ಮುಖಪುಟ /ನಮ್ಮ ದೇವಾಲಯಗಳು  

ಶ್ರೀರಾಮನ ಪಾದಸ್ಪರ್ಶದಿಂದ ಪುನೀತವಾದ ರಾಮನಾಥಪುರ

Ramanathapura temple, ರಾಮನಾಥಪುರ ಶ್ರೀ ಪ್ರಸನ್ನ ರಾಮೇಶ್ವರ ದೇವಾಲಯ, ಚಿತ್ರಕೃಪೆ ಹಾಸನಜಿಲ್ಲೆಯ ಅಧಿಕತ ವೆಬ್ ಸೈಟ್ ಕಲೆಗಳ ತವರೆಂದೇ ಖ್ಯಾತವಾದ ಹಾಸನ ಜಿಲ್ಲೆಗೆ ಬೇಲೂರು, ಹಳೇಬೀಡು ಕಳಶಪ್ರಾಯ. ಈ ಜಿಲ್ಲೆಯಲ್ಲಿ ಇಂಥಹುದೇ ಕಲಾವೈಭವದ ಹಲವಾರು ದೇವಾಲಯಗಳಿವೆ. ಇಂಥ ಕಲಾಶ್ರೀಮಂತಿಕೆಯ ದೇವಾಲಯಗಳಿಂದ ಕೂಡಿದ ಮತ್ತೊಂದು ಕ್ಷೇತ್ರ ಅರಕಲಗೂಡು ತಾಲೂಕಿನ ರಾಮನಾಥಪುರ.

ಅರಕಲಗೂಡಿನಿಂದ ದಕ್ಷಿಣಕ್ಕೆ 10 ಕಿಲೋ ಮೀಟರ್ ದೂರದಲ್ಲಿ ಕಾವೇರಿ ಎಡದಂಡೆಯಲ್ಲಿರುವ ಈ ಕ್ಷೇತ್ರದಲ್ಲಿ ಪ್ರಸನ್ನ ರಾಮೇಶ್ವರ, ಸುಬ್ರಮಣ್ಯೇಶ್ವರ, ಪಟ್ಟಾಭಿರಾಮ, ಅಗಸ್ತ್ಯೇಶ್ವರ, ಆಂಜನೇಯ, ಲಕ್ಷ್ಮೀನರಸಿಂಹ ಮತ್ತು ದುರ್ಗಾರಾಮೇಶ್ವರಿ ಎಂಬ ಏಳು ಭವ್ಯ ದೇವಾಲಯಗಳಿವೆ.

ಹರಿಹರ ಕ್ಷೇತ್ರ ಎಂದೂ ಹೆಸರಾದ ಕ್ಷೇತ್ರಕ್ಕೆ ಆಚಾರ್ಯತ್ರಯರ ಪೈಕಿ ಇಬ್ಬರಾದ ಆದಿಶಂಕರರು ಹಾಗೂ ರಾಮಾನುಜಾಚಾರ್ಯರು ಇಲ್ಲಿಗೆ ಬಂದಿದ್ದರೆನ್ನುತ್ತದೆ ಇತಿಹಾಸ.

ಇಲ್ಲಿರುವ ಪ್ರಸನ್ನ ರಾಮೇಶ್ವರ ದೇವಾಲಯ ಪ್ರಧಾನವಾದದ್ದು.  ಹೊಯ್ಸಳರ ಕಾಲದ ಈ ದೇವಾಲಯ, ವಿಜಯನಗರದ ಅರಸುಗಳ ಮತ್ತು ಪಾಳೆಯಗಾರರ ಕಾಲದಲ್ಲಿ ವಿಸ್ತರಿಸಲ್ಪಟ್ಟಿದೆ. ಪ್ರಸನ್ನ ರಾಮೇಶ್ವರ ಕೃತಯುಗ, ತ್ರೇತಾಯುಗ, ದ್ವಾಪರಯುಗ ಹಾಗೂ ಕಲಿಯುಗದಲ್ಲಿ ಪೂಜಿತನಾಗಿದ್ದನೆಂದು ಪುರಾಣಗಳಲ್ಲಿ ಉಲ್ಲೇಖವಿದೆಯಂತೆ.

ಕೃತಯುಗದಲ್ಲಿ ಸಂವರ್ತಿಕೇಶ್ವರನಾಗಿ. ದ್ವಾಪರದಲ್ಲಿ ವಹ್ನಿಕೇಶ್ವರನಾಗಿ. ತ್ರೇತಾಯುಗದಲ್ಲಿ ವಾಸುಕೇಶ್ವರನಾಗಿ ಈ  ಕಲಿಯುಗದಲ್ಲಿ ಪ್ರಸನ್ನ ರಾಮೇಶ್ವರನಾಗಿ ಪೂಜೆ ಸ್ವೀಕರಿಸುತ್ತಿದ್ದಾನೆ. ಶ್ರೀರಾಮ ಚಂದ್ರ  ವನವಾಸಿಯಾಗಿ, ಸೀತಾನ್ವೇಷಣೆಗೆ ಬಂದಾಗ, ಇಲ್ಲಿ ಶಿವನನ್ನು ಪೂಜಿಸಿದನಂತೆ. ತ್ರೇತಾಯುಗ ಪುರುಷನಿಂದ ಪ್ರತಿಷ್ಠಾಪಿತವಾಗಿ, ಪೂಜಿಸಲ್ಪಟ್ಟ ಈ ಲಿಂಗ ರಾಮೇಶ್ವರ ಎಂದು ಖ್ಯಾತವಾಗಿದೆ. ಶ್ರೀರಾಮ ಪಾದಸ್ಪರ್ಶದಿಂದ ಪುನೀತವಾದ ಊರು  ರಾಮನಾಥಪುರವಾಗಿದೆ ಎಂದು ಊರ ಹಿರಿಯರು ಹೇಳುತ್ತಾರೆ.

ಪುರಾತನವಾದ ಪ್ರಸನ್ನ ರಾಮೇಶ್ವರ ದೇವಾಲಯ ನಕ್ಷತ್ರಾಕಾರದ ಜಗಲಿಯ ಮೇಲೆ ಇತ್ತೆಂದು ಹೇಳುತ್ತಾರಾದರೂ ಈಗ ಅದು ಕಾಣುವುದಿಲ್ಲ. ಕಲ್ಲಿನ ಗೋಡೆಗಳ ಮೇಲೆ ಸೂಕ್ಷ್ಮವಾದ ಕೆತ್ತನೆಗಳಿಲ್ಲ. ಆದರೆ ಗೋಪುರ ಆಕರ್ಷಕರವಾಗಿದೆ. ದೇವಾಲಯಕ್ಕೆ ಭವ್ಯವಾದ ರಾಜಗೋಪುರವಿದೆ. ಇದು ವಿಜಯನಗರ ಶೈಲಿಯಲ್ಲಿದೆ. ದ್ವಾರ ಪ್ರವೇಸಿದರೆ ವಿಶಾಲವಾದ ಪ್ರಾಕಾರವಿದೆ. ದೇವಾಲಯದ ಒಳಗೆ ಗರ್ಭಗೃಹದಲ್ಲಿ ಸುಂದರವಾದ ರಾಮೇಶ್ವರನನ್ನು ಪ್ರತಿಷ್ಠಾಪಿಸಲಾಗಿದೆ.

ಪಟ್ಟಾಭಿರಾಮಚಂದ್ರ ದೇವಾಲಯ ದ್ರಾವಿಡ ಶೈಲಿಯಲ್ಲಿದೆ. ಗರ್ಭಗೃಹದಲ್ಲಿ ಕುಳಿತಿರುವ ಶ್ರೀರಾಮಚಂದ್ರನ ತೊಡೆಯ ಮೇಲೆ ಸೀತಾ ಮಾತೆ ಇರುವುದು ವೈಶಿಷ್ಟ್ಯ. ಇಲ್ಲಿರುವ ಮೂಲ ವಿಗ್ರಹವನ್ನು ಸೌಭರಿ ಮುನಿಗಳು ಪ್ರತಿಷ್ಠಾಪಿಸಿದರೆಂದು ಹೇಳಲಾಗಿದೆ. ಪ್ರತಿವರ್ಷ ವೈಶಾಖ ಶುಕ್ಲದಲ್ಲಿ ಇಲ್ಲಿ ರಥೋತ್ಸವ ನಡೆಯುತ್ತದೆ.

ಪಟ್ಟಾಭಿರಾಮ ದೇವಾಲಯದ ಎದುರು ಲಕ್ಷ್ಮೀನರಸಿಂಹ ದೇವಾಲಯವಿದೆ. ಇದನ್ನು ಚಿಕ್ಕದೇವರಾಜ ಒಡೆಯರು ಕಟ್ಟಿಸಿದ ಬಗ್ಗೆ ದಾಖಲೆಗಳಿವೆ.

ಇಲ್ಲಿರುವ ಇನ್ನೊಂದು ಪ್ರಮುಖ   ದೇವಾಲಯದ ದುರ್ಗಾರಾಮೇಶ್ವರಿಯದು. ಈ ದೇವಿ ವಿಗ್ರಹವನ್ನು ಆದಿ ಶಂಕರಾಚಾರ್ಯರು ಪ್ರತಿಷ್ಠಾಪಿಸಿದರೆಂದು ಪ್ರತೀತಿ. ಅಗಸ್ತ್ಯ ಮಹಾ ಮುನಿಗಳಿಂದ ಸ್ಥಾಪಿಸಿದ ಅಗಸ್ತೇಶ್ವರ ದೇವಾಲಯ ರಮಣೀಯವಾಗಿದೆ. ದ್ರಾವಿಡ ಶೈಲಿಯ ಸುಬ್ರಹ್ಮಣ್ಯೇಶ್ವರ ದೇವಾಲಯದಲ್ಲಿ ಏಳು ಹೆಡೆಗಳುಳ್ಳ ಸುಂದರ ನಾಗವಿಗ್ರಹವಿದೆ. ಮಾರ್ಗಶಿರ ಶುದ್ಧ ಷಷ್ಠಿಯಂದು ರಾಮನಾಥಪುರದಲ್ಲಿ ದನಗಳ ಜಾತ್ರೆ ನಡೆಯುತ್ತದೆ.

ರಾಕ್ಷಸರ ಗುರು ಶುಕ್ರಾಚಾರ್ಯರು ಸತ್ತವರನ್ನು ಬದುಕಿಸುವ ಸಂಜೀವಿನಿ ಮಂತ್ರದ ಸಿದ್ಧಿಗಾಗಿ ಇಲ್ಲಿ ತಪಸ್ಸನ್ನು ಆಚರಿಸಿದರೆಂದೂ ಹೇಳಲಾಗುತ್ತದೆ. ಕಾಲು ಸಹಿತ ಮೂರು ಲೋಕಗಳಿಗೂ ಹೋಗಿ ಬಂದ, ಭೃಗು ಮುನಿಗಳಿಂದ ಶಾಪಕ್ಕೆ ತುತ್ತಾದ  ಅಗ್ನಿ ದೇವನಿಗೆ ಇಲ್ಲಿ ಶಾಪವಿಮೋಚನೆ ಆಯಿತೆಂದೂ ಹೇಳಲಾಗುತ್ತದೆ.  ಅದರ ನೆನಪಿಗಾಗಿ ಇಲ್ಲೊಂದು ಪುಷ್ಕರಣಿ ಇದ್ದು, ಇದನ್ನು ವಹ್ನಿ ಪುಷ್ಕರಿಣಿ ಎಂದು ಕರೆಯುತ್ತಾರೆ. ಗೋಗರ್ಭ, ಊರ್ವಶಿಶಿಲೆಗಳೂ ಇಲ್ಲಿವೆ. ಕಾವೇರಿ ನದಿಯ ನಡುವೆ ಗಾಯತ್ರಿಶಿಲೆ ಇದೆ. ಇಲ್ಲಿ ಒಂದು ಗಾಯತ್ರಿ ಮಂತ್ರ ಜಪ ಮಾಡಿದರೆ, ಹನ್ನೆರೆಡು ಸಾವಿರ ಗಾಯತ್ರಿ ಜಪ ಮಾಡಿದ ಪುಣ್ಯ ಬರುತ್ತದೆ ಎಂಬ ನಂಬಿಕೆ ಇದೆ. 

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮ ದೇವಾಲಯಗಳು