ಮುಖಪುಟ /ನಮ್ಮದೇವಾಲಯಗಳು 

ಶ್ರೀ ಕಾಳಿಕಾಂಬಾ ದೇವಾಲಯ

Kalikamba Temple, Kengeri satalite town, ಕೆಂಗೇರಿ ಉಪನಗರ ಕಾಳಿಕಾಂಬಾ ದೇವಾಲಯಟಿ.ಎಂ.ಸತೀಶ್

ಬೆಂಗಳೂರು ದಕ್ಷಿಣ ತಾಲೂಕಿನಲ್ಲಿರುವ ಕೆಂಗೇರಿ ರಾಜ್ಯ ರಾಜಧಾನಿಯ ಅತ್ಯಂತ ಹಳೆಯ ಹೊರವಲಯಗಳಲ್ಲಿ ಒಂದು. ಬೆಂಗಳೂರು ನಗರದ ಜನದಟ್ಟಣೆ ಕಡಿಮೆ ಮಾಡಲು ಕೆಂಗೇರಿ ಉಪನಗರವನ್ನೂ ರೂಪಿಸಲಾಯಿತು.

ಈ ಉಪನಗರದ ಆರಂಭದಲ್ಲೇ ಸ್ಥಳೀಯರಾದ ಮುನಿಯಲ್ಲಪ್ಪ, ಮುದ್ದುರಂಗಾಚಾರ್ ಮೊದಲಾದ ಹತ್ತೂ ಸಮಸ್ತರು ಸೇರಿ ಇಲ್ಲಿ ಕಾಳಿಕಾಂಬಾ ದೇವಾಲಯವನ್ನು ನಿರ್ಮಿಸಿದರು. ಅಂದಿನಿಂದ ಕೆಂಗೇರಿ ಉಪನಗರದ 6ನೇ ಮುಖ್ಯರಸ್ತೆಯ 6ನೇ ಕ್ರಾಸ್ ಕಾಳಿಕಾಂಬಾ ದೇವಸ್ಥಾನದ ರಸ್ತೆ ಎಂದೇ ಖ್ಯಾತವಾಗಿದೆ.

ಹಿಂದೆ ಪುಟ್ಟದಾಗಿದ್ದ ಗುಡಿ ಇಂದು ನವೀಕರಣಗೊಂಡು ವಿಸ್ತಾರವಾಗಿದೆ. ದೇವಾಲಯಕ್ಕೆ ಭವ್ಯವಾದ ಸ್ವಾಗತ ಗೋಪುರವಿದ್ದು, ಇದಕ್ಕೆ ಭದ್ರವಾದ ಕಬ್ಬಿಣದ ಗೇಟುಗಳನ್ನು ಅಳವಡಿಸಲಾಗಿದೆ. ಅಂಜಲೀಬದ್ಧ  ಸ್ತ್ರೀ ವಿಗ್ರಹಗಳ ಮೇಲೆ ಇರುವ ಗೋಪುರದಲ್ಲಿ ವಿವಿಧ ದೇವತೆಗಳ ಗಾರೆಗಚ್ಚಿನ ಮೂರ್ತಿಗಳಿವೆ.

ಈ ದ್ವಾರದ ಮೂಲಕ ಮೆಟ್ಟಿಲು ಇಳಿದರೆ ವಿಶಾಲ ದೇವಾಲಯ ಕಾಣಿಸುತ್ತದೆ. ದೇವಾಲಯದ ಮುಂದೆ ದ್ವಜಸ್ತಂಭ, ಹಿತ್ತಾಳೆಯ ಕವಚ ಹೊದಿಸಿದ ಸಿಂಹ ಹಾಗೂ ನಂದಿಯ ವಿಗ್ರಹಗಳಿವೆ. ಎಡ ಭಾಗದಲ್ಲಿರುವ Kalikamba Temple, Kengeri satalite town, ಕೆಂಗೇರಿ ಉಪನಗರ ಕಾಳಿಕಾಂಬಾ ದೇವಾಲಯಗೂಡಿನಲ್ಲಿ ನಾಗರ ಕಲ್ಲುಗಳಿವೆ. ಕಾಳಿಕಾಂಬಾ ದೇವಾಲಯದ ಪ್ರವೇಶದ ಛಾವಣಿಯ ಮೇಲೂ ಗಾರೆಗಚ್ಚಿನ ಗೋಪುರವಿದ್ದು, ಮೂರು ಗೂಡುಗಳಿವೆ. ಮಧ್ಯದ ಗೂಡಿನಲ್ಲಿ ಪಾರ್ವತಿಯ ಮೂರ್ತಿಯಿದ್ದರೆ ಎಡ ಬಲದಲ್ಲಿ ಗಣಪತಿ ಮತ್ತು ಸುಬ್ರಹ್ಮಣ್ಯನ ಗಾರೆಯ ಶಿಲ್ಪಗಳಿವೆ. ಮೂಲೆಗಳಲ್ಲಿ ಸಿಂಹದ ವಿಗ್ರಗಳಿವೆ. ಗರ್ಭಗೃಹದ ಮೇಲ್ಭಾಗದಲ್ಲಿ ಸುಂದರ ಗೋಪುರ ಹಾಗೂ ಕಳಶವಿದೆ.

