ಮುಖಪುಟ /ನಮ್ಮ ದೇವಾಲಯಗಳು  

ನಾರಾಯಣ, ಯೋಗಾ ನರಸಿಂಹರ ನೆಲೆವೀಡು ಕೆರೆ ತೊಣ್ಣೂರು

keretonnur yoganarasimhaಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನಲ್ಲಿರುವ ಪವಿತ್ರ ಪುಣ್ಯಕ್ಷೇತ್ರ ಕೆರೆ ತೊಣ್ಣೂರು. ಪಾಂಡವಪುರದಿಂದ ಕೇವಲ 9 ಕಿಮೀ. ದೂರದಲ್ಲಿರುವ ಈ ಕುಗ್ರಾಮ ಆಚಾರ್ಯತ್ರಯರಲ್ಲಿ ಒಬ್ಬರಾದ ಶ್ರೀರಾಮಾನುಜಾಚಾರ್ಯರ ಪಾದಸ್ಪರ್ಶದಿಂದ ಪುನೀತವಾದ ಪುಣ್ಯಭೂಮಿ.

ತೊಂಡನೂರು, ತೊಂಡನೂರಗ್ರಹಾರ, ಯಾದವಪುರ, ಯಾದವನಾರಾಯಣ ಚತುರ್ವೇದಿಮಂಗಲ ಎಂಬ ಹೆಸರುಗಳು ಈ ಊರಿಗೆ ಈದ್ದ ಬಗ್ಗೆ ಶಾಸನಗಳಲ್ಲಿ ಉಲ್ಲೇಖವಿದೆ. ರಾಜ ವಿಷ್ಣುವರ್ಧನನ ತಾಯಿ ಮೊದಲ ಮಹಾದೇವಿ ಈ ಊರಿನಲ್ಲಿ ತುಪ್ಪಲೇಶ್ವರ ದೇವಾಲಯ ಕಟ್ಟಿಸಿದಳೆಂದೂ ಅದಕ್ಕೆ ಹೊಯ್ಸಳರ ದೊರೆ ವಿಷ್ಣುವರ್ಧನ ದತ್ತಿ ಬಿಟ್ಟ ಬಗ್ಗೆಯೂ ಶಾಸನಗಳಲ್ಲಿ ಉಲ್ಲೇಖವಿದೆ.

ಜೈನಮತಾವಲಂಬಿಯಾಗಿದ್ದ ವಿಷ್ಣುವರ್ಧನನನ್ನು ವೈಷ್ಣವ ಮತಕ್ಕೆ ಮತಾಂತರಿಸಿದ ಆಚಾರ್ಯರು ಆತನಿಂದ ಕಟ್ಟಿಸಿದ ಪಂಚನಾರಾಯಣ ದೇವಾಲಯಗಳ ಪೈಕಿ ಒಂದು ಇಲ್ಲಿದೆ. ಇದುವೇ ಲಕ್ಷ್ಮೀನಾರಾಯಣ ದೇವಾಲಯ ಎಂಬ ಪ್ರತೀತಿಯೂ ಇದೆ.

ಒಂದನೆಯ ನರಸಿಂಹನ ಕಾಲದಲ್ಲಿ ಕೃಷ್ಣನ ದೇವಾಲಯ ಹಾಗೂ ಇಲ್ಲಿರುವ ಕೈಲಾಸೇಶ್ವರ ದೇವಾಲಯವನ್ನೂ ನಿರ್ಮಿಸಲಾಗಿದೆ ಎಂದು ತಿಳಿದುಬರುತ್ತದೆ. ಈ ಊರಿನ ಪುರಾತನ ಯೋಗಾನರಸಿಂಹ ದೇವಾಲಯವೂ ಈ ಕಾಲದಲ್ಲೇ ಅಭಿವೃದ್ಧಿಹೊಂದಿದೆ ಎಂದೂ ತಿಳಿದುಬರುತ್ತದೆ. ಇಮ್ಮಡಿ ಬಲ್ಲಾಳನ ಕಾಲದಲ್ಲಿ ಈ ದೇವಾಲಯಗಳನ್ನು ವಿಸ್ತರಿಸಲಾಗಿದೆ.

Kere tonnur temple complexಗರ್ಭಗೃಹ, ಸುಕನಾಸಿ ಮತ್ತು ನವರಂಗಗಳನ್ನು ಒಳಗೊಂಡ ಲಕ್ಷ್ಮೀನಾರಾಯಣನ ಗುಡಿ ಸುಂದರವಾಗಿದೆ.  ದಪ್ಪ ಗ್ರಾನೈಟ್ ಕಲ್ಲುಗಳಿಂದ ಕಟ್ಟಲಾಗಿರುವ ದೇವಾಲಯದ ಹೊರ ಭಿತ್ತಿಗಳಲ್ಲಿ ಚೌಕ ಅರೆಗಂಬಗಳೂ ಆಳವಿಲ್ಲದ ಗೂಡುಗಳೂ ಮೇಲೆ ಪಿರಮಿಡಾಕೃತಿಯ ಅರೆಗೋಪುರಗಳೂ ಇವೆ; ಬುಡದಲ್ಲಿ ಅಷ್ಟಕೋನಾಕೃತಿಯ ಅಥವಾ ದುಂಡಾದ ದಿಂಡುಗಳಿವೆ.  ನವರಂಗದಲ್ಲಿ ತಿರುಗಣೆಯಲ್ಲಿ ಕಡೆದು ಹೊಳಪುಕೊಟ್ಟು ಮಾಡಿರುವ ಹೊಯ್ಸಳ ರೀತಿಯ ಬಳಪದಕಲ್ಲಿನ ಕಂಬಗಳಿವೆ. ಮುಖಮಂಟಪ ಮತ್ತು ಪಾತಾಳಾಂಕಣಗಳು, ಸುತ್ತಲೂ ಎತ್ತರವಾಗಿ ನಿರ್ಮಿತವಾಗಿರುವ ಎರಡು ಸುತ್ತು ಪ್ರಾಕಾರಗಳು ವಿಜಯನಗರ ಮತ್ತು ಮೈಸೂರರಸರ ಕಾಲದವೆಂದು ಇತಿಹಾಸಜ್ಞರು ಹೇಳುತ್ತಾರೆ.

ಮೂಲ ದೇವಾಲಯದ ಪಕ್ಕದಲ್ಲಿಯೇ ಇರುವ ಲಕ್ಷ್ಮೀದೇವಿಯ ಗುಡಿಯನ್ನು ವಿಷ್ಣುವರ್ಧನನ ಕಾಲದಲ್ಲಿ ಸುರಿಗೆಯ ನಾಗಯ್ಯನೆಂಬ ದಂಡನಾಯಕ ಕಟ್ಟಿಸಿದುದಾಗಿ ಶಾಸನದಿಂದ ತಿಳಿದುಬರುತ್ತದೆ.

