ಮುಖಪುಟ /ನಮ್ಮದೇವಾಲಯಗಳು   

65 ಅಡಿ ಪದ್ಮಾಸನಾರೂಢ ಶಿವಪ್ರತಿಮೆ

old Airport road shiva temple, our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಬಯಲು ಆಲಯದಲ್ಲಿ ವಿರಾಜಮಾನನಾಗಿರುವ ಯೋಗಮೂರ್ತಿಯೇ ಧ್ಯಾನಮುದ್ರೆಯಲ್ಲಿರುವ ಪರಮೇಶ್ವರ. ಕೆಂಪ್ ಫೋರ್ಟ್ ವಾಣಿಜ್ಯ ಮಳಿಗೆಯ ಹಿಂಭಾಗದಲ್ಲಿ ಇರುವ ಈ ಶಿವಮೂರ್ತಿ 65 ಅಡಿ ಎತ್ತರವಿದೆ. ಶಿವನ ಜಟೆಯಿಂದ ಪವಿತ್ರ ಗಂಗೆ ಧರೆಗೆ ಬೀಳುವಂತೆ ಶಿವಪ್ರತಿಮೆಯನ್ನು ನಿರ್ಮಿಸಲಾಗಿದೆ.

ಸಿಮೆಂಟಿನಿಂದ ನಿರ್ಮಿಸಲಾಗಿರುವ ಸಮಪ್ರಮಾಣದ ಗೋಪಿವರ್ಣದ ಈ ಸುಂದರ ಮೂರ್ತಿ ತನ್ನ ಸೊಬಗು ಹಾಗೂ ಚೆಲುವಿನಿಂದ ಆಸ್ತಿಕರು ಮತ್ತು ನಾಸ್ತಿಕರು ಇಬ್ಬರನ್ನೂ ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದಾನೆ. ಹೀಗಾಗೇ ಈ ಬಯಲು ಶಿವಾಲಯ ಒಂದು ಪ್ರವಾಸಿ ತಾಣವಾಗಿಯೂ ಮಾರ್ಪಟ್ಟಿದೆ.

ಈ ಪ್ರತಿಮೆಯ ಹಿಂಭಾಗದಲ್ಲಿ ಕೃತಕ ಗುಹೆಯನ್ನು ನಿರ್ಮಿಸಲಾಗಿದ್ದು, ಈ ಗುಹೆಯಲ್ಲಿ ದ್ವಾದಶ ಜ್ಯೋತಿರ್ಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದೆ. ಪವಿತ್ರ ಅಮರನಾಥ ಗುಹೆಯಲ್ಲಿ ಪ್ರತಿವರ್ಷ ಉದ್ಭವಿಸುವ ಹಿಮಲಿಂಗವನ್ನು ಸಹ ಇಲ್ಲಿ ಕಾಣಬಹುದಾಗಿದೆ. ಹೀಗಾಗಿ ಈ ದೇವಾಲಯಕ್ಕೆ ಬಂದರೆ ಶಿವನಿರುವನೆಂದು ಹೇಳಲಾಗುವ ಕೈಲಾಶವನ್ನೇ ನೋಡಿದಂತೆ ಭಾಸವಾಗುತ್ತದೆ.

ಚತುರ್ಭುಜನಾದ ಶಿವನಿಲ್ಲಿ ಪದ್ಮಾಸನದಲ್ಲಿ ಧ್ಯಾನಮಗ್ನನಾಗಿದ್ದಾನೆ. ಮಂದಸ್ಮಿತವಾದ ಸುಂದರ ವದನ, ಚಂದ್ರನನ್ನು ಧರಿಸಿ, ಬಂಧಿಸಿದ ಜಟೆ, ಬಲಗೈಯಲ್ಲಿ ತ್ರಿಶೂಲ ಎಡಗೈನಲ್ಲಿ ಡಮರು, ಕೊರಳಲ್ಲಿ ರುದ್ರಾಕ್ಷಿ ಮಾಲೆ ಹಾಗೂ ಗಜಚರ್ಮ ಧರಿಸಿರುವ ಶಿವ ತನ್ನ ಉಳಿದೆರೆಡು ಕೈಗಳನ್ನು ಒಂದರ ಮೇಲೊಂದು ಇಟ್ಟು ಯೋಗಮುದ್ರೆಯಲ್ಲಿ ವಿರಾಜಮಾನನಾಗಿದ್ದಾನೆ.

ದೇವಾಲಯದ ಪ್ರಾಂಗಣದಲ್ಲಿ 32 ಅಡಿ ಎತ್ತರದ ಗಣಪನ ವಿಗ್ರಹ ಹಾಗೂ ನವಗ್ರಹ  ಗುಡಿಯೂ ಇದೆ. ಪ್ರತಿ ನಿತ್ಯ ಇಲ್ಲಿ ಪೂಜಾ ವಿಧಿಗಳು ಜರುಗುತ್ತವೆ. ಬೆಳಗ್ಗೆ 9ರಿಂದ ಸಂಜೆ 9ರವರೆಗೆ ದೇವಾಲಯ ಸಾರ್ವಜನಿಕರಿಗಾಗಿ ತೆರೆದಿರುತ್ತದೆ. ಮಹಾಶಿವರಾತ್ರಿಯ ದಿನ ಇಲ್ಲಿ ಶಿವದರ್ಶನಕ್ಕಾಗಿ ಸಹಸ್ರಾರು ಜನರು ಆಗಮಿಸುತ್ತಾರೆ.

ಕೆಂಪ್ ಫೋರ್ಟ್ ನ ಮಾಲಿಕರೂ ಪ್ರಖ್ಯಾತ ಉದ್ಯಮಿಗಳೂ ಆದ ರವಿ ಮೆಲ್ವಾನಿ ಅವರು ಈ ದೇವಾಲಯದ ನಿರ್ಮಾತೃ.

ಮುಖಪುಟ; /ನಮ್ಮದೇವಾಲಯಗಳು