ಮುಖಪುಟ /ನಮ್ಮದೇವಾಲಯಗಳು

ನಾಗಲಾಪುರದ ಸುಂದರ ದೇವಾಲಯಗಳು

*ಟಿ.ಎಂ.ಸತೀಶ್

Nagalapura keshava temple, kannadaratna.com, ourtemples.in, ನಾಗಲಾಪುರ ಕೇಶವ ದೇವಾಲಯ, ಕೇದಾರೇಶ್ವರ ದೇವಾಲಯ,  kannadaratna.com, ourtemples.in, ಕನ್ನಡರತ್ನ.ಕಾಂ, ನಮ್ಮದೇವಾಲಯಗಳುನಾಗಲಾಪುರ ತುರುವೇಕೆರೆ ತಾಲ್ಲೂಕಿನ ಒಂದು ಪುಟ್ಟ ಗ್ರಾಮ. ಮಾಯಸಂದ್ರದಿಂದ ಸುಮಾರು 8 ಕಿಮೀ ದೂರದಲ್ಲಿರುವ ನಾಗಲಾಪುರ ಕಲಾತ್ಮಕವಾಗಿ ಶ್ರೀಮಂತವಾದ ದೇವಾಲಯಗಳನ್ನೊಳಗೊಂಡ ಕುಗ್ರಾಮ. ಹೊಯ್ಸಳರ ಕಾಲದ ಅಗ್ರಹಾರವಾಗಿದ್ದ ಇಲ್ಲಿ ಸುಂದರವಾದ ಶಿವರ ಹಾಗೂ ವಿಷ್ಣುದೇವಾಲಯವಿದೆ.

ವಿಷ್ಣು ದೇವಾಲಯವನ್ನು ಚೆನ್ನಕೇಶವ ಎಂದೂ, ಶಿವದೇವಾಲಯವನ್ನು ಕೇದಾರೇಶ್ವರ ದೇಗುಲವೆಂದೂ ಕರೆಯಲಾಗುತ್ತದೆ. ಈ ಎರಡೂ ದೇವಾಲಯಗಳು ಬಹುತೇಕ ಒಂದೇ ವಿನ್ಯಾಸದಲ್ಲಿವೆ. ಈ ದೇವಾಲಯಗಳ ಹೊರಭಿತ್ತಿಯಲ್ಲಿರುವ ಕೆತ್ತನೆಗಳು ಬೇಲೂರು, ಹಳೇಬೀಡಿನ ಭಿತ್ತಿಗಳನ್ನೇ ಹೋಲುತ್ತವೆ.

ಪೂರ್ಣವಿಕಾಸಗೊಂಡ ಹೊಯ್ಸಳ ಶೈಲಿಯಲ್ಲಿರುವ ಈ ದೇವಾಲಯಗಳನ್ನು ಸುಮಾರು 13ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಇತಿಹಾಸಜ್ಞರು ಹೇಳುತ್ತಾರೆ.

ಶಿಥಿಲವಾಗಿದ್ದ ಈ ದೇವಾಲಯಗಳನ್ನು ಈಗ ಜೀರ್ಣೋದ್ಧಾರ ಮಾಡಲಾಗಿದ್ದು, ಪ್ರಾಚ್ಯವಸ್ತು ಇಲಾಖೆ ಸಂರಕ್ಷಿಸಿದೆ. ನಕ್ಷತ್ರಾಕಾರದ ಜಗತಿಯ ಮೇಲೆ ಕಟ್ಟಿರುವ ದೇವಾಲಯದ ಹೊರಗೋಡೆಗಳ ಪಟ್ಟಿಕೆಗಳಲ್ಲಿ ಆನೆ, ಕುದುರೆ, ಲತೆ, ಮಕರ, ಹಂಸಗಳಿವೆ. ಮಧ್ಯದ ಒಂದು ಪಟ್ಟಿಕೆಯ ಮೇಲೆ ಯಾವ ಶಿಲ್ಪವೂ ಇಲ್ಲ. ಈ ದೇವಾಲಯ ಕಟ್ಟಿದ ಶಿಲ್ಪಿ ತನಗಿಂತ ಉತ್ತಮವಾದ ಶಿಲ್ಪ ಕಂಡರಣೆಗಾಗಿ ಸವಾಲು ಹಾಕಿ ಈ ಪಟ್ಟಿಕೆ ಖಾಲಿ ಬಿಟ್ಟಿದ್ದಾನೆ ಎಂಬುದು ತಜ್ಞರ ಅಭಿಮತ.

ಪೂರ್ವಾಭಿಮುಖವಾಗಿರುವ ಕೇಶವ ದೇವಾಲಯದ ನವರಂಗದಲ್ಲಿ ನಾಲ್ಕು ಕಂಬಗಳಿದ್ದು ನುಣುಪಾದ ಶಿಲೆಯಲ್ಲಿ ಸುಂದರ ಶಿಲ್ಪಗಳಿವೆ. ಹೊರ ಭಿತ್ತಿಯ ಮೇಲೆ ವಾಸುದೇವ, ನರಸಿಂಹ, ವರಾಹ, ಲಕ್ಷ್ಮೀನಾರಾಯಣ, ವೇಣುಗೋಪಾಲ, ಇಂದ್ರ, ಶಚಿ, ಗರುಡ, ಸರಸ್ವತಿ, ಮೋಹಿನಿ, ಮಹಿಷಾಸುರಮರ್ದಿನಿ ಮೊದಲಾದ ಹಲವು ಶಿಲ್ಪಗಳಿವೆ.

ಏಕಕೂಟ, ಏಕ ಶಿಖರದ ಕೆಳಗಿರುವ ಗರ್ಭಗೃಹದಲ್ಲಿ ಚೆನ್ನಕೇಶವನ ಅತ್ಯಂತ ಸುಂದರ ವಿಗ್ರಹವಿತ್ತಂತೆ. ಈಗ ಇಲ್ಲಿ  ಆ ವಿಗ್ರಹವಿಲ್ಲ. ಬದಲಾಗಿ ವಿಜಯನಗರ ಕಾಲದ ಒಂದೂವರೆ ಮೀಟರ್ ಎತ್ತರದ  ಶ್ರೀನಿವಾಸನ ವಿಗ್ರಹವಿದೆ.

ಕೆರೆಯ ದಂಡೆಯ ಮೇಲೆ ಇರುವ ಕೇದಾರೇಶ್ವರ ದೇವಾಲಯ ಸಹ ಕೇಶವ ದೇವಾಲಯದಂತೆಯೇ ಪೂರ್ವಾಭಿಮುಖವಾಗಿದೆ. ಆದರೆ, ಇದರ ಮುಖ್ಯದ್ವಾರ ತುರುವೇಕೆರೆಯ ಮೂಲೆ ಶಂಕರ ದೇವಾಲಯದಂತೆ ದಕ್ಷಿಣಾಭಿಮುಖವಾಗಿದೆ. ಹೊರ ಭಿತ್ತಿಗಳ ಮೇಲೆ ವಿವಿಧ ಪುರಾಣ ಪುರುಷರ, ಸ್ತ್ರೀ ದೇವತೆಗಳ ಹಾಗೂ  ದಿಕ್ಪಾಲಕರ ಉಬ್ಬು ಶಿಲ್ಪಗಳಿವೆ. ಈ ದೇವಾಲಯದಲ್ಲಿರುವ ಕಂಬಗಳು ಮನೋಹರ ಕೆತ್ತನೆಯಿಂದ ಕೂಡಿವೆ. ಭುವನೇಶ್ವರಿಯ ಕೆತ್ತನೆಗಳು ಅತ್ಯಂತ ಆಕರ್ಷಕವಾಗಿವೆ. ಗರ್ಭಗೃಹ ಹಾಗೂ ಸುಕನಾಸಿಯ ಚಾವಣಿಗಳಲ್ಲಿ ತಾಂಡವೇಶ್ವರ ಶಿಲ್ಪವಿದೆ. ನವರಂಗದಲ್ಲಿ  ಬ್ರಹ್ಮ, ವಿಷ್ಣು ಹಾಗೂ ಸೂರ್ಯ ವಿಗ್ರಹಗಳಿವೆ. ಈ ಊರಿಗೆ ಹೋಗಲು ಹೆಚ್ಚಿನ ಸಾರಿಗೆ ಸಂಪರ್ಕವೇನಿಲ್ಲ.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮ ದೇವಾಲಯಗಳು