ಮುಖಪುಟ
/ನಮ್ಮದೇವಾಲಯಗಳು
ಧನ್ವಂತರಿ ಗಣಪತಿ ಹಾಗೂ ಸಂಜೀವಿನಿ ಆಂಜನೇಯ
ದೇವಾಲಯ
ಬೆಂಗಳೂರಿಗೆ 41 ಕಿ.ಲೋ. ಮೀಟರ್ ದೂರದಲ್ಲಿರುವ ಈ ಪುಟ್ಟಗ್ರಾಮ ಕ್ಷೇತ್ರವಾಗಲು ಕಾರಣ ದೇವರಾಜ ಕೊಠಾರಿ. ಅವರು ಶ್ರೀ ಭಗವಾನ್ ಮಹಾವೀರ್ ಮಾನವತಾ ಟ್ರಸ್ಟ್ ವತಿಯಿಂದ ಇಲ್ಲಿ ದೇವಾಲಯವನ್ನು ನಿರ್ಮಿಸಿದ್ದಾರೆ. ರಸ್ತೆಗೆ ಹೊಂದಿಕೊಂಡಂತೆಯೇ ಇರುವ ಈ ದೇವಾಲಯದಲ್ಲಿ ಧನ್ವಂತರಿ ಗಣಪತಿ, ಸಂಜೀವಿನಿ ಆಂಜನೇಯ, ಸುಬ್ರಹ್ಮಣ್ಯ, ನಂಜುಂಡೇಶ್ವರ ಮೊದಲಾದ ಹಲವು ದೇವತಾವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ.
ಗಣಪತಿಯ ಪಕ್ಕದಲ್ಲಿ ನಂಜುಂಡೇಶ್ವರ, ಎಡಭಾಗದಲ್ಲಿ ಸುಬ್ರಹ್ಮಣ್ಯ ದೇವಾಲಯಗಳನ್ನು ನಿರ್ಮಿಸಿರುವ ಅವರು, ದೇವಾಲಯದ ಸುತ್ತಲೂ ಶಿರಡಿ ಸಾಯಿಬಾಬಾ, ಲಕ್ಷ್ಮೀ, ಗುರುರಾಯರ ಬೃಂದಾವನವೇ ಮೊದಲಾದ ಹಲವು ಪುಟ್ಟ ಪುಟ್ಟ ವಿಗ್ರಹಗಳನ್ನೂ ಪ್ರತಿಷ್ಠಾಪಿಸಿದ್ದಾರೆ. ಪಕ್ಕದಲ್ಲಿರುವ ವಿಶಾಲ ಜಾಗದ ಬಯಲಿನಲ್ಲಿ ಕೇವಲ ಮೇಲ್ಛಾವಣಿ ಮಾತ್ರ ಇರುವ ತೆರೆದ ದೇವಾಲಯ ನಿರ್ಮಿಸಲಾಗಿದ್ದು, ಇಲ್ಲಿ 11 ಅಡಿ ಎತ್ತರದ ಸಂಜೀವಿನಿ ಆಂಜನೇಯ ಸ್ವಾಮಿಯನ್ನು ಪ್ರತಿಷ್ಠಾಪಿಸಿದ್ದಾರೆ. ಇಲ್ಲಿ ಆಂಜನೇಯನ ಪ್ರತಿಷ್ಠಾಪನೆ ಆದದ್ದು 2000ದ ಮಾರ್ಚ್ 12ರಂದು.
ವೃತ್ತಿಯಲ್ಲಿ ಚಾರ್ಟ ರ್ಡ್ ಅಕೌಂಟೆಂಟ್ ಆದ ದೇವರಾಜ ಕೊಠಾರಿ ಅವರು ದೇವಾಲಯದ ಪಕ್ಕದಲ್ಲಿ ವಿಶಾಲವಾದ ಸಭಾಭವನವನ್ನೂ ನಿರ್ಮಿಸಿದ್ದು, ಇಲ್ಲಿ ತಿಂಗಳಿಗೊಮ್ಮೆ ಉಚಿತ ಆರೋಗ್ಯ ಶಿಬಿರವನ್ನೂ ನಡೆಸುತ್ತಾ ಬಂದಿದ್ದಾರೆ. ಶಿಬಿರದ ಸಮಯದಲ್ಲಿ ಬಡ ಮಹಿಳಾ ರೋಗಿಗಳಿಗೆ ಉಚಿತವಾಗಿ ಸೀರೆಯನ್ನೂ ವಿತರಿಸುವುದು ವಿಶೇಷ. ಈ ದೇವಾಲಯದ ಪ್ರಾಂಗಣದಲ್ಲಿ ಮಹಾವೀರರ ದೇವಾಲಯವೂ ಇದೆ. ಇಲ್ಲಿ ಪಾಶ್ವನಾಥ, ನಾಕೋಡ್, ಅಧೀಶ್ವರ ಭಗವಾನ್, ಪದ್ಮಾವತಿಯೇ ಮೊದಲಾದ ಹಲವು ದೇವತಾವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಒಟ್ಟಾರೆಯಾಗಿ ಹಲವು ಧರ್ಮಗಳ ಸಮನ್ವಯ ಕೇಂದ್ರವಾಗಿರುವ ಈ ದೇವಾಲಯ ಸೇವಾಕ್ಷೇತ್ರವಾಗಿಯೂ ಮನಸೆಳೆದಿದೆ. ಇತ್ತೀಚೆಗೆ ಕೈಲಾಸ ಮಾನಸ ಸರೋವರದ ಯಾತ್ರೆಯನ್ನೂ ಮಾಡಿ ಬಂದಿರುವ ಕೊಠಾರಿ ಅವರು ಈ ದೇವಾಲಯಗಳ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಸಂಪರ್ಕ: ಧರ್ಮಕ್ಷೇತ್ರ, ನಂ. 138, ಕೇತುಹಳ್ಳಿ (ಬಿಡದಿ ರಾಮನಗರ ಮಧ್ಯೆ), ಸಂಗಬಸವನದೊಡ್ಡಿ, ಮೈಸೂರು ಮುಖ್ಯರಸ್ತೆ, ರಾಮನಗರ ಜಿಲ್ಲೆ. ದೂರವಾಣಿ - 9886716443. | |||