ಮುಖಪುಟ
/ನಮ್ಮ
ದೇವಾಲಯಗಳು
ತೊಂಡನೂರಿನ ಯೋಗಾ
ನರಸಿಂಹ ದೇವಾಲಯ
ರಾಮಾನುಜಾಚಾರ್ಯರ 36 ಅಡಿ ಪ್ರತಿಮೆ ಇರುವ ತಾಣ
ಮಂಡ್ಯಜಿಲ್ಲೆ ಪಾಂಡವಪುರ ತಾಲೂಕಿನಲ್ಲರುವ ಪವಿತ್ರ ಪುಣ್ಯಕ್ಷೇತ್ರ ಕೆರೆ ತೊಣ್ಮೂರು. ಪಾಂಡವಪುರದಿಂದ ಕೇವಲ 9 ಕಿ.ಮೀ. ದೂರದಲ್ಲಿರುವ ಈ ಗ್ರಾಮ ಆಚಾರ್ಯತ್ರಯರಲ್ಲಿ ಒಬ್ಬರಾದ ಶ್ರೀ. ರಾಮಾನುಜಾಚಾರ್ಯರ ತಪೋಭೂಮಿ, ಕರ್ಮಭೂಮಿ.
ಈ ಊರಿಗೆ ಹಿಂದೆ ತೊಂಡನೂರು ಎಂಬ
ಹೆಸರಿತ್ತು. ತೊಂಡರ್ ಎಂದರೆ ತಮಿಳಿನಲ್ಲಿ ದಾಸ ಅಥವಾ ಭಕ್ತ ಎಂದು. ಅಂದರೆ ಭಕ್ತರಿದ್ದ
ಊರು ತೊಂಡನೂರಾಯಿತು ಎಂದು ತಿಳಿದುಬರುತ್ತದೆ. ಇದನ್ನು ಹೊಯ್ಸಳರ ದೊರೆ ಬ್ರಾಹ್ಮಣರಿಗೆ
ಅಗ್ರಹಾರವಾಗಿ ದಾನ ನೀಡಿದ್ದ ಎನ್ನುವ ಕಾರಣಕ್ಕಾಗಿ ಇದನ್ನು
ತೊಂಡನೂರ ಅಗ್ರಹಾರ ಎಂದೂ ಕರೆಯಲಾಗುತ್ತಿತ್ತಂತೆ.
ಯಾದವಪುರ, ಯಾದವನಾರಾಯಣ
ಚತುರ್ವೇದಿಮಂಗಲ ಎಂಬ ಹೆಸರುಗಳು ಈ ಊರಿಗೆ ಈದ್ದ ಬಗ್ಗೆ ಶಾಸನಗಳಲ್ಲಿ ಉಲ್ಲೇಖವಿದೆ.
ಹಿಂದೆ ಇಲ್ಲಿ ನಾಲ್ಕೂ ವೇದಗಳನ್ನು ಕಲಿಸುವ ಶ್ರೇಷ್ಠ ವಿದ್ವಾಂಸರಿದ್ದರೆಂದೂ
ಹೇಳಲಾಗುತ್ತದೆ.
ತಮಿಳುನಾಡಿನಲ್ಲಿ ವಿಶಿಷ್ಟಾದ್ವೈತ ಪ್ರಚಾರ
ಮಾಡುತ್ತಿದ್ದ ಶ್ರೀ ರಾಮಾನುಜಾಚಾರ್ಯರು ಚೋಳ ದೊರೆ
ಕ್ರಿಮಿಕಂಠಚೋಳ ಮತ್ತು ಅಧಿ ರಾಜೇಂದ್ರನ ಉಪಟಳ ತಾಳಲಾರದೆ ತಮ್ಮ ಖಾವಿ ವಸ್ತ್ರ
ತ್ಯಜಿಸಿ ಶ್ವೇತ ವಸ್ತ್ರ ಧರಿಸಿ ಮೇಲುಕೋಟೆ ಬಳಿಯ ತೊಣ್ಣೂರಿಗೆ ಬಂದರೆಂದು, ಇಲ್ಲಿ ಬಂದು
ಯೋಗಾನರಸಿಂಹ ದೇವರಿಗೆ ಶ್ವೇತವಸ್ತ್ರ ಸಮರ್ಪಿಸಿ, ಖಾವಿ ಧರಿಸಿ ಮತ್ತೆ ಸನ್ಯಾಸ
ಸ್ವೀಕರಿಸಿದರೆಂದೂ, ಬಳಿಕ ತಮ್ಮ ಶಿಷ್ಯ ತೊಂಡನೂರು ನಂಬಿ ನೆರವಿನಿಂದ ಹೊಯ್ಸಳರ ದೊರೆ
ಬಿಟ್ಟಿದೇವನ ರಾಜಾಶ್ರಯ ಪಡೆದರೆಂಬ ಉಲ್ಲೇಖವಿದೆ.
ಸ್ಥಳ ಪುರಾಣದ ರೀತ್ಯ ಬಿಟ್ಟಿದೇವನ ಮಗಳಿಗೆ
ಬ್ರಹ್ಮರಾಕ್ಷಸನ ಬಾಧೆಯಿತ್ತಂತೆ. ಈ ವಿಷಯ
ತಿಳಿದ ರಾಮಾನುಜಾಚಾರ್ಯರು, ತೊಣ್ಣೂರಿನಲ್ಲಿರುವ ಪಂಚ ಅಪ್ಸರ ತಟಾಕ ಸರೋವರದಲ್ಲಿ
ಮಿಂದು ಯೋಗಾನರಸಿಂಹ ದರ್ಶನ ಮಾಡುವಂತೆ ಸೂಚಿಸಿದರಂತೆ. ಅದರಂತೆ ರಾಜ ತನ್ನ
ಪುತ್ರಿಯೊಂದಿಗೆ ಸರೋವರದಲ್ಲಿ ಸ್ನಾನ ಮಾಡಿ ಯೋಗಾನರಸಿಂಹ ದರ್ಶನ ಮಾಡಿದಾಗ, ಈ
ದೇವಾಲಯದಲ್ಲಿರುವ ನರಸಿಂಹ ದಂಡ ಸ್ಪರ್ಶವಾಗುತ್ತಿದ್ದಂತೆ ಬ್ರಹ್ಮರಾಕ್ಷಸನ ಬಾಧೆಯಿಂದ
ರಾಜಕುಮಾರಿ ಮುಕ್ತಳಾದಳಂತೆ. ಇಂದಿಗೂ ಇಲ್ಲಿಗೆ ಬರುವ ಭಕ್ತರು ಸಕಲ ದುಷ್ಟ ಶಕ್ತಿಗಳ
ನಿವಾರಣೆಗಾಗಿ ನರಸಿಂಹದಂಡ ಸ್ಪರ್ಶ ಮಾಡಿಸಿಕೊಳ್ಳುತ್ತಾರೆ.
ರಾಮಾನುಜಾಚಾರ್ಯರು ಕೃತಯುಗದಲ್ಲಿ
ಪ್ರಹ್ಲಾದರಾಗಿ, ತ್ರೇತಾಯುಗದಲ್ಲಿ
ರಾಮನ ಅನುಜ (ಸೋದರ) ಲಕ್ಷಣರಾಗಿದ್ದರು, ದ್ವಾಪರದಲ್ಲಿ ಶ್ರೀಕೃಷ್ಣನ ಸೋದರ ಬಲರಾಮರಾಗಿ
ಜನಿಸಿದರು, ಕಲಿಯುಗದಲ್ಲಿ ರಾಮಾನುಜಾಚಾರ್ಯರಾಗಿ, ಈ ತೊಣ್ಣೂರಿನಲ್ಲಿ 12 ವರ್ಷಗಳ ಕಾಲ
ಇದ್ದು, ಶ್ರೀಬಾಷ್ಯ ರಚಿಸಿದರು ಎಂದು ದೇವಾಲಯದ ಅರ್ಚಕರು ತಿಳಿಸುತ್ತಾರೆ.
ದೇವಾಲಯವು ಗರ್ಭಾಂಕಣ, ಸುಖನಾಸಿ, ಮುಖಮಂಟಪವನ್ನು
ಒಳಗೊಂಡಿದೆ, ರಾಮಾನುಜಾಚಾರ್ಯರ ಆಣತಿಯಂತೆ ತಮಿಳುನಾಡಿನ ಕಾರೈಕುಡಿಯಿಂದ ಬಂದ ನಾಲ್ಕು ಜನ
ದಂಡನಾಯಕರು ಈ ದೇವಾಲಯವನ್ನು 12ನೇ ಶತಮಾನದಲ್ಲಿ 12 ವರ್ಷಗಳ ಕಾಲ ಅಭಿವೃದ್ಧಿಪಡಿಸಿದರು
ಎಂದೂ ಶಾಸನದಲ್ಲಿ ಉಲ್ಲೇಖವಿದೆ ಎಂದು ಅರ್ಚಕರು ಹೇಳುತ್ತಾರೆ. ನಿತ್ಯ ದೇವರಿಗೆ
ವೈಖಾನಸಾಗಮ ರೀತ್ಯ ಪೂಜೆ ನಡೆಯುತ್ತದೆ.
ಈ ಊರಿನಲ್ಲಿರುವ ದೊಡ್ಡ ಕೆರೆಗೆ ಪಂಚ ಅಪ್ಸರ
ತಟಾಕ ಎಂಬ ಹೆಸರಿದೆ. ಇಲ್ಲಿ ಗೋಪಾಲಕೃಷ್ಣ ಸ್ವಾಮಿಯ ಜೊತೆ ಗೋಪಿಕಾಸ್ತ್ರೀಯರು ಜಲಕ್ರೀಡೆ
ಆಡುತ್ತಿದ್ದರೆಂಬ ಪ್ರತೀತಿ ಇದೆ. ಇಲ್ಲಿ ವ್ಯರ್ಥವಾಗಿ ನೀರು ಹರಿದು
ಹೋಗುತ್ತಿದ್ದುದನ್ನು ಕಂಡ ರಾಮಾನುಜಾಚಾರ್ಯರು ಎರಡು ಬೆಟ್ಟಗಳ ನಡುವೆ ಕಟ್ಟೆ
ಕಟ್ಟಿಸಿದರೆಂದೂ ಹೇಳುತ್ತಾರೆ. ಈ ಕೆರೆಗೆ ಯಾದವ ಸಮುದ್ರ, ರಾಮಾನುಜ ತೀರ್ಥ ಎಂಬ ಹೆಸರೂ
ಇದೆ. ನರಸಿಂಹ ದೇವರ ದೇವಾಲಯದಲ್ಲಿ ಬೆಳಗ್ಗೆ 8ರಿಂದ ಸಂಜೆ 5ಗಂಟೆಯವರೆಗೆ ಮಾತ್ರ ದರ್ಶನಕ್ಕೆ ಅವಕಾಶವಿದೆ. ರಾಮಾನುಜಾಚಾರ್ಯರ ಸಹಸ್ರಮಾನೋತ್ಸವದ ಅಂಗವಾಗಿ 2017ರ ಏಪ್ರಿಲ್ 25ರಂದು ಆಚಾರ್ಯರ ಕರ್ಮಭೂಮಿ, ಪುಣ್ಯಭೂಮಿ ಮತ್ತು ತಪೋಭೂಮಿಯಾದ ತೊಣ್ಣೂರಿನಲ್ಲಿ 36 ಅಡಿ ಎತ್ತರದ ಅಂಜಲೀಬದ್ಧರಾಗಿ ದಂಡ ಹಿಡಿದಿರುವ ರಾಮಾನುಜಾಚಾರ್ಯರ ಮೂರ್ತಿಯನ್ನು ಗಿರಿ ಶ್ರೇಣಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. | |||