ಶ್ರೀ ಕಾಳಿಕಾಂಬಾ ದೇವಿಯ ದೇವಾಲಯ ಪ್ರವೇಶ ದ್ವಾರದ ಮೇಲೆ

ಓಂ ದೇವಿ ಬ್ರಹ್ಮಣೀ ವಿದ್ಮಹೇ ಮಹಾಸತ್ಯೇಚ
ಧೀಮಹಿ ತನ್ನೋ ಶಕ್ತಿ ಪ್ರಚೋದಯಾತ್

ಎಂಬ ಶ್ಲೋಕವಿರುವ ಫಲಕವಿದೆ. ಗರ್ಭಗೃಹ ಮುಖಮಂಟಪವನ್ನು ಒಳಗೊಂಡ ಗಾರೆ, ಇಟ್ಟಿಗೆಯಿಂದ ನಿರ್ಮಿಸಿದ ಈ ದೇವಾಲಯದ ಮುಖಮಂಟಪದಲ್ಲಿ ಕಾಳಿಕಾದೇವಿಯ ಸುಂದರ ಉತ್ಸವ ಮೂರ್ತಿಯಿದೆ.

ಗರ್ಭಗೃಹದ ದ್ವಾರದ ಎಡ ಬಲದಲ್ಲಿ ಗಣಪತಿ ಮತ್ತು ಸುಬ್ರಹ್ಮಣ್ಯಸ್ವಾಮಿಯ ಕಲ್ಲಿನ ಮೂರ್ತಿಗಳಿವೆ. ಪ್ರಧಾನಗರ್ಭಗೃಹದಲ್ಲಿ ಕೆಳಗೆ ಶಿವಲಿಂಗವಿದ್ದು, ಮೇಲೆ ತಾಯಿ ಕಾಳಿಕಾಂಬೆಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.

ಪ್ರತಿ ಸೋಮವಾರ ಇಲ್ಲಿ ಶಿವನಿಗೆ ರುದ್ರಾಭಿಷೇಕ ನಡೆದರೆ, ಮಂಗಳವಾರ ಹಾಗೂ ಶುಕ್ರವಾರಗಳಂದು ಕಾಳಿಕಾಂಬೆಗೆ ವಿಶೇಷ ಪೂಜೆ ನೆರವೇರುತ್ತದೆ. ನವರಾತ್ರಿಯ ಕಾಲದಲ್ಲಿ ಒಂಭತ್ತೂ ದಿನ ತಾಯಿಗೆ ವಿವಿಧ ಅಲಂಕಾರಗಳನ್ನು ಮಾಡಲಾಗುತ್ತದೆ. ದಸರೆಯ ದಿನ ಬನ್ನಿಪೂಜೆ ನಡೆಯುತ್ತದೆ. ದೇವಾಲಯದ ಆವರಣದಲ್ಲಿಯೇ ಬನ್ನಿವೃಕ್ಷ ಹಾಗೂ ಅಶ್ವತ್ಥಕಟ್ಟೆಯಿದೆ.

Kalikamba Temple, Kengeri satalite town, ಕೆಂಗೇರಿ ಉಪನಗರ ಕಾಳಿಕಾಂಬಾ ದೇವಾಲಯಇನ್ನು ಪ್ರತಿ ವರ್ಷ ಚೈತ್ರ ಪೌರ್ಣಿಮೆಯಂದು ಇಲ್ಲಿ ತಾಯಿಯ ಉತ್ಸವ ಜರುಗುತ್ತದೆ. ಅಂದು ಬೆಂಗಳೂರಷ್ಟೇ ಅಲ್ಲ, ಕರ್ನಾಟಕದ ಮೂಲೆಮೂಲೆಗಳಿಂದ ಅಷ್ಟೇಕೆ ತಮಿಳುನಾಡಿನ ಈರೋಡ್ ಪ್ರದೇಶದಿಂದಲೂ ಭಕ್ತರು ಆಗಮಿಸುತ್ತಾರೆ.

ಇಲ್ಲಿ ಪಾಂಚರಾತ್ರಾಗಮದ ರೀತ್ಯ ನಿತ್ಯ ಪೂಜಾ ಕೈಂಕರ್ಯಗಳು ಜರುಗುತ್ತವೆ. ಪ್ರತಿ ಅಮಾವಾಸ್ಯೆಯಂದು ವಿಶೇಷ ಪೂಜೆ ನಡೆಸಲಾಗುತ್ತದೆ. ಮಹಾ ಶಿವರಾತ್ರಿಯ ದಿನ ಹಾಗೂ ಕಾರ್ತೀಕಮಾಸದಲ್ಲಿ ಶಿವಲಿಂಗಕ್ಕೆ ವಿಶೇಷ ಅಲಂಕಾರ, ಅಭಿಷೇಕಗಳು ನಡೆಯುತ್ತವೆ. ಪ್ರತಿ ತಿಂಗಳ ಪೌರ್ಣಿಮೆ ನಂತರದ ಚತುರ್ಥಿಯಂದು ಸಂಕಷ್ಟ ಹರ ಚತುರ್ಥಿ ಹಾಗೂ ಪೌರ್ಣಿಮೆಯಂದು ಶ್ರೀ ಸತ್ಯನಾರಾಯಣ ಪೂಜೆ ಸಾಂಗವಾಗಿ ನಡೆಯುತ್ತದೆ. ಆಷಾಢ ಮಾಸದಲ್ಲಿ ತಾಯಿ ಚಾಮುಂಡೇಶ್ವರಿ ವರ್ಧಂತಿ ಉತ್ಸವವೂ ನಡೆಯುತ್ತದೆ.

ದೇವಾಲಯದ ಆವರಣದಲ್ಲಿ ಆಂಜನೇಯನಿಗೆ ಹಾಗೂ ನವಗ್ರಹಗಳಿಗೆ ಪ್ರತ್ಯೇಕ ಗುಡಿಗಳಿವೆ.

ಮುಖಪುಟ /ನಮ್ಮದೇವಾಲಯಗಳು