Ramanujacharyaಊರಿನಲ್ಲಿರುವ ಪುರಾತನ ಕೃಷ್ಣನ ಮತ್ತು ಕೈಲಾಸೇಶ್ವರನ ದೇವಾಲಯಗಳೂ ದೊಡ್ಡದಾಗಿವೆ.  ಕೃಷ್ಣನ ದೇವಾಲಯದ ಉನ್ನತವಾದ ಪ್ರಾಕಾರದ ಆಚೆ ಬೇರೆಯಾಗಿ ದೊಡ್ಡದಾದ ಪ್ರವೇಶದ್ವಾರವೊಂದಿದೆ.  ಅದಕ್ಕೆ ವೀರಬಲ್ಲಾಳನ ಗೋಪುರ ಎಂಬ ಹೆಸರಿದೆ.  ಅದು ಬಲ್ಲಾಳನ ಕಾಲದಲ್ಲಿ ನಿರ್ಮಿಸಿದ್ದಿರಬಹುದು.  ಆ ದೇವಾಲಯದಲ್ಲಿ ಸುಖಾಸೀನನಾದ ಕೃಷ್ಣನ ದೊಡ್ಡ ಮೂರ್ತಿ, ಇಕ್ಕೆಲಗಳಲ್ಲಿ ನಿಂತಿರುವ ರುಕ್ಮಿಣಿ ಸತ್ಯಭಾಮೆಯರ ಮೂರ್ತಿಗಳೊಡನೆ ಕೂಡಿ, ಗಂಭೀರವಾಗಿ ಸುಂದರವಾಗಿದೆ.  ಇಲ್ಲಿಯ ವೇಣುಗೋಪಾಲ ರುಕ್ಮಿಣಿ ಸತ್ಯಭಾಮೆಯರ ಲೋಹದ ಉತ್ಸವ ಮೂರ್ತಿಗಳೂ ಆಕರ್ಷಕವಾಗಿವೆ.  ಇವು ವಿಜಯನಗರದ ಕಾಲದವು.  ಶಿಥಿಲವಾಗಿರುವ ಕೈಲಾಸೇಶ್ವರ ದೇವಾಲಯದ ಗೋಡೆಗಳ ಮೇಲೂ ದಿಂಡುಕಲ್ಲುಗಳ ಮೇಲೂ ಹಲವು ತಮಿಳು ಶಾಸನಗಳಿವೆ.  ನರಸಿಂಹ ದೇವಾಲಯದಲ್ಲಿ ಯೋಗಾನರಸಿಂಹ ಮೂರ್ತಿಯಿದೆ.  ಈ ದೇವಾಲಯದ ನವರಂಗದ ಮೂಲೆಯೊಂದರಲ್ಲಿ ರಾಮಾನುಜಾಚಾರ್ಯರ  ಮೂರ್ತಿಯಿದೆ.  ರಾಜ ವಿಷ್ಣುವರ್ಧನನನ್ನು ವೈಷ್ಣವ ಮತಕ್ಕೆ ಮತಾಂತರಿಸಿದಾಗ ಸಾವಿರ ಜನರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಬೇಕೆಂಬ ಷರತ್ತನ್ನು ರಾಮಾನುಜಾಚಾರ್ಯರಿಗೆ ವಿಧಿಸಲಾಯಿತಂತೆ.

ದೇವಾಲಯದಲ್ಲಿ ಪರದೆಯ ಹಿಂದೆ ಕುಳಿತ ಆಚಾರ್ಯರು ಎಲ್ಲರ ಪ್ರಶ್ನೆಗಳಿಗೂ ಸಮಂಜಸ ಉತ್ತರ ಕೊಟ್ಟರು. ಆಗ ಆಚಾರ್ಯರನ್ನು ಕಣ್ಣಾರೆ ಕಾಣಲು ಪರದೆ ತೆಗೆದಾಗ ಆದಿಶೇಷನ ರೂಪದಲ್ಲಿ ಆಚಾರ್ಯರು ಗೋಚರಿಸಿದರಂತೆ. ಇಂದಿಗೂ ಇಲ್ಲಿ  ಅದೇ ರೂಪದ ಆಚಾರ್ಯರ ಮೂರ್ತಿ ಇದೆ.

Kere tonnur kereಈ ಊರಿಗೆ ಹೊಂದಿಕೊಂಡಂತೆ ಭವ್ಯವಾದ ತುಂಬುಕೆರೆಯಿದೆ.  ಹೊಯ್ಸಳರ ಕಾಲದಲ್ಲಿಯೇ ನಿರ್ಮಿತವಾಗಿದ್ದ ಯಾದವಸಮುದ್ರವೇ ಇದಾಗಿರಬೇಕು ಎಂದು ಹೇಳಲಾಗುತ್ತದೆ. ಬೆಟ್ಟಗಳ ಸಾಲುಗಳ ಮಧ್ಯೆ ಇರುವ ಈ ಕೆರೆಯ ಆಳ 300 ಅಡಿ. ಅತ್ಯಂತ ವಿಶಾಲವಾದ ಹಾಗೂ ಉದ್ದವಿದ್ದು ಸಾಗರದಂತೆ ಕಾಣುತ್ತದೆ. ಆಚಾರ್ಯ ರಾಮಾನುಜಾಚಾರ್ಯರು ಹಿಂದೆ ದ್ವಾಪರದಲ್ಲಿ ಶ್ರೀಕೃಷ್ಣ ಪರಮಾತ್ಮ ಪಂಚ ಅಪ್ಸರೆಯರೊಂದಿಗೆ ಇಲ್ಲಿ ಜಲಕ್ರೀಡೆ ಆಡಿದ್ದನೆಂದು ಅರಿತು, ಎರಡು ಬೆಟ್ಟಗಳ ನಡುವೆ ಕಟ್ಟೆ ಕಟ್ಟಿಸಿ ಕೆರೆ ನಿರ್ಮಿಸುವಂತೆ ಸೂಚಿಸಿದರೆಂದೂ, ಕೆರೆ ನಿರ್ಮಾಣವಾದ ದಿನದಿಂದ ಇಂದಿನವರೆಗೂ ಬತ್ತಿಲ್ಲವೆಂದೂ ಹೇಳಲಾಗುತ್ತದೆ. ಈ ಕೆರೆಯ ಒಳಗೆ ಪುರಾತನವಾದ ಚಿನ್ನದ ದೇವಾಲಯವಿದ್ದು, ಹಲವು ಬಾರಿ ಮೀನುಗಾರರಿಗೆ ಚಿನ್ನದ ಹಾಗೂ ಲೋಹದ ವಿಗ್ರಹಗಳು ಸಿಕ್ಕಿರುವ ಉದಾಹರಣೆಗಳೂ ಇವೆ ಎಂದು ಊರ ಹಿರಿಯರು ಹೇಳುತ್ತಾರೆ.

ಬಾಗಿಲೇ ತೆರೆಯದ ದೇವಾಲಯಗಳು

ಅರ್ಚಕರ ದರ್ಬಾರ್- ಈ ಊರಿನಲ್ಲಿರುವ ನಾಲ್ಕು ದೇವಾಲಯಗಳಲ್ಲೂ ಸರಿಯಾಗಿ ಪೂಜೆ ನಡೆಯುವುದಿಲ್ಲ. ಒಂದು ದೇವಾಲಯ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆಯ ವ್ಯಾಪ್ತಿಗೆ ಒಳಪಟ್ಟರೆ, ಉಳಿದ ದೇವಾಲಯಗಳು ರಾಜ್ಯ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿವೆ. ದೇವಾಲಯದ ಪಕ್ಕದಲ್ಲೇ ಪುರೋಹಿತರುಗಳ ಮನೆ ಇದ್ದರೂ ಅವರಿಗೆ ಇಷ್ಟ ಬಂದಾಗ ಮಾತ್ರವೇ ಬಾಗಿಲು ತೆರೆಯುತ್ತಾರೆ. ಉಳಿದಂತೆ ಪಾಂಡವಪುರಕ್ಕೆ, ಮೈಸೂರಿನಗೆ ಹೋಗಿರುತ್ತಾರೆ.kere tonuur temple

ದಿನಾಂಕ 23-09-2010ರಂದು ಸಂಜೆ 6-30ಕ್ಕೆ ನಾವು ಈ ದೇವಾಲಯ ದರ್ಶನಕ್ಕೆ ಹೋದಾಗ "ಇಲ್ಲಿ ಕರೆಂಟು ಇಲ್ಲದ ಕಾರಣ ಬಾಗಿಲು ಹಾಕಲಾಗಿದೆ ಬೆಳಗ್ಗೆ ಬನ್ನಿ, ಅವರು ಊರಿಗೆ ಹೋಗಿದ್ದಾರೆ'' ಎಂದು ಪಕ್ಕದಲ್ಲೇ ಇರುವ ಹೆಂಚಿನ  ಮನೆಯ ಪುರೋಹಿತರ ಮನೆಯಲ್ಲಿದ್ದ ಹೆಂಗಸರು  ಹೇಳಿದರು.  ಸರಿ ಎಂದು ಪಾಂಡವಪುರಕ್ಕೆ ತೆರಳಿದ ನಾವು ಅಲ್ಲಿಯೇ ಉಳಿದು, ಮಾರನೆಯ ದಿನ ಬೆಳಗ್ಗೆ 8-00 ಗಂಟೆಗೆ ಕೆರೆ ತೊಣ್ಣೂರಿಗೆ ಬಂದು ವಿಚಾರಿಸಿದಾಗ ಪುರೋಹಿತರು ಈಗ ತಾನೆ ಪಾಂಡವಪುರಕ್ಕೆ ಹೋದರು ಎಂಬ ಉತ್ತರ ಕೊಟ್ಟರು. ಇನ್ನು ಮುಜರಾಯಿ ಇಲಾಖೆಗೆ ಸೇರಿದ ಕೃಷ್ಣ ದೇವಾಲಯದ ಭಟ್ಟರು ತಮ್ಮ ಮಡದಿಯೊಂದಿಗೆ ಮೈಸೂರಿಗೆ ಹೋಗಿದ್ದಾರೆ. ಅವರ ಕಾರು ಇಲ್ಲ ಎಂದ ಮೇಲೆ ಅವರು ಊರಲಿಲ್ಲ ಎಂದೇ ಅರ್ಥ ಎಂದರು ಊರಿನವರು. ಹೋಗಲಿ ನರಸಿಂಹಸ್ವಾಮಿ ದರ್ಶನ ಮಾಡೋಣ ಎಂದರೆ ಅವರು ಯಾರದೋ ಮನೆಯ ಪಿತೃಪಕ್ಷಕ್ಕೆ ಹೋಗಿದ್ದಾರೆ ಎಂಬ ಉತ್ತರ ಬಂತು. ದೂರದಿಂದ ಎರಡು ಬಾರಿ ದೇವಾಲಯ ನೋಡಲು ಹೋದ ನಾವು ಬಂದ ದಾರಿಗೆ ಸುಂಕ ಇಲ್ಲ ಎಂದು ವಾಪಸಾದೆವು.

ಊರಿನವರು ಈ ಭಟ್ಟರು ಯಾವಾಗಲೂ ಹೀಗೆ ಸ್ವಾಮಿ, ಪ್ರತಿ ದಿನ ದೂರದ ಊರಿನಿಂದ ಜನ ಬರ್ತಾರೆ ಆದರೆ, ಬಾಗಿಲು ತೆಗೆಯದ ದೇವಾಲಯ ನೋಡಿಕೊಂಡು ಬೇಜಾರಿನಿಂದ ಹೋಗ್ತಾರೆ, ಹಲವು ಭಕ್ತರು ದೇವಾಲಯದಲ್ಲಿ ಒಳ್ಳೆ ಬಲ್ಬ್ ಹಾಕಿ kere tonnur templeಎಂದು ಸಿ.ಎಫ್.ಎಲ್.ಗೆ ಆಗುವಷ್ಟು ಹಣ ಕೊಟ್ಟು ಹೋಗ್ತಾರೆ ಆದರೆ, ಭಟ್ಟರು ದೀಪಾ ಕೂಡ ಹಾಕಲ್ಲ. ಮುಜರಾಯಿ ಇಲಾಖೆಯವರು ಬೆಳಗ್ಗೆ 6 ಗಂಟೆಗೆ ದೇವಾಲಯ ತೆಗೆಯಬೇಕು ಪೂಜೆ ಮಾಡಬೇಕು ಎಂದು ಆದೇಶ ನೀಡಿದ್ದಾರೆ. ಆದರೆ, ಇಲ್ಲಿ ಒಂದು ದಿನವೂ ಸರಿಯಾದ ಸಮಯಕ್ಕೆ ದೇವಾಲಯ ತೆಗೆಯಲ್ಲ. ಅಯ್ಯನೋರು ನಾವು ದೂರು ಕೊಟ್ಟು ಯಾಕೆ ಪಾಪ ಗಂಟು ಹಾಕಿಕೊಳ್ಳೋದು  ಅಂಥ ಸುಮ್ಮನಿದ್ದೇವೆ ಎಂದು ನೊಂದುಕೊಂಡರು. ಕೊನೆಗೆ ನಾವು  ಊರ ಜನರಿಂದ ಫೋನ್ ನಂಬರ್ ಪಡೆದು ಕರೆ ಮಾಡಿ 10.30ರವರೆಗೆ ಕಾದರೂ ಅರ್ಚಕರು ಬರಲಿಲ್ಲ. ದುರಸ್ತಿ ಕಾರ್ಯ ನಡೆಯುತ್ತಿದ್ದ ದೇವಾಲಯವನ್ನು ಹೊರಗಿನಿಂದಲೇ ನೋಡಿಕೊಂಡು ತೃಪ್ತಿ ಪಡುವಂತಾಯಿತು. ಮೊನ್ನೆ ನೇಪಾಳದ ಕೆಲವು ಪ್ರವಾಸಿಗರು ವೆಬ್ ಸೈಟಲ್ಲಿ ಓದಿ ದೇವಾಲಯ ನೋಡಲು ಬಂದಿದ್ದರು ಅವರೂ ನಿಮ್ಮಂತೆಯೇ ಬರಿ ಹೊರ ಪ್ರಾಕಾರ ನೋಡಿಕೊಂಡು ವಾಪಸಾದರು, ಕನಿಷ್ಠ ದೇವಾಲಯದ ಬೀಗದ ಕೀ ಕೊಟ್ಟು ಹೋದರೆ, ಮನೆಯವರು ಬಂದು ಬೀಗವಾದರೂ ತೆಗೆಯಬಹುದು ಆಗ ತೀರ್ಥ ಪ್ರಸಾದ, ಮಂಗಳಾರತಿ ದೊರಕದಿದ್ದರೂ ಕನಿಷ್ಠ ದೇವರ ದರ್ಶನವಾದರೂ ಆಗತ್ತೆ. ಅಷ್ಟೂ ಮಾಡದೆ ದೂರದಿಂದ ಬರೋ ಭಕ್ತರಿಗೆ ಹೀಗೆ ನಿರಾಶೆ ಮಾಡುವುದು ಎಷ್ಟು ಸರಿ ಎಂದು ಊರವರೇ ಪ್ರಶ್ನಿಸುತ್ತಾರೆ.  ನಮ್ಮ ಓದುಗರಾದ ಟಿ.ವಿ. ನಟರಾಜ್ ಪಂಡಿತ್ ಕಳುಹಿಸಿದ ಚಿತ್ರಗಳನ್ನು (ಮೊದಲ ಮೂರು ಫೋಟೋ) ಬಳಸಿಕೊಂಡು ಲೇಖನ ಬರೆಯಲಾಗಿದೆ. ಸಂಬಂಧಿಸಿದ ಇಲಾಖೆಗಳು ಇತ್ತ ಗಮನಹರಿಸುತ್ತವೆಯೇ ಕಾದು ನೋಡಬೇಕು.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮ ದೇವಾಲಯಗಳು