ಮುಖಪುಟ /ನಮ್ಮದೇವಾಲಯಗಳು 

ಮಂಜೇಶ್ವರ ಅನಂತೇಶ್ವರ ದೇವಾಲಯ

ಮಂಗಳೂರಿನಿಂದ 17 ಕಿಲೋ ಮೀಟರ್ ದೂರದಲ್ಲಿರುವ ಮಂಜೇಶ್ವರ, ಮಂಜುಳಕ್ಷೇತ್ರ. ಈ ಕ್ಷೇತ್ರ ಕೇರಳ ರಾಜ್ಯಕ್ಕೆ ಸೇರಿದ್ದರೂ, ಇಲ್ಲಿನ ಜನರ ಭಾವನೆ, ಮನಸ್ಸು ಎಲ್ಲವೂ ಕನ್ನಡ. ಇಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಪುರಾತನವಾದ ಶ್ರೀ ಅನಂತೇಶ್ವರ ದೇವಾಲಯವಿದೆ.

ಇಲ್ಲಿ ಶಿವ, ಶೇಷ ಅರ್ಥಾತ್ ಅನಂತನೊಂದಿಗೆ ನೆಲೆಸಿರುವ ಕಾರಣ ಅನಂತೇಶ್ವರನಾಗಿದ್ದಾನೆ. ದೇವಾಲಯದ ಇತಿಹಾಸ ಸಾವಿರಾರು ವರ್ಷಗಳ ಹಿರಿದು. ಪುರಾಣ ಕಾಲದಿಂದಲೂ ಈ ದೇವಾಲಯ ಇತ್ತೆಂದು ಸ್ಥಳ ಪುರಾಣದಿಂದ ತಿಳಿದುಬರುತ್ತದೆ.

ಇಲ್ಲಿ ಕಲಿಯುಗದ ಆರಂಭದಲ್ಲಿ ಸಾಕ್ಷಾತ್ ಪರಶಿವನೇ ನರಸಿಂಹ ವಿಗ್ರಹ ಪ್ರತಿಷ್ಠಾಪಿಸಿ ಪೂಜಿಸಿದನಂತೆ. ಈ ಸ್ಥಳ ಮಹಿಮೆ ಅರಿತ ಗೌಡ ಸಾರಸ್ವತ ಬ್ರಾಹ್ಮಣ ಸಮಾಜಕ್ಕೆ ಸೇರಿದ ವಿರೂಪಾಕ್ಷ ಎಂಬ ಸನ್ಯಾಸಿ ಇಲ್ಲಿ ಶಿವನನ್ನು ಪೂಜಿಸುತ್ತಾ, ತಮ್ಮ ಜೀವಿತದ ಕೊನೆಗಾಲವನ್ನು ಇಲ್ಲಿಯೇ ಕಳೆದು ಮೋಕ್ಷ ಪಡೆದರೆಂದು ತಿಳಿದುಬರುತ್ತದೆ.

ಇದಾದ ನಂತರ ಹಲವಾರು ವರ್ಷಗಳ ಕಾಲ ದೇವಾಲಯದ ಬಗ್ಗೆ ಯಾವುದೇ ಮಾಹಿತಿ ದೊರಕುವುದಿಲ್ಲ. ನಂತರ ರಂಗಶರ್ಮ ಎಂಬುವವರು ಗೋವಾದಿಂದ ರಾಮೇಶ್ವರಕ್ಕೆ ಹೋಗುವ ದಾರಿಯಲ್ಲಿ ಇಲ್ಲಿ ಬಂದು ತಂಗಿದ್ದಾಗ, ಶಿವ ಅವರ ಕನಸಿನಲ್ಲಿ ಕಾಣಿಸಿಕೊಂಡು ಗುಡಿ ಕಟ್ಟಲು ಅಪ್ಪಣೆ ಇತ್ತನಂತೆ. ಶರ್ಮರು ತಾವು ಗೋವಾದಿಂದ ತಂದಿದ್ದ ಶೇಷನೊಂದಿಗೆ ದೇವರ ಪ್ರತಿಷ್ಠಾಪನೆ ಮಾಡಿ, ಗುಡಿ ಕಟ್ಟಿಸಿ ಪೂಜಿಸಿದರಂತೆ.

ಮಧ್ವವಿಜಯದ ರೀತ್ಯ ಆಚಾರ್ಯತ್ರಯರಲ್ಲಿ ಒಬ್ಬರಾದ ಮಧ್ವಾಚಾರ್ಯರೂ ಸಹ ಚಾತುರ್ಮಾಸ ವ್ರತ ಕಾಲದಲ್ಲಿ ಇಲ್ಲಿ ಬಂದು ನೆಲೆಸಿ, ಕಣ್ವತೀರ್ಥದಲ್ಲಿ ಮಿಂದು, ನರಸಿಂಹ ದೇವರನ್ನು ಪೂಜಿಸಿದರಂತೆ.

ಈಗ ಇಲ್ಲಿರುವ ದೇವಾಲಯಕ್ಕೆ ಭವ್ಯವಾದ ಗೋಪುರವಿದೆ. ವಿಶಾಲವಾದ ಪ್ರದಕ್ಷಿಣ ಪಥ, ಪ್ರಾಕಾರ ಒಳಗೊಂಡ ಬೃಹತ್ ದೇವಾಲಯದ ಪ್ರಧಾನ ಗರ್ಭಗೃಹದಲ್ಲಿ  ನರಸಿಂಹ ದೇವರ ವಿಗ್ರಹ ಪಂಚಲೋಹದಿಂದ ಮಾಡಿದ ವಿಗ್ರಹವಿದೆ. ಇಲ್ಲಿ ಸ್ವಾಮೀಜಿ ಅವರಿಗೆ ನರಸಿಂಹ ದರ್ಶನ ನೀಡಿದನೆಂದೂ ತಿಳಿದುಬರುತ್ತದೆ. ಇಲ್ಲಿ ಕಾಶೀಮಠ ಸಂಸ್ಥಾನವೂ ಇದೆ.

1677ರಲ್ಲಿ ಸಂಭವಿಸಿದ ಭೀಕರ ಚಂಡಮಾರುತದಲ್ಲಿ ದೇವಾಲಯದ ಕೆಲವು ಭಾಗಕ್ಕೆ ಹಾನಿಯಾಗಿತ್ತು. 1804ರಲ್ಲಿ ದೇವಾಲಯ ಜೀರ್ಣೋದ್ಧಾರ ಮಾಡಿ, ಕಾಶೀಮಠದ ಶ್ರೀಮದ್ ವಿಭುದೇಂದ್ರ ತೀರ್ಥರು ಭದ್ರ ನರಸಿಂಹ ದೇವರ ವಿಗ್ರಹ ಪ್ರತಿಷ್ಠಾಪಿಸಿದರು.

ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ (ಮಾರ್ಗಶಿರ ಮಾಸದಲ್ಲಿ) ಇಲ್ಲಿ ಒಂದು ವಾರಕಾಲ ಪೂಜೆ ಸಮಾರಾಧನೆ ಹಾಗೂ ರಥೋತ್ಸವ ನಡೆಯುತ್ತದೆ.

ದೇವರಿಗೆ ಇಲ್ಲಿ ನಿತ್ಯ ತ್ರಿಕಾಲ ಪೂಜೆ, ಅಮೃತಪಡಿ, ನಂದಾದೀಪ್ತಿ, ಬ್ರಾಹ್ಮಣ ಸಂತರ್ಪಣೆ ನಡೆಯುತ್ತದೆ. ಭಕ್ತರಿಗೆ ದೇವರ ಮುಡಿ ಗಂಧ ಪ್ರಸಾದ ನೀಡಲಾಗುತ್ತದೆ.

ದೇವಾಲಯದ ವಿಳಾಸ : ಶ್ರೀಮತ್ ಅನಂತೇಶ್ವರ ದೇವಸ್ಥಾನ, ಮಂಜೇಶ್ವರ, ಕೇರಳ 671 323. ದೂರವಾಣಿ 04998-272221. 274477.

ಮುಖಪುಟ /ನಮ್ಮದೇವಾಲಯಗಳು