ಮುಖಪುಟ /ನಮ್ಮದೇವಾಲಯಗಳು   

ನಗರ್ತಪೇಟೆಯ ನಗರೇಶ್ವರ ದೇವಾಲಯ

ಅನ್ನಪೂರ್ಣಾಂಬಾ ಸಹಿತ ಶಿವ ಮಂದಿರ

*ಟಿ.ಎಂ.ಸತೀಶ್

nagareswara temple, Nagrtha pet, Bangaloreಬೆಂಗಳೂರು ಮಹಾನಗರದಲ್ಲಿ ಪುರಾತನವಾದ ನೂರಾರು ದೇವಾಲಯಗಳಿವೆ. ನಗರದ ಹಳೆಯ ಬಡಾವಣೆಗಳಲ್ಲಿ ಇಂಥ ದೇವಾಲಯಗಳು ಇಂದಿಗೂ ತಮ್ಮ ಪರಂಪರೆಯನ್ನು ಉಳಿಸಿಕೊಂಡಿವೆ. ಇಂಥ ದೇವಾಲಯಗಳ ಪೈಕಿ ಶ್ರೀ ಅನ್ನಪೂರ್ಣಾಂಬ ಶ್ರೀ ನಗರೇಶ್ವರ ಸ್ವಾಮಿ ದೇವಾಲಯವೂ ಒಂದು.

ಬೆಂಗಳೂರಿನ ಕರಗ ಖ್ಯಾತಿಯ ಧರ್ಮರಾಯನ ದೇವಾಲಯದ ಪಕ್ಕದ ರಸ್ತೆಯಲ್ಲಿ ಸಾಗಿದರೆ, ನಗರ್ತಪೇಟೆಯನ್ನು ನಾವು ಪ್ರವೇಶಿಸುತ್ತೇವೆ. ಈ ಮುಖ್ಯರಸ್ತೆಯಲ್ಲೇ ಭವ್ಯವಾದ ವಿಜಯನಗರ ಶೈಲಿಯ ರಾಜಗೋಪುರ ನಮ್ಮನ್ನು ಸ್ವಾಗತಿಸುತ್ತದೆ. ಇದುವೇ ನಗರೇಶ್ವರ ದೇವಸ್ಥಾನ.

ಈ ದೇವಾಲಯವನ್ನು ಸುಮಾರು 250 ವರ್ಷಗಳ ಹಿಂದೆ ಕೆಂಪ ನಂಜುಂಡಪ್ಪ ಎಂಬ ನಗರ್ತ ಸಮುದಾಯದ ಮುಖಂಡರು ನಿರ್ಮಿಸಿದರು ಎಂದು ತಿಳಿದುಬರುತ್ತದೆ. ಹೀಗೆ ನಗರ್ತ ಸಮುದಾಯದವರು ನಗರದಲ್ಲಿ ಸ್ಥಾಪಿಸಿದ ದೇವರಿಗೆ ನಗರೇಶ್ವರ ಎಂಬ  ಹೆಸರು ಬಂದಿದೆ. ನಗರ್ತ ಸಮುದಾಯದವರ ಕುಲದೇವರು ಕೂಡ ನಗರೇಶ್ವರ ಎಂದೂ ಹೇಳುತ್ತಾರೆ.

ದೇವಾಲಯಕ್ಕೆ ಮೂರು ಹಂತದ ಭವ್ಯ ರಾಜಗೋಪುರವಿದ್ದು, ಇದರಲ್ಲಿ ದ್ವಾರಪಾಲಕರು, ಗಣದೇವತೆಗಳು, ಶಿವಪಾರ್ವತಿಯೇ ಮೊದಲಾದ ಹಲವು ಗಾರೆಯ ಪ್ರತಿಮೆಗಳಿವೆ.

nagareswara temple, Nagrtha pet, Bangalore, Annapurneswariದ್ವಾರಬಂಧಿಂದ ಒಳ ಪ್ರವೇಶಿಸುತ್ತಿದ್ದಂತೆ  ಪುರಾತನವಾದ ದೇಗುಲ ವಿಶಾಲ ಪ್ರಾಕಾರವಿದೆ. ಸುಂದರ ಕೆತ್ತನೆಯ ಕಲ್ಲುಕಂಬಗಳ ಮೇಲಿನ ಛಾವಣಿಯಲ್ಲಿ ಇರುವ ಗೋಪುರಗಳಲ್ಲಿ ಗಣಪ, ಸುಬ್ರಹ್ಮಣ್ಯನ ಪ್ರತಿಮೆಗಳಿವೆ. ಮಧ್ಯದಲ್ಲಿರುವ ಗಾರೆ ಗಚ್ಚಿನ ಗೂಡಿನಲ್ಲಿ ಗಿರಿಜಾ ಕಲ್ಯಾಣದ ಪ್ರತಿಮೆಗಳಿವೆ. ಇದರ ಕೆಳಗೆ ಶಾಸನವೂ ಇದೆ. ಈ ಶಾಸನದಲ್ಲಿ  1884ರಲ್ಲಿ ಈ ದೇವಾಲಯ ಪುನರ್ನಿರ್ಮಾಣ ಮಾಡಿದ ಬಗ್ಗೆ ಮಾಹಿತಿ ಇದೆ.

ಈ ದೇವಾಲಯದಲ್ಲಿ ಶೈವಾಗಮ ಪದ್ಧತಿಯಂತೆ ನಿತ್ಯ ಪೂಜೆ ನಡೆಯುತ್ತದೆ. ಮೂಲಗರ್ಭಗೃಹದಲ್ಲಿ ನಗರೇಶ್ವರ ಲಿಂಗವಿದೆ. ಶಿವಲಿಂಗದ ಎದುರು ನಂದಿಯ ವಿಗ್ರಹವಿದೆ. ಗರ್ಭಗೃಹದ ಹೊರ ಆವರಣದ ಕಲ್ಲಿನ ಬಾಗಿಲವಾಡದಲ್ಲಿ ದ್ವಾರಪಾಲಕರ ಉಬ್ಬುಶಿಲ್ಪವಿದೆ. ಮೇಲ್ಭಾಗದಲ್ಲಿ ನಂದಿ ಹಾಗೂ ಸರ್ಪಭೂಷಣನಾದ ಲಿಂಗದ ಮೂರ್ತಿಯಿದೆ.

ಲಿಂಗದ ಎಡ ಭಾಗದ ಗರ್ಭಗೃಹದಲ್ಲಿ ಅನ್ನಪೂರ್ಣೆಶ್ವರಿಯ ಸುಂದರ ಮೂರ್ತಿಯೂ ಇದೆ. ಎಡಗೈನಲ್ಲಿ ಅನ್ನಪಾತ್ರೆಯನ್ನೂ ಬಲಗೈಯಲ್ಲಿ ಅದನ್ನು ಬಡಿಸುವ ಸಾಧನ ಇಟ್ಟುಕೊಂಡಿರುವ ಅಮ್ಮನವರ ಮೂರ್ತಿ ಸುಂದರವಾಗಿದೆ. ಬಲ ಭಾಗದಲ್ಲಿ ಗಣಪತಿಯ ವಿಗ್ರಹವಿದೆ.

nagareswara temple, Nagrtha pet, Bangaloreಅದರ ಪಕ್ಕದಲ್ಲಿ ಇರುವ ಮತ್ತೊಂದು ಗರ್ಭಗೃಹದಲ್ಲಿ ವೀರಭದ್ರಸ್ವಾಮಿ ಹಾಗೂ ಅದರ ಪಕ್ಕದ ಗುಡಿಯಲ್ಲಿ ಆರು ತಲೆಯ ಮಯೂರಾರೂಢ ಷಣ್ಮುಖನ ಮನೋಹರ ಪ್ರತಿಮೆಯಿದೆ. ಇದರ ಮಧ್ಯೆ ಪುರಾತನವಾದ ಉತ್ಸವಮೂರ್ತಿಯಿದೆ. ಪ್ರತಿ ವರ್ಷ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಬರುವ ಆರಿದ್ರಾ ನಕ್ಷತ್ರದಲ್ಲಿ ಈ ನಟರಾಜ ಮೂರ್ತಿಗೆ  ಶಾಲ್ಯಾನಾಭಿಷೇಕ ನಡೆಯುತ್ತದೆ. ಇದು ಆರಿದ್ರೋತ್ಸವ ಎಂದೇ ಖ್ಯಾತವಾಗಿದ್ದು, ಶಿವ ಹುಟ್ಟಿದ ಆ ದಿನ ಶಿವದರ್ಶನ ಮಾಡಿದರೆ, ಸಪ್ತಜನ್ಮದಲ್ಲಿ ಮಾಡಿದ ಪಾಪವೂ ನಿವಾರಣೆ ಆಗುತ್ತದೆ ಎಂದು ನಂಬಿಕೆ. ಪ್ರತಿವರ್ಷ ವೈಶಾಖ ಶುದ್ಧ ಪೂರ್ಣಿಮೆಯ ದಿನ ಬ್ರಹ್ಮರಥೋತ್ಸವ ನಡೆಯುತ್ತದೆ.  

ಈ ದೇವಾಲಯದಲ್ಲಿ ಮೂರು ತಲೆಮಾರಿನಿಂದ ಒಂದೇ ಕುಟುಂಬದವರು ಪೂಜೆ ಸಲ್ಲಿಸುತ್ತಿದ್ದು. ಪ್ರಸ್ತುತ ದೇವಾಲಯದ ಪ್ರಧಾನ ಅರ್ಚಕರಾಗಿರುವ ಆಗಮ ಪಂಡಿತರಾದ ಜಿ. ಅರುಣಾಚಲ ದೀಕ್ಷಿತರು.

ನವರಾತ್ರಿಯಲ್ಲಿ ಇಲ್ಲಿ ವಿಶೇಷ ಪೂಜೆಗಳು ಲಕ್ಷಾರ್ಚನೆ, ಕಾರ್ತೀಕ ಮಾಸದಲ್ಲಿ, ಶಿವದೀಪೋತ್ಸವ ನಡೆಯುತ್ತದೆ.  ಈ ದೇವಾಲಯದಲ್ಲಿ ಪದ್ಮಾಸನಸ್ಥಿತೆಯಾದ ಅನ್ನಪೂರ್ಣೆಶ್ವರಿಯ ಸಾಲಿಗ್ರಾಮ ಶಿಲೆಯ ವಿಗ್ರಹ ಕರ್ನಾಟಕದಲ್ಲಿ ಎಲ್ಲೂ ಇಲ್ಲ ಎಂದು ಅರ್ಚಕರು ಹೇಳುತ್ತಾರೆ. ಬಹಳ ಕಾಲ ಮದುವೆ ಆಗದವರು ಇಲ್ಲಿ ಹರಕೆ ಹೊರುತ್ತಾರೆ. ಅವರಿಗೆ ಮದುವೆ ಆದ ನಿದರ್ಶನಗಳಿವೆ. ಪದ್ಮಾವತಿ, ಲಕ್ಷ್ಮೀಸಮೇತ ನಾರಾಯಣ, ನಾಗದೇವತೆ, ಆಂಜನೇಯ, ದುರ್ಗಾದೇವಿ, ಸೂರ್ಯನಾರಾಯಣ, ಕಾಲಭೈರವ ದೇವಾಲಯಗಳೂ ಇಲ್ಲಿವೆ. ಬಲ ಭಾಗದಲ್ಲಿ ಚಂಡಿಕೇಶ್ವರ ಹಾಗೂ ನವಗ್ರಹ ದೇವಾಲಯವಿದೆ.  

ಮುಖಪುಟ; /ನಮ್ಮದೇವಾಲಯಗಳು