ಈ ಲಿಂಗಕ್ಕೆ ವಿಶಿಷ್ಠ ಶಕ್ತಿ ಇದೆ ಎನ್ನಲಾಗುತ್ತದೆ.
Kalasheswara temple, kalasa, chikkmagalur, horanadu, ಹೊರನಾಡು, ಚಿಕ್ಕಮಗಳೂರು, ಅಗಸ್ತ್ಯ ಮಹರ್ಷಿ, ಗಿರಿಜಾ ಕಲ್ಯಾಣ, Girija Kalyana, Vindya parvata, temples of Karnataka, karntaka temples, T.M.Satish, Kannadaratna.com, ourtemples.inಕಾರ್ಕಳದ ಭೈರರಸರ ಆಳ್ವಿಕೆಯಲ್ಲಿ ಕಳಸ ಒಂದು ಮುಖ್ಯ ಕೇಂದ್ರವಾಗಿತ್ತು. ಅವರ ಕಾಲದಲ್ಲೇ ಕಳಸೇಶ್ವರ ದೇವಾಲಯ ನಿರ್ಮಾಣವಾಗಿದೆ ಎನ್ನಲಾಗುತ್ತದೆಯಾದರೂ, ಉತ್ತರ ದೇಶದಿಂದ ಬಂದ ಶ್ರುತಬಿಂದುವೆಂಬ ರಾಜ ಈ ದೇವಾಲಯ ನಿರ್ಮಾಣ ಮಾಡಿದ ಎಂಬ ಉಲ್ಲೇಖವೂ ದೊರಕಿದೆ. ಹೊಯ್ಸಳರ ಕಾಲದ ಕೆಲವು ಕುರುಹುಗಳು ದೊರೆತ ಹಿನ್ನೆಲೆಯಲ್ಲಿ ಇಲ್ಲಿ ಇದ್ದ ಪುರಾತನ ದೇವಾಲಯವನ್ನು ಐಗೂರು ನಾಯಕರು ಅಭಿವೃದ್ಧಿ ಪಡಿಸಿದ್ದಾರೆ ಎಂದೂ ಇತಿಹಾಸಜ್ಞರು ಹೇಳುತ್ತಾರೆ.
ದೇವಾಲಯವನ್ನು ಈಗ ಜೀರ್ಣೋದ್ಧಾರ ಮಾಡಲಾಗಿದ್ದು, ಪಕ್ಕದಲ್ಲೇ ಶ್ರೀ ಕಲಶೇಶ್ವರ ಸಭಾಭವನ ನಿರ್ಮಿಸಲಾಗಿದೆ. ಸಭಾಭವನದ ಗೋಡೆಗಳಲ್ಲಿ ಗಿರಿಜಾ ಕಲ್ಯಾಣದ ಶಿಲ್ಪಗಳನ್ನು ಅಳವಡಿಸಲಾಗಿದೆ. ಇನ್ನು ಪುರಾತನವಾದ ಹೆಂಚಿನ ಮಾಡಿನ ದೇವಾಲಯದಲ್ಲಿ ಸರ್ಪದ ಎದುರು ನಿಂತ ಶಿವ ಮೊದಲಾದ ಹಲವು ಗಾರೆಯ ಶಿಲ್ಪಗಳಿವೆ. ದೇವಾಲಯದ ಮೇಲಿನ ಗೋಪುರದ ಗೂಡುಗಳಲ್ಲಿ ಅಗಸ್ತ್ಯರು, ಶಿವಪಾರ್ವತಿ, ಗಣಪ, ಷಣ್ಮುಖ ಮೊದಲಾದ ಗಾರೆಯ ಶಿಲ್ಪಗಳೂ ಇವೆ. ಇನ್ನು ಗೋಡೆಗಳಲ್ಲಿ ಅಗಸ್ತ್ಯರ ಜನನ, ಬಾಲ್ಯ, ತಪಸ್ತು, ಲೋಪಾಮುದ್ರೆಯ ವಿವಾಹ, ವಿಂದ್ಯಪರ್ವತ ರಾಜನ ಗರ್ವಭಂಗ, ಗಿರಿಜಾ ಕಲ್ಯಾಣ, ಆನೆಗಳ ಜಲಕ್ರೀಡೆ ಇತ್ಯಾದಿ ಪ್ರಸಂಗ ತಿಳಿಸುವ ವರ್ಣ ಚಿತ್ರಗಳಿವೆ.
ಈ ದೇವಾಲಯದ ಪ್ರಧಾನ ಗರ್ಭಗೃಹದಲ್ಲಿ ಕಲಶೇಶ್ವರ ಲಿಂಗವಿದೆ. ಗರ್ಭಗುಡಿಯ ಮೇಲೆ ಲೋಹದ ಕಲಶವಿದೆ. ಪಕ್ಕದಲ್ಲಿ ದೇವೀಮಂದಿರವಿದ್ದು, ದ್ವಾರದ ಎಡ ಬಲದಲ್ಲಿ ಸಿಂಹವಾಹಿನಿಯರಾದ ಸ್ತ್ರೀದ್ವಾರಪಾಲಕರ ಶಿಲ್ಪಗಳಿವೆ.
Kalasheswara temple, kalasa, chikkmagalur, horanadu, ಹೊರನಾಡು, ಚಿಕ್ಕಮಗಳೂರು, ಅಗಸ್ತ್ಯ ಮಹರ್ಷಿ, ಗಿರಿಜಾ ಕಲ್ಯಾಣ, Girija Kalyana, Vindya parvata, temples of Karnataka, karntaka temples, T.M.Satish, Kannadaratna.com, ourtemples.inಪೂರ್ವ, ಪಶ್ಚಿಮ ಮತ್ತು ಉತ್ತರದಲ್ಲಿ ಭದ್ರಾ ನದಿಯಿಂದ ಆವರಿಸಿದ ಕಳಸ ಪಟ್ಟಣದ ಸುತ್ತ ನಾಗ ತೀರ್ಥ, ಕೋಟಿ ತೀರ್ಥ, ರುದ್ರ ತೀರ್ಥ, ಅಂಬಾ ತೀರ್ಥ ಹಾಗೂ ವಸಿಷ್ಠ ತೀರ್ಥಗಳೆಂಬ ಪಂಚತೀರ್ಥಗಳಿವೆ. ಜೊತೆಗೆ ಒಂದು ಕಲ್ಲು ಬಾವಿ ಇದ್ದು, ಇದನ್ನು ಕಾಶಿ ಗಂಗೆ ಎಂದೇ ಕರೆಯುತ್ತಾರೆ ಈ ತೀರ್ಥಗಳಲ್ಲಿ ಸ್ನಾನ ಮಾಡಿ ಕಲಶೇಶ್ವರನ ಪೂಜಿಸಿದರೆ ಸಪ್ತಜನ್ಮ ಪಾಪ ನಿವಾರಣೆ ಆಗುತ್ತದೆ ಎಂಬುದ ಭಕ್ತರ ನಂಬಿಕೆ.
ಕಲಶೇಶ್ವರ ಮಹಿಮೆಯ ಬಗ್ಗೆ ಸ್ಕಾಂದ ಪುರಾಣದಲ್ಲಿ ಉಲ್ಲೇಖವಿದೆ. ದೇವಾಲಯದಲ್ಲಿ ಪ್ರತೀ ಕಾರ್ತೀಕ ಶುದ್ಧ ಏಕಾದಶಿಯಂದು ಗಿರಿಜಾ ಕಲ್ಯಾಣ ಹಾಗೂ ಮಾಘ ಮಾಸದ ಶುಕ್ಲ ಪಕ್ಷದ ಪೂರ್ವಾಹ್ನವಾಹಿನಿ ಅರ್ದ್ರಾ ನಕ್ಷತ್ರದಲ್ಲಿ ಮಹಾ ರಥೋತ್ಸವ ನಡೆಯುತ್ತದೆ.

ಮುಖಪುಟ /ನಮ್ಮದೇವಾಲಯಗಳು