ಮುಖಪುಟ /ನಮ್ಮದೇವಾಲಯಗಳು   

 

ಹುಳಿಮಾವು ಕೋದಂಡರಾಮ ದೇವಾಲಯ

40 ಪಲ್ಲಕ್ಕಿ ಉತ್ಸವ ನಡೆಯುವ ದೇಗುಲ

Hulimavu Kodandarama Temple, pallakki Utsava, Bhannerughatta Road, ಕೋದಂಡರಾಮಸ್ವಾಮಿ ದೇವಾಲಯ, ಹುಳಿಮಾವು, Temples in and around Bangalore.*ಟಿ.ಎಂ.ಸತೀಶ್

ಬೆಂಗಳೂರಿನಿಂದ ಬನ್ನೇರುಘಟ್ಟಕ್ಕೆ ಹೋಗುವ ರಸ್ತೆಯಲ್ಲಿರುವ ಹುಳಿಮಾವು ಹಳೆಯ ಊರುಗಳಲ್ಲಿ ಒಂದು. ಈಗ ಬೆಂಗಳೂರಿನ ಭಾಗವೇ ಆಗಿ ನಗರವಾಗಿ ಮಾರ್ಪಟ್ಟಿರುವ ಹುಳಿಮಾವು, ಹಿಂದೆ ಅಮರಾಪುರ ಎಂದು ಕರೆಸಿಕೊಂಡಿತ್ತು ಎಂದು ಶಾಸನಗಳು ಹೇಳುತ್ತವೆ.

17ನೇ ಶತಮಾನದಲ್ಲಿ ಅಂದರೆ 1652ರಲ್ಲಿ ಈ ಊರು ಸಾರಕೇಯ (ಈಗಿನ ಸಾರಕ್ಕಿ) ಅರಸರ ಆಳ್ವಿಕೆಗೆ ಒಳಪಟ್ಟಿತ್ತು ಮತ್ತು ಈ ಪ್ರದೇಶದಲ್ಲಿ ಯಥೇಚ್ಛವಾಗಿ ಮಾವಿನ ಮರಗಳು ಅದರಲ್ಲೂ ಹುಳಿಯಾದ ಮಾವಿನ ಕಾಯಿ ಬಿಡುವ ಮರಗಳಿದ್ದವಂತೆ. ಹೀಗಾಗಿಯೇ ಇದಕ್ಕೆ ಆಮ್ರ ಪುರ ಎಂದು ಕರೆಯುತ್ತಿದ್ದರಂತೆ. ಆಮ್ರ ಎಂದರೆ ಹುಳಿಯಾದ ಮಾವು ಎಂದರ್ಥ. ಕಾಲಕ್ರಮೇಣ ಆಮ್ರಪುರ ಅಮರಾಪುರವಾಯಿತೆಂದು ತಿಳಿದುಬರುತ್ತದೆ. ಅರಸರ ಆಳ್ವಿಕೆಯೆಲ್ಲಾ ಹೋದ ಮೇಲೆ, ಇಲ್ಲಿನ ಗ್ರಾಮಸ್ಥರು ಹುಳಿ ಮಾವು ಬಿಡುತ್ತಿದ್ದ ಊರಿಗೆ ಹುಳಿ ಮಾವು ಎಂದು ಕರೆದರು. ಈಗ ಅದೇ ಹೆಸರು ಉಳಿದುಕೊಂಡಿದೆ ಎಂದು ಹೇಳಲಾಗುತ್ತದೆ.

ಈ ಊರಿನಲ್ಲಿ ಪುರಾತನವಾದ ಕೋದಂಡರಾಮಸ್ವಾಮಿ ದೇವಾಲಯವಿದೆ. ವಾಸ್ತವವಾಗಿ ಹುಳಿಮಾವು ಹಲವು ದೇವಾಲಯಗಳ ಬೀಡು. ಇಲ್ಲ ಸತ್ಯನಾರಾಯಣ, ಗುಹಾಂತರ ರಾಮಲಿಂಗೇಶ್ವರ, ಭಗವತಿ, ಈಶ್ವರ ಮೊದಲಾದ ಹಲವು ದೇವಾಲಯಗಳಿದ್ದು, ಕೋದಂಡರಾಮ ದೇವಾಲಯ ಈ ಎಲ್ಲ ದೇವಾಲಯಗಳ ಮಧ್ಯದಲ್ಲಿದೆ.

ಪುರಾತನವಾದ ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಲಾಗಿದ್ದು, ಭವ್ಯ ಆಲಯ ಗೋಪುರ, ವಿಮಾನ ಗೋಪುರ ನಿರ್ಮಿಸಲಾಗಿದೆ. 2004ರ ಫೆಬ್ರವರಿ 25ರಂದು ಜೀರ್ಣೋದ್ಧಾರಗೊಂಡ ದೇವಾಲಯದ ಗೋಪುರಗಳ ಉದ್ಘಾಟನೆಯು ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಮಹಾ ಸ್ವಾಮೀಜಿ, ಬೇಲಿ ಮಠದ ಶ್ರೀ. ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ದಿವ್ಯ ಸಾನ್ನಿಧ್ಯದಲ್ಲಿ ನೆರವೇರಿತು.

Hulimavu Kodandarama Temple, pallakki Utsava, Bhannerughatta Road, ಕೋದಂಡರಾಮಸ್ವಾಮಿ ದೇವಾಲಯ, ಹುಳಿಮಾವು, Temples in and around Bangalore.ಈ ದೇವಾಲಯಕ್ಕೆ ಎರಡು ದ್ವಾರಗಳಿವೆ.  ಒಂದು ದ್ವಾರದ ಎದುರು ಆಂಜನೇಯನ ಮತ್ತು ಮತ್ತೊಂದು ದ್ವಾರಕ್ಕೆ ನೇರವಾಗಿ ಶ್ರೀರಾಮ, ಲಕ್ಷ್ಮಣ, ಸೀತಾಮಾತೆಯ ಮೂರ್ತಿಗಳಿವೆ.  ಆಂಜನೇಯನ ಎದುರು ಇರುವ ದ್ವಾರದ ಗೋಪುರ ಎತ್ತರವಾಗಿದ್ದರೆ, ಕೋದಂಡರಾಮನ ಎದುರು ಇರುವ ಪ್ರವೇಶ ದ್ವಾರದ ಗೋಪುರ ತುಸು ಚಿಕ್ಕದಾಗಿದೆ. ದ್ವಾರಗಳ ಎಡ ಬಲದಲ್ಲಿ ಆಂಜನೇಯ ಮತ್ತು ಗರುಡನ ಮೂರ್ತಿಗಳಿವೆ. ಗೋಪುರದ ಗಾರೆಗಚ್ಚಿನ ಗೂಡುಗಳಲ್ಲಿ ಸೀತಾರಾಮರ, ಮತ್ಸ್ಯನಾರಾಯಣ, ಕಲ್ಕಿ ಮೊದಲಾದ ದಶಾವತಾರದ ಗಾರೆಯ ಶಿಲ್ಪಗಳಿವೆ. ದ್ವಾರದ ಮೆಟ್ಟಿಲ ಎಡ ಬಲದಲ್ಲಿ ಆನೆಯ ಶಿಲ್ಪಗಳಿವೆ.

ದೇವಾಲಯದಲ್ಲಿ ಸೀತಾರಾಮಲಕ್ಷ್ಮಣರ ಕಂಚಿನ ಉತ್ಸವಮೂರ್ತಿಗಳು ಹಾಗೂ ಪಂಚಲೋಹದ ಲಕ್ಷ್ಮೀನರಸಿಂಹನ ಮೂರ್ತಿಗಳೂ ಇವೆ. ರಾಮೋತ್ಸವ, ಹನುಮಜಯಂತಿಯ ಸಂದರ್ಭದಲ್ಲಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯುತ್ತದೆ.  ಪ್ರತಿವರ್ಷ ಏಪ್ರಿಲ್ ತಿಂಗಳಿನಲ್ಲಿ ಇಲ್ಲಿ ಶ್ರೀ.ಕೋದಂಡರಾಮಸ್ವಾಮಿ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ಜರುಗುತ್ತದೆ. ಅಂದು ಸುತ್ತಮುತ್ತಲ ದೇವಾಲಯಗಳ ಉತ್ಸವ ಮೂರ್ತಿಗಳ ಸುಮಾರು 40 ಪಲ್ಲಕ್ಕಿಗಳು ಈ ಉತ್ಸವದಲ್ಲಿ ಭಾಗಿಯಾಗುವುದು ವಿಶೇಷ. ಈ ಬ್ರಹ್ಮ  ರಥೋತ್ಸವಕ್ಕೆ ಸುತ್ತಮುತ್ತಲ ಗ್ರಾಮಗಳಿಂದಲಷ್ಟೇ ಅಲ್ಲದೆ ಆಂಧ್ರಪ್ರದೇಶ, ತಮಿಳುನಾಡಿನಿಂದಲೂ ಭಕ್ತರು ಆಗಮಿಸುತ್ತಾರೆ.  ಬ್ರಹ್ಮರಥೋತ್ಸವದ ಸಂದರ್ಭದಲ್ಲಿ ಹೆಲಿಕಾಪ್ಟರ್ ನಿಂದ 40ಕ್ಕೂ ಹೆಚ್ಚು ಪಲ್ಲಕ್ಕಿಗಳ ಮೇಲೆ ಪುಷ್ಪವೃಷ್ಟಿ ನಡೆಸುವುದು ದೇವಾಲಯದ ವೈಶಿಷ್ಟ್ಯಗಳಲ್ಲಿ ಒಂದಾಗಿದೆ.

ಮುಖಪುಟ /ನಮ್ಮದೇವಾಲಯಗಳು