ಮುಖಪುಟ /ನಮ್ಮದೇವಾಲಯಗಳು

ಕೋಲಾರ ಬಳಿಯ ಮೂಲಧಾರೇಶ್ವರ ದೇವಾಲಯ

*ಚಿತ್ರ ಲೇಖನ-ಸುಗಟೂರು ಮಂಜುನಾಥ

Muladhareswara temple, ಮೂಲಧಾರೇಶ್ವರ ದೇವಾಲಯ ,ಕೋಲಾರ, Kolar, our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ಶತಶೃಂಗ ಪರ್ವತವೆಂದೇ ಖ್ಯಾತವಾದ ಕೋಲಾರ ಜಿಲ್ಲೆಯ ಅಂತರಗಂಗೆ ಪರ್ವತ ಶ್ರೇಣಿಯಲ್ಲಿ 100ಕ್ಕೂ ಹೆಚ್ಚು ಬೆಟ್ಟ ಗುಡ್ಡಗಳಿವೆ. ಇವು ತಮ್ಮ ಗರ್ಭದಲ್ಲಿ ನೂರಾರು ಶಿಲಾ ಶಾಸನಗಳು, ಅಪರೂಪದ ಗವಿಗಳು, ಮಾಸ್ತಿಕಲ್ಲು, ವೀರಗಲ್ಲುಗಳು, ಅಪರೂಪದ ಸಸ್ಯಸಂಕುಲ, ಪ್ರಾಣಿಸಂಕುಲ ಸೇರಿದಂತೆ ಹಲವು ವಿಸ್ಮಯಗಳನ್ನೂ ಹುದುಗಿಸಿಕೊಂಡಿವೆ.

ಈ ಶ್ರೇಣಿಯಲ್ಲಿ ಹಲವು ಗುಹಾಂತರ ದೇವಾಲಯಗಳೂ ಇವೆ. ಆದರೆ ಕೆಲವು ದೇವಸ್ಥಾನಗಳು ಸರ್ಕಾರ ಹಾಗೂ ಸಾರ್ವಜನಿಕರ ದಿವ್ಯ ನಿರ್ಲಕ್ಷ್ಯದಿಂದ ಅವಸಾನದ ಅಂಚಿನಲ್ಲಿವೆ. ಇಂಥ ಒಂದು ದೇವಾಲಯ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಕೋಲಾರದ ಬಳಿ ಇರುವ ಕೆಂದಟ್ಟಿ - ಮಡಿವಾಳದಲ್ಲಿದೆ.

ಬೆಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿ ೪ರಲ್ಲಿ ಸಾಗಿದರೆ ೫೨ ಕಿಲೋ ಮೀಟರ್ ಕ್ರಮಿಸಿದ ಬಳಿಕ ಎಡಬದಿಯಲ್ಲಿ ಅಪರೂಪದ ಶಿಲಾ ಸಮೂಹದಿಂದ ಕೂಡಿದ ಈ ಊರು ಕಾಣಸಿಗುತ್ತದೆ. ಬೆಟ್ಟಗಳ ಕೆಳಭಾಗದಲ್ಲಿ ಅತ್ಯಂತ ಪ್ರಾಚೀನವಾದ ಸುಂದರ ದೇವಾಲಯವಿದೆ. ಇದು ಮೂಲಧಾರೇಶ್ವರ ದೇವಾಲಯ ಎಂದು ಹೇಳುತ್ತಾರೆ. ಆದರೆ, ಒಳಗಿರುವ ಧಾರೇಶ್ವರನ ನೋಡಲು ಸಾಧ್ಯವಾಗದಂತೆ ಗಿಡಗಂಟಿಗಳು ಬೆಳೆದಿವೆ. ಕ್ರಿ.ಶ.೩೫೦ರ ಸುಮಾರಿನಲ್ಲಿ ನಿರ್ಮಾಣವಾಗಿದೆ ಎನ್ನಲಾದ ಈ ದೇವಾಲಯದ ಸಂರಕ್ಷಣೆಗೆ ಪುರಾತತ್ವ ಇಲಾಖೆಯಾಗಲೀ, ಧಾರ್ಮಿಕದತ್ತಿ ಇಲಾಖೆಯಾಗಲೀ ಮುಂದಾಗಿಲ್ಲ. ಸ್ಥಳೀಯ ಆಡಳಿತ ಕೂಡ ಈ ಅಪರೂಪದ ದೇವಾಲಯದ ಸುತ್ತ ಹಾಗೂ ದೇಗುಲದ ಮೇಲೆ ಬೆಳೆದಿರುವ ಗಿಡಗಂಟಿ ತೆಗೆಸಿ, ಜೀರ್ಣೋದ್ಧಾರ ಮಾಡಿ, ನಿತ್ಯ ಪೂಜೆ ನಡೆಯುವಂತೆ ಮಾಡುವಲ್ಲಿ ವಿಫಲವಾಗಿದೆ.

Muladhareswara temple, ಮೂಲಧಾರೇಶ್ವರ ದೇವಾಲಯ ,ಕೋಲಾರ, Kolar, our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ದಟ್ಟವಾಗಿ ಬೆಳೆದಿರುವ ಗಿಡಗಂಟಿಗಳ ನಡುವೆ ಅಲ್ಪಸ್ವಲ್ಪ ಗೋಚರಿಸುವ ದೇವಾಲಯದ ಭಿತ್ತಿಗಳಲ್ಲಿ ಸುಂದರವಾದ ಉಬ್ಬುಶಿಲ್ಪಗಳು ಗಮನ ಸೆಳೆಯುತ್ತವೆ. ಪಕ್ಕದಲ್ಲಿ ಹಲವು ವೀರಗಲ್ಲು, ಮಾಸ್ತಿಕಲ್ಲುಗಳಿವೆ. ಇಂದೋ ನಾಳೆಯೋ ಬಿದ್ದು ಹೋಗುವ ಸ್ಥಿತಿಯಲ್ಲಿರುವ ಹಲವು ಕಂಬಗಳು, ಮಂಟಪಗಳಿವೆ. ದೇವಾಲಯದ ಈ ದುಸ್ಥಿತಿಯನ್ನು ಕಂಡವರು ತಮಗರಿವಿಲ್ಲದೆ ಕಣ್ಣೀರು ಹಾಕುತ್ತಾರೆ.

ಈ ದೇವಾಲಯದ ಎದುರು ಇರುವ ಚಂದ್ರ ಮಲ್ಲೇಶ್ವರ ಪರ್ವತ ಮತ್ತೂ ಅದ್ಭುತವಾಗಿದೆ. ಹಲವು ಔಷಧೀಯ ಸಸ್ಯಗಳಿವೆ. ಬೆಟ್ಟ ಹತ್ತಲು ಮೆಟ್ಟಿಲುಗಳಿಲ್ಲ. ಇಲ್ಲಿ ಬೆಟ್ಟದ ದೇವಾಲಯವಿದ್ದು, ಆಸು ಪಾಸಿನಲ್ಲಿ ಪಾತಾಳಗಂಗೆ, ಅಕ್ಕನವರ ಗವಿ, ಶಿಖರ ದೀಪ ಗವಿಗಳು ಮನೋಹರವಾಗಿವೆ. ತಮ್ಮನ್ನು ಸಂರಕ್ಷಿಸಿ ಎಂದು ಕಣ್ಣೀರುಗರೆಯುತ್ತಿವೆ.

ಕರ್ನಾಟಕದ ಮಲೆನಾಡಿನಲ್ಲಿ ಅದರಲ್ಲೂ ಆಗುಂಬೆ ಘಟ್ಟ ಪ್ರದೇಶದಲ್ಲಿ ಪ್ರವಾಸಿಗರು ಕಾಳಿಂಗ ಸರ್ಪಗಳನ್ನು ನೋಡುತ್ತಾರೆ. ಈ ಬೆಟ್ಟದಲ್ಲಿ ಕೂಡ ಹಲವು ಕಾಳಿಂಗ ಸರ್ಪಗಳಿದ್ದು, ಎಲ್ಲ ಪ್ರವಾಸಿಗರೂ ಕಾಳಿಂಗ ಸರ್ಪಗಳನ್ನು ನೋಡಿದ್ದಾರೆ. ಬೆಟ್ಟ ಏರುವಾಗ ಎಚ್ಚರ ಅಗತ್ಯ. ಈ ದೇವಾಲಯಗಳಲ್ಲಿ ಸಹ ಅಪರೂಪದ ಕೆತ್ತನೆಗಳು, ಶಾಸನಗಳು ಕಾಣಸಿಗುತ್ತವೆ. ಮೂಲಧಾರೇಶ್ವರ ದೇವಾಲಯ ಹಾಗೂ ಚಂದ್ರಮೌಳೇಶ್ವರ ಪರ್ವತ ಹಾಗೂ ದೇವಾಲಯವನ್ನು ಸಂರಕ್ಷಿಸುವತ್ತ ಸರ್ಕಾರ ಗಮನ ಹರಿಸಬೇಕು.

ಮುಖಪುಟ /ನಮ್ಮ ದೇವಾಲಯಗಳು