ಮುಖಪುಟ /ನಮ್ಮದೇವಾಲಯಗಳು 

ಮಧುಗಿರಿ ವೆಂಕಟರಮಣ ದೇವಾಲಯ

Madhugiri venkataramana temple, ಮಧುಗಿರಿ ವೆಂಕಟರಮಣ ದೇವಾಲಯ*ಟಿ.ಎಂ.ಸತೀಶ್

ತುಮಕೂರು ಜಿಲ್ಲೆಯ ಮಧುಗಿರಿ ಹರಿ ಹರಕ್ಷೇತ್ರ. ತುಮಕೂರಿನಿಂದ 43 ಕಿಲೋ ಮೀಟರ್ ದೂರದಲ್ಲಿರುವ ಮಧುಗಿರಿ ಏಕಶಿಲಾ ಬೆಟ್ಟದ ಬುಡದಲ್ಲಿರುವ ಸುಂದರ ಊರು. ಈ ಊರಿಗೆ ಮಧುಗಿರಿ ಎಂಬ ಹೆಸರು ಬರಲು ಇಲ್ಲಿರುವ ಮಧು ಎಂಬ ಬೆಟ್ಟವೇ ಕಾರಣ. ಇಲ್ಲಿ ಪುರಾತನವಾದ ವೆಂಕಟರಮಣಸ್ವಾಮಿ ದೇವಾಲಯವಿದೆ. ಸುಂದರವಾದ ರಾಯಗೋಪುರ, ಗರುಡಗಂಭಗಳಿಂದ ಕೂಡಿದ ಈ ದೇವಾಲಯಕ್ಕೆ ತುಮಕೂರಿನ ಚಿಕ್ಕತಿರುಪತಿ ಎನ್ನುವವರೂ ಇದ್ದಾರೆ. ತಿರುಮಲೆಯ ಪುಣ್ಯಮೂರ್ತಿಯನ್ನೇ ಹೋಲುವಂಥ ಸುಂದರವಾದ 6 ಅಡಿ ಎತ್ತರದ ಶ್ರೀನಿವಾಸನ ವಿಗ್ರಹ ಇಲ್ಲಿದೆ ಎಂಬುದು ಭಕ್ತರ ಅನಿಸಿಕೆ.

ಹಳೆಯ ಕಲ್ಲು ಕಂಬಗಳಿಂದ ಕೂಡಿದ ಈ ದೇವಾಲಯದ ಕೆಲವು ಕಂಬಗಳಲ್ಲಿ ಸ್ತ್ರೀ, ಪುರುಷ, ಪ್ರಾಣಿ, ಪಕ್ಷಿಗಳ ಸಾಧಾರಣ ಶಿಲ್ಪಗಳಿವೆ. ಎಲ್ಲ ಸ್ತಂಭಗಳಿಗೂ ಬಣ್ಣಬಳಿದು ಅದರ ನೈಜ ಸೌಂದರ್ಯ ಹಾಗೂ Madhugiri Venkataramana temple raja gopuram, ಪುರಾತತ್ವದ ಹಿರಿಮೆಯನ್ನೇ ಹಾಳುಗೆಡವಲಾಗಿದೆ.  ಪ್ರಾಚೀನತೆಯ ನೋಟ ಇಲ್ಲಿ ನಿಶ್ಶೇಷವಾಗಿದೆ. ಒಳ ಪ್ರಾಕಾರದ ಗೋಪುರದ ಮೇಲೆ ಗಾರೆಯ ಗೂಡುಗಳಿದ್ದು ಇವುಗಳಲ್ಲಿ ದಶಾವತಾರದ ಪ್ರಸಂಗಗಳನ್ನು ವರ್ಣಿಸುವ ಪ್ರತಿಮೆಗಳಿವೆ.

ದೇವಾಲಯದ ಪ್ರವೇಶದಲ್ಲಿ ಶಂಖ, ಚಕ್ರ ಹಾಗೂ ತ್ರಿಪುಂಡರ ಇರುವ ಬಾಗಿಲವಾಡವಿದೆ. ಒಳ ಪ್ರಾಕಾರದಲ್ಲಿ ಮೂರು ದ್ವಾರಗಳಿದ್ದು ಎಲ್ಲ ದ್ವಾರಗಳ ಬಾಗಿಲವಾಡದಲ್ಲೂ ಜಯವಿಜಯರ ಉಬ್ಬುಶಿಲ್ಪಗಳಿವೆ. ಇವುಗಳಿಗೆ ಹಿತ್ತಾಳೆಯ ಕವಚಗಳನ್ನು ಹಾಕಲಾಗಿದೆ. ಗರ್ಭಗೃಹದಲ್ಲಿ ಶಂಖ, ಚಕ್ರ, ಗದೆ ಹಾಗೂ ವರದಮುದ್ರೆಯಲ್ಲಿರುವ ವೆಂಕಟರಮಣನ ಮೂರ್ತಿಯನ್ನು ರತ್ನಖಚಿತ ಅಲಂಕಾರದಲ್ಲಿ ನೋಡುವುದೇ ಒಂದು ಸೊಬಗು. ಇಲ್ಲಿ ವೈಷ್ಣವ ಪದ್ಧತಿಯಂತೆ ಪೂಜಾವಿಧಿಗಳು ಜರುಗುತ್ತವೆ. ನವರಾತ್ರಿ, ವೈಕುಂಠ ಏಕಾದಶಿ ಹಾಗೂ ಶ್ರಾವಣ ಮಾಸದಲ್ಲಿ ಹಾಗೂ ಪ್ರತಿ ಶನಿವಾರ ವಿಶೇಷ ಪೂಜೆಗಳು ನಡೆಯುತ್ತವೆ.

Madugiri Brindavana Venugopalaದೇಗುಲದ ವಿಶಾಲ ಪ್ರಕಾರದಲ್ಲಿ ಪುಟ್ಟದೊಂದು ವೇಣುಗೋಪಾಲನ ಗುಡಿ ಇದೆ. ಬೃಂದಾವನದಾಕಾರದಲ್ಲಿರುವ ಈ ಗುಡಿಯಲ್ಲಿ ಕೊಳಲನು ಊದುತ್ತಿರುವ ಕೃಷ್ಣನ ಸುಂದರವಿಗ್ರಹವಿದೆ. ದ್ವಾರದ ಬಲ ಪಕ್ಕದಲ್ಲಿ ಬಾಳೆಯಗಿಡ ಹಾಗೂ ಹಸುವಿನ ಕೆತ್ತನೆ ಇದ್ದರೆ, ಎಡ ಭಾಗದಲ್ಲಿ ಬಾಳೆಗಿಡ ಹಾಗೂ ಆಂಜನೇಯ ಮೂರ್ತಿಗಳಿವೆ. ಇದರ ಮುಂಭಾಗದಲ್ಲಿ ನಾಗರಕಲ್ಲುಗಳನ್ನು ಪ್ರತಿಷ್ಠಾಪಿಸಲಾಗಿದೆ.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮದೇವಾಲಯಗಳು