ಮುಖಪುಟ /ನಮ್ಮದೇವಾಲಯಗಳು 

ಶ್ರೀ ಮಾರುತಿ, ಶಕ್ತಿಗಣಪತಿ, ಮಂಜುನಾಥೇಶ್ವರ ದೇವಾಲಯ

ಬೆಂಗಳೂರಿನ ರಾಜರಾಜೇಶ್ವರಿನಗರ ಬಳಿಯ ಬಿ.ಇ.ಎಂ.ಎಲ್.  ಬಡಾವಣೆಯ ಮುಖ್ಯರಸ್ತೆಯಲ್ಲೇ ಇರುವ ದೇವಾಲಯ ಶ್ರೀ ಮಾರುತಿ, ಶಕ್ತಿಗಣಪತಿ ಹಾಗೂ ಮಂಜುನಾಥೇಶ್ವರ ದೇವಾಲಯ. ಸುಂದರವಾದ ರಾಜಗೋಪುರವನ್ನು ಒಳಗೊಂಡ ಈ ದೇವಾಲಯದಲ್ಲಿ ಪ್ರವೇಶದ್ವಾರದ ಎದುರು ಮೂರು ಗರ್ಭಗೃಹಗಳಿವೆ.

ಮಧ್ಯದ ಗರ್ಭಗೃಹದಲ್ಲಿ ತನ್ನಬಾಲವನ್ನು ಸುರುಳಿಯಾಗಿ ಸುತ್ತಿಕೊಂಡು ಸಿಂಹಾಸನ ಮಾಡಿ, ಕುಳಿತಿರುವ ಆಂಜನೇಯನ ಸುಂದರ ವಿಗ್ರಹವಿದ್ದರೆ, ಎಡ ಭಾಗದ ಗರ್ಭಗೃಹದಲ್ಲಿ ಮಂಜುನಾಥೇಶ್ವರನ ಪ್ರತಿಮೆ ಇದೆ. ಬಲ ಗರ್ಭಗೃಹದಲ್ಲಿ ಶಕ್ತಿ ಗಣಪತಿಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ.

ಇಲ್ಲಿ ಮೊದಲಿಗೆ 4-9-1997ರಲ್ಲಿ ಶಕ್ತಿಗಣಪತಿಯನ್ನು ಪ್ರತಿಷ್ಠಾಪಿಸಲಾಯಿತು. 18-02-1998ರಲ್ಲಿ ಮಾರುತಿ ಮತ್ತು ಮಂಜುನಾಥೇಶ್ವರ ವಿಗ್ರಹಗಳ ಪ್ರತಿಷ್ಠಾಪನೆ ನೆರವೇರಿತು. ದೇವಾಲಯದ ಜಿರ್ಣೋದ್ಧಾರ, ನೂತನ ಗೋಪುರ ನಿರ್ಮಾಣ ಕಾರ್ಯ 17-06-2007ರಲ್ಲಿ ನೆರವೇರಿತು.

ದೇವಾಲಯದಲ್ಲಿ ವಿಶಾಲವಾದ ಪ್ರಾಕಾರ ಹಾಗೂ ಪ್ರದಕ್ಷಣಾ ಪಥವಿದೆ. ಇಲ್ಲಿ ನಿತ್ಯ ಪೂಜೆ ನಡೆಯುತ್ತದೆ. ಪ್ರತಿ ತಿಂಗಳು ಸಂಕಷ್ಟ ಹರ ಗಣಪತಿ ಪೂಜೆ, ಹನುಮ ಜಯಂತಿಯಂದು ಹಾಗೂ ಶ್ರೀರಾಮ ನವಮಿಯಂದು ಮತ್ತು ಶಿವರಾತ್ರಿಯಂದು ವಿಶೇಷ ಪೂಜೆ ನಡೆಯುತ್ತದೆ.

ಮುಖಪುಟ /ನಮ್ಮದೇವಾಲಯಗಳು