ಮುಖಪುಟ /ನಮ್ಮದೇವಾಲಯಗಳು 

ಮಧುಗಿರಿಯ ದಂಡಿನ ಮಾರಮ್ಮ

*ಟಿ.ಎಂ.ಸತೀಶ್

ಮಧುಗಿರಿ ದಂಡಿನ ಮಾರಮ್ಮ ದೇವಾಲಯ, Madhugiri Dandinamaramma, Tumkurಮಧುಗಿರಿ ತುಮಕೂರು ಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರ. ತುಮಕೂರಿನಿಂದ 43 ಕಿಲೋ ಮೀಟರ್ ದೂರದಲ್ಲಿರುವ ಮಧುಗಿರಿಯ ಮೊದಲ ಹೆಸರು ಮದ್ದಗಿರಿ. ಮಧು ಎಂಬ ಹೆಸರಿನ ಗಿರಿಯ ಉತ್ತರದ ಬುಡದಲ್ಲಿ ಈ ಊರು ಇದ್ದುದರಿಂದ ಮದ್ದಗಿರಿ ಎಂಬ ಹೆಸರು ಇತ್ತಂತೆ. 1927ರಿಂದ ಮಧುಗಿರಿ ಎಂಬ ಹೆಸರು ರೂಢಿಗೆ ಬಂದಿದೆ.

ಸುಂದರ ಹಾಗೂ ವಿಶಾಲವಾದ ಏಕಶಿಲಾ ಗಿರಿಕೋಟೆ ಇಲ್ಲಿನ ಆಕರ್ಷಣೆ. ಬೆಟ್ಟದ ತಪ್ಪಲಿನಲ್ಲಿ ದಂಡಿನ ಮಾರಮ್ಮ., ಕೋಟೆ ಕೋದಂಡರಾಮ, ಮಲ್ಲೇಶ್ವರ ಸ್ವಾಮಿ ದೇವಾಲಯ ಹಾಗೂ ವೆಂಕಟರಮಣನ ದೇಗುಲಗಳಿವೆ.

ಮಧುಗಿರಿ ದಂಡಿನ ಮಾರಮ್ಮ, Madhugiri Dandina Marammaಮಧುಗಿರಿಯಲ್ಲಿನ ದಂಡಿನ ಮಾರಮ್ಮನ ದೇವಾಲಯ ವಿಶೇಷವಾದ್ದು. ಈ ಹೆಸರು ಕೇಳಿದೊಡನೆಯೇ  ದಂಡಿಗೂ ಮಾರಮ್ಮನಿಗೂ ಏನು ಸಂಬಂಧ ಎಂಬ ಪ್ರಶ್ನೆ ಏಳುವುದು ಸಹಜ. ಇದಕ್ಕೊಂದು ಬಲವಾದ ಕಾರಣವಿದೆ. ಹಿಂದೆ ರಾಜರಾಳ್ವಿಕೆಯ ಕಾಲದಲ್ಲಿ ಸೈನಿಕರು ಪುರ ಪ್ರವೇಶಿಸುವ ಮುನ್ನ ಈ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸುತ್ತಿದ್ದರಂತೆ. ಸೇನಾ ಶಕ್ತಿಯನ್ನು ನಿರಂತರವಾಗಿ ಕಾಪಾಡುತ್ತಿದ್ದ ತಾಯಿಗೆ ಅಂದಿನಿಂದ ದಂಡಿನ ಮಾರಮ್ಮ ಎಂದೇ ಹೆಸರು ಬಂದಿದೆ. ಇಂದಿಗೂ ಈ ಊರಿನಲ್ಲಿ ಶುಭಕಾರ್ಯಕ್ಕೆ ಮುನ್ನ ಗ್ರಾಮದೇವತೆ ಮಾರಮ್ಮನಿಗೆ ಪೂಜೆ ಸಲ್ಲಿಸುವುದು ವಾಡಿಕೆ. ವರ್ಷಕ್ಕೊಮ್ಮೆ ಇಲ್ಲಿ ಯುಗಾದಿ ಹಬ್ಬಕ್ಕೂ ಮುನ್ನ ದೊಡ್ಡ ಜಾತ್ರೆ ನಡೆಯುತ್ತದೆ.

Madhugiri Dandina Maramma, ಮಧುಗಿರಿ ದಂಡಿನ ಮಾರಮ್ಮನಿಂಬೆಹಣ್ಣನ್ನು ಕತ್ತರಿಸಿ ಬಟ್ಟಲಿನಂತೆ ಮಾಡಿ ಎಣ್ಣೆ ಹಾಕಿ ದೀಪ ಹಚ್ಚುವುದು ಇಲ್ಲಿನ ವಿಶೇಷ. ದೇವಾಲಯ ಪ್ರವೇಶಕ್ಕೆ ಮುನ್ನ ಕಲ್ಲಿನ ಪ್ರವೇಶದ್ವಾರವಿದೆ. ಮೇಲ್ಭಾಗದ ಕಲ್ಲಿಗೆ ಗಂಟೆಯನ್ನು ಕಟ್ಟಲಾಗಿದೆ. ಹಸಿರು ಬಣ್ಣ ಬಳಿಯಲಾಗಿರುವ ಈ ಕಲ್ಲಿನ ಮೇಲೆ ರಾಕ್ಷಸರ ಮುಖದ ಚಿತ್ರಗಳಿವೆ. ಇದಕ್ಕೆ ನೇರವಾಗಿ ಮೂರು ದ್ವಾರಗಳ ದೇವಾಲಯವಿದೆ. ಮೇಲ್ಭಾಗದಲ್ಲಿ ಸುಂದರ ಗಾರೆಯ ಗೋಪುರವಿದೆ. ಗೋಪುರದಲ್ಲಿ ಗೂಡುಗಳಿದ್ದು ಅವುಗಳಲ್ಲಿ ದುರ್ಗೆಯ ಗಾರೆ ಶಿಲ್ಪಗಳಿವೆ. ದೇವಾಲಯದ ಹೊರಗೆ ಚಂಡಿಕೇಶ್ವರಿ, ಮಹಿಷಾಸುರ ಮರ್ಧಿನಿಯ ಬೃಹತ್ ಗಾರೆಯ ಶಿಲ್ಪಗಳಿವೆ.  

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮದೇವಾಲಯಗಳು