ಮುಖಪುಟ /ನಮ್ಮದೇವಾಲಯಗಳು 

ಮಧುಗಿರಿಯ ಮಲ್ಲಿನಾಥ ಬಸದಿ

*ಟಿ.ಎಂ.ಸತೀಶ್

Madugiri Mallinatha basadiಹರಿಹರ ಕ್ಷೇತ್ರವೆಂದೇ ಖ್ಯಾತವಾದ ತುಮಕೂರು ಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರಗಳಲ್ಲಿ ಮಧುಗಿರಿಯೂ ಒಂದು. ತುಮಕೂರಿನಿಂದ 43 ಕಿಲೋ ಮೀಟರ್ ದೂರದಲ್ಲಿರುವ ಮಧುಗಿರಿಯ ಏಕಶಿಲಾ ಬೆಟ್ಟ ಜಗತ್ಪ್ರಸಿದ್ದ. ಹಿಂದೆ ಮದ್ದಗಿರಿ ಎಂದು ಕರೆಸಿಕೊಂಡಿದ್ದ ಈ ಊರಿಗೆ 1927ರಲ್ಲಿ ಮಧುಗಿರಿ ಎಂದು ಮರು ನಾಮಕರಣ ಮಾಡಲಾಯಿತು

ಮಧುಗಿರಿ ಒಂದು ಕಾಲದಲ್ಲಿ ಜೈನರ ಆವಾಸ ಸ್ಥಾನವೂ ಆಗಿತ್ತು. ಆಗ ಇಲ್ಲಿ ನಿರ್ಮಿಸಲಾದ ಪುರಾತನ ಬಸದಿಯನ್ನೂ ಇಂದಿಗೂ ಕಾಣಬಹುದು. ಬೆಟ್ಟದ ಬುಡದಲ್ಲಿ, ತೆಂಗಿನ ಮರಗಳ ಸಾಲಿನ ನಡುವೆ ಇರುವ ಈ ಬಸದಿಯಲ್ಲಿ 19ನೇ ತೀರ್ಥಂಕರರಾದ ಮಲ್ಲಿನಾಥರ ಮೂರ್ತಿಯಿದೆ.

Madugiri Mallinatha basadiಇಲ್ಲಿರುವ ಗರ್ಭಗೃಹದ ಪ್ರವೇಶ ದ್ವಾರದ ಬಾಗಿಲವಾಡಗಳಲ್ಲಿ ಶಂಖ, ಚಕ್ರ ಹಾಗೂ ಗದೆ ಹಿಡಿದ ದ್ವಾರಪಾಲಕರ ಉಬ್ಬು ಶಿಲ್ಪವಿದ್ದರೆ, ಮೇಲ್ಭಾಗದಲ್ಲಿ ಗಜಗಳ ನಡುವೆ ಕುಳಿತ ತೀರ್ಥಂಕರರ ಕೆತ್ತನೆ ಇದೆ. ದ್ವಾರಪಾಲಕರಿಗೆ ಹಾಗೂ ಬಾಗಿಲವಾಡಕ್ಕೆ ಬಣ್ಣ ಬಳಿಯಲಾಗಿದೆ. ಸುತ್ತಲೂ ಇರುವ ಕಲ್ಲಿನ ಭಿತ್ತಿಗಳಲ್ಲಿ ನಾಗರಹಾವುಗಳ ಉಬ್ಬುಶಿಲ್ಪವಿದೆ.

ಮೇಲ್ಛಾವಣಿಗೆ ಆಧಾರವಾಗಿ ನಿಂತಿರುವ ಕಲಾತ್ಮಕ ಕಂಬಗಳಿಗೆ ಬಣ್ಣಬಳಿದು ಅವುಗಳ ನೈಜ ಕಲಾಶ್ರೀಮಂತಿಕೆಯನ್ನು Madhugiri Manastambaಮಸುಕುಮಾಡಲಾಗಿದೆ. ಚೌಕಾಕಾರದ ಕಲ್ಲಿನ ಕಂಬಗಳಲ್ಲಿ ಕುಂಭ ಇತ್ಯಾದಿ ಸಾಧಾರಣ ಶಿಲ್ಪಗಳಿವೆ. ಗರ್ಭಗೃಹದೊಳಗೆ 800 ವರ್ಷಗಳಷ್ಟು ಹಳೆಯದಾದ ಪಂಚಲೋಹದ ಮಲ್ಲಿನಾಥನ ಸುಂದರ ಮೂರ್ತಿಯಿದೆ.

ದೇವಾಲಯದ ಮೇಲಿನ ಗೋಪುರಗಳಲ್ಲಿ ಗಾರೆಯ ಗೂಡುಗಳನ್ನು ನಿರ್ಮಿಸಲಾಗಿದ್ದು, ಆ ಗೂಡುಗಳಲ್ಲಿ ಧ್ಯಾನನಿರತ ತೀರ್ಥಂಕರರ ಗಾರೆ ಪ್ರತಿಮೆಗಳಿವೆ. ದೇವಾಲಯದ  ಹೊರಗಡೆ ಗರ್ಭಗೃಹಕ್ಕೆ ನೇರವಾಗಿ 15 ಅಡಿ ಎತ್ತರ ಇರುವ ಮಾನಸ್ತಂಭವಿದೆ. ಮಾನಸ್ತಂಭದ ಕೆತ್ತನೆ, ವಿನ್ಯಾಸ ಮನಮೋಹಕವಾಗಿದೆ.

 ಈ ದೇವಾಲಯದ ವಿನ್ಯಾಸ ನೋಡಿದರೆ ಹಿಂದೆ ಇದು ಹಿಂದೂ ದೇವಾಲಯ ಆಗಿದ್ದಿರಬಹುದು ಎಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮದೇವಾಲಯಗಳು