ಮುಖಪುಟ /ನಮ್ಮದೇವಾಲಯಗಳು   

ಸುಬ್ರಹ್ಮಣ್ಯೇಶ್ವರನ ಪಾದ ಸ್ಪರ್ಶದಿಂದ ಪುನೀತವಾದ ಕುಕ್ಕೆ
ಸುಂದರ ಗಿರಿಶಿಖರ ಹಸಿರು ವನರಾಶಿಯ ನಡುವೆ ಪ್ರಶಾಂತವಾಗಿ ಹರಿವ ತಿಳಿನೀರ ಧಾರಾ ನದಿಯ ತಟದಲ್ಲಿರುವ ಕುಕ್ಕೆ ಪವಿತ್ರ ಪುಣ್ಯಕ್ಷೇತ್ರವಷ್ಟೇ ಅಲ್ಲ
, ಅತ್ಯಂತ ಸುಂದರ ಗಿರಿಧಾಮ.

* ಟಿ.ಎಂ.ಸತೀಶ್

Kukke Subramanya temple, ಕುಕ್ಕೆ ಸುಬ್ರಹ್ಮಣ್ಯೇಶ್ವರ ದೇವಾಲಯ, kannadaratna.com, ourtemples.in, ಕನ್ನಡರತ್ನ.ಕಾಂ, ನಮ್ಮದೇವಾಲಯಗಳುತಾರಕಾಸುರನ ಸಂಹಾರಕ್ಕಾಗಿ ಕುಮಾರಸಂಭವ ನಡೆಯಿತೆನ್ನುತ್ತವೆ ಪುರಾಣಗಳು. ಕುಮಾರ ಅರ್ಥಾತ್ ಸುಬ್ರಹ್ಮಣ್ಯ ತಾರಕಾದಿ ರಕ್ಕಸರ ರುಂಡ -ಮುಂಡಗಳನ್ನು ಚೆಂಡಾಡಿದ ಬಳಿಕ ತನ್ನ ಶಕ್ತ್ಯಾಯುಧವನ್ನು ದಕ್ಷಿಣ ಕನ್ನಡ ಜಿಲ್ಲೆಯ ಧಾರಾ ನದಿಯಲ್ಲಿ ತೊಳೆದನ್ನೆನ್ನುತ್ತದೆ ಸ್ಥಳಪುರಾಣ.

ಇಷ್ಟು ಮಹಿಮಾನ್ವಿತವಾದ ಧಾರಾ ನದಿಯ ದಂಡೆಯಲ್ಲಿರುವ ಪವಿತ್ರ ಪುಣ್ಯಕ್ಷೇತ್ರವೇ ಕುಕ್ಕೆ. ಸುಳ್ಯ ತಾಲೂಕಿನಲ್ಲಿರುವ ಸುಬ್ರಹ್ಮಣ್ಯ ನೈಸರ್ಗಿಕ ಗಿರಿ ಶಿಖರಗಳಿಂದ ಕೂಡಿದ ಮನೋಹರವಾದ ಪ್ರದೇಶ. ಈ ರಮಣೀಯ ತಾಣದ ಮಧ್ಯಭಾಗದಲ್ಲಿ ಸುಂದರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವಿದೆ.

ಬಂದರು ನಗರಿ ಮಂಗಳೂರಿನಿಂದ ಕೇವಲ ೧೦೪ ಕಿ.ಮೀಟರ್ ದೂರದಲ್ಲಿರುವ ಈ ಕ್ಷೇತ್ರ ಶಿವ-ಪಾರ್ವತಿಯರ ಕುಮಾರ ಸುಬ್ರಹ್ಮಣ್ಯೇಶ್ವರ ಹಾಗೂ ದೇವಾನು ದೇವತೆಗಳಲ್ಲದೆ ಶ್ರೀ ಶಂಕರಾಚಾರ‍್ಯರ ಪಾದಸ್ಪರ್ಶದಿಂದ ಪುನೀತವಾಗಿದೆ ಎಂದು ಪುರಾಣೇತಿಹಾಸಗಳು ಸಾರಿ ಹೇಳುತ್ತವೆ. ಕುಮಾರನು ತಾರಕಾದಿಗಳ ಸಂಹಾರದ ಬಳಿಕ ರಕ್ತಸಿಕ್ತವಾಗಿದ್ದ ತನ್ನ ವೇಲಾಯುಧವನ್ನು ಇಲ್ಲಿ ಪ್ರಶಾಂತವಾಗಿ ಹರಿವ ಧಾರಾನದಿಯಲ್ಲಿ ತೊಳೆದನೆಂದೂ ಸ್ಥಳಪುರಾಣ ತಿಳಿಸುತ್ತದೆ. ಸ್ಕಂದ ಪುರಾಣ, ಶಂಕರಾಚಾರ‍್ಯರ ಕೃತಿಗಳಲ್ಲೂ ಕುಕ್ಕೆಯ ಪ್ರಸ್ತಾಪವಿದೆ.

ಶಿವಕುಮಾರನ ಸ್ಪರ್ಶದಿಂದ ಪುನೀತವಾದ ಈ ನದಿ ಈಗ ಕುಮಾರಧಾರಾ ಎಂದೇ ಖ್ಯಾತವಾಗಿದೆ. ಈ ನದಿಯ ತೀರದಲ್ಲೇ ಕುಮಾರ ಸ್ವಾಮಿಯು ದೇವಸೇನೆಯನ್ನು ವರಿಸಿದನೆಂಬ ಉಲ್ಲೇಖಗಳೂ ಪುರಾಣಗಳಲ್ಲಿವೆ. ಲೋಕಕಂಟಕರಾಗದ್ದ ತಾರಕಾದಿ ರಕ್ಕಸಗಣಗಳ ರುಂಡವನ್ನು ಚೆಂಡಾಡಿದ ಕುಮಾರ ಸ್ವಾಮಿಗೆ ಸುರಪತಿಯಾದ ದೇವೇಂದ್ರನು ತನ್ನ ಮಗಳಾದ ದೇವಸೇನಳನ್ನು ಧಾರಾ ನದಿಯ ತಟದಲ್ಲೇ ಧಾರೆ ಎರೆದು ಕೊಟ್ಟನಂತೆ.

ಈ ಶುಭ ಸಂದರ್ಭದಲ್ಲಿ ವಾಸುಕಿ ಎಂಬ ಮಹಾಸರ್ಪ ತನ್ನೊಂದಿಗೆ ಧಾರಾ ನದಿ ತೀರದಲ್ಲಿ ಶಾಶ್ವತವಾಗಿ ನೆಲೆಸುವಂತೆ ಕುಮಾರ ಸ್ವಾಮಿಯನ್ನು ಪ್ರಾರ್ಥಿಸುತ್ತಾನೆ. ವಾಸುಕಿಯ ಬೇಡಿಕೆಯನ್ನು ಈಡೇರಿಸಲು ಈ ಪುಣ್ಯಕ್ಷೇತ್ರದಲ್ಲೇ ಶಿಲಾರೂಪಿಯಾಗಿ ಸ್ವಾಮಿ ನೆಲೆಸಿದ್ದಾನೆ ಎಂಬುದು ಭಕ್ತಜನರ ಅಚಲ ನಂಬಿಕೆ.

ಇತಿಹಾಸ : ಹಿಂದೆ ಕುಕ್ಕೆ ಎಂದೇ ಹೆಸರಾಗಿದ್ದ ಈ ಕ್ಷೇತ್ರ ಇಂದು ಸುಬ್ರಹ್ಮಣ್ಯನ ದಯೆಯಿದ ಕುಕ್ಕೆ ಸುಬ್ರಹ್ಮಣ್ಯವಾಗಿದೆ. ಆದರೆ, ಈ ಸ್ಥಳಕ್ಕೆ ಕುಕ್ಕೆ ಎಂಬ ಹೆಸರು ಬಂದ ಬಗ್ಗೆ ವಿಭಿನ್ನ ಹೇಳಿಕೆಗಳಿವೆ. ಈ ಕ್ಷೇತ್ರದಲ್ಲಿ ಹಿಂದೆ ಜನರು ಕುಕ್ಕೆಗಳಲ್ಲಿ ಈಶ್ವರ ಲಿಂಗವನ್ನಿಟ್ಟು ಪೂಜಿಸುತ್ತಿದ್ದರಂತೆ ಹೀಗಾಗೆ ಈ ಊರಿಗೆ ಕುಕ್ಕೆ ಎಂದೂ ಹಾಗೂ ಇಲ್ಲಿನ ಶಿವಲಿಂಗಕ್ಕೆ ಕುಕ್ಕೆಲಿಂಗ ಎಂದು ಹೆಸರು ಬಂದಿದೆ ಎನ್ನುತ್ತಾರೆ ಕೆಲವರು. ಆದಿ ಶಂಕರಾಚಾರ್ಯರು ಕೂಡ ಭಜೆ ಕುಕ್ಕೆ ಲಿಂಗಮ್ ಎಂದು ತಮ್ಮ ಕೃತಿಯಲ್ಲಿ ಬರೆದಿದ್ದಾರೆ. ಅವರು ಈ ಕ್ಷೇತ್ರದಲ್ಲಿ ಕೆಲಕಾಲ ನೆಲೆಸಿದ್ದರು ಎಂದೂ ಹೇಳಲಾಗುತ್ತದೆ.

ಆದರೆ, ಮತ್ತೆ ಕೆಲವರ ಪ್ರಕಾರ ಕುಕ್ಕೆ ಎಂಬ ಪದಕ್ಕೆ ಹಳೆಗನ್ನಡದಲ್ಲಿ ಗುಹೆ ಎಂದು ಅರ್ಥ ನೀಡುವ ಸಂಸ್ಕೃತದ ಕುಕ್ಷಿ ಎಂಬ ಪದ ಪ್ರಯೋಗವಿದೆ ಹೀಗಾಗೇ ಇದಕ್ಕೆ ಕುಕ್ಕೆ ಎಂಬ ಹೆಸರು ಬಂದಿದೆ. ಗುಹೆಯೊಳಗೆ ಶಿವಲಿಂಗ ಇರುವುದರಿಂದ ಈ ಲಿಂಗಕ್ಕೆ ಕುಕ್ಕೆ ಲಿಂಗ ಎಂಬ ಹೆಸರು ಬಂದಿದೆ ಎನ್ನುತ್ತಾರವರು.

Kukke Subramanya temple, ಕುಕ್ಕೆ ಸುಬ್ರಹ್ಮಣ್ಯೇಶ್ವರ ಆದರೆ ಭಕ್ತ ಕೋಟಿ ಮಾತ್ರ ಈ ಹೆಸರಿನ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದೆ ಧಾರಾನದಿಯಲ್ಲಿ ಮಿಂದು ಸುಬ್ರಹ್ಮಣ್ಯೇಶ್ವರನನ್ನೂ, ಕುಕ್ಕೆ ಲಿಂಗವನ್ನೂ ಭಕ್ತಿ ಭಾವಗಳಿಂದ ಪೂಜಿಸುತ್ತಾರೆ. ಸುಬ್ರಹ್ಮಣ್ಯೇಶ್ವರ ತನ್ನ ಶಕ್ತ್ಯಾಯುಧ ತೊಳೆದ ಕಾರಣದಿಂದ ಪುನೀತವಾಗಿರುವ ಧಾರಾ ನದಿಯಲ್ಲಿ ಸ್ನಾನ ಮಾಡಿದರೆ, ಸಮಸ್ತ ಪಾಪಗಳೂ, ರೋಗ ರುಜಿನಗಳೂ ವಾಸಿಯಾಗುತ್ತವೆ ಎಂದೂ ಜನ ಹೇಳುತ್ತಾರೆ.

ಪ್ರಕೃತಿ ದೇವಿಯ ಮಡಿಲಲ್ಲಿರುವ ಈ ತಾಣದಲ್ಲಿ ಅತ್ಯಂತ ಸುಂದರವಾದ ಪುರಾತನ ದೇಗುಲವಿದೆ. ಸುಸಜ್ಜಿತವಾದ ಭದ್ರ ಪ್ರಾಕಾರ, ರಜತ ಲೇಪಿತ ಗರುಡಗಂಭ, ನಯನಮನೋಹರವಾದ ಸುಬ್ರಹ್ಮಣ ವಿಗ್ರಹದಿಂದ ಕೂಡಿದ ಈ ದೇವಾಲಯದ ಗರ್ಭಗುಡಿಯಲ್ಲಿ ಇಂದೂ ವಾಸುಕಿ ನೆಲೆಸಿದ್ದಾನಂತೆ.

ಸರ್ಪರಾಜನಾದ ವಾಸುಕಿಯು ಉಸಿರಾಡುವಾಗ ಹೊರಹೊಮ್ಮುವ ವಿಷಜ್ವಾಲೆಯನ್ನು ನಿಯಂತ್ರಿಸಲು ಮತ್ತು ಆ ಹಾಲಾಹಲದಿಂದ ಜನರನ್ನು ರಕ್ಷಿಸಲೆಂದೇ ಗರುಡ ಇಲ್ಲಿ ಕಂಬದ ರೂಪದಲ್ಲಿ ನಿಂತಿದ್ದಾನೆ ಎಂದೂ ಇಲ್ಲಿನ ಹಿರಿಯ ಅರ್ಚಕರು ಹೇಳುತ್ತಾರೆ.

ಕುಕ್ಕೆಯಲ್ಲಿ ಸುಬ್ರಹ್ಮಣ್ಯ ಸ್ವಾಮಿಯೇ ದೇವಸೇನಳನ್ನು ವರಿಸಿದ ಬಳಿಕ ಸ್ವತಃ ಹಲವು ಲಿಂಗಗಳನ್ನು ಸ್ಥಾಪಿಸಿದ ಎಂಬ ಉಲ್ಲೇಖವೂ ಇದೆ. ಪ್ರತಿವರ್ಷ ಮಾರ್ಗಶಿರ ಶುದ್ಧ ಷಷ್ಠಿಯ ದಿನ (ಅಂದರೆ ಕುಮಾರ ಸ್ವಾಮಿಯು ದೇವೇಂದ್ರನ ಕುವರಿಯನ್ನು ಇದೇ ಸ್ಥಳದಲ್ಲಿ ವಿವಾಹವಾದ ಎನ್ನಲಾದ ದಿನ ) ಇಲ್ಲಿ ವಿಶೇಷ ಪೂಜೆ, ಉತ್ಸವಗಳು ಜರುಗುತ್ತವೆ. ಮಕರ ಸಂಕ್ರಮಣದ ದಿನ ಇಲ್ಲಿ ರಥೋತ್ಸವವೂ ಜರುಗುತ್ತದೆ.

ಭಟ್ಟರಾಶಿ, ಶೇಷಾಛಲ, ಸಿದ್ಧಬೆಟ್ಟಗಳ ನಡುವೆ ಇರುವ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಧ್ವಾಚಾರ್ಯರು ಸ್ಥಾಪಿಸಿದ ಮಠ ಹಾಗೂ ಆದಿ ಶಂಕರರು ನೆಲೆಸಿದ್ದ ಸ್ಥಳದಲ್ಲಿ ಶೃಂಗೇರಿ ಶಂಕರಮಠವೂ ಇದೆ. ಸನಿಹದಲ್ಲೇ ಚಂದ್ರಮೌಳೇಶ್ವರನ ಸುಂದರ ದೇವಾಲಯವೂ ಇದೆ. ಈ ಪವಿತ್ರ ಪುಣ್ಯಕ್ಷೇತ್ರಕ್ಕೆ ನಿತ್ಯವೂ ಸಹಸ್ರಾರು ಭಕ್ತರು ಆಗಮಿಸುತ್ತಾರೆ. ಭಕ್ತರ ಅನುಕೂಲಕ್ಕಾಗಿ ಹಲವು ಮೂಲಭೂತ ಸೌಕರ್ಯಗಳನ್ನು ಆಡಳಿತ ಮಂಡಳಿ ಕಲ್ಪಿಸಿದೆ. ಅಕ್ಷರ ವಸತಿ ಗೃಹ, ಷಣ್ಮುಖ ಪ್ರಸಾದ ಭೋಜನ ಶಾಲೆಗಳೂ ಇವೆ. ಸುಬ್ರಹ್ಮಣ್ಯ ಗೇಟ್‌ವರೆಗೆ ರೈಲು ಸೌಲಭ್ಯ ಹಾಗೂ ಸುಬ್ರಹ್ಮಣ್ಯಕ್ಕೆ ನೇರ ಬಸ್ ಸೌಕರ್ಯವೂ ಇದೆ. ಮಂಗಳೂರಿನಿಂದ ಮ್ಯಾಕ್ಸಿಕ್ಯಾಬ್, ವ್ಯಾನ್‌ಗಳ ಸೌಲಭ್ಯವೂ ಉಂಟು. ಇಲ್ಲಿಂದ ಧರ್ಮಸ್ಥಳ, ಮಂಗಳೂರಿಗೂ ಹೋಗಬಹುದು.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮದೇವಾಲಯಗಳು