ಮುಖಪುಟ /ನಮ್ಮದೇವಾಲಯಗಳು  

ಕಾಣಿಪಾಕಂ ವಿಘ್ನೇಶ್ವರ ದೇವಾಲಯ

ಸತ್ಯದ ದೇವರೆಂದು ಖ್ಯಾತವಾದ ಗಣಪತಿ

ಟಿ.ಎಂ.ಸತೀಶ್

Kanipakam, kani pakalm, Andrapradesh, Ganesha temple, Kalahasti, Kalahastiswara, Andrapradesh, Kannadaratna.com, our temples.inಆಂಧ್ರಪ್ರದೇಶದಲ್ಲಿರುವ ವಿಘ್ನೇಶ್ವರ ಕ್ಷೇತ್ರಗಳಲ್ಲಿ ಚಿತ್ತೂರು ಜಿಲ್ಲೆಯ ಐರಲ ತಾಲೂಕಿನಲ್ಲಿರುವ ಕಾಣಿಪಾಕಂ ವಿಘ್ನೇಶ್ವರ ದೇವಾಲಯವೂ ಪ್ರಮುಖವಾದ್ದು. ಸತ್ಯ ಗಣಪತಿ ಎಂದೇ ಖ್ಯಾತವಾದ ಸ್ವಯಂಭು ವಿನಾಯಕ ಮೂರ್ತಿಯಿರುವ ಕಾಣಿಪಾಕಂ ಹಲವು ಪವಾಡಗಳ ತಾಣ.

ಸ್ಥಳ ಪುರಾಣದ ರೀತ್ಯ ಹಿಂದೆ ಈ ಗ್ರಾಮದಲ್ಲಿದ್ದ ಮೂವರು ರೈತ ಸೋದರರಿದ್ದರು. ಅವರಲ್ಲಿ ಒಬ್ಬನಿಗೆ ಕಣ್ಣು ಕಾಣುತ್ತಿರಲಿಲ್ಲ, ಮತ್ತೊಬ್ಬನಿಗೆ ಮಾತು ಬರುತ್ತಿರಲಿಲ್ಲ, ಮಗದೊಬ್ಬನಿಗೆ ಕಿವಿ ಕೇಳುತ್ತಿರಲಿಲ್ಲವಂತೆ. ಆದರೆ ಪರಸ್ಪರ ಸಹಾಯದಿಂದ ಮೂವರೂ ಜೀವಿಸುತ್ತಿದ್ದರು. ತಮ್ಮ ಹೊಲದಲ್ಲಿದ್ದ ಬಾವಿಯಿಂದ ಪೈರಿಗೆ ನೀರುಣಿಸುತ್ತಿದ್ದರಂತೆ. ಒಮ್ಮೆ ಬಾಯಿಯಲ್ಲಿ ನೀರು ಬತ್ತಿಹೋದಾಗ ಅವರು ಚಿಂತಾಕ್ರಾಂತರಾದರು. ಮತ್ತಷ್ಟು ಆಳ ತೆಗೆಯಲು ತೀರ್ಮಾನಿಸಿ ಬಾವಿಯಲ್ಲಿ ಇಳಿದು ಅಗೆದಾಗ, ಹಾರೆ ಕಲ್ಲೊಂದಕ್ಕೆ ತಗುಲುತ್ತಿದ್ದಂತೆ ಅದರಿಂದ ರಕ್ತ ಚಿಮ್ಮಿತಂತೆ. ಆ ರಕ್ತ ಸಿಂಚನದಿಂದ ಕುರುಡನಿಗೆ ಕಣ್ಣು ಬಂದರೆ, ಕಿವುಡನಿಗೆ ಕಿವಿ ಕೇಳುವಂತಾಯಿತಂತೆ, ಮತ್ತೊಬ್ಬನಿಗೆ ಮಾತು ಬಂತಂತೆ. ಈ ಪವಾಡದ ಬಗ್ಗೆ ತಿಳಿದ ಪುರಜನರು ಬಾವಿಯ ಬಳಿ ಬಂದಾಗ ಅಲ್ಲಿ ಗಣಪತಿಯ ವಿಗ್ರಹ ಗೋಚರಿಸಿತಂತೆ. ಪುರಜನರು ಆ ಗಣಪತಿ ವಿಗ್ರಹವನ್ನು ಅಲ್ಲಿಯೇ ಪ್ರತಿಷ್ಠಾಪಿಸಿ ಪೂಜಿಸಲಾರಂಭಿಸಿದರಂತೆ.

Kanipakam, kani pakalm, Andrapradesh, Ganesha temple, Kalahasti, Kalahastiswara, Andrapradesh, Kannadaratna.com, our temples.inಈ ಸುದ್ದಿ ಊರಿಂದ ಊರಿಗೆ ಹಬ್ಬಿ ಜನರು ತಂಡೋಪತಂಡವಾಗಿ ಆಗಮಿಸಿ ದೇವರಿಗೆ ತೆಂಗಿನಕಾಯಿ ಒಡೆದು, ಪೂಜೆ ಸಲ್ಲಿಸಿದರಂತೆ. ಹೀಗೆ ಜನ ಒಡೆದ ತೆಂಗಿನಕಾಯಿಯ ನೀರು ದೇವಾಲಯದ ಎದುರು ಒಂದು ಎಕರೆಯಷ್ಟು ಪ್ರದೇಶದಲ್ಲಿ ಕಲ್ಯಾಣಿಯಾಗಿ ಮಾರ್ಪಟ್ಟಿತಂತೆ. ಜೊತೆಗೆ ದೇವರ ಬಳಿಯ ಬಾಯಿಯಿಂದ ನೀರು ಉಕ್ಕಿ ಕಲ್ಯಾಣಿ ತುಂಬಿ ನೀರು ಹೊರ ಹರಿಯಲಾರಂಭಿಸಿತಂತೆ. ಈ ಪ್ರದೇಶದಲ್ಲಿ ತಮಿಳು ಭಾಷಿಕರು ಹೆಚ್ಚಾಗಿರುವ ಕಾರಣ ಇವರು ಇದಕ್ಕೆ ಕಾಣಿಪಾಕಂ ಎಂದು ಕರೆದರಂತೆ. ಕಾಣಿ ಎಂದರೆ ಒಂದು ಎಕರೆ ಎಂದೂ, ಪರಕಂ ಎಂದರೆ ಹರಿಯುವ ನೀರೆಂದೂ ಅರ್ಥ.  ಹೀಗಾಗಿ ಇದು ಕಾಣಿಪರಕಂ ಎಂದು ಖ್ಯಾತವಾಗಿತ್ತು. ಕಾಲಾನಂತರದಲ್ಲಿ ಕಾಣಿಪಾಕಂ ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ.   

Kanipakam, kani pakalm, Andrapradesh, Ganesha temple, Kalahasti, Kalahastiswara, Andrapradesh, Kannadaratna.com, our temples.inಜೋಳರ ಕಾಲದಲ್ಲಿ ಅಂದರೆ 11ನೇ ಶತಮಾನದಲ್ಲಿ ಒಂದನೇ ಕುಲತುಂಗ ಚೋಳ ಇಲ್ಲಿದ್ದ ದೇವಾಲಯವನ್ನು ವಿಸ್ತರಣೆ ಮಾಡಿ ಭವ್ಯ ದೇವಾಲಯ ನಿರ್ಮಿಸಿದನೆಂದು ಹೇಳಲಾಗುತ್ತದೆ. ಬಳಿಕ 1336ರಲ್ಲಿ ವಿಜಯನಗರದ ಅರಸರು ದೇವಾಲಯಕ್ಕೆ ಗೋಪುರ ನಿರ್ಮಿಸಿದರೆಂದೂ ತಿಳಿದುಬರುತ್ತದೆ. ಈ ದೇವಾಲಯದ ಜೀರ್ಣೋದ್ಧಾರ ಮಾಡಲಾಗಿದ್ದು, ಐದು ಅಂತಸ್ತುಗಳ ಭವ್ಯ ಗೋಪುರ, ಮುಖ ಮಂಟಪ ನಿರ್ಮಿಸಲಾಗಿದೆ.

ದೇವಾಲಯದ ಪ್ರಧಾನ ಗರ್ಭಗೃಹದಲ್ಲಿ ಬಾವಿಯಲ್ಲಿ ಸಿಕ್ಕ ಸ್ವಯಂಭು ವಿನಾಯಕ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಈ ವಿಘ್ನೇಶ್ವರ ಮೂರ್ತಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಎಂದೂ ಹೇಳಲಾಗುತ್ತದೆ. 50 ವರ್ಷಗಳ ಹಿಂದೆ ಲಕ್ಷ್ಮಮ್ಮ ಎಂಬ ಭಕ್ತರೊಬ್ಬರು ಮಾಡಿಸಿಕೊಟ್ಟಿದ್ದ ಬೆಳ್ಳಿಯ ಕವಚ, ಕಿರೀಟ ಎಲ್ಲವೂ ಈಗ ಚಿಕ್ಕದಾಗಿದ್ದು, ದೇವರಿಗೆ ತೊಡಿಸಲು ಆಗುವುದಿಲ್ಲವಂತೆ. ಹೀಗಾಗಿ ದೇವರ ಮೂರ್ತಿ ಬೆಳೆಯುತ್ತಿದೆ ಎಂಬುದು ಸಾಬೀತಾಗುತ್ತದೆ ಎನ್ನುತ್ತಾರೆ ದೇವಾಲಯದ ಆಡಳಿತ ಮಂಡಳಿಯವರು. ಕಳೆದ ಕೆಲವು ದಶಕಗಳಿಂದ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ, ದೇಗುಲದ ಮುಂದಿರುವ ಕಲ್ಯಾಣಿಯಲ್ಲಿ ಸ್ನಾನ ಮಾಡಿ ದೇವರ ದರ್ಶನ ಮಾಡಿದರೆ ಸಕಲ ರೋಗ ನಿವಾರಣೆ ಆಗುತ್ತದೆ. ಮನದಲ್ಲಿ ಅಂದು ಕೊಂಡಿದ್ದು ನೆರವೇರುತ್ತದೆ ಎಂಬ ನಂಬಿಕೆ ಇದೆ. ಹಲವರು ಇಲ್ಲಿ ಬಂದು ಸತ್ಯ ಮಾಡಿಸುವ ಪರಿಪಾಠವೂ ಇದೆ.

ಬೆಳಗ್ಗೆ 4ಗಂಟೆಗೆ ತೆರೆಯುವ ದೇವಾಲಯದಲ್ಲಿ ರಾತ್ರಿ 9.30ರವರೆಗೂ ವಿವಿಧ ಪೂಜೆ, ಅಭಿಷೇಕಗಳು ನಡೆಯುತ್ತವೆ.  ಬೆಂಗಳೂರಿನಿಂದ ತಿರುಪತಿಗೆ ಹೋಗುವವರು ಸಾಮಾನ್ಯವಾಗಿ ಮಾರ್ಗ ಮಧ್ಯೆಯೇ ಇರುವ ಈ ಗಣಪತಿ ದೇವಾಲಯಕ್ಕೂ ಹೋಗಿ ಬರುತ್ತಾರೆ.

ಮುಖಪುಟ /ನಮ್ಮದೇವಾಲಯಗಳು