ಮುಖಪುಟ /ನಮ್ಮ ದೇವಾಲಯಗಳು  

ಜೈನಕಾಶಿ ಮೂಡಬಿದರೆ

*ಟಿ.ಎಂ. ಸತೀಶ್

Mudabidire, ಮೂಡಬಿದರೆ.ಮಂಗಳೂರು-ಕಾರ್ಕಳ ರಸ್ತೆಯಲ್ಲಿ ಮಂಗಳೂರಿನಿಂದ 35 ಕಿಮೀ ದೂರದಲ್ಲಿರುವ ಮೂಡಬಿದರೆ ಜೈನಕಾಶಿ ಎಂದೇ ಖ್ಯಾತವಾಗಿದೆ. 17ನೆಯ ಶತಮಾನದಲ್ಲಿ ಮೂಡಬಿದರೆ  ಪುತ್ತಿಗೆಯ ಚೌಟರಸರ ರಾಜಧಾನಿಯಾಗಿ ಮೆರೆದಿತ್ತು ಎಂದು ಶಾಸನಗಳು ಸಾರುತ್ತವೆ.

ಫಲ್ಗುಣಿ ನದಿಯ ದಂಡೆಯ ಮೇಲಿರುವ ಮೂಡಬಿದರೆಯಲ್ಲಿ 18 ಬಸದಿಗಳು ಹಲವಾರು ದೇವಾಲಯಗಳಿವೆ. ಈ ಪೈಕಿ ಸಾವಿರ ಕಂಬಗಳ ಬಸದಿ ಎಂದು ಖ್ಯಾತವಾಗಿರುವ ತ್ರಿಭುವನತಿಲಕ ಚೂಡಾಮಣಿ ಚಂದ್ರಪ್ರಭಾಸ್ವಾಮಿಯ ಮಹಾಚೈತ್ಯಾಲಯ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಶ್ರೇಷ್ಠ ವಾಸ್ತು ವಿನ್ಯಾಸಗಳನ್ನು ಒಳಗೊಂಡ ಈ ಬಸದಿಯನ್ನು 1431ರಲ್ಲಿ ನಿರ್ಮಿಸಿಲಾಯಿತೆಂದು ಗದ್ದಿಗೆ ಮಂಟಪದಲ್ಲಿರುವ ಶಿಲಾಕೆತ್ತನೆ ತಿಳಿಸುತ್ತದೆ.

ಕಲಾತ್ಮಕವಾದ ಬಸದಿಯಲ್ಲಿ ಶಿಲ್ಪಾಲಂಕಾರ ಮನಸೆಳೆಯುತ್ತದೆ. ಇಲ್ಲಿರುವ ಕಂಬಗಳು ಒಂದಕ್ಕಿಂತ ಒಂದು ಭಿನ್ನವಾಗಿದ್ದು ಅನುಪಮವಾಗಿವೆ.  ಕಂಬಗಳಲ್ಲಿ ಮತ್ತು ಭಿತ್ತಿಗಳಲ್ಲಿ ಕೆತ್ತಲಾಗಿರುವ ಲತೆ, ಹೂ, ಹಣ್ಣುಗಳು, ಮೃಗಪಕ್ಷಿಗಳ ಮತ್ತು ದೇವ ದಾನವರ ಪ್ರತಿಮೆಗಳು ಆಸ್ತಿಕರು ನಾಸ್ತಿಕರನ್ನು ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾಗಿವೆ.

ಇಲ್ಲಿರುವ ಆರೂವರೆ ಅಡಿಯ ಮಿರಮಿರನೆ ಮಿನುಗುವ ಅಷ್ಟಮ ತೀರ್ಥಂಕರರ ಮೂರ್ತಿ ಮನೋಹರವಾಗಿದೆ.

ಶಿಲ್ಪಿಯ ಕಲಾವಂತಿಕೆ, ನೈಪುಣ್ಯ ಮೆಚ್ಚದವರೇ ವಿರಳ. ಬಸದಿಯ ಮುಂದೆ 50 ಅಡಿ ಎತ್ತರದ ಮಾನಸ್ತಂಭವಿದೆ. ಭವ್ಯ ಕಲಾತ್ಮಕವಾದ ಏಕಶಿಲಾ ಕಂಬ ಉತ್ತರ ಭಾರತ ಅದರಲ್ಲೂ ಹಿಮಾಚಲ ಪ್ರದೇಶದ ಸ್ತೂಪಗಳಿಂದ ಪ್ರಭಾವಿತವಾಗಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಪ್ರತಿವರ್ಷ ಚೈತ್ರಮಾಸದ ಹುಣ್ಣಿಮೆಯ ದಿನ ಇಲ್ಲಿ ರಥೋತ್ಸವ ನಡೆಯುತ್ತದೆ.

mudabidare, ಮೂಡಬಿದರೆಇಲ್ಲಿ ಹಳೆ ಬಸದಿ ಎಂದು ಕರೆಸಿಕೊಂಡ ಗುರು ಬಸದಿ ಇದೆ. 35 ಜಿನ ಬಿಂಬಗಳು ಇಲ್ಲಿ ಸಂರಕ್ಷಿತವಾಗಿವೆ. ಸನಿಹದಲ್ಲೇ ಹನುಮಂತ ಗುಡಿಯೂ ಇದೆ.

ವರಬಲದಿಂದ ಗರ್ವಿತನಾಗಿ ನರರನ್ನೂ, ದೇವತೆಗಳನ್ನೂ, ಋಷಿ ಮುನಿಗಳನ್ನೂ ಕಾಡಿದ ಮಹಿಷನ ಕೊಂದ ಚಾಮುಂಡೇಶ್ವರಿ (ಮಹಿಷಾಸುರಮರ್ದಿನಿ), ಗಣಪನ ತಾಯಿ ಗೌರೀ, ಕೊಳಲು ಹಿಡಿದ ಗೋಪಾಲಕೃಷ್ಣ ಹಾಗೂ ಸಂಕಟ ಪರಿಹರಿಸುವ ವೆಂಕಟರಮಣ ದೇವಾಲಯಗಳೂ ಇಲ್ಲಿವೆ.ಮಹಾಲಸದೇವಾಲಯವೂ ಮನಮೋಹಕವಾಗಿದೆ. ಕಾರ್ಕಳಕ್ಕೆ ಕೇವಲ 20 ಕಿಲೋ ಮೀಟರ್ ದೂರದಲ್ಲಿದೆ ಮೂಡಬಿದರೆ.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮದೇವಾಲಯ