ಮುಖಪುಟ /ನಮ್ಮ ದೇವಾಲಯಗಳು  

ಆಂಜನೇಯ, ತ್ರಿಮೂರ್ತಿಗಳು ನೆಲೆನಿಂತ ರಾಗಿಗುಡ್ಡ

* ಟಿ.ಎಂ.ಸತೀಶ್

ragigudda, ರಾಗಿಗುಡ್ಡ ಪ್ರಸನ್ನ ಆಂಜನೇಯಸ್ವಾಮಿ ಟೆಂಪಲ್,  kannadaratna.com, ourtemples.in, ಕನ್ನಡರತ್ನ.ಕಾಂ, ನಮ್ಮದೇವಾಲಯಗಳುಶ್ರೀರಾಮ ಭಕ್ತನಾದ ಹನುಮ ಕನ್ನಡಿಗ. ಹನುಮ ಹುಟ್ಟಿದ್ದು, ಬೆಳೆದದ್ದು ಹಂಪಿಯ ಪಕ್ಕದಲ್ಲೇ ಇರುವ ಕಿಷ್ಕಿಂದೆ ಅಂದರೆ ಈಗಿನ ಆನೆಗೊಂದಿಯಲ್ಲಿ ಎಂದು ಪುರಾಣಗಳು ಹೇಳುತ್ತವೆ. ಆಂಜನೇಯ ಎಲ್ಲ ಊರಿನಲ್ಲೂ ಪೂಜೆಗೊಳ್ಳುತ್ತಾನೆ. ಬೆಂಗಳೂರಿನಲ್ಲಿ ಕೂಡ ಹಲವು ಹನುಮ ದೇವಾಲಯಗಳಿವೆ. ಇವುಗಳಲ್ಲಿ ರಾಗಿಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ, ಗಾಳಿ ಆಂಜನೇಯ, ಕೋಟೆ ಆಂಜನೇಯ, ಮಹಾಲಕ್ಷ್ಮೀಪುರದ ಆಂಜನೇಯ ದೇವಾಲಯಗಳು ಪ್ರಮುಖವಾದವು.

ಬೆಂಗಳೂರಿನ ಪ್ರಮುಖ ಬಡಾವಣೆ ಜಯನಗರ9ನೇ ಬ್ಲಾಕ್‌ನಲ್ಲಿರುವ ಪುಟ್ಟ ಬೆಟ್ಟದ ಹೆಸರೇ ರಾಗಿಗುಡ್ಡ. ರಾಗಿಗುಡ್ಡ ತ್ರಿಮೂರ್ತಿಗಳು ಹಾಗೂ ಪ್ರಸನ್ನ ಆಂಜನೇಯ ನೆಲೆಸಿಹ ಕ್ಷೇತ್ರವಾಗಿ ಹೆಸರು ಪಡೆದಿದೆ.

ಐದೂವರೆ ಎಕರೆ ವಿಶಾಲವಾದ ಪ್ರದೇಶದಲ್ಲಿರುವ 58 ಅಡಿಗಳ ಎತ್ತರದ ಹೆಬ್ಬಂಡೆಗೆ ರಾಗಿಗುಡ್ಡ ಎಂದು ಹೆಸರು ಬಂದುದು ಹೇಗೆ ಎಂಬ ಬಗ್ಗೆ ಸ್ಥಳ ಪುರಾಣದಲ್ಲಿ ಸುಂದರ ಕಥೆಯಿದೆ.

ಬಹಳ ಹಿಂದೆ ಈ ಪ್ರದೇಶದಲ್ಲಿ ಯಥೇಚ್ಛವಾಗಿ ರಾಗಿ ಬೆಳೆದಿತ್ತು. ಸುಗ್ಗಿಯ ಸಮಯದಿ ಧಾನ್ಯದ ರಾಶಿಗೆ ಸಂಭ್ರಮದ ಪೂಜೆ ನಡೆದಿತ್ತು.  ಆ ಪ್ರದೇಶದ ಪಾಳೆಯಗಾರ ಕಣದ ಪೂಜೆಗಾಗಿ ಸಪತ್ನೀಕನಾಗಿ ರಾಜಪರಿವಾರದೊಡನೆ ಸ್ಥಳಕ್ಕೆ ಆಗಮಿಸಿದ. ಸಂಪ್ರದಾಯದಂತೆ ಧಾನ್ಯಲಕ್ಷ್ಮೀಯ ಪೂಜೆಯ ಬಳಿಕ ಪಾಳೆಯಗಾರನ ಮಡದಿಯಿಂದ ಧಾನ್ಯದಾನ ಆಗಬೇಕಿತ್ತು.

Ragigudda Brahma, Vishnu, Maheswara, ರಾಗಿಗುಡ್ಡ, ಬ್ಹಹ್ಮವಿಷ್ಣು ಮಹೇಳ್ವರ,  kannadaratna.com, ourtemples.in, ಕನ್ನಡರತ್ನ.ಕಾಂ, ನಮ್ಮದೇವಾಲಯಗಳುಅಷ್ಟೊತ್ತಿಗೆ ಸರಿಯಾಗಿ ತೇಜೋಪುಂಜರಾದ ಮೂವರು ದಾಸರು ಪ್ರತ್ಯಕ್ಷರಾಗಿ ಭವತಿ ಭಿಕ್ಷಾಂ ದೇಹಿ ಎನ್ನಲು  ಸಾಧ್ವಿಯಾದ ಸೊಸೆಯು ಮೂರು ಮೊರದ ತುಂಬಾ ರಾಗಿಯನ್ನು ದಾನ ನೀಡಲು ಮುಂದಾದಳು. ಇದನ್ನು ಕಂಡು ಕುಪಿತಳಾದ ಆಕೆಯ ಅತ್ತೆ , ದಾಸರಿಗೆ ರಾಗಿ ದಾನ ಮಾಡಲು ಅಡ್ಡಿ ಪಡಿಸಿದಳು. ಇದರಿಂದ ಬೇಸತ್ತ ಪತಿವ್ರತೆಯಾದ ಸೊಸೆ, ದಾನಕ್ಕೆ ದೊರಕದ ರಾಗಿ ಇದ್ದರೆಷ್ಟು ಹೋದರೆಷ್ಟು ಎಂದು ಗುಡ್ಡದಷ್ಟು ಇರುವ ಈ ರಾಗಿ ಕಲ್ಲಾಗಿ ಹೋಗಲಿ ಎಂದು ಶಪಿಸಿದಳು.

ಕೂಡಲೇ ಪ್ರಳಯವಾದಂತೆ ಭಾಸವಾಯಿತು. ಗುಡುಗು ಸಿಡಿಲುಗಳ ಅಬ್ಬರೊಂದಿಗೆ ಅಲ್ಲಿದ್ದ ರಾಗಿಯೆಲ್ಲಾ  ಗುಡ್ಡವಾಗಿ ಪರಿವರ್ತನೆಯಾಯಿತು. ರಾಗಿಗುಡ್ಡವಾಯಿತು. ದಾನ ಬೇಡಲು ದಾಸರ ರೂಪದಲ್ಲಿ ಬಂದಿದ್ದ ತ್ರಿಮೂರ್ತಿಗಳೂ ಕೂಡ ಹೊಂಬಣ್ಣದ ಶಿಲೆಯಾಗಿ ಹೋದರಂತೆ. ಹೀಗಾಗೆ ಇದಕ್ಕೆ ರಾಗಿಗುಡ್ಡ ಅಥವಾ ದಾಸಯ್ಯರ ಬಂಡೆ ಎಂದು ಕರೆಯಲಾಗುತ್ತದೆ.

ಹಲವು ವರ್ಷಗಳ ಕಾಲ ಇಲ್ಲಿ ದಾಸಯ್ಯನ ಬಂಡೆ ಎಂದೇ ಕರೆಯಲಾಗುತ್ತಿದ್ದ ಮೂರು ಬಿಡಿ ಬಂಡೆಗಳಿದ್ದವು. ಈಗ ಅವನ್ನು ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರ ಮೂರ್ತಿಯಾಗಿ ಕಡೆದು ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ.

ಏಷ್ಯಾ ಖಂಡದಲ್ಲೇ ದೊಡ್ಡದೆಂದು ಹೇಳಲಾಗುವ 32 ಅಡಿ ಎತ್ತರದ ವಿಷ್ಣುಮೂರ್ತಿ, ಬ್ರಹ್ಮಮೂರ್ತಿ ಹಾಗೂ ಶಿವಮೂರ್ತಿಯ ಶಿಲ್ಪಗಳು ಸುಂದರವಾಗಿವೆ.

ಆಂಜನೇಯ : 1968ಲ್ಲಿ ಈ ಗುಡ್ಡದ ಮೇಲೆ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿಯನ್ನು ಪ್ರತಿಷ್ಠಾಪಿಸಲಾಯಿತು. ಸುಂದರ ದೇವಾಲಯವನ್ನೂ ನಿರ್ಮಿಸಲಾಯಿತು.  ಬೆಟ್ಟದ ಮೇಲಿಂದ ಬೀಳುವ ಪಾವನಗಂಗೆ ಜಲಧಾರೆಯೂ ಇಲ್ಲಿದೆ. ಸುಂದರ ಗಣಪನ ದೇವಾಲಯ, ಶ್ರೀರಾಮಮಂದಿರವೂ ಇಲ್ಲುಂಟು. ರಾತ್ರಿಯ ವೇಳೆ ವಿದ್ಯುತ್ ಬೆಳಕಲ್ಲಿ ಧುಮ್ಮಿಕ್ಕುವ ಜಲಧಾರೆಯನ್ನು ನೋಡುವುದೇ ಒಂದು ಸೊಗಸು. ಈಗ ದೇವಾಲಯದ ಸುತ್ತಲೂ ಸುಂದರ ಉದ್ಯಾನ ನಿರ್ಮಿಸಲಾಗಿದೆ. ಪ್ರಶಾಂತ ವಾತಾವರಣದಲ್ಲಿರುವ ಈ ಸ್ಥಳದಲ್ಲಿ  ಸ್ವಚ್ಛತೆಗೆ ಪ್ರಾಧಾನ್ಯತೆ ನೀಡಲಾಗಿದೆ.

Mahaganapati, ragigudda, ಮಹಾಗಣಪತಿ, ರಾಗಿಗುಡ್ಡ,  kannadaratna.com, ourtemples.in, ಕನ್ನಡರತ್ನ.ಕಾಂ, ನಮ್ಮದೇವಾಲಯಗಳುಆಂಜನೇಯನ ದೇವಾಲಯದ ಪ್ರವೇಶಕ್ಕೆ ಮೊದಲೇ ಮಹಾಗಣಪತಿಯ ದರ್ಶನ ಆಗುತ್ತದೆ.  ಪ್ರಸನ್ನ ಆಂಜನೇಯನ ದೇಗುಲದಲ್ಲಿ ದಕ್ಷಿಣೇಶ್ವರಸ್ವಾಮಿ ಹಾಗೂ ಶ್ರೀಪ್ರಸನ್ನ  ಸೀತಾರಾಮರ ಸನ್ನಿಧಿಯೂ ಇದೆ. ಸುಂದರ ಉದ್ಯಾನದ ಪರಿಸರದಲ್ಲಿ, ಪುರ್ಣಕುಟೀರ, ಸಾಂಸ್ಕೃತಿಕ ಮಂದಿರ, ಬಯಲು ರಂಗಮಂಟಪ ಹಾಗೂ ಕಲ್ಯಾಣ ಮಂಟಪ ಇದ್ದು, ರಾಮೋತ್ಸವ ಹಾಗೂ ಹನುಮ ಜಯಂತಿಯ ಸಂದರ್ಭದಲ್ಲಿ ಇಲ್ಲಿ ಸಂಗೀತಾರಾಧನೆಯೂ ನಡೆಯುತ್ತದೆ.

 ದೇವಾಲಯದ ಪ್ರಾಂಗಣದಲ್ಲೇ ಕನ್ನಡ ರಾಜರಾಜೇಶ್ವರಿ ಹಾಗೂ ನವಗ್ರಹಗಳ ಸುಂದರ ದೇವಾಲಯಗಳೂ ಇವೆ. ಪುಷ್ಕರಣಿ ಎಂದು ಕರೆಯಲಾಗುವ ಪುಟ್ಟ ಕಲ್ಯಾಣಿ, ಗೋಶಾಲೆಯೂ ಇದೆ.  ಗುಡ್ಡದ ಮೇಲಿರುವ ಪ್ರಸನ್ನ ಆಂಜನೇಯನ ದರ್ಶನ ಮಾಡಲು  108 ಮೆಟ್ಟಿಲು ನಿರ್ಮಿಸಲಾಗಿದೆ. ದೇವಾಲಯಕ್ಕೆ ಬರುವ ಭಕ್ತರಿಗೆ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಪ್ರಸಾದ ನೀಡಲೆಂದೇ ಪ್ರಸಾದ ವಿಭಾಗವೇ ಇಲ್ಲುಂಟು.

ಸಾಂಸ್ಕೃತಿಕ ಚಟುವಟಿಕೆ : ರಾಗಿಗುಡ್ಡ ಕೇವಲ ಧಾರ್ಮಿಕ ಸ್ಥಳವಷ್ಟೇ ಅಲ್ಲ. ಸಾಮಾಜಿಕ ಕೇಂದ್ರ ಕೂಡ. ಇಲ್ಲಿ ಕೆಳಸ್ತರದ, ಕೆಳ ಮಧ್ಯಮವರ್ಗದ ಮಕ್ಕಳಿಕೆ ಉಚಿತ ಶಿಕ್ಷಣ ನೀಡುವ ವಿದ್ಯಾಕೇಂದ್ರವಿದೆ.

 ತಾಂತ್ರಿಕ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಾಗೂ ಪರಾಮರ್ಶನ ಗ್ರಂಥಗಳನ್ನು ಒದಗಿಸುವ  ಬುಕ್ ಬ್ಯಾಂಕ್ ಇದೆ. ತಾಂತ್ರಿಕ ಶಿಕ್ಷಣ ಪಡೆವ ವಿದ್ಯಾರ್ಥಿಗಳಿಗೆ ಇಲ್ಲಿ ವರ್ಷದ ನಾಲ್ಕು ತಿಂಗಳ ಕಾಲ ಉಚಿತ ಉಪನ್ಯಾಸ ತರಗತಿಗಳೂ ನಡೆಯುತ್ತವೆ.

ಕಂಪ್ಯೂಟರ್ ಶಿಕ್ಷಣ, ಸಂಗೀತ ಶಾಲೆ, ಉಚಿತ ಆರೋಗ್ಯ ತಪಾಸಣಾಕೇಂದ್ರ, ಯೋಗ ಕೇಂದ್ರ, ಕಲ್ಯಾಣ ಮಂಟಪವಿದೆ. 25 ವರ್ಷಗಳ ಅವಧಿಯಲ್ಲಿ ಈ ದೇವಾಲಯದಲ್ಲಿ ಸಾಕಷ್ಟು  ಸುಧಾರಣೆಗಳಾಗಿವೆ. ಅಭಿವೃದ್ಧಿ ಕಾರ್ಯವೂ ನಡೆದಿದೆ.

ರಾಗಿಗುಡ್ಡದ ದೇವಾಲಯ ಬೆಳಗ್ಗೆ 8ರಿಂದ ಮಧ್ಯಾಹ್ನ 12 ಹಾಗೂ ಸಂಜೆ 5ರಿಂದ ರಾತ್ರಿ 8-30ರವರೆಗೆ ತೆರೆದಿರುತ್ತದೆ. ಹನುಮಜಯಂತಿ, ರಾಮನವಮಿಯ ಕಾಲದಲ್ಲಿ  ವಿಜೃಂಭಣೆಯಿಂದ ಸ್ವಾಮಿಗೆ ವಿವಿಧ ಅಲಂಕಾರಗಳನ್ನೂ ಹಾಕಲಾಗುತ್ತದೆ. ಗುಡ್ಡವನ್ನು ಹತ್ತಲು 108 ಮೆಟ್ಟಿಲುಗಳಿವೆ. ರಾಜ್ಯ ಪ್ರವಾಸೋದ್ಯಮ ಇಲಾಖೆಯ ಬೆಂಗಳೂರು ದರ್ಶನ ಪಟ್ಟಿಯಲ್ಲಿ ಈ ದೇವಾಲಯವನ್ನೂ ಸೇರಿಸಿದೆ. 

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮ ದೇವಾಲಯಗಳು