ಮುಖಪುಟ /ನಮ್ಮದೇವಾಲಯಗಳು  

ಮೊಸಳೆಯ ನಾಗೇಶ್ವರ, ಚನ್ನಕೇಶವ ದೇವಾಲಯ

*ಟಿ.ಎಂ. ಸತೀಶ್

Mosale Nageshwaraand Channakeshava templeಹೊಯ್ಸಳರ ಶಿಲ್ಪಕಲಾ ತೊಟ್ಟಿಲೆಂದೇ ಖ್ಯಾತವಾದ ಹಾಸನ ಜಿಲ್ಲೆಯಲ್ಲಿರುವ ಮತ್ತೊಂದು ಮನೋಹರ ಶಿಲ್ಪಕಲೆಗಳ ಬೀಡೇ ಮೊಸಳೆ.

ಹಾಸನದಿಂದ ಹೊಳೆನರಸೀಪುರ ಮಾರ್ಗದಲ್ಲಿ ದಕ್ಷಿಣದಲ್ಲಿ 12 ಕಿಮೀ ದೂರದಲ್ಲಿರುವ ಈ ಊರು ಪೌರಾಣಿಕ ಕಾಲದಿಂದಲೂ ಖ್ಯಾತವಾಗಿದೆ.  ಸ್ಥಳ ಪುರಾಣದ ರೀತ್ಯ ಜಮದಗ್ನಿ ಮಹಾಮುನಿ ಇಲ್ಲಿ ತಪವನ್ನಾಚರಿಸಿದ್ದರಂತೆ. ಈ ಪವಿತ್ರ ಪುಣ್ಯ ಕ್ಷೇತ್ರದಲ್ಲಿ ಹರಿ ಹರರಲ್ಲಿ ಯಾವುದೇ ಭೇದವಿಲ್ಲ ಎಂದು ನಿರೂಪಿಸುವಂತೆ ಅಕ್ಕ ಪಕ್ಕದಲ್ಲೇ ಹೊಯ್ಸಳರ ಕಾಲದ ನಾಗೇಶ್ವರ ಮತ್ತು ಚನ್ನಕೇಶವ ದೇವಾಲಯಗಳಿವೆ. ಎರಡೂ ದೇವಾಲಯಗಳೂ ನೋಡಲು ಒಂದೇ ರೀತಿಯಲ್ಲಿವೆ. ಎರಡೂ ದೇವಾಲಯಗಳ ಹೊರಭಿತ್ತಿಗಳು ಕಲಾತ್ಮಕ ಹಾಗೂ ಸೂಕ್ಷ್ಮ ಕೆತ್ತನೆಯಿಂದ ಕೂಡಿದ್ದು, ನೋಡಲು ಸುಂದರವಾಗಿವೆ. ಎರಡೂ ದೇವಾಲಯಗಳಲ್ಲಿ ಹೊಯ್ಸಳರ ಮೂಲಪುರುಷ ಸಳ ಹುಲಿಯನ್ನು ಸಂಹರಿಸುತ್ತಿರುವ ಲಾಂಛನಗಳೂ ಇಲ್ಲಿವೆ.

ನಾಗೇಶ್ವರ ದೇವಾಲಯದ ಶಿಖರದಲ್ಲಿ ಶಿವನ ವಿವಿಧ ರೂಪದ ಶಿಲ್ಪಗಳನ್ನು ಕೆತ್ತಲಾಗಿದೆ.   ಸುಕನಾಸಿಯಲ್ಲಿ ಜಾಲಂಧ್ರಗಳಿವೆ.  ಇಲ್ಲಿರುವ ಮನ್ಮಥರತಿಯ ಶಿಲ್ಪವಂತೂ ಅತ್ಯಂತ ಗಮನಾರ್ಹವಾಗಿದೆ.  ಗರ್ಭಗೃಹದಲ್ಲಿ ಸುಂದರ ಲಿಂಗವಿದೆ.

ಇನ್ನು  ಚನ್ನಕೇಶವ ದೇವಾಲಯ ವೈಷ್ಣವ ಶಿಲ್ಪಗಳಿಂದ ಕೂಡಿದೆ. ಭಿತ್ತಿಯ ಪಟ್ಟಿಕೆಗಳ ಮೇಲಿನ ವಿಗ್ರಹಗಳಲ್ಲಿ ಗರುಡ, ಕೇಶವ, ವೇಣುಗೋಪಾಲ, ಗೋವರ್ಧನಧಾರಿ, ಅನಿರುದ್ಧ, ಶ್ರೀಧರ, ಬಲಿ. ವಾಮನ, ಅಚ್ಯುತ, ಲಕ್ಷ್ಮಿ ಜನಾರ್ದನ ಮೊದಲಾದ ಸುಂದರ ಉಬ್ಬು ಶಿಲ್ಪಗಳಿವೆ. ಶಿಖರದಲ್ಲಿ ವಿಷ್ಣುವಿನ ವಿವಿಧ ರೂಪಗಳ ಶಿಲ್ಪಗಳನ್ನು ಕಡೆಯಲಾಗಿದೆ.

ಮುಖಮಂಟಪ, ಸುಖನಾಸಿ, ಭುವನೇಶ್ವರಿಗಳನ್ನೊಳಗೊಂಡ ದೇವಾಲಯ ಮನೋಹರವಾಗಿದೆ. ಭುವನೇಶ್ವರಿಗಳಲ್ಲಿರುವ ಸುಂದರ ಶಿಲ್ಪಾಲಂಕರಣಗಳಿವೆ. ದೇವಾಲಯದ ಸುತ್ತಲೂ ಹಚ್ಚ ಹಸುರಿನಿಂದ ಕೂಡಿದ ಹುಲ್ಲು ಹಾಸಿದ್ದು ದೇವಾಲಯದ ಸೌಂದರ್ಯವನ್ನು ನೂರ್ಮಡಿಗೊಳಿಸಿವೆ.

ಸಂಪರ್ಕ: ಉಪ ನಿರ್ದೇಶಕರು ಮತ್ತು ಅಧ್ಯಕ್ಷರು, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ, ಹಾಸನ, ದೂರವಾಣಿ 08172-267345. ಅಥವಾ ಸಹಾಯಕ ನಿರ್ದೇಶಕರು, ಪ್ರದಾಶಿಕ ಪ್ರವಾಸೋದ್ಯಮ ಅಧಿಕಾರಿಗಳ ಕಾರ್ಯಾಲಯ, ಹಾಸನ. 08172-268862.

ಮುಖಪುಟ /ನಮ್ಮದೇವಾಲಯಗಳು