ಮುಖಪುಟ /ನಮ್ಮದೇವಾಲಯಗಳು

ಲಕ್ಷ್ಮೇಶ್ವರದ ಲಕ್ಷ್ಮೀಲಿಂಗನ ಗುಡಿ

Laksmilingana gudi, Lakshmeswara.ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನಲ್ಲಿರುವ ಪ್ರಾಚೀನ ಪುಣ್ಯಕ್ಷೇತ್ರ ಲಕ್ಷ್ಮೇಶ್ವರ. ಹಿಂದೆ ಪುಲಿಗೆರೆ ಎಂಬ ಹೆಸರಿನಿಂದ ಖ್ಯಾತವಾಗಿದ್ದ ಈ ಊರು ಪ್ರಾಚೀನ ಕಾಲದಿಂದಲೂ ಪ್ರಸಿದ್ಧ ಪಟ್ಟಣವಾಗಿ ಕೀರ್ತಿಪಡೆದಿದೆ.

ಚಾಲುಕ್ಯರ ರಾಜಧಾನಿಯಾಗಿ ಮೆರೆದ ಈ ಊರು ಧಾರವಾಡದಿಂದ ಸುಮಾರು 72 ಕಿ.ಮೀ ದೂರದಲ್ಲಿದೆ. ಪುಲಿಗೆರೆ ಲಕ್ಷ್ಮೇಶ್ವರನ ನೆಲೆವೀಡಾಗಿಯೂ ಪ್ರಸಿದ್ಧಿ ಪಡೆದಿದೆ.

ಕನ್ನಡದ ಅರಸು ಇಮ್ಮಡಿ ಪುಲಿಕೇಶಿ ಆಳಿದ ಈ ಪಟ್ಟಣ ಕ್ರಿ.ಶ.7ನೇ ಶತಮಾನದಿಂದ 16ನೇ ಶತಮಾನದವರೆಗೆ ಪುಲಿಗೆರೆ, ಎಂದು ಖ್ಯಾತಿಪಡೆದಿತ್ತು. ಇಲ್ಲಿ ಲಕ್ಷ್ಮಣರಸ ಎಂಬ ಮಾಂಡಲಿಕ ಲಕ್ಷ್ಮೀಲಿಂಗನ ಗುಡಿ ನಿರ್ಮಿಸಿದ ಬಳಿಕ, ಇದು ಲಕ್ಷ್ಮೇಶ್ವರ ಎಂಬ ಹೆಸರು ಪಡೆದಿದೆ. ಇತಿಹಾಸ ಪ್ರಸಿದ್ಧವಾದ ಈ ಊರನ್ನು ಬಾದಾಮಿಯ ಚಾಲುಕ್ಯರು, ಕಲ್ಯಾಣದ ಚಾಲುಕ್ಯರು, ರಾಷ್ಟ್ರಕೂಟರು, ಕಳಚೂರ್ಯ ಯಾದವರು ಹಾಗೂ ವಿಜಯನಗರದ ಅರಸು ಆಳಿದರೆಂಬುದಕ್ಕೆ ಶಾಸನಗಳ ಪುಷ್ಟಿಯಿದೆ.

1071ರ ಸುಮಾರಿನಲ್ಲಿ ನಿರ್ಮಾಣವಾದ ಈ ದೇವಾಲಯ ತ್ರಿಕೂಟಾಚಲವಾಗಿದ್ದು ಮೂರು ಗೋಪುರ ಹಾಗೂ ಮೂರು ಗರ್ಭಗೃಹಗಳನ್ನು ಒಳಗೊಂಡಿದೆ. ಮುಖಮಂಟಪ, ನವರಂಗ, ಸುಖನಾಸಿ, ಭುವನೇಶ್ವರಿ, ಗರ್ಭಗೃಹಗಳನ್ನು ದೇವಾಲಯ ಒಳಗೊಂಡಿದೆ.

ನವರಂಗ ಮಂಟಪ ಪ್ರವೇಶಕ್ಕೆ ಮೊದಲೇ ಈಶ್ವರ ದೇವಾಲಯವಿದೆ. ಮಧ್ಯಭಾಗದಲ್ಲಿ ಮಹಾಶಕ್ತಿ ಗಣಪತಿ ವಿಗ್ರಹವಿದೆ. ಇದಕ್ಕೆ ಹೊಂದಿಕೊಂಡಂತೆ ಸಭಾ ಮಂಟಪವಿದ್ದು, ಪೂರ್ವ, ಉತ್ತರ ದಕ್ಷಿಣದ ದ್ವಾರಗಳ ಮೂಲಕ ಗರ್ಭಗೃಹ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ.

ದಕ್ಷಿಣದ ಹೊರಭಾಗದಲ್ಲಿ ದೇವರ ಬಾವಿಯಿದೆ. ಸಭಾಮಂಟಪದ ಇಕ್ಕೆಲಗಳಲ್ಲಿ ಕಪ್ಪು ಶಿಲೆಯ ಸಾಲು ಕಂಬಗಳಿವೆ. ಗುಡಿಯ ಪ್ರಾಂಗಣದ ಸುತ್ತಲೂ ಹಾಸುಗಲ್ಲುಗಳನ್ನು ಹಾಕಿ ಪ್ರದಕ್ಷಿಣಾ ಪಥ ನಿರ್ಮಿಸಲಾಗಿದೆ.

ಗುಡಿಯ ಹೊರಭಾಗದ ಶಿಲೆಗಳಲ್ಲಿ ವಿವಿಧ ಭಂಗಿಗಳಲ್ಲಿ ದ್ವಾರಪಾಲಕರ ಉಬ್ಬು ಶಿಲ್ಪಗಳಿವೆ. ಭಿತ್ತಿಯ ಶಿಲ್ಪಾಲಂಕರಣ ಅದ್ಭುತವಾಗಿದೆ. ಗುಡಿಯ ಹಿಂಭಾಗದಲ್ಲಿ ಎತ್ತರವಾದ ವೀರಗಲ್ಲುಗಳು ಹಾಗೂ ಶಿಲಾಶಾಸನಗಳಿವೆ. ಪಕ್ಕದ ಕಲ್ಗುಡಿಯಲ್ಲಿ ಈಶ್ವರ ದೇವಾಲಯವಿದೆ. ಪುರಾತನವಾದ ಈ ದೇವಾಲಯ ಪ್ರಸ್ತುತ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸುಪರ್ದಿನಲ್ಲಿದ್ದು, ಸಂರಕ್ಷಿತ ದೇವಾಲಯವಾಗಿದೆ. 

ಮುಖಪುಟ /ನಮ್ಮ ದೇವಾಲಯಗಳು